ಹದಿನೆಂಟು ವರುಷಗಳಷ್ಟು ಧೀರ್ಘವಾದ ವಿಚಾರಣಾ ಸಮಯವಾಕಾಶವು ನ್ಯಾಯದ ವಿಳಂಬ,ನ್ಯಾಯದ ನಿರಾಕರಣೆಯೆಂಬ ಪ್ರಜ್ಙೆಗಳಿಂದ ಪ್ರಶ್ನಿಸಲ್ಪಡಬೇಕಿತ್ತು ಅಂದುಕೊಂಡರೆ, ಕಷ್ಟಪಟ್ಟು ಕುಂಟುತ್ತಾ ನಡೆದೂ ಎದ್ದೂ ಬಿದ್ದೂ ಎಲ್ಲಾ ವಿಫಲ ಪ್ರಯತ್ನಗಳನ್ನೂ ಮೀರಿಸಿ ನ್ಯಾಯದ ಮಾನ ಉಳಿಸುವ ತೀರ್ಪಿತ್ತಿರುವುದೇ ಕೊನೆಗೆ ಪ್ರಶ್ನಾರ್ಹವಾಗಿದೆಯೆಂದರೆ..? ಅಪಥ್ಯವಾಗುತ್ತದೆಯೆಂದರೆ..? ದೇಶದ ಆರೋಗ್ಯಕರ ನ್ಯಾಯ ವ್ಯವಸ್ಥೆಯ ಬಗ್ಗೆ ನಮಗೆಷ್ಟು ಬದ್ಧತೆಯಿದೆ?.
ಇಲ್ಲಿ ಕಾನೂನು ಪಾಲನೆಯಾದರೂ ಆಕ್ರೋಶ ಪಾಲನೆಯಾಗದಿದ್ದರೂ ಆಕ್ರೋಶದಂತಹ ಸ್ಥಿತಿಗತಿಗಳಾದರೆ ನಾವು ಯಾವುದರ ಮೇಲೆ ತಮ್ಮ ತಳಹದಿ ನೆಲೆಯೂರಲು ಬಯಸುತ್ತಿದ್ದೇವೆ?. ಆ ಕಡೆ ಸತ್ಯವೂ ಬೇಡ ಈ ಕಡೆ ಮಿಥ್ಯವೂ ಬೇಡ, ನನ್ನ ಸ್ವಾರ್ಥಗಳು ಮಾತ್ರ ಕೈಗೂಡುವ ಸೋಗಲಾಡಿತನಗಳು ಮಾತ್ರ ಇರಲಿ,ದೇಶ ಸ್ವಾಭಿಮಾನ ಆರೋಗ್ಯಪೂರ್ಣ ಸಮಾಜಕ್ಕಿಷ್ಟು ಬೆಂಕಿ ಹಾಕಾ, ಅನ್ನುವಂತಹ ಮನಸ್ಥಿತಿಯ ಬಹುಪಾಲು ರಾಜಕಾರಣಿಗಳಿಂದ ಚುನಾವಣಾ ಸಮಯದಲ್ಲಿ ಕೈತುತ್ತುಣ್ಣುವ ನಾವುಗಳೂ ಅವರಂತೆಯೇ ಚಿಂತಿಸುವಂತೆ ಮಾಡಲು ನಮ್ಮ ಕೊಳಕು ರಾಜಕೀಯ ವ್ಯವಸ್ಥೆ ಯಶಸ್ವಿಯಾಯಿತೇ..?. ಭ್ರಷ್ಟಾಚಾರಗಳು ಪ್ರಜೆಗಳ ಬೆಂಬಲದಿಂದಲೇ ಇನ್ನು ಮುಂದೆ ನಡೆಯಲಿದೆಯೇ..?. ಯಾಕೆಂದರೆ ನಿಮ್ಮ ಯೋಜನೆಗಳ ಆಮಿಷಗಳ ಋಣ ತೀರಿಸುವ ಸಲುವಾಗಿ ನಿಮ್ಮ ಭ್ರಷ್ಟಾಚಾರವನ್ನು ಪ್ರೋತ್ಸಾಹಿಸಿ ತಲೆ ಬೋಳಿಸಿಕೊಳ್ಳಲು,ಎದೆ ಬಡಿದು ಅಳಲು,ನಡು ರಸ್ತೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ನಾವಿದ್ದೇವೆ ಅನ್ನುವ ಸಂದೇಶವನ್ನು ಮತಿಗೆಟ್ಟವರಂತೆ ದೇಶದ ಹಿತಾಸಕ್ತಿ ವಿರೋಧಿಗಳಂತೆ ರಾಜಾರೋಷವಾಗಿ ಸಾರುತ್ತಿದ್ದೇವೆಯಲ್ಲಾ..?
ಸರಿ ಅವರೆಲ್ಲ ಅಲ್ಪ ಜ್ಙಾನಿಗಳು ಅವಿವೇಕಿಗಳು ಅಂದುಕೊಂಡರೆ,ಭ್ರಷ್ಟಾಚಾರಿಯ ಪರವಾಗಿ ಮತ್ತೂ ವಾದ ಮಂಡಿಸಲು ಅತೀ ಹಿರಿಯ ವಿದ್ಯಾವಂತರೇ ಗುತ್ತಿಗೆ ವಹಿಸಿಕೊಂಡಿದ್ದಾರೆಯೆಂದರೆ,ನಮ್ಮೊಳಗಿನ ಸಾಕ್ಷಿ ಪ್ರಜ್ಙೆಗಳಿಗೇನಾಗಿದೆ...? ಅಥವಾ ಭಾರತೀಯ ಮನಸ್ಥಿತಿಯೇ ಹೀಗೆನಾ..?. ದೇಶಕ್ಕಾಗುವ ಹಾನಿಗಳು ನನ್ನ ಹಾನಿಗಳೆಂದು ಅರ್ಥೈಸಿಕೊಳ್ಳದ ನಮ್ಮ ಹರಿತವಿಲ್ಲದ ದೇಶಪ್ರೇಮಗಳೇ ನಮ್ಮನ್ನು ಆರಕ್ಕೇರದ ಮೂರಕ್ಕಿಳಿಯದ ಅನ್ಯಾಯ ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನಾಗಿಸಿದೆಯಾ?.ಇವೆಲ್ಲವನ್ನೂ ಬಡಿದು ಪ್ರಶ್ನಿಸಿ ಜಾಗೃತಿಯನ್ನು ಹುಟ್ಟು ಹಾಕಿ ದೇಶದ ಪ್ರಜೆಗಳನ್ನು ಪ್ರಜ್ಙಾವಂತರಾಗಿಸಿ ರಾಷ್ಟ್ರ ನಿರ್ಮಾಣದ ಹೋರಾಟಗಳನ್ನು ನಿರಂತರವಾಗಿ ಚಾಲ್ತಿಯಲ್ಲಿಡಬೇಕಾದ ಮಾಧ್ಯಮಗಳು ಸುಳ್ಳುಗಳನ್ನು ಊಹಾತ್ಮಕ ಸುದ್ಧಿಗಳನ್ನೇ ಬಿತ್ತರಿಸಿ ಮುಖಕ್ಕೆ ಮಸಿ ಬಳಿದುಕೊಂಡು,ತೆವಲುತ್ತಾ ಸಾಗುತ್ತಿರುವ ದೇಶದ ಮುನ್ನೆಲೆಯ ಕನಸುಗಳ ದಾರಿಗಡ್ಡವಾಗಿ ಕೆಸರು ರಾಡಿಯಾಗಿದೆ, ಎಲ್ಲೀಂತ ಹುಡುಕೋದು ಹರಿತವಾದ ವೇಗವಾದ ಬದಲಾವಣೆಯ ದಾರಿಯನ್ನು..?
ಬಹುಶಃ ರಾಜಕೀಯದ ಕೊಳಕಿನಾಚೆಗೆ ಜನರನ್ನ ಒಟ್ಟುಗೂಡಿಸಬಲ್ಲ,ನಿಸ್ವಾರ್ಥವಾಗಿ ದೇಶದ ಬಗೆಗೆ ಕನಸು ಕಟ್ಟಿಕೊಡಬಲ್ಲ, ಅದನ್ನು ನನಸಾಗಿಸಲು ಬೀದಿಗಿಳಿಸಬಲ್ಲ ಅಪ್ಪಟ ದೇಶಭಕ್ತ
ಭಗತನಂತಹ ನಾಯಕನೊಬ್ಬನು ಮತ್ತೊಮ್ಮೆ ಹುಟ್ಟುವ ಅವಶ್ಯಕತೆಯಿದೆ. ಆ ನಾಯಕ ಪ್ರತಿಯೊಬ್ಬ ಭಾರತೀಯ ಯುವಕ ಯುವತಿಯರ ಹೃದಯದಲ್ಲಿ ಹುಟ್ಟಬೇಕಿದೆ...
www.facebook.com/BlueWavesPage

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ