ಜಾತಿ ನಿಂದನೆ, ಕಚ್ಚಾಟ, ಕಿತ್ತಾಟ ಇವುಗಳೇ ಇಂದಿನ ಯುವ ಸಮೂಹವು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯಾಗುತ್ತಿದೆಯೇ...?!!
ಈ ಕೆಟ್ಟ ಶಕ್ತಿಯಿಂದ ಮುಕ್ತಿ ಪಡೆಯಲು ಸಮಯದ ಅಭಾವವೋ, ಜ್ಞಾನದ ಕೊರತೆಯೋ ಎಂದು ಆಲೋಚಿಸುವ ಮಟ್ಟಿಗೆ ಇಂದಿನ ಸಮಾಜದ ಜನತೆ ಚಡಪಡಿಸುವಂತಾಗಿದೆ. ಧರ್ಮದ ಹೆಸರಲ್ಲಿ ಹೊಡೆದಾಡಿ, ಹೊಡೆದಾಟಕ್ಕೆಂದು ಧರ್ಮವನ್ನೇ ಗುರಿಯಾಗಿಸಿಕೊಂಡು ಪರಸ್ಪರ ಭೇದಭಾವಗಳನ್ನು ಸೃಷ್ಟಿಸುವ ಯುವ ಸಮೂಹವು ಧರ್ಮದ ನಿಯಮಗಳನ್ನು ಪಾಲಿಸದೆ ಅಮಾನವೀಯತೆಯ ಹೊಸ ಆಧುನಿಕ ಯುಗವನ್ನೆ ನಿರ್ಮಾಣ ಮಾಡುತ್ತಿದೆ.
ಪ್ರಜಾಪ್ರಭುತ್ವ ಭಾರತದಲ್ಲಿ ಕೋಮುಗಲಭೆಗೆ ಕೊರತೆಯೇ ಇಲ್ಲವೆಂಬಂತೆ ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಮುಖವಾಡ ಧರಿಸಿದ ಹಲವು ಶಕ್ತಿಗಳ ಕೈವಾಡವಿದ್ದರೂ ಸಹ ಇಂತಹ ಕೃತ್ಯಗಳಿಗೆ ಬಲಿಯಾಗುವುದು ಬಡ ಅಮಾಯಕರೇ ಎಂಬುವುದರಲ್ಲಿ ಸಂಶಯವೇ ಇಲ್ಲದಂತಾಗಿದೆ. ಬಡ ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಈ ಕಾಲಘಟ್ಟದಲ್ಲಿ ತಮ್ಮ ದುಷ್ಟ ಶಕ್ತಿಗಳನ್ನು ಬಳಸಿ ಜನತೆಯ ನೆಮ್ಮದಿ ಕೆಡಿಸುವುದಾಗಿದೆ ಇದರ ಉದ್ದೇಶ. ಜಾತಿ ಧರ್ಮವನ್ನು ಬದಿಗಿಟ್ಟು ಕೋಮು ಸೌಹಾರ್ದತೆಯನ್ನು ತೊಡಗಿಸಿ ಶಾಂತಿಯ ಸಮಾಜದ ನಿರ್ಮಾಣವೂ ಈ ಹಂತದಲ್ಲಿ ಅತ್ಯಗತ್ಯ.
ಯಾವ ಧರ್ಮವೂ ರೂಪಿಸಿಕೊಡದಂತಹ 'ವರದಕ್ಷಿಣೆ' ಕೂಡ ಇಂದಿನ ಹರೆಯದ ಯುವಕರಲ್ಲಿ ಉದ್ಭವಿಸುತ್ತಿರುವುದು ಅತಿಯಾಗಿದೆ. ಐಶಾರಾಮಿ ಮದುವೆಯ ಬಗ್ಗೆ ಚಿಂತಿಸುವುದೇ ಇಂದಿನ ಯುವ ಸಮೂಹಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ ಎಂಬ ಸತ್ಯವನ್ನು ಕೂಡ ಮರೆತಂತಿದೆ. ಪ್ರಸಕ್ತವಾಗಿ ಬಡ ಹೆಣ್ಣುಮಕ್ಕಳ ಕಣ್ಣೀರನ್ನು ಒರೆಸಬೇಕಾದ ಯುವಸಮೂಹವು ವರದಕ್ಷಿಣೆಯ ಕಿರುಕುಳದಿಂದ ಹೆಣ್ಣು ಹೆತ್ತವರ ಜೀವ ಹಿಂಡುತ್ತಿರುವುದು ಶೋಚನೀಯ.
ಪ್ರಾರಂಭದಲ್ಲಿ ಅಂತರ್ಜಾಲಗಳ ಬಳಕೆ ಬುದ್ಧಿವಂತಿಕೆಯ ಸಂಕೇತವಾಗಿ ಅಚ್ಚರಿಯ ವಿಚಾರವಾಗಿತ್ತು. ಆದರೆ ಇಂದು ಇಲ್ಲಿ ಒಳ್ಳೆಯ ಕುತೂಹಗಳೇ ಇಲ್ಲದಾಗಿದೆ. ಅಂತರ್ಜಾಲಗಳ ದುರ್ಬಳಕೆ, ಅಪರಿಚಿತ ವ್ಯಕ್ತಿಗಳ ಭಾವಚಿತ್ರಗಳನ್ನು ಹಾಕಿ ನಕಲಿ ಖಾತೆಗಳನ್ನು ತೆರೆದು ಜೊತೆಗೆ ಕೆಲಸಕ್ಕೆ ಬಾರದ ಪೇಜುಗಳನ್ನು ನಿರ್ಮಿಸಿ ಸಮಾಜದ ಅಶಾಂತಿಗೆ ಕಾರಣವಾಗುವುದರಲ್ಲಿ ಇಂದಿನ ಯುವ ಸಮೂಹವೇ ಎತ್ತಿದ ಕೈ.
ಜಾತಿ ನಿಂದನೆಗೆಂದೇ ಬಳಸುವ ಫೇಸ್ಬುಕ್ ಪೇಜುಗಳ ಸಂಖ್ಯೆ ಅಷ್ಟಿಷ್ಟಲ್ಲ. ಮಂದಿರ ಮಸೀದಿಗಳ ಚಿತ್ರಗಳಿಗೆ ಫೋಟೋಶಾಪ್ ಗಳಿಂದ ವಿವಿಧ ಬಣ್ಣಗಳನ್ನು ಹಚ್ಚಿ ಅಕ್ಷರಗಳ ಮೂಲಕ ಕೆಟ್ಟದಾಗಿ ಚಿತ್ರಿಸುವುದೇ ಅಂತರ್ಜಾಲ ಬಳಕೆಯ ಮುಖ್ಯ ಉದ್ದೇಶವೆಂಬಂತಾಗಿಬಿಟ್ಟಿದೆ.ಆಲ್ಕೋಹಾಲ್, ಡ್ರಗ್ಸ್ ನಂತಹ ಉನ್ಮಾದ ಚಟಗಳ ಪಟ್ಟಿಗೆ ಆರೋಗ್ಯಕರವೆಂಬಂತೆ ಕಾಣುವ ಆಧುನಿಕ ಚಟವಾಗಿದೆ ಈ ಅಂತರ್ಜಾಲಗಳು. ಅಸಂಬದ್ದತೆಗಳಿಗೆ, ಅಸಹ್ಯ ಕಾರ್ಯಗಳಿಗೆ, ಅನೈತಿಕ ಚಟುವಟಿಕೆಗಳಿಗೆ ಉಚಿತವಾಗಿ ಬಳಸುವ ಅಂತರ್ಜಾಲಗಳ ಬಳಕೆಯೇ ಇಂದಿನ ಯುವ ಸಮೂಹದ ದೊಡ್ಡ ದುರಂತ.
ಹಾಗಂತ ಬರೀ ಕೊರತೆಗಳನ್ನೇ ಬರೆದು ಬಿಂಬಿಸುವ ಬದಲು ಸ್ವಲ್ಪ ಒಳ್ಳೆಯ ಯುವಕರ ಬಗ್ಗೆಯೂ ಚಿಂತಿಸಬೇಕಿದೆ. ಪ್ರತಿಯೊಂದು ಜನಮೆಚ್ಚುಗೆಯ ಕಾರ್ಯಗಳಲ್ಲೂ ಜಾತಿ, ಧರ್ಮವೆಂಬ ಭೇದಭಾವಗಳಿಲ್ಲದೆ ನಾಡಿನ ಅಭಿವೃದ್ದಿಗೋಸ್ಕರ ದುಡಿಯುವ ಯುವ ಸಮೂಹವು ನಮ್ಮ ನಡುವೆ ಇದೆ. ಇಂತಹ ಒಳ್ಳೆಯ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡಿ ಉನ್ನತ ಮಟ್ಟದ ಅಭಿವೃದ್ಧಿಗಾಗಿ ದುಡಿಯುವಂತವರಾಗೋಣ.
ಭೇದಭಾವಗಳನ್ನು ದೂರ ತಳ್ಳಿ ಆತ್ಮಿಯರಾಗೋಣ. ವರದಕ್ಷಿಣೆ ಪಿಶಾಚಿಯನ್ನು ಒದ್ದೋಡಿಸೋಣ. ಅತ್ಯಾಚಾರಿಗಳನ್ನು ಕಠಿಣವಾಗಿ ಶಿಕ್ಷಿಸುವಂತೆ ಪ್ರತಿಭಟಿಸೋಣ. ಸಮಾಜದ ಜನತೆಗೆ ತೃಪ್ತಿಯನ್ನು ನೀಡೋಣ. ಗಾಂಧಿ, ಅಂಬೇಡ್ಕರ್, ಅಬ್ದುಲ್ ಕಲಾಂ ಆಝಾದ್, ಭಗತ್ ಸಿಂಗರ ಕನಸಿನ ಭಾರತವನ್ನು ನನಸಾಗಿಸೋಣ. ಭಾರತವನ್ನು ಬದಲಾಯಿಸೋಣ.
- H. ಸವಣೂರು
Team Blue Waves
www.facebook.com/BlueWavesPage
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ