ನಿರ್ಭಯಳಿಗಾಗಿ ಹೋರಾಡಿ ವ್ಯವಸ್ಥೆಯ ಎದೆಗೆ ಒದ್ದು ಕಾನೂನು ಬದಲಾಯಿಸಿ ಅತ್ಯಾಚಾರಿಗಳಿಗೆ ಸಿಂಹಸ್ವಪ್ನವಾಗುವ ಮುನ್ಸೂಚನೆ ಕೊಟ್ಟ ಯುವಕ ಯುವತಿಯರೇ ಮತ್ತೊಮ್ಮೆ ಮೌನ ಮುರಿಯಬೇಕಿದೆ. ಮತ್ತೊಮ್ಮೆ ದನಿ ಎತ್ತಬೇಕಿದೆ.. ಮತ್ತೊಮ್ಮೆ ಎದೆ ಬಿರಿದು ಹೋರಾಡಬೇಕಿದೆ.ಕಳೆದ ವಾರವಷ್ಟೇ ಮೂರುವರೆ ವರುಷದ ಕಂದಮ್ಮನ ಮೇಲೆ ಮುಗಿಬಿದ್ದ ರಾಕ್ಷಸ ಅಯೋಗ್ಯ ನೀಚ ದುರುಳ ವಿಕೃತ ಗುಂಡಪ್ಪನ ಹೇಯ ಮನಸ್ಸಿನ ಪೈಶಾಚೀ ಕೃತ್ಯದ ಆಘಾತ ಕಿವಿಯ ಮೇಲೆ ಗುಂಯ್ಗುಡುತ್ತಿರುವಾಗಲೇ ಮತ್ತೆ ಆರು ವರುಷದ ಪುಟ್ಟ ಹೂವಿನ ಮೇಲೆ ನಡೆದ ಕರುಳು ಹಿಂಡುವ ಘಟನಗೆ ಸಾಕ್ಷಿಯಾಗುತ್ತಿದ್ದೇವೆಯೆಂದರೆ,ನಮ್ಮ ಮೌನಗಳು ಭೀಕರ ಭವಿಷ್ಯವೊಂದಕ್ಕೆ, ಹಾದಿ ಬೀದಿಯಲ್ಲಿ ಅರಳುವ ಕುಸುಮಗಳು ತರಿದು ಹಾಕಲ್ಪಡುವ ಅನಾಚಾರ ವಿಕೃತಿಯ ಪರಕಾಷ್ಠೆಯ ನರಕವಾಗಲು ನಾಂದಿಯಾಗುತ್ತಿದೆ ಎಂಬ ಎಚ್ಚರಿಕೆಯು ನಮ್ಮನ್ನು ಮತ್ತೆ ಬೀದಿಗಿಳಿಸಬೇಕಿದೆ.
ಆಳುವ ವರ್ಗದ ಮೌನಗಳು, ಬರೇ ಪುಸ್ತಕದಲ್ಲಿ ಬರೆದಿಡಲು ಮಾತ್ರ ಕಾನೂನುಗಳಾದರೆ, ಅತ್ಯಾಚಾರಿಯೊಬ್ಬನಿಗೆ ಸಾರ್ವಜನಿಕವಾಗಿ ಶಾಸ್ತಿ ಮಾಡುವ ಮೂಲಕ ಪ್ರತಿಯೊಬ್ಬ ಅತ್ಯಾಚಾರಿಗೂ ದಿಟ್ಟ ಎಚ್ಚರಿಕೆಯನ್ನು ನೀಡದಿದ್ದರೆ, ತನ್ನ ಸುಂದರ ಬದುಕನ್ನು ಅವಮಾನ ಯಾತನೆಗಳಿಂದ ಕಳೆಯಬೇಕಾಗಿಸಿ, ಅಮಾಯಕ ಹೆಣ್ಣು ಮಗುವಿನ ಬದುಕು ಕಸಿದುಕೊಂಡ,ಅಸಂಖ್ಯಾತ ಹೆಣ್ಣು ಹೆತ್ತವರನ್ನು ಕಣ್ಣೀರಿಡಿಸಿದ, ಅವರ ಆಸೆ ಆಕಾಂಕ್ಷೆಗಳನ್ನು ಚಿಗುರಲ್ಲೇ ಚಿವುಟಿ ಹಾಕಿದ, ಪೊದೆಯಲ್ಲೊ, ಚರಂಡಿಯಲ್ಲೋ ಹಸಿ ಮಾಂಸ ತಿಂದು ಅರ್ದಕ್ಕೆ ಬಿಟ್ಟ ನಮ್ಮ ಮನೆ ಮಕ್ಕಳ ನಗ್ನ ಶರೀರವನ್ನು ಅಚೇತನ ಜಡದಂತೆ ನಿಂತು ನೋಡಬೇಕಾದ ಸಾಮಾಜಿಕ ಕ್ರೂರತೆಗಳಿಗೆ ಅವಸಾನ ಎಂಬುದೇ ಇರುವುದಿಲ್ಲ.ಭಯಮುಕ್ತ, ಸ್ತ್ರೀ ಹಕ್ಕುಗಳ ರಕ್ಷಣೆಯ ಸಂಪೂರ್ಣ ಜವಾಬ್ದಾರಿಯನ್ನು ಅಧಿಕಾರದಲ್ಲಿರುವ ಅಮಲುಗಣ್ಣಿನವರಿಗಿಂತ ಭಾರತೀಯ ಯುವ ಸಮೂಹಗಳು ಹೊರಬೇಕಿದೆ. ಅದು ನಿದ್ರಿಸುತ್ತಿರುವ ಆಳುವ ವರ್ಗದ ಎದೆಗೆ ಒದ್ದೋ, ಕಾನೂನಿನ ಕೊರಳಪಟ್ಟಿ ಹಿಡಿದೋ, ಕಾರ್ಯಾಂಗದ ಜಡತ್ವದ ಅಂಡಿಗೆ ಬಡಿದೋ, ಅದು ಹೇಗೆಯಾದರೂ ಸರಿ, ಅತ್ಯಾಚಾರಿಯೊಬ್ಬ ಕನಸಿನಲ್ಲಿಯೂ ಬೆಚ್ಚಿ ಬೀಳುವಂತಹ ವಾತಾವರಣವನ್ನು ನಾವು ಸೃಷ್ಟಿಸದಿದ್ದರೆ.. ಓ ಭಾರತೀಯ ಯುವ ಸಮೂಹವೇ.. ನಮ್ಮ ಅಕ್ಕ ತಂಗಿಯಂದಿರು, ಇಲ್ಲಾ ನಾಳೆ ಹುಟ್ಟಿ ನರ್ಸರಿಗೆ ಹೊರಡಲಿರುವ ನಿನ್ನ ರಕ್ತ ಹಂಚಿಕೊಂಡಿರುವ ಹೆಣ್ಣು ಮಗುವಿನ ಭವಿಷ್ಯವನ್ನು ಊಹಿಸಿಕೊಳ್ಳಲೂ ಅಸಾಧ್ಯವಾದೀತು.
ಕಿಚ್ಚಿಗೆ ಕಿಡಿ ಹೊತ್ತಿಸುವುದು ನಿನ್ನಿಂದಲೇ ಆಗಲಿ. ಎಚ್ಚರಗೊಳ್ಳು, ಒಗ್ಗೂಡಿಸು,ರಾಕ್ಷಸ ದಹನಕ್ಕೆ ಕಾಲ ಮಿಂಚಿಯಾಗಿದೆ. ಇನ್ನೂ ನಿದ್ದೆ ತರವಲ್ಲ...!!!!
- ಟೀಂ ಬ್ಲೂ ವೇವ್ಸ್
#responsible #youths #future #India
www.facebook.com/BlueWavesPag

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ