ಭಾನುವಾರ, ನವೆಂಬರ್ 9, 2014

ಒಂದು ಮದುವೆಯ ಕಥೆ

ಇಸವಿ 2004ರ ಸಮಯ. ಯಾರ ರಗಳೆಯೂ, ಕಿರಿ ಕಿರಿಯ ಹಂಗೂ ಇಲ್ಲದೆ ಒಬ್ಬ ಅವಿವಾಹಿತ ಯುವಕನ ಖರ್ಚಿಗೆ ಬೇಕಾದಷ್ಟು ಸ್ವಲ್ಪ ಮಟ್ಟಿನ ಸಂಬಳದೊಂದಿಗೆ ಹಾಯಾಗಿದ್ದ ನನಗೆ 26ನೇ ವಯಸ್ಸಿನಲ್ಲಿ ಮದುವೆ ಎಂಬ ಬಂಧನದಲ್ಲಿ ಬಂಧಿಸಿದವರು ನನ್ನ ಗೆಳೆಯರಾದ ಯಾಸೀರ್ ಹಸನ್ ಮತ್ತು ಅವನ ಸೋದರ ತಮ್ಮ ಅಕ್ರಂ ಹಸನ್. ಸ್ವಲ್ಪ ಮಟ್ಟಿನ ಸಾಮಾಜಿಕ ಕಳಕಳಿ ಇರುವ ನಾನು ಏನಾದರು ಸಮಾಜಕ್ಕೆ ಒಳಿತಾಗುವ ರೀತಿಯಲ್ಲಿ ಮದುವೆ ಮಾಡಿ ತೋರಿಸಿ ಇನ್ನೊಬ್ಬರಿಗೆ ಮಾದರಿಯಾಗಬೇಕೆಂಬ ಹಂಬಲವೂ ಇತ್ತು.

ಅದೊಂದು ದಿನ ಅಕ್ರಂ ಹಸನ್ನ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಾ ಇರುವಾಗ ಒಂದು ಸಂಜೆ ನಾವು ಮೂವರು ಒಟ್ಟಿಗೆ ಕುಳಿತು ಹರಟೆ ಹೊಡೆಯುತ್ತಾ ಇದ್ದೆವು. ಹರಟೆಯ ಮಧ್ಯೆ "ಏನೋ ಮದುವೆಯ ವಯಸ್ಸಾಯಿತು ಆ ಬಗ್ಗೆ ಏನಾದರು ಯೋಚಿಸಿದ್ದೀಯಾ" ಎಂದು ತಮಾಷೆಯಾಗಿ ಕೇಳಿಯೇ ಬಿಟ್ಟ. ಯಾರಾದರು ಬಡ,ಒಳ್ಳೆಯ ಕುಟುಂಬದ ಗುಣವಂತ ಹುಡುಗಿ ಇದ್ರೆ ಹೇಳು... ಎಂದು ನಾನು ಕೂಡ ತಾಮಾಷೆಯಾಗಿಯೇ ಹೇಳಿದೆ. ಈ ತಮಾಷೆಯ ಮಾತು ಮುಂದೊಂದು ದಿನ ನನ್ನ ಜೀವನದ ದಿಕ್ಕನ್ನೆ ಬದಲಾಯಿಸುತ್ತದೆ ಎಂದು ತಿಳಿದಿರಲಿಲ್ಲ.ಈ ಮಾತು ನನ್ನ ಬಾಯಿಯಿಂದ ಹೊರಬರುವುದನ್ನೇ ಕಾಯುತ್ತಿದ್ದವನಂತೆ ನನ್ನ ಪಕ್ಕದ್ಮನೆಯಲ್ಲಿ ಒಬ್ಬಳು ಹುಡುಗಿ ಇದ್ದಾಳೆ, ಸುಂದರವಾಗಿದ್ದಾಳೆ ನಿನ್ನಷ್ಟೇ ಪ್ರಾಯವಾಗಿರಬಹುದು(ನಂತರ ತಿಳಿಯಿತು ನನಗಿಂತ 4 ವರ್ಷ ಹಿರಿಯವಳು ಎಂದು) ಬಾಲ್ಯದಲ್ಲಿ ನಾವಿಬ್ಬರೂ ಒಟ್ಟಿಗೆ ಬೆಳೆದದ್ದು. ಅವಳ ತಂಗಿಗೆ ಮದುವೆಯಾಗಿ 7 ವರ್ಷ ಕಳೆದಿದೆ ಕಾರಣ ಅವಳು 12ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಒಳ್ಳೆ ಗಂಡು ಸಿಕ್ಕಿದ್ದರಿಂದ ಅವಳಿಗೆ ಬೇಗ ಮದುವೆ ಮಾಡಿ ಕೊಟ್ಟಿದ್ದರು ಮನೆಯವರು. ತಂಗಿಗೆ ಮದುವೆಯಾಗಿದೆ ಆದರೆ ಅಕ್ಕನಿಗೆ ಇನ್ನೂ ಯಾಕೆ ಆಗಿಲ್ಲ ಎಂದು ನೋಡಲು ಬಂದ ಗಂಡುಗಳೆಲ್ಲ ಸಂಶಯಿಸಿ ಬೇಡ ಎಂದು ಬಿಟ್ಟು ಹೊಗುತ್ತಿದ್ದಾರೆ ಎಂದು ನನಗೆ ಮಾತನಾಡಲು ಅವಕಾಶವೇ ಕೊಡದೆ ಒಂದೇ ಮಾತಿನಲ್ಲಿ ಹೇಳಿ ಮುಗಿಸಿದ. ನೋಡು ಯಾಸೀರ್ ನೀನು ನನ್ನ ಗೆಳೆಯ, ನಾವಿಬ್ಬರೂ ಅಣ್ಣ ತಮ್ಮಂದಿರ ಹಾಗೆ.. ನೀನು ಅಣ್ಣನ ಸ್ಥಾನದಲ್ಲಿ ನಿಂತು ನನ್ನ ಎರಡು ಪ್ರಶ್ನೆಗಳಿಗೆ ಉತ್ತರಿಸು ಎಂದೆ.

ಮೊದಲನೇ ಪ್ರಶ್ನೆ- ನಾನು ಕಪ್ಪಗಿನ ಮನುಷ್ಯ, ನೋಡಲು ಅಷ್ಟೇನೂ ಸುಂದರವಾಗಿಲ್ಲ ಆದರೂ ಅವಳು ನನ್ನನ್ನು ಗಂಡನಾಗಿ ಸ್ವೀಕರಿಸಲು ಸಾಧ್ಯವೇ?
ಎರಡನೇ ಪ್ರಶ್ನೆ - ನಮ್ಮ ಮದುವೆ ಆದರೆ ನನ್ನ ಕಷ್ಟಗಳಿಗೆ ಹೆಗಲು ಕೊಟ್ಟು ನಡೆಯುವಳು ಎಂಬ ಭರವಸೆ ನಿನಗಿದೆಯಾ?
ಹಾಗಾದರೆ ನಿನ್ನ ಮಾತಿನ ಮೇಲೆ ವಿಶ್ವಾಸವಿಟ್ಟು ನಾನು ಒಪ್ಪುತ್ತೇನೆ.. ನನಗೆ ಅವಳ ಅಂದ ಚೆಂದ, ವಯಸ್ಸು ಬಣ್ಣ ಎತ್ತರ ಯಾವುದೂ ಅಗತ್ಯವಿಲ್ಲ. ನನಗೆ ಬೇಕಾಗಿರುವುದು ಒಂದು ಒಳ್ಳೆಯ ಜೀವನ ಸಂಗಾತಿ ಎಂದು ನಾನೂ ಕೂಡಾ ಒಂದೇ ಉಸಿರಿನಲ್ಲಿ ಹೇಳಿದೆ. ಈ ಮಾತುಕತೆಯ ಮಧ್ಯೆ ನನಗರಿವಿಲ್ಲದೆ ಅವಳ ಒಂದು ಪೋಟೋ ತರಿಸಿ ನನ್ನ ಕೈಗಿಟ್ಟು ಆ ಹುಡುಗಿ ಬಗ್ಗೆ ನಾನು ಭರವಸೆ ಕೊಡುತ್ತೇನೆ ಎಂದು ಹೇಳಿದ. ಅಲ್ಲದೆ ಮರುದಿನವೇ ಹುಡುಗಿಯನ್ನು ನೋಡಲು ಹೋಗಲು ಒತ್ತಾಯಿಸಿದ. "ನಿನ್ನ ಭರವಸೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.. ಹಾಗಾಗಿ ಹೆಣ್ಣು ನೋಡುವ ಅವಶ್ಯಕತೆ ಇಲ್ಲಾ. ಹುಡುಗಿಯ ಮನೆಯವರಿಗೆ ಮದುವೆಯ ದಿನಾಂಕ ನಿಗದಿಪಡಿಸಲು ಹೇಳು.. ಎಂದು ನಾನು ಹೇಳಿದರೂ ಅದಕ್ಕವನು ಒಪ್ಪದೆ, ನೀನೊಮ್ಮೆ ನೋಡಿ ಒಪ್ಕೊಂಡ್ರೆ ಎಲ್ಲರಿಗೂ ಸಮಾಧಾನವಗುತ್ತೆ ಅಂದಾಗ, ಹೆಣ್ಣು ನೋಡಲು ನಾನು ಒಪ್ಪಿಕೊಂಡೆ.

ಮರುದಿನ ಹುಡುಗಿ ನೋಡಲು ಒಬ್ಬನೇ ಅವಳ ಮನೆಗೆ ಹೋದೆ. ಹುಡುಗಿ ನನಗೆ ಇಷ್ಟವಾದಳು, ಹಾಗೆಯೆ ನಾನೂ ಕೂಡಾ ಹುಡುಗಿಗೆ ಇಷ್ಟವಾದೆ. ಹುಡುಗಿ ಮನೆಯಿಂದ ಹೊರಗೆ ಬಂದವನೇ ತಾಯಿಗೆ ಪೋನ್ ಮಾಡಿ ವಿಷಯ ತಿಳಿಸಿದೆ "ಅಮ್ಮಾ ನಾನು ಒಂದು ಹುಡುಗಿಯನ್ನು ನೋಡಿದ್ದೇನೆ ಅವಳನ್ನೇ ಮದುವೆಯಾಗಬೇಕೆಂದಿದ್ದೇನೆ, ಅದಕ್ಕೆ ನಿನ್ನ ಅನುಮತಿ ಬೇಕಿತ್ತು". ನೀನು ನನ್ನ ಐದು ಗಂಡುಮಕ್ಕಳಲ್ಲಿ ಮೊದಲನೆಯವ, ನಿನಗೆ ತಂಗಿಯಂದಿರೂ ಇಲ್ಲಾ, ಹುಡುಗಿ ಕೂಡಾ ನೋಡಿಯಾಗಿದೆ ಹಾಗಾಗಿ ನಿನ್ನಿಷ್ಟವೇ ನನ್ನಿಷ್ಟ" ಎಂದಳು. "ಹಾಗದರೆ ನನ್ನ ಗೆಳೆಯನ ಬಾಡಿಗೆ ಕಾರು ಮನೆಗೆ ಕಳುಹಿಸಿದ್ದೇನೆ.. ನಿನ್ನ ಸೊಸೆಯಾಗುವವಳನ್ನು ನೋಡಲು ಬೇಗ ಬಾ" ಎಂದೆ.ಅಮ್ಮನೂ ಬಂದು ಹುಡುಗಿಯನ್ನು ನೋಡಿ ಇಷ್ಟಪಟ್ಟಳು.

ನಂತರ ಗೆಳೆಯ ಮುಂದೇನು ಅಂತ ಕೇಳಿದ. "ನೋಡು ಯಾಸೀರ್ ಹುಡುಗಿ ನನಗೂ ನನ್ನ ಮನೆಯವರಿಗೂ ಒಪ್ಪಿಗೆ ಆದರೆ ನಮ್ಮ ತಮಾಷೆ ಇಲ್ಲಿಯವರೆಗೆ ಬಂದು ಮುಟ್ಟುತ್ತದೆ ಎಂದು ತಿಳಿದಿರಲಿಲ್ಲ.ಮುಖ್ಯವಾದ ವಿಚಾರವೇನೆಂದರೆ ನನ್ನಲ್ಲಿರುವುದು ಬರೀ 10 ರೂ ನೋಟು ಮಾತ್ರ ಬೇರೆನೂ ನನ್ನಲ್ಲಿಲ್ಲ.ಖರ್ಚಿಗೇನೂ ಮಾಡುವುದು ಹೇಳು... ವರದಕ್ಷಿಣೆ ನನ್ನ ಆತ್ಮ ಸಾಕ್ಷಿಗೆ ಕಳಂಕ ಹಾಗಾಗಿ ನೀನೆ ಏನಾದರು ಉಪಾಯ ಹೇಳು" ಎಂದೆ. "ಈಗ ಮನೆಗೆ ಹೋಗು ನಾಳೆ ಬೆಳಗ್ಗೆ ನನ್ನ ಮನೆಗೆ ಬಾ ಆರಾಮವಾಗಿ ಕುಲಿತುಕೊಂಡು ಮಾತನಾಡುವ" ಎಂದು ಬೆನ್ನು ತಟ್ಟಿ ನನ್ನನ್ನು ಬೀಳ್ಕೊಟ್ಟ , ನಾನು ಅದೇ ಕಾರಿನಲ್ಲಿ ಮನೆಗೆ ತೆರಲಿದೆ.

ಹಾದಿಯಲ್ಲಿ ನನ್ನ ಮಾವ ನನ್ನನ್ನು ದಾರಿಯುದ್ದಕ್ಕೂ 1 ಲಕ್ಷ ಹಣ ಮತ್ತು 20 ಪವನ್ ಬಂಗಾರ ವರದಕ್ಷಿಣೆ ಸ್ವೀಕರಿಸುವಂತೆ ಒತ್ತಾಯಿಸುತ್ತಿದ್ದರು. "ಮಾವ ವರದಕ್ಷಿಣೆ ಪಡೆದು ನಾನು ನನ್ನನ್ನು ಆ ಹುಡುಗಿ ಕಡೆಯವರಿಗೆ ಮಾರಲ್ಪಡಲು ಇಚ್ಚಿಸುವುದಿಲ್ಲ ನನ್ನ ಬಳಿ ಹಣ ಇಲ್ಲದೇ ಇರಬಹುದು ಆದರೆ ಅಲ್ಲಾಹನಲ್ಲಿ ಭರವಸೆ ಇದೆ ನಿಮಗಿಷ್ಟವಿದ್ದರೆ ಬನ್ನಿ ಇಲ್ಲಾಂದ್ರೆ ಸುಮ್ನಿರಿ ಎಂದೆ" ಕೊನೆಗೆ ಸ್ವಲ್ಪ ಏರು ಧ್ವನಿಯಲ್ಲೇ ಉತ್ತರಿಸಿದೆ. ಅಷ್ಟರವರೆಗೆ ಮಾವನಲ್ಲಿ ಮುಖ ಕೊಟ್ಟು ಮಾತನಾಡಲೂ ಹೆದರುತ್ತಿದ್ದ ನಾನು ಅವತ್ತು ಆ ರೀತಿ ಉತ್ತರ ಕೊಟ್ಟದ್ದು ಈಗಲೂ ನನ್ನಿಂದ ನಂಬಲಾಗುತ್ತಿಲ್ಲ.

ಮರುದಿನ ಯಾಸೀರ್ ನನ್ನು ಭೇಟಿಯಾದೆ. ನನ್ನ ಗೆಳೆಯರೊಡನೆ ಡೊನೇಷನ್ ಕೇಳಿ 20 ಸಾವಿರ ರೂಪಾಯಿ ಜಮೆಯಾಗಿದೆ, ಇದರಿಂದಲೇ ಸ್ವಲ್ಪ ಅಡ್ಜೆಸ್ಟ್ ಮಾಡ್ಕೋ ಎಂದ. ಸಂತೋಷದಿಂದ ಸ್ವೀಕರಿಸಿ ನಾಳೆಗೆ ಮದುವೆ ದಿನಾಂಕ ನಿಗದಿ ಮಾಡುವಾ ಎಂದೆ.

ಚಹಾ ಪಾನೀಯದೊಂದಿಗೆ ನಿಶ್ಚಿತಾರ್ಥವೂ ಆಯಿತು 15 ದಿನಗಳೊಳಗೆ ಮದುವೆಯೂ ನಿಗದಿಯಾಯಿತು. ಈ ವಿಷಯ ಕೇಳಿ ಊರಿನವರು,ಗೆಳೆಯರು ಆಶ್ಚರ್ಯಚಕಿತರಾಗಿ ನನ್ನನ್ನೇ ನೋಡುತ್ತಿದ್ದರು. ಕೆಲವರು ವ್ಯಂಗ್ಯವಾಗಿ ಹೇಳಿಯೇ ಬಿಟ್ಟರು "ನೀನು ಹೇಳಿರುತ್ತಿದ್ದರೆ ಕನಿಷ್ಠ 2 ರಿಂದ 3 ಲಕ್ಷ ಮತ್ತು 25 ರಿಂದ 35 ಪವನ್ ಚಿನ್ನ ಸಿಗುವ ಹುಡುಗಿಯನ್ನು ತೋರಿಸುತ್ತಿದ್ದೆವು". ನಿನ್ನ ಗೆಳೆಯ ಕೊಟ್ಟ ಕೇವಲ 20 ಸಾವಿರದಲ್ಲಿ ನೀನು ಹೇಗೆ ಮದುವೆಯಾಗಿತ್ತೀಯಾ.. ? ಅದು ಸಾಧ್ಯವೇ ಇಲ್ಲಾ ಎಂದು. ಇಂತಹ ಕುಹುಕಗಳು ನನಗೆ ಗಜ ಬಲವನ್ನೇ ಕೊಟ್ಟಿತು. ನಾನು ಇನ್ನಷ್ಟು ಬಲಿಷ್ಠನಾದೆ. ನನ್ನ ತಾಯಿ ಕಡ್ಡಾಯ ಮಹರ್ ಗಾಗಿ ಅವರ ಕೈಯಲ್ಲಿದ್ದಂತಹ ಒಂದೂವರೆ ಪವನ್ ಚಿನ್ನದ ಸರ ನನ್ನ ಕೈಗಿಟ್ಟರು ಹಾಗೆನೆ ಬಡ್ಡಿ ಮಾರ್ವಾಡಿಯಿಂದ 15 ಸಾವಿರ ಸಾಲನೂ ತೆಗೆದು ಕೊಟ್ಟರು. ಈ ಎಲ್ಲಾ ಹಣದಿದ ಶಾಪಿಂಗ್ ಗೆ ಹೋದೆವು. ಮೊದಲು ಉಡುಪಿಯ ನನ್ನ ಗೆಳೆಯನ ಶೂ ಮಹಲ್ ಗೆ, ಅಲ್ಲಿ ನನಗೆ ತಂದೆ ತಾಯಿ ಮತ್ತು ತಮ್ಮಂದಿರಿಗೆ ಶೂ ಖರೀದಿಸಿ 3200 ಬಿಲ್ ಆಯಿತು. ನಿನ್ನ ಮದುವೆಯ ವಿಷಯ ತಿಳಿದು ತುಂಬಾ ಸಂತೋಷವಾಯಿತು ದೇವರು ನಿನ್ನನ್ನು ಒಳ್ಳೆಯದು ಮಾಡಲಿ ಎಂದು ಕೇವಲ 800 ರೂಪಾಯಿಯಷ್ಟೇ ಪಡೆದುಕೊಂಡ ಸಾಧೀಕ್ ಭಾಯಿ, ಜೊತೆಗೆ ಮದುಮಗಳಿಗೆ ಬೆಲೆಬಾಳುವ ಚಪ್ಪಲಿಯೂ ಉಚಿತವಾಗಿ ನೀಡಿದರು. ಅಲ್ಲಿಂದ ಇನ್ನೋರ್ವ ಗೆಳೆಯ ಪಯಾಝ್ ನ ಬಟ್ಟೆಯಂಗಡಿಗೆ ಹೋದೆ. ಅಲ್ಲಿ ನನಗೆ 2 ಜೊತೆ ಡ್ರೆಸ್ ಮತ್ತು ಮದುಮಗಳಿಗೆ ಒಂದು ಜೊತೆ ಚೀಪ್ ಆಂಡ್ ಬೆಸ್ಟ್ ಬಟ್ಟೆ ಖರೀದಿಸಿದೆ. ಅವನು ನನಗೆ ನನ್ನ ಅಸಲು ಹಣ ಮಾತ್ರ ಸಾಕು ಲಾಭಾಂಶ ಬೇಡ ಎಂದು ಬಹಳ ಕಡಿಮೆ ಹಣ ಪಡೆದ(ಮೊತ್ತ ಎಷ್ಟೆಂದು ಈಗ ನೆನಪಿಲ್ಲ).
ನಮ್ಮ ಊರಿನ ಎಚ್.ಎಮ್.ಟಿ ಬಸ್ ನ ಮಾಲಕರಾದ ಖಲೀಲ್ ಸಾಹೇಬರು ನನ್ನ ಮದುವೆಯ ವಿಷಯ ತಿಳಿದು ಸ್ವತಃ ತಾನಾಗಿ ಬಂದು "ನಿನ್ನ ಮದುವೆಗೆ ನನ್ನ ಬುಸ್ ಉಚಿತವಾಗಿ ತೆಗೋ ಕೇವಲ 2000 ರೂಪಾಯಿಯ ಡೀಸೆಲ್ ಹಾಕಿದರೆ ಸಾಕು.ಸಮಯ ಹೇಳು ಟ್ರಿಪ್ ಕಟ್ ಮಾಡಿ ಕಳುಹಿಸುವೆ, ಡ್ರೈವರ್ ಮತ್ತು ಕಂಡೆಕ್ಟರ್ ಸಂಬಳ ನಾನೇ ಕೊಡುತ್ತೇನೆ ಎಂದರು.

ನನ್ನ ಬಹಳ ಹತ್ತಿರದ 7-8 ಮನೆಗೆ ಮಾತ್ರ ಹೋಗಿ ಮೌಖಿಕ ಆಮಂತ್ರಣ ನೀಡಿದೆ. ನನ್ನ ಗೆಳೆಯರ ಸಂಖ್ಯೆ ಬಹು ದೊಡ್ಡದು ಹಾಗಾಗಿ ಯಾರನ್ನೂ ಆಮಂತ್ರಿಸಲಿಲ್ಲ ಕಾರಣ ಹೆಣ್ಣಿನ ಕಡೆಯವರಿಗೆ ಕಷ್ಟ ಆಗಬಾರದೆಂಬ ಉದ್ದೇಶದಿಂದ. ನನ್ನ ನಿಖಾ 31 ಮೇ 2004 ಸಂಜೆ 4 ಗಂಟೆಗೆಂದು ನಿಗದಿಯಾಗಿತ್ತು. ಆದ್ದರಿಂದ ನನ್ನ ಮದುವೆಯ ದಿವಸ ನನ್ನೂರಿನಲ್ಲಿ ನಡೆದಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದೆ.1:30ಕ್ಕೆ ಸೆಮಿ ಪೈನಲ್ ಪಂದ್ಯ ಸೋತು ಬಂದೆವು. ಇನ್ನು ಮದುವೆಯ ದಿನವೇ ಕ್ರಿಕೆಟ್ ಆಡಲು ಹೋದ ವಿಚಾರ ತಾಯಿಗೆ ತಿಳಿದರೆ ಪಜೀತಿ ಎಂದು ಹಸಿವು ತಾಳಲಾರದೆ ತುಂಬಾ ಆತ್ಮೀಯರಾದ ನನ್ನ ನೆರೆಮನೆಯವರು, ಅವರ ಮುಂದಿನ ದ್ವಾರದಲ್ಲಿ ಬೀಡಿ ಕಟ್ಟುತ್ತಿದ್ದುದನ್ನು ನೋಡಿ ಇದೇ ಅವಕಾಶವೆಂದು ಅವರ ಮನೆಯ ಹಿಂಬಾಗಿಲಿನಿಂದ ಪ್ರವೇಶಿಸಿ ಅಡುಗೆ ಮನೆಯಲ್ಲಿದ್ದ ಗಂಜಿ ಮತ್ತು ಬಂಗುಡೆ ಪ್ರೈ ಕದ್ದು ತಿಂದು ಅವರ ಮುಂಬಾಗಿಲಲ್ಲೆ ಹೊರಗೆ ಬಂದೆ. ಅದಕ್ಕೆ ಆ ಹೆಂಗಸು ಏನೋ ಹಿಂಬಾಗಿಲಿನಿಂದ ಏಕೋ ಬಂದೆ ನಿನ್ನ ಮದ್ವೆ ಅಲ್ವೇನೊ ಇವತ್ತು ಗಂಟೆ ಈಗಲೇ ೨:೦೦ ಆಯಿತು ಎಂದು ಪ್ರಶ್ನಿಸಲಾರಂಭಿಸಿದರು, "ಹೌದು ಇನ್ನು 2 ಗಂಟೆಯೊಳಗೆ ನನ್ನ ನಿಖಾ.ಹಸಿವು ತಾಳಲಾರದೆ ನಿಮ್ಮ ಅಡುಗೆ ಮನೆಯಲ್ಲಿದ್ದ ಗಂಜಿ ಮತ್ತು ಬಂಗುಡೆ ಪ್ರೈ ಕದ್ದು ತಿಂದೆ ದಯವಿಟ್ಟು ಕ್ಷಮಿಸಿ ಈ ಹೊತ್ತಿನಲ್ಲಿ ತಾಯಿಯ ಹತ್ತಿರ ಅನ್ನ ಹಾಕಲು ಹೇಳುವಂಗಿಲ್ಲ" ಅಂತ ನಾನು ಹಾಸ್ಯಭರಿತವಾಗಿ ಹೇಳಿದೆ. ಅಲ್ಲಿಂದ ಮನೆಗೆ ಬಂದವನೇ ಮನೆಯನ್ನೊಮ್ಮೆ ಸೂಕ್ಷ್ಮವಾಗಿ ದಿಟ್ಟಿಸಿದೆ, ನನ್ನ ಮನೆ ಒಂದು "ಮದುವೆ ಮನೆ" ಅಂತ ಯಾರೂ ಹೇಳಲು ಸಾದ್ಯವಿಲ್ಲದಂತಿತ್ತು. ನನ್ನ ತಾಯಿ ತಂದೆ ತಮ್ಮಂದಿರು ನಿಖಾಹ್ ಗೆ ಹೋಗಲು ರೆಡಿಯಾಗುತ್ತಿದ್ದರು. ಮನೆಯಲ್ಲಿ ಕೇವಲ ಲೆಕ್ಕದ 7 ಮಂದಿ ಸಂಬಂದಿಕರು ಮದುವೆಗೆ ಬಂದಿದ್ದರು. ನಾನು ಬಾಡಿಗೆಯ್ ಸೂಟ್ ಧರಿಸಿ ರೆಡಿಯಾದೆ. ಮದುವೆಗೆ ಹೋಗಲು ಬಸ್ಸು ಮತ್ತು ನನ್ನ ಗೆಳೆಯನು ಓಮ್ನಿ ಬಂದು ನಿಂತಿತ್ತು. ಬಸ್ಸಲ್ಲಿ ಎಲ್ಲರೂ ಹತ್ತಿ ಕುಳಿತರು ಮಕ್ಕಳಿಂದ ಹಿಡಿದು ವಯಸ್ಸಾದವರು ಸೇರಿ ಒಟ್ಟು 16ರಷ್ಟು ಮಂದಿಯಿದ್ದರು. ಹೊರಡು ಮಗನೆ 16 ಜನರಲ್ಲ 10 ಮಂದಿ ಇದ್ದರೂ ಸಾಕು ನಿಖಾಹ್ ಗೆ ತಡ ಮಾಡುವುದು ಬೇಡ ಅಂತ ತಾಯಿ ಅವಸರದಿಂದಲೇ ಬಸ್ಸು ಹತ್ತಿದರು .

ನನ್ನ ಮನೆಯಿಂದ ಪೇಟೆಗೆ ಒಂದು ಕಿಲೋಮೀಟರ್ ದೂರ ಇದೆ. ನಾನು ಓಮ್ನಿ ಏರಿ ಪೇಟೆಗೆ ಹೋಗಿ ಬಸ್ ಬರುವುದನ್ನೇ ಕಾಯುತ್ತಿದ್ದೆ. ಆ ಸಮಯದಲ್ಲಿ ಮೊಬೈಲ್ ಕೂಡ ಅಪರೂಪ. ಅರ್ಧ ಗಂಟೆ ಕಳೆದರೂ ಬಸ್ ಬಾರದ್ದನ್ನು ಕಂಡು ನೋಡಿ ಬರುವಾ ಎಂದು ವಾಪಸ್ಸಾಗುವ ಹೊತ್ತಿಗೆ ದೂರದಿಂದ ಬಸ್ ಓವರ್ ಲೋಡ್ ಆಗಿ ವಾಲಿಕೊಂಡು ಬರುತ್ತಿತ್ತು. ವಿಷಯ ಏನೆಂದರೆ "ಏ ಅವನ ಮದ್ವೆ ಅಲ್ಲವಾ ಆಮಂತ್ರಣ ಇಲ್ಲದಿದ್ದರೂ ಪರವಾಗಿಲ್ಲ ನಾವೂ ಬರುತ್ತೇವೆಂದು ಕ್ರಿಕೆಟ್ ಆಡುತ್ತಿದ್ದ ಹುಡುಗರು ಬಸ್ಸೇರಿ ಬಂದಿದ್ದರು. ಬಸ್ ನಲ್ಲಿ ಜಾಗವಿಲ್ಲದ ಕಾರಣ 16 ಬೈಕಿನಲ್ಲಿ 32 ಜನ, ಬೈಕ್ ಸಿಗದ 15ರಿಂದ 20 ಜನರು ಟ್ಯಾಕ್ಸಿ ಮಾಡಿ ಬಂದಿದ್ದರು. ಮಸೀದಿಯಲ್ಲಿ ನಿಖಾ ಕ್ಲಪ್ತ ಸಮಯಕ್ಕೆ ಮುಗಿಯಿತು. ಎಲ್ಲರಿಗೂ ಲಿಂಬೆ ಹಣ್ಣಿನ ಸರ್ಬತ್ತು ಮತ್ತು ಲಡ್ಡು ವಿತರಿಸಲಾಯಿತು. ಮಸೀದಿಯಿಂದ ಮದು ಮಗಳ ಮನೆಗೆ ಹೋಗುವಾಗ ಇಡೀ ಊರೇ ಆಶ್ಚರ್ಯಚಕಿತವಾಗಿ ನೋಡುತ್ತಿತ್ತು ಏಕೆಂದರೆ ಅಲ್ಲಿ ನನ್ನ ಕಡೆಯಿಂದ ಸುಮಾರು 150 ಜನ ಬಂದಿದ್ದರು, 150 ರಲ್ಲಿ 7 ರಿಂದ 8 ಜನ ಮಾತ್ರ ಮಧ್ಯ ವಯಸ್ಕರು,ಬಾಕಿಯೆಲ್ಲ ನನ್ನ ಪ್ರಾಯದ ಮತ್ತು ನನಗಿಂತ ಸಣ್ಣ ಪ್ರಾಯದ ಹುಡುಗರು. ಅಲ್ಲಿ ಒಬ್ಬರು ಕೇಳಿಯೇ ಬಿಟ್ಟರು ನಿಮ್ಮ ಊರಿನಲ್ಲಿ ವಯಸ್ಸಾದವರು ಯಾರೂ ಇಲ್ವೆ..? ಎಲ್ಲಾ ಯುವಕರೇ ಇರುವುದಾ... ಎಂದು. ನಾನು ನಸು ನಕ್ಕು ಮುಂದೆ ಸಾಗಿದೆ. ಮಳೆಯ ಕಾರಣ ಇನ್ನಷ್ಟು ಗೆಳೆಯರು ಬರಲಾಗಲಿಲ್ಲ ಎಂದು ಬೇಸರದಿಂದ ಸಂದೇಶ ಕಲಿಸಿದ್ದರು.

ಮರುದಿನ ವಲಿಮಾ ಕಾರ್ಯಕ್ರಮ. ನನ್ನ ಹತ್ತಿರದ ಕೆಲವೇ ಕೆಲವು ಸಂಬಂದಿಕರನ್ನು ಆಹ್ವಾನಿಸಿದ್ದೆ. ನೆರೆಮನೆಯಿಂದ ಒಬ್ಬರನ್ನು ಹಾಗು ಅತೀ ಆತ್ಮೀಯ ಸ್ನೇಹಿತರನ್ನು ಕರೆದಿದ್ದೆ. ಒಟ್ಟಾಗಿ ಸುಮಾರು 70 ರಿಂದ 80 ಜನರಿದ್ದರು. ಅಕ್ಕಪಕ್ಕದ ಮನೆಯಿಂದ ಕುರ್ಚಿ ಟೇಬಲನ್ನು ಕೇಳಿ ತಂದಿದ್ದೆ. ನನ್ನ ಬೆಡ್ ರೂಮ್ಗೆ ನೆರೆಮನೆಯವರ ಪಲ್ಲಂಗವನ್ನು ಒಂದು ವಾರದ ಮಟ್ಟಿಗೆ ಕೇಳಿ ತಂದಿದ್ದೆ. ಪಾತ್ರೆ ಪಗಡೆಯ ಇಬ್ರಾಹಿಂ ಸಾಹೇಬರೂ ಕೂಡ ಪಾತ್ರೆಗಳಲ್ಲಿ ಭಾರೀ ಕಡಿತ ಮಾಡಿದ್ದರು. ಊಟ ಉಪಾಹಾರಗಳನ್ನು ತಯಾರಿಸಿದ ಪಕ್ವಾನ್ ಆದಂ ಸಾಹೇಬರೂ ಕೂಡ 2500 ರೂಪಾಯಿಯ ಬದಲಿಗೆ ಕೇವಲ 500 ರೂಪಾಯಿಯನ್ನು ತನ್ನ ಕೆಲಸಕ್ಕೆ ಪಡೆದಿದ್ದರು. ಒಟ್ಟಾರೆಯಾಗಿ ನನ್ನ ಈ ನಿರ್ಧಾರಕ್ಕೆ ಎಲ್ಲಾ ಸಹ್ರದಯಿಗಳು ಕೈ ಜೋಡಿಸಿದ್ದರು.

ಇನ್ನೊಂದು ಮುಖ್ಯವಾದ ವಿಚಾರ ಅವತ್ತು ಹುಡುಗಿ ನೋಡುವ ಮೊದಲು ಯಾಸೀರ್ ನನ್ನ ಕೈಗೆ ಹುಡುಗಿಯ ಪೋಟೊ ಇರುವ ಕವರ್ ಕೊಟ್ಟಾಗ ಆ ಕವರನ್ನು ತೆರೆಯದೆ ಅದೇ ರೀತಿ ಆಫೀಸಿನ ಪುಸ್ತಕಗಳ ಮಧ್ಯೆ ಬಚ್ಚಿಟ್ಟಿದ್ದೆ, ಪೋಟೊ ನೋಡಿ ಮನಸ್ಸು ಬದಲಾಗಿ ನನ್ನ ಆತ್ಮೀಯ ಗೆಳೆಯನಿಗೆ ಕೊಟ್ಟ ಮಾತು ತಪ್ಪಬಾರದೆಂಬ ಉದ್ದೇಶದಿಂದ. ಆ ಕವರನ್ನು ನಾನು ಮತ್ತು ನನ್ನ ಹೆಂಡತಿ ಮದುವೆಯಾದ 15 ದಿವಸಗಳ ನಂತರ ಆಫೀಸ್ ಗೆ ಹೋಗಿ ಒಟ್ಟಿಗೆ ತೆರೆದು ನೋಡಿದೆವು(ನಂಬಿದ್ರೆ ನಂಬಿ ಬಿಟ್ರೆ ಬಿಡಿ) ತದ ನಂತರ ನನ್ನನ್ನು ನೋಡಿ ನನ್ನ ನಾಲ್ಕು ಗೆಳೆಯರೂ ಸಹ ಇದೇ ರೀತಿಯಲ್ಲಿ ಮದುವೆಯಾಗುವುದಾಗಿ ಮಾತು ಕೊಟ್ಟು, ನುಡಿದಂತೆ ನಡೆದುಕೊಂಡರು. ನನ್ನ ಮದುವೆಗೆ ಆದ ಒಟ್ಟು ಖರ್ಚು ಕೇವಲ 38000 ಮಾತ್ರ.

"ಸೃಷ್ಟಿಕರ್ತನಿಗೆ ಸರ್ವ ಸ್ತೋತ್ರಗಳು"

ಇಂತೀ
ಅನಾಮಿಕ


www.facebook.com/BlueWavesPage
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ