ಭಾನುವಾರ, ನವೆಂಬರ್ 9, 2014

ಬದುಕು -ಬೆಲೆ ಮತ್ತು ಬಲಿ



ಕಡು ಬಡ ಕುಟುಂಬದಿಂದ ಬಂದ ಬಡ ತಂದೆ ತಾಯಿ ಹಾಗು ರೋಗಗ್ರಸ್ತ ಅಜ್ಜಿಯೊಂದಿಗೆ ಜೀವಿಸುತಿದ್ದ, ಓದಿನಲ್ಲಿ ಚುರುಕಾಗಿದ್ದ, ಶಾಲಾ ಚಟುವಟಿಕೆಗಳಲ್ಲಿ ಸಕ್ರೀಯನಾಗಿದ್ದ, ಗೆಳೆಯರೊಂದಿಗೆ ಅನ್ಯೋನ್ಯವಾಗಿದ್ದ, ಶಿಕ್ಷಕರ ಮೆಚ್ಚಿನ ವಿಧ್ಯಾರ್ಥಿಯಾಗಿದ್ದ, ಈಗಷ್ಟೇ ಯೌವ್ವನಕ್ಕೆ ಕಾಲಿಡುತ್ತಿದ್ದ ಹೈಸ್ಕೂಲ್ ವಿಧ್ಯಾರ್ಥಿ ಉತ್ತರ ಪ್ರದೇಶದ "ಗೋಪಾಲ್". ಇದ್ದಕಿದ್ದಂತೆ ನೇಣಿಗೆ ಶರಣಾದ. ಅವನ ಆತ್ಮಹತ್ಯೆಯ ಕಾರಣಗಳನ್ನು ಹುಡುಕುತ್ತಾ ಹೋದಾಗ, ಮನ ಕುಲುಕುವಂತಹ ಚಿತ್ರಗಳ ಅನಾವರಣವಾಗುತ್ತದೆ.

ತನ್ನ ಅಜ್ಜಿಯ ಔಷದಿಗೆ ಹಣವಿಲ್ಲದ ಚಿಂತೆಯನ್ನು ತನ್ನ ಆಪ್ತ ಮಿತ್ರನಾದ ಹರಿಯೊಂದಿಗೆ ಹಂಚಿಕೊಳ್ಳುತ್ತಾನೆ. ಹರಿಯು ಮಿತ್ರನಿಗೆ ಸಹಾಯ ಮಾಡಲೋಸುಗ, ತನ್ನ ಅಕ್ಕ 'ನೈನಾ'ಳ ದುಂಬಾಲು ಬೀಳುತ್ತಾನೆ. ಇಪ್ಪತ್ತೋ ಮೂವತ್ತೋ ರೂಪಾಯಿ ಆಗಿರಬಹುದು ಅಂದುಕೊಂಡು "ಇವತ್ತೇ ಸಂಬಳ ಸಿಕ್ಕಿದೆ, ಪರ್ಸಲ್ಲಿ ಇದೆ ತೆಗೆದುಕೋ" ." ಎಂದು ಉತ್ತರಿಸುತ್ತಾಳೆ. ಹರಿ ಅದರಿಂದ 1000 ರೂ ತೆಗೆದು ಗೋಪಾಲನಿಗೆ ಕೊಟ್ಟು ಸಮಾಧಾನ ಪಡಿಸಿ ಕಳುಹಿಸುತ್ತಾನೆ.

ನಂತರ ನೈನ ತನ್ನ ಪರ್ಸ್ನಿಂದ 1000 ರೂ ತೆಗೆದಿದುರುವುದನ್ನು ಕಂಡು ಗಾಬರಿಗೊಂಡು ವಿಚಾರಿಸಿದಾಗ, ಹರಿಯು ಒಪ್ಪಿಕೊಂಡು ವಿನಯಪೂರ್ವಕವಾಗಿ ಆದಷ್ಟು ಬೇಗ ಅವನು ಹಣವನ್ನು ಮರಳಿಸುತ್ತಾನೆ ಎಂದು ಪರಿಯಾಗಿ ಬೇಡಿಕೊಂಡರೂ, ಅದನ್ನು ಕಿವಿಗೊಲ್ಲದೆ ತಕ್ಷಣ ತನ್ನ ಹರಿದ ಚಪ್ಪಲಿಯೇರಿಸಿಕೊಂಡು ನೇರ ಗೋಪಾಲನ ಮನೆಗೆ ದೌಡಾಯಿಸಿ, ಈಗಲೇ ಹಣ ಕೊಡುವಂತೆ ದಬಾಯಿಸುತ್ತಾಳೆ. "ಔಷದ ಖರೀದಿಸಿ 1000 ರೂಪಾಯಿಯಲ್ಲಿ 127 ರೂಪಾಯಿಯಷ್ಟೇ ಉಳಿದಿದೆ, ಬಾಕಿ ಹಣ ಶೀಘ್ರದಲ್ಲಿ ಮರಳಿಸುವೆ" ಗೋಪಾಲ್ ಅವಳಲ್ಲಿ ವಿನಂತಿಸುತ್ತಾನೆ.

ಅದಕ್ಕವಳು ಕೆಂಡ ಮುಂಡಲವಾಗಿ "ನನ್ ಹಣ ರಾತ್ರಿ ಬೆಳಗಾಗೊದರೊಳಗೆ ನನ್ ಕೈ ಸೆರ್ಬೆಕು. ಇಲ್ಲಾಂದ್ರೆ, ನೀನು ನನ್ನನ್ನು ರೇಪ್ ಮಾಡಿ ಸಾವಿರ ಅಲ್ಲ ಹತ್ತು ಸಾವಿರ ದೊಚಿದ್ದಿ ಎಂದು ನೇರ ಪೋಲೀಸ್ ಕಂಪ್ಲೇಂಟ್ ಕೊಡ್ತೀನಿ. ನೀನಂತು 7 ವರ್ಷಕ್ಕೆ ಒಳಗೆ ಹೋಗ್ತೀಯ. ಹೊರ ಬಾರೋ ಹೊತ್ತಿಗೆ ನಿನ್ ಮನೆಯವರು ಅವಮಾನ ಸಹಿಸಿ ಜೀವಂತ ಇರುತ್ತಾರೋ ಇಲ್ವೋ ಹೇಳಕ್ಕಾಗದು" ಅಂತ ಒಂದಷ್ಟು ಕರುಣೆಯಿಲ್ಲದೆ ದಬಾಯಿಸುತ್ತಾಳೆ. ಮೊದಲೇ ತನ್ನ ಸಾಲು ಸಾಲು ಕಷ್ಟಗಳಿಂದ ನೊಂದಿದ್ದ ಗೋಪಾಲನನ್ನು ಈ ಮಾತು ಮತ್ತಷ್ಟು ಮಾನಸಿಕವಾಗಿ ಕುಗ್ಗಿಸುತ್ತದೆ. ಪರಿಹಾರದ ಯಾವುದೇ ಮಾರ್ಗ ತೋಚದೆ ಜರ್ಜರಿತನಾಗುತ್ತಾನೆ. ಅಲ್ಲಿಂದ ಬಿಕ್ಕಿ ಬಿಕ್ಕಿ ಅಳುತ್ತ ನೇರ ಕೊಠಡಿ ಹೋದವನೇ ನೇಣಿಗೆ ಶರಣಾಗುತ್ತಾನೆ.

ಪೋಲೀಸ್ ವಿಚಾರಣೆ ವೇಳೆ ನೈನ ಹೇಳ್ತಾಳೆ, "ನಾನು ಆ ತರ ಹೇಳಿರೋದು ನಿಜ. ಆದ್ರೆ ಗೋಪಾಲ್ ಇಷ್ಟು ದೊಡ್ಡ ಅನಾಹುತ ಮಾಡ್ಕೊಳ್ತಾನೆ ಎಂದು ಯೋಚಿಸಿರಲಿಲ್ಲಾ. ನನಗೆ1000 ರುಪಾಯಿ ಬಹಳ ದೊಡ್ಡ ಮೊತ್ತ. ನನಗೆ 5000 ರುಪಾಯಿ ಸಂಬಳ. ಅದ್ರಲ್ಲಿ ತಿಂಗಳ ಮನೆ ಖರ್ಚು, ತಂದೆಯ ಔಷದಿ, ತಮ್ಮನ ವಿಧ್ಯಾಬ್ಯಾಸ, ನನ್ನ ಸಣ್ಣ ಪುಟ್ಟ ಖರ್ಚು. ಎಲ್ಲವೂ 5000 ರುಪಾಯಿಯಲ್ಲಿ ನಿಭಾಯಿಸಬೇಕು. 3 ದೀಪಾವಳಿಗಳು ನಮಗಾರಿಗೂ ಹೊಸ ಬಟ್ಟೆಯಿಲ್ಲದೆ ಕಳೆದು ಹೋಗಿದೆ. ನನ್ನಲ್ಲಿರುವುದು 2 ಜೊತೆ ಬಟ್ಟೆ ಮಾತ್ರ. ದಿನಾಲು ಒಗೆದು ಹಾಕ್ತೀನಿ. ಆ 1000 ರುಪಾಯಿಂದಾಗಿ ನನ್ನ ತಿಂಗಳ ಖರ್ಚಿನ ಲೆಕ್ಕಾಚಾರ ತಲೆ ಕೆಳಗಾಗುವ ಭಯ ಮತ್ತು ಚಿಂತೆ ನನ್ನನ್ನು ಕಾಡಿದಕ್ಕೊಸ್ಕರ ನಾನು ನನ್ನ ಹಣಕ್ಕಾಗಿ ಬೆದರಿಸಿದೆ. ಆದ್ರೆ ಇದರ ಪರಿಣಾಮ ಈ ರೀತಿ ಇರಬಹುದು ಎಂದು ಕನಸಿನಲ್ಲೂ ಎಣಿಸಿರಲಿಲ್ಲ" ಎಂದು ಗದ್ಗದಿತಳಾಗಿ ಮರುಗುತ್ತಾಳೆ.
ಈಗ ನೈನ ಜೈಲಿನಲ್ಲಿ ಭಾರವಾದ ಕಣ್ಣೀರಿನೊಂದಿಗೆ ದಿನ ಕಳೆಯುತ್ತಿದ್ದಾಳೆ. ಎರಡೂ ಬಡ ಕುಟುಂಬಗಳ ಸ್ಥಿತಿ ಡೋಲಾಯಮಾನವಾಗಿದೆ.

ಗೆಳೆಯರೇ, ಸಿನಿಮಾ ತಾರೆಯರಿಗೆ, ಫ್ಯಾಶನ್ ಲೋಕದ ಬಿಚ್ಚಮ್ಮಗಳಿಗೆ ಸಣ್ಣ ನೆಗಡಿ ಆದ್ರೂ ನೆಗೆದು ಬೀಳುವ ನಾವುಗಳು, FB ಪುಟಗಳಲ್ಲಿ ಹಂಚಿ ಕೊಳ್ತೆವೆ, ಮಾಧ್ಯಮಗಳಲ್ಲೂ ಚರ್ಚಿಸಲ್ಪಡುತ್ತದೆ

ಶ್ರೀಮಂತರು ತಮ್ಮ ಮಕ್ಕಳನ್ನು ಡಾಕ್ಟರುಗಳನ್ನಾಗಿ ಮಾಡಿ ವಿದೇಶಕ್ಕೆ ಕಳಿಸಿ ಬ್ಯಾಂಕ್ ಬ್ಯಾಲೆನ್ಸ್ ವೃದ್ದಿಸಿಕೊಳ್ತಾರೆ. ಮಲ್ಟಿ ಮಿಲಿಯನರ್ಗಳು, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ತೆರೆದು, ಮತ್ತೊಂದನ್ನು ಕಟ್ಟಿಸುವ ಕನಸು ಕಾಣುತ್ತಾರೆ. ಅದೇ ಆಸ್ಪತ್ರೆಯ ಪಕ್ಕದಲ್ಲಿ ಅದೆಷ್ಟೋ ಬಡ ಕುಟುಂಬಗಳು ಔಷದಿಗಾಗಿ ಪರದಾದುತ್ತಿರುತ್ತವೆ.

ನಮ್ಮ ಊರಿನಲ್ಲಿ ಯಾರಾದರು ಬಡವರು ಔಷದಿಗಾಗಿ ಪರಿತಪಿಸಿದರೆ, ನಾವು ಅವರತ್ತ ಹೆಜ್ಜೆ ಹಾಕುವುದು ಬಿಡಿ, ಮುಖ ಕೂಡ ತಿರುಗಿಸಿ ನೊಡಲ್ಲ. ಹಾಗೆ ನೋಡಿದರೆ ಎಲ್ಲಿ ನಮ್ಮ ಜೇಬಿಗೆ ಕತ್ತರಿ ಬೀಳುತ್ತೋ ಎಂಬ ಭಯ.

ಇವತ್ತು ಎಷ್ಟು ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆಯ ಯಜಮಾನರು ರೋಗಿಗಳಿಂದ ಗಳಿಸಿದ ಲಾಭಾಂಶದಲ್ಲಿ ಒಂದಂಶವನ್ನಾದರೂ ಮೀಸಲಿತಿದ್ದಾರೆ ? ಬೆಲೆ ಬಾಳುವ ಐಶಾರಾಮಿ ಕಾರುಗಳನ್ನು ಕಾಲ ಕಾಲಕ್ಕೆ ಬದಲಾಯಿಸುವ ಆಗರ್ಭ ಶ್ರೀಮಂತರು (ಕೆಲವರನ್ನು ಬಿಟ್ಟು) ಇದರ ಬಗ್ಗೆ ಕಾಳಜಿವಹುಸಿದ್ದಾರೆಯೇ?

ನಾವುಗಳು ಇದಕ್ಕಾಗಿ ಒಂದು ಹೆಜ್ಜೆ ಇಡೋಣವೇ? ಇಂಥಹ ನಿಜವಾದ ಬಡ ಜನರಿಗಾಗಿ ಕೈ ಜೋಡಿಸೋಣವೇ?

ನಿಮ್ಮ ಅಂತರಾಳದಲ್ಲಿ ಎಲ್ಲಾದರೂ "ಹೌದು" ಎಂಬ ಸಣ್ಣ ಒಂದು ದ್ವನಿ ಮೂಡಿದರೆ, ನಾವೆಲ್ಲಾ ಒಟ್ಟಾಗಿ ಇದಕ್ಕಾಗಿ ಕಾರ್ಯಪ್ರವೃತ್ತರಗೋಣ...

ಇತಿ ನಿಮ್ಮ
ಅನಾಮಿಕ...


https://www.facebook.com/BlueWavesPage

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ