ಬುಧವಾರ, ನವೆಂಬರ್ 12, 2014

ವಿದೇಶಿ_ಫಾಸ್ಟ್_ಫುಡ್ ಬಗ್ಗೆ ನಿಮಗೆಷ್ಟು ಗೊತ್ತು?



ಜಾಗತೀಕರಣ ಎಷ್ಟರ ಮಟ್ಟಿಗೆ ನಮ್ಮ ದೇಶದ ಮೇಲೆ ಕರಾಳ ಛಾಯೆಯನ್ನು ಬೀರುತ್ತಿದೆ ಎಂಬುದಕ್ಕೆ ತಾಜಾ ಉದಾಹರಣೆ ವಿದೇಶಿ ಫಾಸ್ಟ್ ಫುಡ್. ಈ ರುಚಿಕರ ವಿದೇಶಿ ಫಾಸ್ಟ್ ಫುಡ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ?. ಪಾಶ್ಚಾತ್ಯರ ಅತಿವೇಗದ ಆಧುನಿಕ ಜೀವನ ಶೈಲಿಗೆ ಮಾರುಹೋಗಿರುವ ನಮ್ಮ ಯುವಪೀಳಿಗೆಗೆ ಲೇಸ್ ಪೊಟ್ಯಾಟೊ ಚಿಪ್ಸ್, ನೂಡಲ್ಸ್, ಬರ್ಗರ್, ಕೆ.ಎಫ್.ಸಿ ಚಿಕನ್ ಹಾಗೂ ಪಿಜ್ಜಾಗಳಂತಹ ವೈವಿಧ್ಯಮಯ ವಿದೇಶಿ ಖಾದ್ಯಗಳೆಂದರೆ ಪಂಚಪ್ರಾಣ. ಈಗಿನ ಜಂಕ್ ಫುಡ್ ಪ್ರಿಯರ ನಾಗಾಲೋಟವನ್ನು ಅಧ್ಯಯನ ಮಾಡಿದ ಅರೋಗ್ಯ ಸಂಘದ ಸಮೀಕ್ಷೆಯೊಂದು ಭಾರತದಲ್ಲಿ 100 ಮಿಲಿಯನ್ ಜನ 2030ರೊಳಗೆ ಡಯಾಬಿಟೀಸ್ ಗೆ ತುತ್ತಾಗಿರುತ್ತಾರೆ ಎಂದು ಹೇಳಿದ್ದರೆ, ಈ ವಿದೇಶಿ ಜಂಕ್ ಫುಡ್ ನಮ್ಮನ್ನು ಎಷ್ಟೊಂದು ಆವರಿಸಿದೆ ಅಂತ ತಿಳಿದುಕೊಳ್ಳಬಹುದು.

ಈ ವಿದೇಶಿ ಜಂಕ್ ಫುಡ್ ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮ ಅಷ್ಟಿಷ್ಟಲ್ಲ. ಸಾಮಾನ್ಯವಾಗಿ ವಿದೇಶಿ ಶೈಲಿಯ ಖಾದ್ಯಗಳಲ್ಲಿ ರುಚಿವರ್ಧಕವಾಗಿ ಬಳಸುವ ಮೊನೊ ಸೋಡಿಯಂ ಗ್ಲುಟಾಮೆಟ್ ಎಂಬ ರಾಸಾಯನಿಕವನ್ನು ಅಜಿನೊಮೊಟೊ ಅಥವಾ "ಚೈನೀಸ್ ಸಾಲ್ಟ್" ಎಂದು ಕರೆಯುತ್ತಾರೆ. ಈ ದ್ರವ್ಯವು ಗ್ಲುಟಾಮೆಟ್ ಎಸಿಡ್ ನ ಸೋಡಿಯಂ ಲವಣವಾಗಿದ್ದು, ನೀರಿನಲ್ಲಿ ಸುಲಭದಲ್ಲೇ ಕರಗುತ್ತದೆ. 1960 ರ ದಶಕದ ಅಂತ್ಯದಲ್ಲಿ ಚೈನೀಸ್ ಸಾಲ್ಟ್ ನ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ವಾದವಿವಾದಗಳು ಹುಟ್ಟಿಕೊಂಡಿದ್ದವು. ಈ ಸಂದರ್ಭದಲ್ಲಿ ಪ್ರಖ್ಯಾತ ವೈದ್ಯಕೀಯ ಸಂಶೋಧಕ ಡಾ. ಜಾನ್ ಒಲ್ನೆ ಯವರು ವಾಷಿಂಗ್ಟನ್ ವಿಶ್ವ ವಿದ್ಯಾಲಯದಲ್ಲಿ ನಡೆಸಿದ್ದ ಅಧ್ಯಯನ-ಪ್ರಯೋಗಗಳು ಅಜಿನೊಮೊಟೊದ ದುಷ್ಪರಿಣಾಮಗಳನ್ನು ಸಾಬೀತುಪಡಿಸಿದ್ದವು. ಅವುಗಳಲ್ಲಿ ಸ್ಯಾಂಪಲ್-ಗಳು ಹೇಗಿವೆ:

೧) ಅಜಿನೊಮೊಟೊ ದೇಹವನ್ನು ಸೇರುವುದರಿಂದ ತಲೆನೋವು, ಬೆವರು, ತಲೆತಿರುಗುವಿಕೆ ಉಂಟಾಗುತ್ತದೆ. ಇದರ ಹೆಚ್ಚು ಸೇವನೆ ಮೆದುಳಿಗೂ ತೊಂದರೆ.
೨) ಅಜಿನೊಮೊಟೊದಿಂದ ದೇಹದಲ್ಲಿ ನಿರ್ಜಲೀಕರಣ ಉಂಟಾಗುವುದಲ್ಲದೆ ಮುಖ, ಕಣ್ಣು ಊದಿಕೊಳ್ಳುತ್ತದೆ.
೩) ಇದರ ನಿರಂತರ ಸೇವನೆಯಿಂದ ಎದೆ ನೋವು, ಉಸಿರಾಟದ ಸಮಸ್ಯೆ ಮತ್ತು ಸೋಮಾರಿತನ ಬರುತ್ತದೆ. ಶೀತ, ನೆಗಡಿ, ಸೀಗು ಮತ್ತು ತೂಕಡಿಕೆಯೂ ಕಂಡುಬರುತ್ತದೆ.
೪). ಅಜಿನೊಮೊಟೊದಲ್ಲಿರುವ ಆಸಿಡಿಕ್ ಅಂಶ ಹೊಟ್ಟೆ ಮತ್ತು ಗಂಟಲು ಉರಿಯನ್ನು ಉಂಟುಮಾಡುತ್ತದೆ.
೫) ನಿರಂತರವಾಗಿ ಮೂತ್ರ ಹೋಗುವುದು, ಗುಪ್ತಾಂಗದಲ್ಲಿ ಊತ ಇನ್ನೂ ಅನೇಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
೬) ಇದರ ಸೇವನೆಯಿಂದ ಕೆಳಹೊಟ್ಟೆಯ ನೋವು, ವಾಂತಿ, ಭೇದಿಯೊಂದಿಗೆ ಎಲುಬು ಮತ್ತು ಕೀಲಿನ ನೋವು ಬರುತ್ತದೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಮಟ್ಟವನ್ನೂ ಕಡಿಮೆಮಾಡಿ ಮೂಳೆಗಳು ಸವೆಯಲು ಕಾರಣವಾಗುತ್ತದೆ.
೭)ಮನುಷ್ಯನ ಮೆದುಲಿನಲ್ಲಿನ ಹೈಪೊಥಲಮಸ್ ಎನ್ನುವ ಭಾಗದಲ್ಲಿ ಹಾನಿಯನ್ನು ಉಂಟುಮಾಡುವ ಅಜಿನೊಮೊಟೊ, ತನ್ಮೂಲಕ ಮನುಷ್ಯನ ಶರೀರದಲ್ಲಿ ಹಾರ್ಮೋನುಗಳನ್ನು ಉತ್ಪಾದಿಸುವ ಮತ್ತು ನಿಯಂತ್ರಿಸುವ ಪ್ರಕ್ರಿಯೆಗಳಲ್ಲಿ ವ್ಯತ್ಯಯವನ್ನು ಉಂಟುಮಾಡುತ್ತದೆ. ತತ್ಪರಿಣಾಮವಾಗಿ ನಮ್ಮ ಶರೀರದ ಅಂಗಾಂಗಗಳ ಕಾರ್ಯಕ್ಷಮತೆಯಲ್ಲೂ ವ್ಯತ್ಯಯಗಳು ಸಂಭವಿಸುತ್ತವೆ.

'ಜಂಕ್ ಫುಡ್ ಸಂಸ್ಕೃತಿ' ನಮಗರಿವಿಲ್ಲದೇ ನಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇಂದು ಶಾಲೆಯಿಂದ ಮನೆಗೆ ಮರಳುವ ಮಗು ಮೊದಲಿಗೆ ಟೀವಿ ಮುಂದೆ 'ಜಂಕ್ ಫುಡ್' ಹಿಡಿದು ಕುಳಿತುಕೊಳ್ಳುತ್ತದೆ. ಈ ವಿಷಕಾರಿ ಜಂಕ್-ಫುಡ್ ಗಳನ್ನು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ತಿನ್ನಿಸಲಾರಂಭಿಸಿದರೆ ಆಗುವ ದುಷ್ಪರಿಣಾಮಗಳನ್ನು ಊಹಿಸುವುದು ಕಷ್ಟ. ಈ ಜಂಕ್ ಫುಡ್-ಗಳು ಮಕ್ಕಳ ದೇಹಕ್ಕೆ ಪ್ರತಿದಿನ 187ಕ್ಯಾಲೋರಿಯಷ್ಟು ಹೆಚ್ಚುವರಿಯಾಗಿ ತುಂಬುತ್ತದೆ. ಇದರಿಂದಾಗಿ ಐದು ಪಟ್ಟಿನಷ್ಟು ಹೆಚ್ಚು ತೂಕ ಪಡೆಯಲು ಆರಂಭಿಸುತ್ತಾರೆ. ಅಲ್ಲದೇ ಇವುಗಳು ಸಾಮಾನ್ಯಕ್ಕಿಂತ ಹತ್ತು ಪಟ್ಟಿನಷ್ಟು ಸೋಡಿಯಂ ಅನ್ನೂ ದೇಹದೊಳಗೆ ಸೇರಿಸುತ್ತದೆ. ಇನ್ನು ಸರಳ ಕಾರ್ಬೋಹೈಡ್ರೆಟ್-ಗಳು ದೇಹದ ಸಕ್ಕರೆಯ ಪ್ರಮಾಣವನ್ನು ಅತಿ ವೇಗದಲ್ಲಿ ಏರಿಸಿದರೆ ಸಂಕೀರ್ಣ ಕಾರ್ಬೋಹೈಡ್ರೇಟ್-ಗಳು ಸಕ್ಕರೆ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ಇವುಗಳು ದೇಹದ ಕ್ರಿಯೆಗಳಿಗೆ ವಿಶೇಷವಾಗಿ ಪಚನ/ ಜೀರ್ಣ ಕ್ರಿಯೆಗಳನ್ನು ಒತ್ತಡಕ್ಕೀಡು ಮಾಡುತ್ತದೆ. ಪರಿಣಾಮ ಇನ್ಸುಲಿನ್ ಬಿಡುಗಡೆಯ ಪ್ರಮಾಣದಲ್ಲಿ ಏರಿಳಿತವಾಗುತ್ತದೆ. ಇದು ಇನ್ನಷ್ಟು ಹಸಿವೆಯನ್ನು ತಂದೊಡ್ಡಿ ಮತ್ತೆ ಜಂಕ್ ಫುಡ್-ಗಳಿಗೆ ಮನಸ್ಸು ಹಾತೊರೆಯುವಂತೆ ಮಾಡುತ್ತದೆ. ಇಲ್ಲಿ ಮತ್ತದೇ ಕ್ರಿಯೆಗಳು ಪುನರಾವರ್ತನೆ ಆಗುತ್ತದೆ, ಪರಿಣಾಮ ಬೊಜ್ಜು,ಹೈಪರ್ ಟೆನ್ಶನ್,ಡಯಾಬಿಟಿಸ್, ಗ್ಯಾಸ್ ಟ್ರಬಲ್ ಮುಂತಾದ ರೋಗಗಳು, ಇತ್ತೀಚಿನ ಜಂಕ್ ಫುಡ್-ಗಳಲ್ಲಿ ಕ್ಯಾನ್ಸರ್ ಕಾರಕಗಳು ಯತೇಚ್ಚವಾಗಿ ತುಂಬಿದೆ ಎಂದು ಹಲವು ಸಂಶೋದನೆಗಳು ಹಲವು ಪುರಾವೆಗಳನ್ನು ನಮ್ಮ ಕಣ್ಣ ಮುಂದಿಟ್ಟಿದೆ.

ಇನ್ನು ಕೆ.ಎಫ್.ಸಿ ಮತ್ತು ಮೆಕ್ಡೊನಲ್ಡ್ ಕಂಪನಿಯಲ್ಲಿ ದೊರಕುವ ಚಿಕನ್ ಮತ್ತು ಬೀಫ್ ಬರ್ಗರುಗಳಲ್ಲಿ ಬರುವ ಪ್ಯಾಟ್ಟಿಗಳು ಯಂತ್ರಗಳಲ್ಲಿ ತಯಾರು ಮಾಡಲ್ಪಡುವ ಗ್ರೌಂಡ್ ಮೀಟ್ (ಪುಡಿಕರಿಸಲ್ಪಟ್ಟ ಮಾಂಸ ಅಥಾವ ಖೈಮಾ) ಆಗಿರುತ್ತದೆ. ಇದು ತಾಜಾ ಎನ್ನುವುದಕ್ಕೆ ಯಾವುದೆ ಪುರಾವೆಗಳು ಇರುವುದಿಲ್ಲ. ಮತ್ತು ಇದೇ ಯಂತ್ರಗಳಲ್ಲಿ ಹಂದಿ ಮಾಂಸಗಳನ್ನು ಬಳಸಿ ಬರ್ಗರ್ ಪ್ಯಾಟಿ, ಬೇಕನ್, ಹಾಟ್ ಡಾಗುಗಳನ್ನು (ಸೋಸೆಜ್) ಮಾಡುತ್ತಾರೆ. ನಂತರ ಅವುಗಳನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿ "ಸುರಕ್ಷಿತ" ಅಂತ ಅಂತರಾಷ್ಟ್ರೀಯ ಮುದ್ರೆಯನ್ನು ಹಾಕುತ್ತಾರೆ. ಇವುಗಳು ಆರೋಗ್ಯಕ್ಕೆ ಎಷ್ಟೊಂದು ಹಾನಿಕರ ಎಂದರೆ ಸ್ವತಹಃ ಮೆಕ್‌-ಡೊನಾಲ್ಡ್ಸ್‌ನಂತಹ ಕಂಪೆನಿಗಳೇ ತಮ್ಮ ಸಿಬ್ಬಂದಿಗೆ ಫಾಸ್ಟ್‌ಫುಡ್ ಅತಿಯಾಗಿ ಉಪಯೋಗಿಸಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಆದರೂ ಎಚ್ಚೆತ್ತುಕೊಳ್ಳದ ನಮ್ಮ ಭಾರತ ದೇಶದಲ್ಲಿ ಇಂತಹ ಕಂಪೆನಿಗಳು ಎಲ್ಲೆಂದರಲ್ಲಿ ತಲೆ ಎತ್ತಿ ನಿಂತಿದೆ. ಈ ಕಂಪೆನಿಗಳು ಭಾರತಕ್ಕೆ ಲಗ್ಗೆಯಿಟ್ಟಾಗ ನಮ್ಮ ಸರಕಾರ ಅದು ಆರೋಗ್ಯಕ್ಕೆ ಎಷ್ಟು ಪರಿಣಾಮ ಬೀರುತ್ತದೆ ಎಂದು ಕೇಳುವುದಿಲ್ಲ, ಅದರಿಂದ ನಮಗೆಷ್ಟು ಲಾಭ ಅನ್ನುವ ಪ್ರಶ್ನೆಗಳನ್ನ ಮಾತ್ರವೇ ಕೇಳುತ್ತದೆ.

ಆಹಾರವೆನ್ನುವುದು ನಾಲಗೆಯ ರುಚಿ ಮತ್ತು ತಾತ್ಕಾಲಿಕವಾಗಿ ಹೊಟ್ಟೆ ತುಂಬಿಸುವುದಕ್ಕಾಗಿ ತೆಗೆದುಕೊಳ್ಳುವುದಲ್ಲ. ಅದು ನಮ್ಮ ಸಂಸ್ಕೃತಿಯ, ಜೀವನ ಪದ್ದತಿಯ ಅವಿಭಾಜ್ಯ ಅಂಗ. ನಮ್ಮ ಆಹಾರ ಪದ್ಧತಿ ನಮ್ಮ ಪರಂಪರೆಯ ದ್ಯೋತಕ. ಅದು ನಮ್ಮ ಹಿರಿಮೆಯನ್ನು ಎತ್ತಿ ಹಿಡಿಯುತ್ತದೆ. ನಮ್ಮ ಅಡುಗ ಮನೆಗಳು ನಮಗೆ ಆರೋಗ್ಯವನ್ನು ಕೊಡುತ್ತದೆ. ರುಚಿಯಾಗಿರುತ್ತದೆ. ಶುಚಿಯಾಗಿರುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಅದನ್ನು ನಮಗಾಗಿ ಮಾಡಿ ಬಡಿಸಿದ ತಾಯಿ ಅಥವಾ ಇನ್ಯಾರದೋ ಜೊತೆ ಭಾವನಾತ್ಮಕ ಸಂಬಂಧವನ್ನು ಈ ಅಡುಗೆ ಪೋಣಿಸುತ್ತದೆ. ಈ ಕಾರಣಕ್ಕಾಗಿಯೇ ನಮ್ಮ ನೆಲದ ಅಡುಗೆಯನ್ನು ಜಾಗತೀಕರಣ ಎಂಬ ಕೊಳ್ಳುಬಾಕ ರಾಕ್ಷಸನ ಮುಂದೆ ಅಡವಿಟ್ಟು ಅವನ ಅಡಿಯಾಳಾಗುವುದು ಬೇಡ.
ನಮ್ಮ ಅಡುಗೆ, ನಮ್ಮ ಆಹಾರ ಪದ್ಧತಿ ನಮ್ಮ ಹೆಮ್ಮೆ. ಅದನ್ನು ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸಬೇಕಾದ ಗುರುತರ ಜವಾಬ್ದಾರಿ ನನ್ನ ಮತ್ತು ನಿಮ್ಮೆಲ್ಲರ ಮೇಲಿದೆ.

- Team Blue Waves

www.facebook.com/BlueWavesPage

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ