ಹೌದು.. ಇದು ಖಂಡಿತಾ ನನ್ನ ಕನಸಿನ ಭಾರತದಲ್ಲಿ ನಡೆಯಬೇಕಾದುದು ಅಲ್ಲ. ಧರ್ಮ ನಿರಪೇಕ್ಷತೆಯ, ಯವುದೇ ಜಾತಿ, ಮತ, ಪಂಗಡಗಳ ಹಂಗಿನ ಪಾಲುದಾರಿಕೆಯಿಲ್ಲದ ಗಾಂಧೀಜಿಯವರ ಕನಸಿನ "ರಾಮ ರಾಜ್ಯ" ನಮ್ಮ ಪಾಲಿಗೆ ವಿದೂರವಾಗುತ್ತಾ ಇದೆ. ಇದೇ ಪರಿಸ್ಥಿತಿ ಮುಂದುವರೆದರೆ "ರಾಮರಾಜ್ಯದ" ಪರಿಕಲ್ಪನೆ ಮರೀಚಿಕೆಯಾಗಿಯೇ ಉಳಿಯಬಹುದೆಂಬ ಭಯವಿದೆ ನನ್ನಲ್ಲಿ. ರಾಜಕಾರಣ ಎಂಬುದು ಸಮಾಜ ಸೇವೆಗೆ ಉತ್ಕೃಷ್ಟ ವೇದಿಕೆ, ದೇಶದ ಎಲ್ಲಾ ಸ್ಥರದ, ಎಲ್ಲಾ ನಂಬಿಕೆಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭವ್ಯ ಭಾರತ ನಿರ್ಮಾಣವೇ ಅದರ ಗುರಿಯಾಗಿರಬೇಕು. ದೇಶದ ಚುಕ್ಕಾಣಿ ಹಿಡಿಯುವ ರಾಜಕೀಯ ಪಕ್ಷಗಳು ದೇಶವಾಸಿಗಳು ಪರಸ್ಪರ ಸೌಹಾದರ್ಯತೆಯಿಂದ ಸಹಬಾಳ್ವೆ ನಡೆಸಬೇಕೆಂಬ ಆಶಾಭಾವ ಹೊಂದಿರಬೇಕು ಮತ್ತು ಆ ಶಾಂತಿಮಂತ್ರದ ಅನುಷ್ಠಾನವನ್ನು ತನ್ನ ಸಿದ್ಧಾಂಥಗಳ ಭಾಗವಾಗಿಸಬೇಕು. ಅದೇ ರೀತಿ ರಾಜಕಾರಣಿಯಾದವನು ದೇಶದ ಅಭ್ಯುದಯಾಕಾಂಕ್ಷಿಯಾಗಿರಬೇಕು, ಪ್ರತೀ ನಾಗರಿಕರನ್ನೂ ವರ್ಣ, ಭಾಷೆ, ಜಾತಿ, ಧರ್ಮಗಳ ಹಂಗಿಲ್ಲದೆ ಪ್ರೀತಿಸುವವನೂ, ಪರಿಪಾಲಿಸುವವನೂ ಆಗಿರಬೇಕು. ಈ ಆದರ್ಶಗಳಿಂದ ವಿಮುಖವಾಗಿ ರಾಜಕೀಯ ಪಕ್ಷಗಳು,ರಾಜಕಾರಣಿಗಳು ಧರ್ಮ ಧರ್ಮಗಳೊಳಗೆ ದ್ವೇಷ ಭಾವ ಹರಡಿ, ದೇಶವಾಸಿಗಳ ಅಖಂಡತೆಗೆ ಕೊಳ್ಳಿ ಇಡುವುದನ್ನೇ ಕಾಯಕವಾಗಿಸಿಕೊಂಡುಬಿಟ್ಟು ಈ ದೇಶದ ಏಳಿಗೆಗೆ, ಶಾಂತಿಗೆ ಕೊಳ್ಳಿಯಿಡುತ್ತಿದ್ದಾರೆ. ಅದು ದೇಶವನ್ನು ಅನಪೇಕ್ಷಿತ ವಿಷಯಗಳ ಸುತ್ತಲೇ ಗಿರಕಿ ಹೊಡೆಸುತ್ತಾ ದೇಶದ ಸಾರ್ವಭೌಮತೆ ಮತ್ತು ಅಭಿವೃದ್ಧಿಯ ಅವಶ್ಯಕತೆಗಳೆಡೆಗೆ ನಮ್ಮ ಗಮನವನ್ನು ಕುರುಡಾಗಿಸುತ್ತಿದೆ. ನಾವು ಎಚ್ಚೆತ್ತುಕೊಳ್ಳಬೇಕಾದ ಸಮಯ ಮೀರಿದೆ.
ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದ "ಲವ್ ಜಿಹಾದ್" ಪ್ರಕರಣದ ಬಗೆಗಿನ ನಗ್ನ ಸತ್ಯಗಳು ಹೊರಬಿದ್ದಿದೆ. ಸಾಮಾನ್ಯದಲ್ಲಿ ಸಾಮಾನ್ಯವಾದ ಅಂತರ್ ಧರ್ಮ ಪ್ರೇಮ ಪ್ರಕರಣವನ್ನು ಮುಖ್ಯವಾಹಿನಿಯಲ್ಲಿ "ಲವ್ ಜಿಹಾದ್" ಎಂಬ ವರ್ಣರಂಜಿತ ಹೆಸರಿನೊಂದಿಗೆ ತಳುಕು ಹಾಕಿ, ಒಂದು ಸಮುದಾಯದ ಮೇಲೆ ವಿಷ ಕಾರುವ ಸಾಮಾಜ ದ್ರೋಹಿಗಳ ವಿಕೃತ ಕ್ರೌರ್ಯ ಮತ್ತೊಮ್ಮೆ ಬಯಲಾಗಿದೆ. ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು, ಮತ್ತು ಬಲವಂತವಾಗಿ ಮತಾಂತರ ಮಾಡಲಾಗಿತ್ತು ಎಂದು ಆರೋಪಿಸಿದ್ದ ಯುವತಿ ತನ್ನ ಹೇಳಿಕೆಯಿಂದ ಹಿಂದೆ ಸರಿದ ಬಳಿಕ ಇಡೀ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಉತ್ತರ ಪ್ರದೇಶದ ಪದಾಧಿಕಾರಿ ವಿನೀತ್ ಅಗರವಾಲ್ ಎಂಬ ಅಸಾಮಿಯ ಕೋಮು ಕೀವು ತುಂಬಿಕೊಂಡ ತಲೆಯಲ್ಲಿ ಹೊಳೆದ ಐಡಿಯಾವೇ ಇಡೀ ಪ್ರಕರಣದ ಹಿಂದಿನ ಸೂತ್ರಧಾರ ಎಂದರೆ ನನ್ನ ದೇಶದ ರಾಜಕಾರಣ ಮತ್ತದರ ಉದ್ದೇಶಗಳು ಅರ್ಥವಾಗದ ಬೆಪ್ಪನಂತಾಗಿಬಿಟ್ಟಿದ್ದೇನೆ. ಆತನ 25 ಸಾವಿರ ರೂಪಾಯಿ ಹಾಗು ಮತ್ತಷ್ಟು ಹಣದ ಆಮಿಷ ಪ್ರೇಮ ಪ್ರಕರಣವೊಂದನ್ನು ಲವ್ ಜಿಹಾದಾಗಿಸಿ ಆ ಪ್ರದೇಶವೇ ಹೊತ್ತಿ ಉರಿಯುವಂತೆ ಮಾಡುತ್ತದೆ. ಕಳೆದ ತಿಂಗಳು ಉತ್ತರಪ್ರದೇಶದಲ್ಲಿ ನಡೆದ ಉಪಚುನಾವಣೆಯ ಹಿನ್ನಲೆಯಲ್ಲಿ ಈ ಪ್ರಕರಣದ ವಿರುದ್ದ ನಡೆದ ಪ್ರತಿಭಟನೆಗಳು ಮತ್ತು ಬೀದಿ ನಾಟಕ ಪ್ರಹಸನಗಳಿಂದ ಅವನು ಮತ್ತವನ ಪಕ್ಷ ಪಡೆದುಕೊಂಡ ಲಾಭವನ್ನು ನೆನೆಸಿಕೊಳ್ಳುವಾಗ ನನ್ನ ದೇಶದ ದುರ್ಗತಿಗಳು ಮತ್ತದರ ವಿರುದ್ಧದ ದಿವ್ಯ ಮೌನ ಅಸಹ್ಯ ಹುಟ್ಟಿಸುತ್ತಿದೆ.
ಪ್ರಾರಂಭದಲ್ಲಿ ಈ ಪ್ರಕರಣಕ್ಕೆ ವರ್ಣರಂಜಿತ ಪುಟಗಳನ್ನು ಮೀಸಲಿಟ್ಟ ಪತ್ರಿಕೆಗಳು, ಅರೇಬಿಕ್ ಲಿಪಿಯಿರುವ ಭಯಾನಕ ಚಿತ್ರಗಳನ್ನು ಹಿನ್ನೆಲೆಯಾಗಿಸಿ ಗಂಟೆಗಟ್ಟಲೆ ಸಮಯವನ್ನು ಅದರ ಬಗೆಗಿನ ಚರ್ಚೆಗೆ ಮೀಸಲಿಟ್ಟ ದೃಶ್ಯ ಮಾಧ್ಯಮಗಳು, ಸತ್ಯ ಬಯಲಾದ ನಂತರ ಒಂದು ಕಾಲಂ ಮತ್ತು ಒಂದು ವಾಕ್ಯದ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದೆಯೆಂದರೆ, ಆ ಮೂಲಕ ನಮ್ಮ ಮಾಧ್ಯಮಗಳ ವಸ್ತು ನಿಷ್ಠತೆ ಸತ್ತು ಶವವಾಗಿದೆ ಎಂಬ ಹಿಡಿಶಾಪ ಹಾಕಿ ಸುಮ್ಮನಾದರಾಯಿತೇ? ಅಲ್ಲಾ ಮಾಧ್ಯಮಗಳು ದೇಶದ ಅಧಃಪತನ ನಡೆಸುತ್ತಿರುವವರ ಕೈಂಕರ್ಯದಲ್ಲಿ ಪಾಲು ಪಡೆದುಕೊಂಡಿದೆ ಎಂದು ಗಂಭೀರವಾಗಿ ಚಿಂತಿಸಬೇಕಾಗಿದೆಯೇ..? ಸುಳ್ಳು ಸುದ್ಧಿಗಳನ್ನು ಪ್ರಚುರಪಡಿಸಲು ಆ ಮೂಲಕ ಸಾವಿರಾರು ಜನರ ಮನಸ್ಸಿನಲ್ಲಿ ಧರ್ಮ ದ್ವೇಷ ಹುಟ್ಟಿಸುವಾಗ ಇರುವ ಆವೇಗ ಸತ್ಯ ಬಯಲಾದಾಗ ಅದೇ ಜನರ ಮನಸ್ಸಿಗೆ ಸತ್ಯವನ್ನು ತಲುಪಿಸಬೇಕಾದ ಜವಾಬ್ದಾರಿ ಬಂದಾಗ ಇಲ್ಲವಾಗುವುದು, ಸಂವಿಧಾನದ ನಾಲ್ಕನೇ ಅಂಗವೇ ಶಾಂತಿ ಮತ್ತು ಪ್ರಗತಿಯ ಅತೀ ದೊಡ್ಡ ಬೆದರಿಗೆಯಾಗುತ್ತಿದೆಯೇ ಎಂಬ ಪ್ರಶ್ನೆಯೊಂದು ಜೀವ ಪಡೆದುಕೊಳ್ಳುತ್ತಿದೆ.
ಮಾಧ್ಯಮಗಳ ರಾಜಕಾರಣಿಗಳ ಗೋಸುಂಬೆತನಗಳು ಎಲ್ಲೆಗಳನ್ನು ಮೀರಿ ದೇಶದ ಬುಡವನ್ನು ಅಲುಗಾಡಿಸಲು ಹೊರಟಿರುವುದನ್ನು ಪ್ರಶ್ನಿಸಬೇಕಾಗಿರುವುದು ಪ್ರಜ್ಙಾವಂತ ದೇಶವಾಸಿಗಳ ಗಂಭೀರ ಆದ್ಯತೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗದಿದ್ದರೆ ಇತಿಹಾಸದ ಅತೀ ಕೆಟ್ಟ ಅಧ್ಯಾಯಗಳು ಮರುಕಳಿಸುವ ಸಾಧ್ಯತೆಗಳನ್ನು ನಾವೇ ತೆರೆದಿಟ್ಟಂತಾಗುತ್ತದೆ.
ಹುಸೇನ್ (ಟೀಂ ಬ್ಲೂ ವೇವ್ಸ್)
www.facebook.com/BlueWavesPage

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ