ಗುರುವಾರ, ಫೆಬ್ರವರಿ 12, 2015

ಗೆಳೆಯರೇ 
ಬಹಳ ಮುಖ್ಯವಾದ ವಿಚಾರವನ್ನು ತಮ್ಮ ಮುಂದಿಡುತ್ತಿದ್ದೇನೆ. ತಪ್ಪದೆ ಪೂರ್ತಿಯಾಗಿ ಓದ ಬೇಕಾಗಿ ವಿನಂತಿ.
ಕ್ಷಣಿಕ ದೈಹಿಕ ಸುಖದ ಆಸೆಯನ್ನು ಈಡೇರಿಸುವ ಹುಚ್ಚಿನಲ್ಲಿ ನಮ್ಮ ಯುವ ಸಮೂಹವು ತನ್ನನ್ನು ಹಾಗೂ ತನ್ನ ಕುಟುಂಬಿಕರ ಜೀವಗಳನ್ನು ಮರಣದೊಂದಿಗೆ ಜೂಜು ಕಟ್ಟುವ ದುಸ್ಸಾಹಸಕ್ಕೆ ಕೈ ಹಾಕುತ್ತಾರೆ. ಇಂತಹ ದುಸ್ಸಾಹಸಕ್ಕೆ ಇಳಿಯುವ ಮೊದಲು ತಮಗಾಗಿ ಅಥವಾ ತಮ್ಮವರಿಗಾಗಿ ಯೋಚಿಸದಷ್ಟು ಅವಿವೇಕಿಗಳಾಗುತ್ತಾರೆ.
ಹೌದು ... ನಾನಿವತ್ತು ಹೇಳ ಹೊರಟಿರುವುದು ಏಡ್ಸ್ ಎಂಬ ಮಹಾ ಮಾರಿಯ ಬಗ್ಗೆ. ಇದೊಂದು ಹೆಚ್ಚಿನ ಸಂಧರ್ಭಗಳಲ್ಲಿ ಲೈಂಗಿಕವಾಗಿ ಹರಡುವಂತಹ, ಔಷದವೇ ಇಲ್ಲದ ಮಾರಕ ರೊಗವಾಗಿದೆ. ಇದು ಕೇವಲ ಒಂಟಿ ವ್ಯಕ್ತಿಯನ್ನು ಮಾತ್ರ ಆಹುತಿ ಪಡೆಯುವ ರೋಗವಲ್ಲ ಬದಲಾಗಿ ಇಡೀ ಕುಟುಂಬ ಹಾಗೂ ಸಮಾಜವನ್ನು ಬಲಿ ಪಡೆಯ ಬಲ್ಲಂತಹ ರೋಗವಾಗಿದೆ.
ಈ ರೋಗದ ಸಂಕ್ಷಿಪ್ತ ಮಾಹಿತಿ ತಮ್ಮ ಮುಂದಿಡುತ್ತೆನೆ.
AIDS ಅಂದರೆ Acquired Immuno Deficiency Syndrome. ಇದು HIV - Human Immunodeficiency Virus ಎಂಬ ಸೋಂಕಿನಿಂದ ಹರಡುವ ರೋಗವಾಗಿದೆ ವಿಶ್ವದಲ್ಲೇ ಪ್ರಥಮ ಬಾರಿ 1983 ರಲ್ಲಿ ಈ ಸೋಂಕಿಗೆ HIV ಎಂದು ಹೆಸರಿಸಲಾಯಿತು ಹಾಗೂ ಭಾರತದಲ್ಲಿ 1986 ಪ್ರಥಮವಾಗಿ ತಮಿಳುನಾಡಿನ ಚೆನ್ನೈಯಲ್ಲಿ Dr. Suniti Soloman ಎಂಬವರು ಪತ್ತೆ ಹಚ್ಚಿದರು.
HIV ಯಂತೆಯೇ ಇನ್ನೂ ಕೆಲವು ಲೈಂಗಿಕ ಕ್ರಿಯೆಯಿಂದ ಹರಡುವ ಸೋಂಕುಗಳಿವೆ. ಇವುಗಳಲ್ಲಿ ಮುಖ್ಯವಾದುವು. Hepatitis, Clamydia, Genital Warts, Gonorrhea, Herpis. ಇವುಗಳಲ್ಲಿ HIV ಗುಣ ಪಡಿಸಲಾಗದ ರೋಗವಾಗಿದೆ ಎರಡನೇ ಸ್ಥಾನದಲ್ಲಿ Hepatitis ಇದೆ. ಇದೂ ಕೂಡ HIV ಯಷ್ಟೇ ಮಾರಕವಾಗಿದೆ.
ಸೊಂಕುಗಳ ಆರಂಭಿಕ ಲಕ್ಷಣಗಳು:
HIV- ಪ್ರತಿ ತಿಂಗಳು ದೇಹದ 10% ತೂಕ ಕಡಿಮೆಯಾಗುತ್ತ ಬರುತ್ತದೆ.
ವಿಪರೀತ (loose motion) ಭೇದಿಯಾಗುತ್ತದೆ.
ಎಡೆಬಿಡದೆ ಜ್ವರ ಬರುತ್ತದೆ.
Gonorrhea-
ಮೂತ್ರದಲ್ಲಿ ಉರಿ ಯಾಗುತ್ತದೆ.
ಬಿಳುಪು / ಹಳದಿ ದ್ರವ ಶಿಶ್ನದಿಂದ ಸೋರಿಕೆಯಾಗುತ್ತದೆ.
ಯೋನಿ ಸ್ರಾವವಾಗುತ್ತದೆ.
ಗುದದ್ವಾರದಿಂದ ನೀರಿಳಿಯುವಿಕೆ.
Herpis:
ಮೂತ್ರದ ಭಾಗದಲ್ಲಿ / ಗುದದ್ವಾರದಲ್ಲಿ ವಿಪರೀತ ತುರಿಕೆ.
ದೇಹದ ಗಾಯಗಳನ್ನು ಕೆಣಕಿದಾಗ ಅಲ್ಲಿ ದ್ರವ ರೂಪದ ಗುಳ್ಳೆಗಳು ಏಳುವುದು.
ಮೂತ್ರಿಸುವಾಗ ಮುಕ್ತವಾದ ಗಾಯಗಳಲ್ಲಿ ನೋಯುವುದು (ವಿಶೇಷವಾಗಿ ಮಹಿಳೆಯರಲ್ಲಿ)
ಗುಪ್ತಾಂಗ ಊದಿ ಕೊಳ್ಳುವುದು.
ದೇಹದಲ್ಲಿ ಅಸಮಾನ್ಯ ಗಾಂಟು /ಗಾಯ.
ಸೋಂಕು ಹರಡುವ ಮೂಲಗಳು:
ಇದೊಂದು STD (Sexual Tansmiting Disease) ಲೈಂಗಿಕವಾಗಿ ಹರಡುವ ರೋಗವಾಗಿದೆ.
Parent to chaild - ಪೋಷಕರಿಂದ ಮಕ್ಕಳಿಗೆ ಹರಡುವ ರೋಗ. ಆದರೆ ಇನ್ನೊಂದು ವಿಚಾರ, ಪೋಷಕರಿಗೆ ರೋಗವಿದ್ದರೆ ಎಲ್ಲ ಮಕ್ಕಳಿಗೆ ಏಡ್ಸ್ ಬರ ಬೇಕೆಂದಿಲ್ಲ ..! ಬರದಿರಲೂ ಬಹುದು.
ತಾಯಿಯ ಜನನಾಂಗ / ಹೊಟ್ಟೆಯಲ್ಲಿ ಗಾಯವಾಗಿದ್ದರೆ ಜನನ ಸಮಯದಲ್ಲಿ ಆಗುವಂತಹ ತಿಕ್ಕಾಟದಲ್ಲಿ ಮಗುವಿನ ಚರ್ಮದಲ್ಲಿ ಗಾಯವಾಗಿದ್ದರೆ ಆ ಗಾಯದ ಮೂಲಕ ಬೆರೆಯುತ್ತದೆ.
ತಾಯಿಗೆ ಏಡ್ಸ್ ಇದ್ದರೆ ಅಂತಹವರು ಮಗುವಿಗೆ ಎದೆ ಹಾಲು ನೀಡದಿದ್ದರೆ ಒಳ್ಳೆಯದೆ. ತಾಯಿಯ ಎದೆ ಹಾಲಿನಲ್ಲಿ ಅತೀ ವೇಗವಾಗಿ ಹರಡುತ್ತದೆ.
Sex Worker (ಲೈಂಗಿಕ ಕಾರ್ಯಕರ್ತರು )
ಲೈಂಗಿಕ ಕಾರ್ಯಕರ್ತರೊಂದಿಗೆ ಕಾಂಡೋಮ್ ಬಳಸದೆ ಮಾಡುವ ಲೈಂಗಿಕ ಕ್ರಿಯೆಯಲ್ಲಿ ಈ ರೋಗ ಹರಡುತ್ತದೆ. ವಿಶ್ವಾಸ ರಹಿತ ಸಂಗಾತಿಯೊಂದಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ.
ಕಾಂಡೋಮ್ ಬಳಸಿಯೂ ಈ ರೋಗ ಬರುವ ಸಂಭವವಿದೆ. ಹೇಗೆಂದರೆ, ಕಾಂಡೋಮ್ ಸರಿಯಾದ ವಿಧಾನದಲ್ಲಿ ಬಳಸಬೇಕು. ಇಲ್ಲವಾದಲ್ಲಿ ಬಲೂನ್ ತರಹ ಗಾಳಿ ತುಂಬುವ ರೀತಿಯಲ್ಲಿ ಬಳಸಿದರೆ ಕಾಂಡೋಮ್ ಹರಿಯುವ ಸಾಧ್ಯತೆಗಳಿವೆ. ಕಾಂಡೋಮ್ ಬಳಸದ ಭಾಗದಲ್ಲಿ (ಯೊನಿ/ಶಿಶ್ನದ ಅಕ್ಕ ಪಕ್ಕದಲ್ಲಿ ) ಕಜ್ಜಿ ಅಥವಾ ಗಾಯಗಳಿದ್ದರೆ, ಸಂಭೋಗದ ಸಮಯದಲ್ಲಿ ಆಗುವ ಘರ್ಷಣೆಯಿಂದ ಪರಸ್ಪರರ ರಕ್ತ ಬದಲಾಯಿಸಿಕೊಳ್ಳುವ ಸಂಭವವಿದೆ.
Gay Sex (ಗಂಡು ಸಲಿಂಗ ಕಾಮ)
ಈ ಕ್ರಿಯೆಯಲ್ಲಿ ಹೆಣ್ಣಿನ ಮುಂಭಾಗದೊಂದಿಗಿನ ಕ್ರಿಯೆಯಲ್ಲಿ ಹರಡುವ ಪ್ರಮಾಣಕಿಂತ ಕಡಿಮೆ ಇರುತ್ತದೆ. ಗಂಡಿನ ಹಿಂಭಾಗಕ್ಕೆ ವೀರ್ಯ ಪ್ರವೇಶಿಸಿದರೆ ತೊಂದರೆ ಇಲ್ಲ, ಆದರೆ ಗಂಡಿನ ಹಿಂಭಾಗದಲ್ಲಿ ತಾಜಾ ಗಾಯವಿದ್ದರೆ ಗಾಯದ ಮುಖಾಂತರ ಸೋಂಕು ದೇಹದೊಳಗೆ ಪ್ರವೆಶಿಸುತ್ತದೆ.
Oral Sex (ಮೌಖಿಕ ಕ್ರಿಯೆ):
ಇಂತಹಾ ಕ್ರಿಯೇಯಿಂದಲೂ ಸೋಂಕು ಬರುವ ಸಾದ್ಯತೆಗಳಿವೆ. HIV ಸೋಂಕು ಇರುವ ವೀರ್ಯ ನುಂಗಿದರೆ ಏನು ಆಗಲ್ಲ ಆದರೆ ನುಂಗುವವರ ಬಾಯಿಯಲ್ಲಿ ಗಾಯಗಳಿದ್ದರೆ ಆ ಗಾಯದ ಮೂಲಕ ರಕ್ತದೊಂದಿಗೆ ಸೋಂಕು ಸೇರ ಬಹುದು.
IDU - Injecting Drug Users. (ಮಾದಕ ದ್ರವ್ಯ ಚುಚ್ಚುವ ವ್ಯಸನಿಗಳಿಂದ):
ಮಾದಕ ದ್ರವ್ಯ ವ್ಯಸನಿಗಳು ಒಂದೇ ಸೀರೀಂಜನ್ನು ಪರಸ್ಪರರು ಚುಚ್ಚಿ ಕೊಳ್ಳುವುದರಿಂದಲೂ ಈ ಸೋಂಕು ಹರಡುತ್ತದೆ.
ಇದಲ್ಲದೆ ಸೋಂಕು ಭಾದಿತರ ಬಟ್ಟೆಗಳಿಂದ, ಸಾಬೂನು ಇತ್ಯಾದಿಗಳಿಂದ ಸೋಂಕು ಹರಡುವುದಿಲ್ಲ. ಇವರೋಟ್ಟಿಗೆ ಇರುವುದರಿಂದ ಪೀಡಿತರಿಗೆ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ.
ಓರ್ವ ವ್ಯಕ್ತಿಗೆ ಸೋಂಕು ತಗುಲಿದ್ದನ್ನು ಧೃಡ ಪಡಿಸಲು 3 ತಿಂಗಳು ಬೇಕು. ಈ ಮಧ್ಯೆ ರಕ್ತ ಪರೀಕ್ಷೆ ಮಾಡಿದರೂ HIV ಸೋಂಕು ಪತ್ತೆ ಹಚ್ಚಲು ಸಾಧ್ಯವಿಲ್ಲ.
HIV ಪೀಡಿತರು ಸಾಧಾರಣವಾಗಿ 5-6 ವರ್ಷ ಜೀವಿಸುತ್ತಾರೆ. ಅದರೂ ಬೆಂಗಳೂರಿನಲ್ಲೊಬ್ಬರು ಕಳೆದ 28 ವರ್ಷ ದಿಂದ ರೋಗ ಬಾದಿತರಾಗಿ ಜೇವಿಸುತ್ತಿದ್ದರೆ.
ಆದೇ ರೀತಿ ಹುಟ್ಟಿನಿಂದ ರೋಗ ಪೀಡಿತನಾದ ಯುವಕ ಈಗಷ್ಟೇ 22 ರ ಹರೆಯಕ್ಕೆ ಕಾಲಿಟ್ಟಿದ್ದಾನೆ. ಡಿಪ್ಲಮೋ ಮಾಡುತ್ತಿರುವ ಈ ಯುವಕನಿಗೆ ಈ ತನಕ ಯಾವುದೇ ಚರ್ಮ ರೋಗ ಭಾದಿಸಿಲ್ಲ...
(ಇವರ ವಿವರಗಳನ್ನು ಗೌಪ್ಯವಾಗಿಟ್ಟಿದ್ದೇನೆ)
ಒಂದು NGO ಮುಖಾಂತರ ಸರ್ವೇ ಮಾಡಲು, ಪ್ರತಿ ಗರ್ಬಿಣಿಯರಿಗೆ PPTCT- Prevention of parent to child transmission ಕಡ್ಡಾಯ ಗೊಳಿಸಿದಾಗ ಕಂಡು ಬಂದಂತಹ ಅಂಶವೆಂದರೆ, ಕುಗ್ರಾಮದಂತಹ ಗ್ರಾಮೀಣ ಪ್ರದೇಶದ ಕೃಷಿ ಮಾಡುವ ಮಹಿಳೆಯರಲ್ಲಿ HIV ಸೋಂಕು ಅತೀ ಹೆಚ್ಚಾಗಿ ಕಂಡು ಬಂತು ಆಶ್ಚರ್ಯವೆಂದರೆ ಆ ಮಹಿಳೆಯರಿಗೆ HIV ಎಂದರೇನೆಂದೇ ಗೊತ್ತಿಲ್ಲ
ಸಾಮಾನ್ಯವಾಗಿ ಯಾವುದೇ ಜೀವ ವಿಮಾ ಕಂಪನಿಯವರು HIV ಪೀಡಿತರಿಗೆ ವಿಮೆ ಮಾಡಿಸುವುದಿಲ್ಲ. ಇದಕ್ಕೆ ಅಪಾರ್ಥವಾಗಿ STAR ಇನ್ಶ್ಯುರೆನ್ಸ್ನಲ್ಲಿ ಈ ಅವಕಾಶವಿದೆ. ಈ ಕಂಪನಿಯ ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಬ್ರಾಂಚ್ ನಲ್ಲಿಯೇ 283 ಅರ್ಜಿಗಳಿವೆ. ಹಾಗಾದರೆ ನೀವೇ ಲೆಕ್ಕ ಹಾಕಿ. ಪ್ರತಿ ಮಗುವಿನ ತಂದೆ ತಾಯಿಯರು 283 x 2 = 566 ಪೋಷಕರು, ಒಟ್ಟು 849 ಮಂದಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಇನ್ನು ಸಮಾಜಕ್ಕೆ ತಿಳಿದರೆ ಮುಜುಗರ ಪಡಬೇಕಾಗುತ್ತದೆ ಎಂದು ತಮ್ಮ ರೋಗವನ್ನು ಗೌಪ್ಯವಾಗಿಟ್ಟವರು ಅದೆಷ್ಟೋ ಮಂದಿ ಇದ್ದಾರೆ.
ಇನ್ನು ಅಂಕೆ ಸಂಖ್ಯೆಗಳನ್ನು ನೋಡುವುದಾದರೆ -
ಮಣಿಪುರ- 0.78% ಅಂದ್ರ ಪ್ರದೇಶ- 0.76%. ಕರ್ನಾಟಕ- 0.69% ನಾಗಾಲ್ಯಾಂಡ್- 0.66%. HIV ಸೋಂಕು ಭಾದಿತರಿದ್ದರೆ.
2011-12 ರ ಸಮೀಕ್ಷೆಯ ಪ್ರಕಾರ:
ಪೋಷಕರಿಂದ ಮಕ್ಕಳಿಗೆ - 5.0%
ಗಂಡು ಸಲಿಂಗಿಗಳಿಂದ- 1.5%
ಸೀರಿಂಜ್ ಬಳಕೆಯಿಂದ- 1.7%
ರಕ್ತದಿಂದ ರಕ್ತಕ್ಕೆ- 1.0%
ಕಾರಣ ತಿಳಿಯದೆ- 2.7%
ನಮ್ಮ ಕ್ಷಣಿಕ ಸುಖದ ಆಸೆಗಾಗಿ ನಾವು ನಮ್ಮ ಪರಿವಾರ ಮತ್ತು ಮುಂದಿನ ಪೀಳಿಗೆಯನ್ನು ಇಂತಹ ಮಾರಕ ರೋಗದ ಬಾಯಿಗೆ ಏಕೆ ಕೊಡಬೇಕು? ನಮ್ಮಿಂದಾಗಿ ಇನ್ನೊಬ್ಬರ ಅತ್ಯಮೂಲ್ಯ ಜೀವನಕ್ಕೆ HIV ಯಂತಹ ವಿಷ ಏಕೆ ಉಣಿಸಬೇಕು?ಇನ್ನಾದರೂ ಈ ಬಗ್ಗೆ ಯೋಚಿಸದಿದ್ದರೆ, ಮುಂದಿನ ದಿನಗಳಲ್ಲಿ ನಮ್ಮ ಸಮಾಜವು ಒಂದು ಕರಾಳ ಛಾಯೆಯಡಿ ಜೀವಿಸಬೇಕಾಗಿ ಬರಬಹುದು. ಏಡ್ಸ್ ನಂತಹ ಮಹಾ ಮಾರಿಯನ್ನು ನಾವು ಸ್ವಪ್ರಯತ್ನ ದಿಂದ ಹದ್ದು ಬಸ್ತಿನಲ್ಲಿಟ್ಟುಕೊಂಡು ಸಮಾಜಕ್ಕೆ ಸಹಕಾರಿಯಾಗಿ ಜೀವಿಸುವೆವು ಎಂಬ ಪ್ರತಿಜ್ಞೆಯನ್ನು ಇಂದೇ ಕೈಗೊಳ್ಳುವಿರಿ ತಾನೇ? ಇದರ ಬಗ್ಗೆ ನಿಮ್ಮ ಮಕ್ಕಳಲ್ಲಿ, ಕುಟುಂಬಿಕರಲ್ಲಿ, ನಿಮ್ಮ ನೆರೆ ಹೊರೆಯವರಲ್ಲಿ ಜಾಗೃತಿ ಮೂಡಿಸುವಿರಿ ತಾನೇ?
ಸಂಕೋಚ ಪಟ್ಟು ಇಂತಹ ವಿಷಗಳ ಬಗ್ಗೆ ಜಾಗೃತಿ ಮೂಡಿಸದಿದ್ದರೆ, ನಮಗೆ ನಾವೇ ಆತ್ಮ ವಂಚನೆ ಮಾಡಿದಂತಾಗುತ್ತದೆ. ಈ ಮಾಹಿತಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಇತರರಿಗೆ ಮನವರಿಕೆ ಮಾಡಿಸುವಿರಿ ಎಂಬ ವಿಶ್ವಾಸದೊಂದಿಗೆ, ತಮ್ಮ ಉತ್ತರದ ನಿರೀಕ್ಷೆಯಲ್ಲಿ....
ನಿಮ್ಮವನೇ ಆದ
ಅನಾಮಿಕ.

ದಯೆಯಿಲ್ಲದೆ ಯಾವ ಧರ್ಮವೂ ಇಲ್ಲ .




 ಧರ್ಮದ ಮರ್ಮ ಅರಿಯದ ಅಧಮಿಗಳು ಮಾಡಿದ ಕುತಂತ್ರಕ್ಕೆ ಧರ್ಮ ಹೊಣೆಯಲ್ಲ. ಧರ್ಮ ಆತ್ಮ ಬೆಳಗುವ ಬೆಳಕೇ ಹೊರತು,ಇತರರನ್ನು ಉರಿಸಿ ಬೂದಿ ಮಾಡಿಸಬಲ್ಲ ಜ್ವಾಲೆಯಲ್ಲ. ಧರ್ಮದಿಂದ ಶಾಂತಿ ನೆಲೆ ನಿಲ್ಲಬೇಕೆ ಹೊರತು ಅಶಾಂತಿಯ ಕಿಡಿ ಹೊತ್ತಿ ಉರಿಯಬಾರದು. ಹಿಂಸೆ ಯಾವುದಕ್ಕೂ ಪರಿಹಾರವಲ್ಲ .ಉದ್ರೇಕಿತ ಮನಸ್ಸುಗಳು ನೆಮ್ಮದಿ ಹಾಳು ಮಾಡಬಲ್ಲವೇ ಹೊರತು ಶಾಂತಿ ನೀಡಲಾರದು . ಸರ್ವಧರ್ಮೀಯರು ಇದನ್ನು ಅರ್ಥ ಮಾಡಿ ಕೊಂಡರೆ ಮಾತ್ರ ಸರ್ವರಿಗೂ ಒಳಿತು.

ಶಾಂತಿ ಮತ್ತು ಅಹಿಂಸೆಯ ತತ್ವಗಳ ಮೂಲಕ ಯುದ್ಧವನ್ನು ಗೆಲ್ಲಲು ಸಾಧ್ಯವೇ?ಎಂದು ಯಾರಾದರೂ ಕೇಳಿದರೆ . ಗಾಂಧೀಜಿಯವರು ಇದಕ್ಕೆ ಉತ್ತಮ ಉತ್ತರವನ್ನು ಕೊಟ್ಟಿದ್ದಾರೆ.."ಶಾಶ್ವತವಾದ ಶಾಂತಿಯ ಸಾಧ್ಯತೆಯನ್ನು ನಂಬದೇ ಇರುವುದು ಮಾನವೀಯತೆಯ ಒಳಗೆ ದೈವತ್ವ ಅಡಗಿದೆ ಎಂಬುದನ್ನು ನಂಬದೇ ಇರುವಂತೆಯೇ ಆಗಿದೆ. ಅಂದರೆ ಮಾನವರಲ್ಲಿ ಅಂಥ ಸದ್ಗುಣ ಸಂಪತ್ತು ಇದೆ ಮತ್ತು ಅದರೊಂದಿಗೆ ಅವರು ಬಾಳಿ ಬದುಕಬೇಕು."ಈ ನಂಬಿಕೆಯು ಗ್ರಹಿಸಿ ಪಡೆಯುವಂತಹದ್ದಲ್ಲ. ಬೆಳೆದು ಗಳಿಸಬೇಕಾದದ್ದು ಮತ್ತು ಇಂಥ ಬೆಳೆಯುವಿಕೆ ಆಂತರ್ಯದಿಂದ ಬಂದರೆ ಮಾತ್ರ ಶಾಂತಿ ನೆಲೆಸುತ್ತದೆ.

ಶಾಂತಿಯ ಸದಾಶಯದೊಂದಿಗೆ

ಟೀಂ ಬ್ಲೂ ವೇವ್ಸ್

ಜಾಗ್ರತೆ..... ನಿಮ್ಮವರು ಕಾಯುತ್ತಿದ್ದಾರೆ


ಗೆಳೆಯರೇ..

ಎಂದಿನಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನನ್ನ ವಾಹನದಲ್ಲಿ ಸಾಗುತ್ತಿರುವಾಗ, ಆಗಷ್ಟೇ ಆದ ವಾಹನ ಅಫಘಾತ ಕಂಡು ನನ್ನ ವಾಹನವನ್ನು ಬದಿಗೆ ನಿಲ್ಲಿಸಿ ಅತ್ತ ಧಾವಿಸಿದೆ. ಅದು ಅಷ್ಟೇನೂ ದೊಡ್ಡ ಪ್ರಮಾಣದ ಭೀಕರ ಅಫಘಾತ ವಾಗಿರಲಿಲ್ಲ. ಆದರೆ ಸ್ಥಳದಲ್ಲೇ ಮೃತ ಪಟ್ಟ, ಮದುವೆಯಾಗಿ ಎರಡು ದಿನದ ಮದುಮಗನ ಮೃತ ದೇಹ ಕಂಡು ಒಂದು ಕ್ಷಣ ಮೂಕವಿಸ್ಮಿತನಾದೆ. ರಸ್ತೆಯ ತಡೆಗೋಡೆಗೆ ಬಡಿದ ರಭಸಕ್ಕೆ ಕಾರಿನ ಸ್ಟಿಯರಿಂಗ್ ವ್ಹೀಲ್ ನ ಮೇಲೆ ಮೃತ ದೇಹ ಬಿದ್ದಿತ್ತು. ಅಲ್ಲಿ ನೆರೆದಿದ್ದ ಜನರ ಪ್ರಕಾರ " ಸೀಟ್ ಬೆಲ್ಟ್ ಧರಿಸಿದ್ದರೆ ಬಹುಶಃ ಜೀವ ಉಳಿಯುವ ಸಂಭವವಿತ್ತು". ತನ್ನ ಮೇಲೆರಗಿ ಬಂದ ವಾಹನವನ್ನು ತಪ್ಪಿಸುವ ಭರದಲ್ಲಿ ರಸ್ತೆಯ ತಡೆಗೋಡೆಗೆ ಅಪ್ಪಳಿಸಿಟ್ಟು. ಜನರಾಡಿಕೊಳ್ಳುತಿದ್ದ ಮಾತಿನಲ್ಲೂ ಸತ್ಯಾಂಶವಿತ್ತು. ಸ್ಟಿಯರಿಂಗ್ ವ್ಹೀಲ್ ಮತ್ತು ಸೀಟ್ ನ ಮಧ್ಯೆ ಸಾಕಷ್ಟು ಅಂತರವಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಅವನ ಇಡೀ ದೇಹವು ಸ್ಟಿಯರಿಂಗ್ ವ್ಹೀಲ್ ಗೆ ಅಪ್ಪಳಿಸಿ ಕಿಡ್ನಿಯ ಭಾಗಕ್ಕೆ ಬಡಿದಿತ್ತು. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿರುತ್ತಿದ್ದರೆ ಪ್ರಾಣಾಪಾಯದಿಂದ ಪಾರಾಗ ಬಹುದಿತ್ತೇನೋ...

ಹಾಗೇನೆ ಕಳೆದ ಒಂದೇ ವರ್ಷದಲ್ಲಿ ಆದಂತಹ ಅಫಘಾತಗಳ ಪಟ್ಟಿ ಮಾಡಿದ್ದೇನೆ.
ಅಂಕಿ ಅಂಶಗಳ ಪ್ರಕಾರ ಕಳೆದ ಒಂದೇ ವರ್ಷದಲ್ಲಿ (2013) ಕೇವಲ ಕರ್ನಾಟಕದಲ್ಲಿ 42107 ಅಪಘಾತಗಳಾಗಿವೆ. 8145 ಪುರುಷರು, 1365 ಮಹಿಳೆಯರು ಸೇರಿ 9510 ಜನರು ಮೃತಪಟ್ಟಿದ್ದಾರೆ. ಹಾಗೂ 13656 ಮಂದಿ ಗಾಯಾಳುವಾಗಿದ್ದಾರೆ.


2013 ರ ಒಂದೇ ವರ್ಷದಲ್ಲಿ ಇಡೀ ಭಾರತದಲ್ಲಿ ಆದ ರಸ್ತೆ ಅಪಘಾತಗಳ ವಿವರ ಈ ರೀತಿ ಇದೆ.
ಒಟ್ಟು ಅಪಘಾತಗಳು - 4,43,001
ಮೃತರಾದವರ ಸಂಖ್ಯೆ- 1,37,423
ಮಹಿಳೆಯರು - 15%
ಪುರುಷರು - 85%
ಗಾಯಾಳುಗಳು - 4,69,882
ಅಪಘಾತದಲ್ಲಿ ಅತೀ ಹೆಚ್ಚು ಗಾಯಾಳುಗಳಾದ 3 ರಾಜ್ಯಗಳು
ತಮಿಳುನಾಡು - 75,681
ಕರ್ನಾಟಕ - 52,793
ಅಂದ್ರ ಪ್ರದೇಶ - 52,522
ಅಪಘಾತದಲ್ಲಿ ಅತೀ ಹೆಚ್ಚು ಮರಣ ಸಂಭವಿಸಿದ ರಾಜ್ಯಗಳು
ಉತ್ತರ ಪ್ರದೇಶ -15,630
ತಮಿಳುನಾಡು - 15,563
ಆಂಧ್ರಪ್ರದೇಶ - 14,647
ಅತೀ ಹೆಚ್ಚು ಗಾಯಾಳುಗಳಾದ ಪಟ್ಟಣಗಳು
ಚೆನ್ನೈ- 8700
ದಿಲ್ಲಿ - 5637
ಬೆಂಗಳೂರು- 4334
ಅತೀ ಹೆಚ್ಚು ಮರಣ ಸಂಭವಿಸಿದ ಪಟ್ಟಣಗಳು.
ದಿಲ್ಲಿ - 1530
ಚೆನ್ನೈ - 1247
ಜೈಪುರ - 783
ಮೇಲಿನ ಅಂಕಿ ಅಂಶಗಳನ್ನೂ ನೋಡುವಾಗ ನಮ್ಮನ್ನೇ ನಾವು ಪ್ರಶ್ನಿಸ ಬೆಕಾಗಿದೆ. ಮುಂದಿನ ವರ್ಷದಲ್ಲಿ ಈ ಸಂಖ್ಯೆಯೊಂದಿಗೆ ನಾವು ಕೂಡ ಸೇರ್ಪಡೆ ಯಾಗಲಿದ್ದೆವೆಯೇ ?
ಹಾಗಾಗಿ ಪ್ರತಿಸಲ ನಾವು ವಾಹನ ಚಲಾಯಿಸುವಾಗ "ನನ್ನ ಮಡದಿ ಮಕ್ಕಳು ನನಗಾಗಿ ಕಾದಿರುವರು. ಕನಿಷ್ಠ ಪಕ್ಷ ಅವರಿಗಾಗಿಯಾದರೂ ವಾಹನವನ್ನು ಜಾಗರೂಕತೆಯಿಂದ ಚಲಾಯಿಸುವೆ" ಎಂಬುದನ್ನು ಮನದಲ್ಲಿಟ್ಟು ಕೊಂಡಿರಬೆಕು. ಒಮ್ಮೆ ಕಳೆದು ಹೋದ ಜೀವ, ಸಮಯ ಹಿಂತಿರುಗಿ ಬರಲಾರದು.
ವಾಹನ ಚಲಾಯಿಸುವಾಗ ಕೆಲವೊಂದು ಅಂಶಗಳನ್ನೂ, ನಮಗಲ್ಲದ್ದಿದ್ದರೂ, ನಮ್ಮ ಮನೆಯವರಿಗಾಗಿ ಗಮನದಲ್ಲಿಟ್ಟು ಕೊಂಡಿರಬೆಕು.
# ಸೀಟ್ ಬೆಲ್ಟ್ ಭಧ್ರ ಪಡಿಸಿ ಕೊಂಡಿರ ಬೇಕು.
# ದ್ವಿಚಕ್ರ ವಾಹನದಲ್ಲಿ ಕಡ್ಡಾಯಾ ಹೆಲ್ಮೆಟ್ ಧರಿಸಿರಬೇಕು.
# indicator ಕ್ಲಪ್ತ ಸಮಯದಲ್ಲಿ ಉಪಯೋಗಿಸಬೇಕು.
# ವಾಹನವನ್ನು ಅನಿರೀಕ್ಷಿತವಾಗಿ ನಿಲ್ಲಿಸುವಾಗ, ರಸ್ತೆಯಿಂದ ಸಾಧ್ಯವಾದಷ್ಟು ಬದಿಗೆ ಸರಿಸಿ ನಿಲ್ಲಿ.
# ನಿಮ್ಮನ್ನು Overtake ಮಾಡುವಂತಹ ವಾಹನದ ಜಿದ್ದಿಗೆ ಬೀಳದೆ ಹಾಗೂ ಎದುರಿನಿಂದ ಬರುವ ವಾಹನಗಳಿಗೆ ದಾರಿ ಮಾಡಿಕೊಡಿ.
# ಸಣ್ಣ ಮಕ್ಕಳನ್ನು ಯಾವತ್ತೂ ಮುಂದಿನ ಸೀಟ್ ಗಳಲ್ಲಿ ಕುಳ್ಳಿರಿಸಬೇಡಿ.
# ತಮ್ಮ ವಾಹನದ ಸ್ಥಿತಿಯನ್ನು ತಿಂಗಳಿಗೊಮ್ಮೆಯಾದರೂ ಪರೀಕ್ಷಿಸಿಕೊಳ್ಳಿ.
# ವಾಹನ ಚಲಾಯಿಸುವಾಗ ಮೊಬೈಲ್ ಬಳಸ ಬೇಡಿ.
# ತೀರ ಅಗತ್ಯ ಕರೆಗಳನ್ನು ವಾಹನವನ್ನು ಬದಿಗೆ ನಿಲ್ಲಿಸಿ ಮಾತಾಡಿ ಮುಂದುವರೆಯಿರಿ. ಸಾಧ್ಯವಾದರೆ ನಿಮ್ಮ ಕರೆಗಳನ್ನು ನಿಮ್ಮ ಸಹ ಪ್ರಯಾಣಿಕರಿಗೆ ಉತ್ತರಿಸಲು ಹೆಳಿ. ಚಾಲನಾ ಸಮಯದಲ್ಲಿ Bluetooth ಅಥವಾ earphone ಬಳಸಿ.
# ಚಾಲನಾ ಸಮಯದಲ್ಲಿ ಯಾವತ್ತೂ SMS ಅಥವಾ Whatsapp ಖಂಡಿತವಾಗಿಯೂ ಬಳಸ ಬೇಡಿ.
ಇಂತಹ ಮುಂಜಾಗ್ರತ ಕ್ರಮಗಳನ್ನು ಕೈಗೊಂಡು ನಿಮ್ಮನ್ನೂ ಮತ್ತು ನಿಮ್ಮ ಕುಟುಂಬದವರ ಬಗ್ಗೆ ಚಿಂತಿಸಿ, ಸುಂದರ ಭವಿಷ್ಯವನ್ನು ಸಾಕಾರ ಗೊಳಿಸಿ ಎಂಬ ವಿನಂತಿಯೊಂದಿಗೆ

ಇಂತಿ

Team Blue Waves

ಬುಧವಾರ, ಫೆಬ್ರವರಿ 11, 2015

ಯುವ ಜನತೆ- ಸಾಮಾಜಿಕ ತಾಣ ಉಪಯೋಗಿಸಬೇಕಾದ ಪರಿ ಮತ್ತು ದಾರಿ ತಪ್ಪುತ್ತಿರುವ ರೀತಿ




ಮಹಮ್ಮದ್ ಕಾಸಿಂ. ಕೆ
 ನಿಕ್ಷೇಪ 2014-15 ನಲ್ಲಿ ಸಮಾಧಾನಕರ ಬಹುಮಾನ ಪಡೆದ ಲೇಖನ #2# 

ಹಿಂದೊಂದು ಕಾಲವಿತ್ತು. ಸುಮಾರು 10 ವರ್ಷಗಳ ಹಿಂದೆ ತನ್ನ ಪುಟ್ಟ ಮಗುವಿಗೆ ಚಂದಾ ಮಾಮನನ್ನು ತೋರಿಸಿ ಊಟ ಉಣಿಸುತಿದ್ದ ಕಾಲ. ಮಕ್ಕಳೆಲ್ಲಾ ಅಜ್ಜನ ಮೀಸೆಯನ್ನು ಊದಿ ಮೇಲೆ ಮೇಲಕ್ಕೆ ಏರಿಸುತಿದ್ದರು. ಮದುವೆಗೆ ಗಂಡು ಅಥವ ಹೆಣ್ಣು ಹುಡುಕುತಿದ್ದರೆ ಅವರ ಅಕ್ಕ ಪಕ್ಕದಲ್ಲಿರುವವರೊಂದಿಗೆ ಅಥವಾ ಸ್ನೇಹಿತರೊಂದಿಗೆ ಅವರ ಗುಣಗಳ ಬಗ್ಗೆ ವಿಚಾರಿಸುತ್ತಿದ್ದರು. ದುಬಾಯಿಯಲ್ಲಿರುವ ಮಗ ತನ್ನ ತಂದೆಗೆ ಪ್ರೀತಿಯಿಂದ ಪತ್ರ ಬರೆಯುತಿದ್ದರೂ, ತಂದೆ ತನ್ನ ಮಗನ ಫೊನ್ ಗಾಗಿ ಕಾಯುತಿದ್ದರು. ಬೆಳಗೆದ್ದು ಹಲ್ಲುಜ್ಜಿ ಮುಖ ತೊಳೆದು ಕನ್ನಡಿ ಮುಂದೆ ತನ್ನ ಮುಖಕ್ಕೆ ಫೊಸ್ ಕೊಡದಿದ್ದರೆ ಅಂದು ಬೆಳಗಾದಂತೆಯೆ ಅನ್ನಿಸುತ್ತಿರಲಿಲ್ಲ. ಕಿತ್ತೊಗಿರೊ ರೇಡಿಯೊವನ್ನು ಮೇಲೆ ಹಿಡಿದು ಅದರ ಆಂಟೆನವನ್ನು ಕಿಟಕಿಯ ಪಕ್ಕ ಹಿಡಿದು ಆಕಾಶವಾಣಿ ಕೇಳದಿದ್ದರೆ ಮನಸ್ಸಿಗೆ ನೆಮ್ಮದಿ ಇರುತ್ತಿರಲಿಲ್ಲ. ವಾರಕ್ಕೊಂದು ಸಾರಿಯಾದರೂ ಅತ್ತ ಅತ್ತೆ ಮನೆಗಾದರೂ, ಇತ್ತ ಮಾವನ ಮನೆಗೊಮ್ಮೆ ಹೋಗುಯತ್ತಿದ್ದ. ಇದೆಲ್ಲವೂ ಈ ಆಧುನಿಕ ಯುಗದಲ್ಲಿ ಬರೀ ನೆನಪುಗಳಾಗಿ ಕಂಡ ಯಾವುದೋ ಕನಸಿನಂತೆ ಮಾಯವಾಗುತ್ತಿವೆ. ಈ ಆಧುನಿಕತೆಯ ಮಂದೆ ಚಂದಾ ಮಾಮನಿಗೆ ಬೆಲೆಯೇ ಇಲ್ಲದಾಗಿದೆ. ಮಗುವಿಗೆ ಸಾಂಗು ಹಾಕಿದರೇನೆ ಊಟ. ಅದಕ್ಕೂ ತಿಳಿದಿದೆ ಯಾವುದೂ ಟೇಪು ಯಾವುದು ಲೊಕಲ್ ಎಂದು.ಅಜ್ಜನ ಮೀಸೆಯು ಬರೀ ಅಜ್ಜನ ಕಾಲಕ್ಕೆ ಸೀಮಿತವಾಗಿದೆ. ಎಲ್ಲೊ ಕಂಡ ಹುಡುಗಿ ಜೊತೆ ಚಾಟ್ ಆಗಿ, ಫ್ರೆಂಡ್ ಆಗಿ, ಕೊನೆ ಲವ್ವು ಆಗಿ ಲವ್ವು ಮ್ಯಾರೇಜ್ ನಡೆಯುತ್ತಿರುವ ಈ ಕಾಲದಲ್ಲಿ ಹೆಣ್ಣು ಹುಡುಕುವುದು ವ್ಯರ್ಥವಲ್ಲವೇ...? ಹಿಂದೆ ಕನ್ನಡಿ ಮುಂದೆ ತನ್ನ ಮುಖವನ್ನು ನೋಡುತ್ತಿದ್ದರೆ, ಇಂದು ಮುಖ ಪುಸ್ತಕ (Facebook) ತೆರೆದು ತನ್ನ ಮುಖದ ಅಂದವನ್ನು ಅಳೆಯುತ್ತಾರೆ. ಹತ್ತು ವರ್ಷದ ಹಿಂದಿನ ದನಕ್ಕೂ, ಇಂದಿನ ದನಕ್ಕೂ ಯಾವುದೆ ವ್ಯತ್ಯಾಸವಿಲ್ಲ. ಆದರೆ ಹಿಂದಿನ ಜನಕ್ಕೂ, ಇಂದಿನ ಜನಕ್ಕೂ ನಡುವೆ ತುಂಬಾ ವ್ಯತ್ಯಾಸವಿದೆ. ಅದಕ್ಕೆ ಪ್ರಮುಖ ಕಾರಣವು ಆಧುನಿಕವಾಗಿತ್ತಿರುವ ಪ್ರಪಂಚ ಮತ್ತು ಆಧುನಿಕವಾಗುತ್ತಿರುವ ಮಾನವ.

ಇದು ಸ್ಮಾರ್ಟ್ ಫೊನ್ ಯುಗ. ಎಲ್ಲಿ ನೊಡಿದರೂ ಸ್ಮಾರ್ಟ್ ಫೊನ್ ಗಳೇ ಎದ್ದು ಕಾಣುತ್ತವೆ. ಇಂದಿನ ಮಾನವನ ಎಲ್ಲದಕ್ಕೂ ಸ್ಮಾರ್ಟ್ ಫೊನ್ ಬೇಕೇ ಬೇಕು. ಅವನ ಉಡುಗೆ ತೊಡುಗೆಗಳ ಹಾಗೆ ಸ್ಮಾರ್ಟ್ ಫೊನ್ ಕೂಡ ಅನಿವಾರ್ಯವಾಗಿದೆ. ಇಂದಿನ ಅಂತರ್ಜಾಲದ ಬಳಕೆಯೂ ಸ್ಮಾರ್ಟ್ ಫೊನ್ ನಿಂದಲೇ ಆಗುತ್ತಿದೆ. ಹದಿ ಹರೆಯದವನಿಂದ ಹಿಡಿದು ಮುದುಕರವರೆಗೂ ಸ್ಮಾರ್ಟ್ ಫೊನ್ ಬಳಕೆಯಾಗುತ್ತಿದೆ. ಯುವಕರು ಅದೆಷ್ಟು ಸ್ಮಾರ್ಟ್ ಆದರೂ ಕೂಡಾ ಸ್ಮಾರ್ಟ್ ಫೊನ್ ಒಂದು ಇರಲೇ ಬೇಕು.ಅದು ಲೆಟೆಸ್ಟ್ ಆಗಿದ್ದರೆ ಅದೇ ಈ ಪೀಳಿಗೆಯ ಫ್ಯಾಷನ್. ಹೊಸ ಹೊಸ ಅಪ್ಪ್ಲಿಕೇಷನ್ ಗಳು ಅವನ ಆಸಕ್ತಿಯನ್ನು ದಿನೆ ದಿನೆ ಹೆಚ್ಚಿಸುತ್ತಲೇ ಇರುತ್ತವೆ. ಹೊಟ್ಟೆಗೆ ಹಸಿದಿದ್ದರೂ ನೆಟ್ ಕಾರ್ಡ್ ಗಳು ಅವನ ಹಸಿವನ್ನು ನೀಗಿಸುತ್ತವೆ. ಊಟ ಮಾಡಿಲ್ಲದಿದ್ದರೂ ಫ್ಲಿಪ್ ಕವರ್ ಹೊಸದೆ ಇರಬೇಕು. ದಿನ ಕಳೆದಂತೆ ಸ್ಮಾರ್ಟ್ ಫೊನ್ ಬಳಕೆ ಹೆಚ್ಛುತ್ತಲೇ ಇದೆ. ಪ್ರತಿಗಳಿಗೆ ಸ್ಮಾರ್ಟ್ ಫೊನ್ ತನ್ನ ಕೈಯಲ್ಲಿರ ಬೇಕೆನ್ನುವ ಮಟ್ಟಿಗೆ ಇಂದಿನ ಮಾನವ ಮಾರು ಹೋಗಿದ್ದಾನೆ ಎನ್ನುವುದೇ ವಿಶಾದನೀಯ.
ಸಾಮಾಜಿಕ ತಾಣದಲ್ಲಿ ಸಿಂಹಪಾಲು ಯುವಕರದ್ದೇ ಸದ್ದು. ಭಾರತ ರಾಷ್ಟ್ರವನ್ನು ಒಂದು ಯುವ ರಾಷ್ಟ್ರ ಎಂದು ಕರೆಯುತ್ತಾರೆ. ಏಕೆಂದರೆ ಭಾರತದಲ್ಲಿ ಶೇ 60 ಕ್ಕಿಂತಲೂ ಹೆಚ್ಚು ಯುವಕರಿದ್ದಾರೆ. ಪ್ರತಿಯೊಬ್ಬನ ಜೀವನದ ಪ್ರಮುಖ ಘಟ್ಟವಾಗಿದೆ ಯೌವ್ವನ. ಕುದಿಯುತ್ತಿರುವ ರಕ್ತ, ದಷ್ಟ ಪುಷ್ಟವಾದ ಶರೀರ, ಶರೀರವನ್ನೆ ನಿಯಂತ್ರಿಸಲಾಗದ ಸಮಯ, ಕೆಟ್ಟ ಚಟಗಳು ಮೊಳಕೆಯೊಡೆಯುವ ಸುಸಂಧರ್ಭ. ಇಂತಹ ಯುವತ್ವವನ್ನು ಬರೀ ಮೋಜಿಗಾಗಿ ವ್ಯಯಿಸದೆ, ಸತ್ಯ, ನೀತಿ, ನಿಯಮ, ಕ್ರಾಂತಿ ಇತ್ಯಾದಿ ಒಳ್ಳೆಯ ಕೆಲಸಗಳಲ್ಲಿ ಸೇರಿ ನಾಳೆಯ ಯುವಕ್ಕೆ ಮಾದರಿಯಾಗ ಬೇಕು. ಆದರೆ ಪ್ರಸ್ತುತ ಯುವಕರು ಕರ್ತವ್ಯಗಳೇನು? ಅವರು ಮಾಡ ಬೇಕಾದ ಕೆಲಸಗಳೆನು? ಆಧುನಿಕ ಶೈಲಿಯನ್ನು ಸಂಪೂರ್ಣವಾಗಿ ತಿರಸ್ಕರಿಸ ಬೇಕೆಂದಲ್ಲ. ನವನಾವಿನ್ಯತೆಯ ಆವಿಷ್ಕಾರವಾಗಿದ್ದ ಆಧುನಿಕತೆಯೂ ಬೇಕು. ಇತ್ತ ಸಂಪ್ರದಾಯಯುತ ಜೀವನ ಶೈಲಿಯೂ ಬೇಕು.
ಸಾಮಾಜಿಕ ತಾಣ ಅಂದ ಕೂಡಲೇ ನೆನಪಿಗೆ ಬರುವುದು ಫೇಸ್ಬುಕ್, ವಾಟ್ಸಪ್, ಗೂಗಲ್, ಟ್ವಿಟರ್, ಜೀ ಮೇಲ್ ಇತ್ಯಾದಿ. ಆದರೆ ಇದೆಲ್ಲಕ್ಕೂ ಮುಂಚಿತವಾಗಿ ಸಮಾಜಿಕ ತಾಣ ಎಂದರೇನು? ಅದರಿಂದ ಇರುವ ಉಪಕಾರಗಳೇನು? ಇದನ್ನು ಉಪಯೋಗಿಸ ಬೇಕಾದ ರೀತಿ ಯಾವುದು ? ಇಂದು ಅದು ದುರುಪಯೋಗವಾಗುತ್ತಿರುವುದು ಹೇಗೆ. ಎನ್ನುವಂತಹ ಪ್ರೆಶ್ನೆಗಳ ಉತ್ತರಗಳು ತಿಳಿದಿರಲೇ ಬೇಕು.
ನಮ್ಮಲ್ಲಿರುವ ಒಂದು ವಿಷಯದ ಕುರಿತು ಚರ್ಚಿಸುವ ಅದಕ್ಕೆ ಪ್ರತಿಕ್ರಿಯಿಸಲು ಅವಕಾಶವಿರುವ ಪ್ರತಿಯೊಂದು ತಾಣವು, ಸಾಮಾಜಿಕ ತಾಣವಾಗಿದೆ. ಸಾಮಾಜಿಕ ತಾಣಗಳ ಕುರಿತು, ಅದರ ಬಳಕೆಯ ರೀತಿಯನ್ನು ಸ್ಪಷ್ಟವಾಗಿ ತಿಳಿದಿರುವ ಒಬ್ಬ ಅದನ್ನು ಸರಿಯಾಗಿ ಉಪಯೋಗಿಸುವಲ್ಲಿ ವಿಫಲನಾಗುತ್ತಾನೆ ಎನ್ನುವುದೇ ಖೇದಕರ. ಇತ್ತ ಕುರ್ಚಿಯಲ್ಲಿ ಕೂತು ವಾಟ್ಸಪ್ ವೀಕ್ಷಿಸುತ್ತಿದ್ದ ನನ್ನಲ್ಲಿ ಆಚೆ ಮನೆಯ ಅಜ್ಜ ನಗುತ್ತಾ ಕೇಳಿದರು "ಏನೋ ಪುಟ್ಟ, ಯಾವಾಗಲೂ ಆ ಮೊಬೈಲನ್ನು ಆ ಕಡೆ ಈ ಕಡೆ ಒತ್ತುತ್ತಾ ಇರುತ್ತಿಯಲ್ಲೋ. ಅಷ್ಟು ಚಿಕ್ಕ ಮೊಬೈಲ್ನಲ್ಲಿ ಹಾಗೆ ನೋಡಲಿಕ್ಕೇನಿದೆ?" ನಾನು ಸ್ವಲ್ಪ ಸುಮ್ಮನಿದ್ದು ಹೇಳಿದೆ" ನೀವು ಯಾವಾಗ ನೋಡಿದರೂ ಎಲೆ ಅಡಿಕೆ ಜಗಿಯುತ್ತಿರುತ್ತೀರಲ್ಲಾ? ಹಾಗೆ ಇಂದಿನ ಈ ಜನರಿಗೆ ಅಂತರ್ಜಾಲ ವ್ಯಸನವಾಗಿ ಬಿಟ್ಟಿದೆ. ಒಂದು ಹೊತ್ತು ಅದು ಇಲ್ಲದಿದ್ದರೆ ಅದು ಬೊರ್ ಎನಿಸುತ್ತದೆ.ದಿನಕ್ಕೊಂದು ಹೊಸತು ಅಪ್ಡೇಟ್ ಮಾಡಿ ಇನ್ನಷ್ಟು ಆಕರ್ಷಣೀಯವಾಗುತ್ತದೆ" ಎನ್ನುತ್ತಾ ನಾನು ಚಾಟಿಂಗ್ ಮುಂದುವರೆಸಿದೆ.

ಸರ್ಚ್ ಎಂಜಿನ್ ಅಂತರ್ಜಾಲದ ಬಳಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಮ್ಮಲ್ಲಿರುವ ಒಂದು ವಿಷಯದ ಕುರಿತು ಶೋಧಿಸಲು, ಮಾಹಿತಿ ಸಂಗ್ರಹಿಸಲು ಸರ್ಚ್ ಎಂಜಿನ್ ಅತ್ಯಾವಶ್ಯಕವಾಗಿದೆ. ಸಮಾಜಿಕ ತಾಣವಾದ ಗೂಗಲ್ ಒಂದು ಅಧ್ಬುತ ಸರ್ಚ್ ಎಂಜಿನ್ ಆಗಿದೆ. ಪ್ರಪಂಚದ ಅತೀ ವಿಷಾಲವಾದ, ಸರಳವಾದ ವಿಶ್ವವ್ಯಾಪಿಯಾಗಿರುವ ಅಮೇರಿಕಾದ ಕಂಪನಿಯಾಗಿದೆ. ಎಲ್ಲಾ ದೇಶಗಳ ವಿಸ್ಮಯಗಳನ್ನು ಶೇಖರಿಸಿ, ಲಭಿಸುವಂತೆ ಮಾಡುವುದೇ ಅದರ ಪ್ರಮುಖ ಕೆಲಸವಾಗಿದೆ. ಅದರ ಎಲ್ಲಾ ವಿಧಾನಗಳಿಂದ 20 ಕೋಟಿಗಳಿಗಿಂತಲೂ ಮಿಕ್ಕ ವಿಷಯಗಳು ಪ್ರತಿದಿನ ಗೂಗಲ್ ಕೈ ಸೇರುತ್ತದೆ. ಸರ್ಚ್ ಎಂಜಿನ್ ಗಾಗಿ ಮಾತ್ರ ಪ್ರಾರಂಭಿಸಿದ ಗೂಗಲ್ ಇಂದು ನ್ಯೂಸ್, ವಿಡಿಯೊ, ಆನ್ ಲೈನ್ ವ್ಯಪಾರಗಳು ಮಾಡುತ್ತದೆ. ಆದರೆ ಕೆಲವರ ಭಾವನೆಯಂತೆ ಅಂತರ್ಜಾಲವೆ ಗೂಗಲ್ ಎನ್ನುವುದು ತಪ್ಪು. ಗೂಗಲ್ ಅಂತರ್ಜಾಲವಾಗಿದೆಯೆ ವಿನಹ, ಅಂತರ್ಜಾಲವು ಗೂಗಲ್ ಅಲ್ಲ. ಭಾರತದಲ್ಲಿ ಕರ್ನಾಟಕವೆಂಬಂತೆ, ಗೂಗಲ್ ಅಂತರ್ಜಾಲದ ಚಿಕ್ಕ ಭಾಗವಾಗಿದೆ.ನಮಗೆ ಜಾಲಾಡಲು ಹಲವು ಸರ್ಚ್ ಎಂಜಿನ್ಗಳಿವೆ. ಅದರಲ್ಲಿ ಗೂಗಲ್ ಎತ್ತಿದ ಕೈ. ಎಲ್ಲಾ ಸರ್ಚ್ ಎಂಜಿನ್ ಗಳು ಒಂದೇ ರೀತಿಯಲ್ಲಿ ಕಾರ್ಯ ನಿರ್ವಹಿಸುವುದಿಲ್ಲ. ಗೂಗಲ್, ಯಹೂ, ಬಿಂಗ್ ಇವೆಲ್ಲವೂ ಡಾಟಾ ಹುಡುಕುವ ವಿಧಾನವು ಬೇರೆ ಬೇರೆಯಾಗಿದೆ. ಕೆಲವೊಮ್ಮೆ ಒಂದೇ ವಿಷಯವನ್ನು ಈ ಮೂರೂ ಸರ್ಚ್ ಎಂಜಿನ್ಗಳಲ್ಲಿ ಹುಡುಕಿದರೂ ಶೋಧಿಸಿದರೆ ಮೊದಲ ಪುಟದಲ್ಲಿ ಬೇರೆ ಬೇರೆ ಫಲಿತಾಂಶ ಸಿಗುವ ಸಾಧ್ಯತೆವಿದೆ. 

 www.dogpile.comwww.zapmeta.comwww.search.com ಮೊದಲಾದ ಸರ್ಚ್ ಎಂಜಿನ್ ಗಳಲ್ಲಿ ವಿವಿಧ ರೀತಿಯಲ್ಲಿ ಬಳಕೆದಾರರಿಗೆ ಮಾಹಿತಿಗಳನ್ನು ನೀಡುತ್ತದೆ. ಸಮಾಜಿಕ ತಾಣವಾದ ಫೇಸ್ಬುಕ್, ಟ್ವಿಟರ್, ಯಹೂ, ಬ್ಲಾಗ್ ಮುಂತಾದುವುಗಳಿಲ್ಲಿರುವ ಮಾಹಿತಿಯನ್ನುwww.icerocket.com ಎಂಬ ತಾಣದಲ್ಲಿ ಜಾಲಾಡ ಬಹುದು. ಸ್ವಭಾಷೆಯಲ್ಲಿರುವ ಮಾಹಿತಿಗಳನ್ನು ಪಡೆಯಲು ಕೆಲವೊಮ್ಮೆ ಗೊಂದಲಗಳಿರುತ್ತವೆ. ಅದಕ್ಕಾಗಿ www.ask.com ನಿಂದ ಪ್ರೆಶ್ನೆ ರೂಪದಲ್ಲೂ ಕೇಳ ಬಹುದು. ಅಂತರ್ಜಾಲದಲ್ಲಿ ಜಾಲಾಡುವಾಗ ಕೆಲವೊಮ್ಮೆ ನಮ್ಮನ್ನು ಅಶ್ಲೀಲ ತಾಣಗಳಿಗೆ ಕರೆದೊಯ್ಯಬಹುದು. ಅದನ್ನು ತಪ್ಪಿಸಲು www.kidrex.com ಅನ್ನು ಉಪಯೋಗಿಸ ಬಹುದು. ಇದು ಮಕ್ಕಳಿಗೆ ಅತ್ಯಾವಶ್ಯಕವಾದ ವಿಷಯಗಳನ್ನು ಹುಡುಕಿ ತರುತ್ತದೆ. ವೈದಕೀಯಶೋಧಗಳಿಗಾಗಿ  www.imedisearch.com  ಉಪಯೋಗಿಸ ಬಹುದು. ಇಂತಹಾ ಸರ್ಚ್ ಎಂಜಿನ್ಗಳಿಂದ ನಮಗೆ ಬೇಕಾದ ವಿಷಯಗಳನ್ನು ಶೋಧಿಸಿ ಬೇಕಾದ ಪುಟಗಳಿಗೆ ಹೋಗಬಹುದು.ಅವಶ್ಯಕವಾದ ಚಿತ್ರಗಳನ್ನು ನೋಡ ಬಹುದು. ಹೀಗೆ ಎಲ್ಲದಕ್ಕೂ ಅವಕಾಶವಿರುತ್ತದೆ.

ದಿನದಿಂದ ದಿನಕ್ಕೆ ಹೆಚ್ಚಾಗಿ ಬೆಳೆಯುತ್ತಿರುವ ಆಕರ್ಷಣೀಯ ತಾಣವಾಗಿದೆ ಫೇಸ್ಬುಕ್. ಇದರಲ್ಲಿ 300 ಮಿಲಿಯನ್ ಗಿಂತಲೂ ಹೆಚ್ಚು ಸಕ್ರೀಯ ಬಳಕೆದಾರರಿದ್ದಾರೆ. ಇಂದು ಇದು ಎಲ್ಲರಿಗೂ ಚಿರ ಪರಿಚಯ. ತನ್ನಲ್ಲಿರುವ ಒಂದು ವಿಷಯದ ಕುರಿತು ಚರ್ಚಿಸಲು, ಅವರ ಅಭಿಪ್ರಾಯಗಳನ್ನು ತಿಳಿದು ಅದಕ್ಕೆ ಪ್ರತಿಕ್ರಿಯೀಸಲು ಸಹಾಯಕವಾಗಿದೆ. ನಮ್ಮಲ್ಲಿರುವ ಪ್ರೆಶ್ನೆ, ವಿಷಯ, ವಿಸ್ಮಯ, ಚಿಂತನೆ, ಮನೋರಂಜನೆಗಳನ್ನು ಜನರಿಗೆ ತಿಳಿಯಪಡಿಸಲು. ಆಗು ಹೋಗುಗಳನ್ನು ಮನುಕುಲಕ್ಕೆ ಎಟಕಿಸುವ ಉತ್ತಮ ಮಾಧ್ಯಮವಾಗಿದೆ. ಇಂದಿನ ಮಾಧ್ಯಮಗಳು ಬರೀ ಧರ್ಮ ಸಂಘಟನೆಗಾಗಿ ಸಂಘಟನೆಗೊಂಡ ಪತ್ರಿಕೆಯಂತೆ ಕೋಮು ಪ್ರಚೋದನೆ ಮಾಡುತ್ತಲೂ, ದ್ವನಿಗೆ ಪ್ರತಿದ್ವನಿಯಾಗಿ ಪ್ರತಿಸ್ಪರ್ಧಿಸುವಾಗ ಜಾಹಿರಾತು ಕೀರ್ತಿ ಕಾಮನೆಗಳಿಗಾಗಿ ಹಣದ ಹಿಂದೆ ಸಾಲು ನಿಲ್ಲುತ್ತಿರುವಾಗ ಇಂತಹಾ ಸಾಮಾಜಿಕ ತಾಣಗಳು ಉಪಯುಕ್ತವಾಗಿದೆ. ಇದೇ ರೀತಿ ಟ್ವಿಟರ್ ಕೂಡ ಜನಪ್ರಿಯವಾಗಿದೆ. ಹ್ರಸ್ವ ಸಂದೇಶಗಳಂತಹ ಚಿಕ್ಕ ಮಾತುಗಳಿಂದ ವಿವರಗಳನ್ನು ಜನರಿಗೆ ತಲುಪಿಸಲು ಇನ್ನೊಬ್ಬರು ಅಪ್ಡೇಟ್ ಮಾಡಿದ ಸಂದೇಶಗಳನ್ನು ವೀಕ್ಷಿಸಲೂ ಬಹುದು. ನೀವು ಪ್ರಸ್ತುತ ಮಾಡುತ್ತಿರುವ ಕೆಲಸಗಳನ್ನು 140 ಅಕ್ಷರಗಳನ್ನು ಒಳಗೊಂಡ ಪದಗಳನ್ನು ತಮ್ಮ ಸ್ನೇಹಿತರಿಗೆ ಟ್ವೀಟ್ಸ್ ಮೂಲಕ ತಿಳಿಸಬಹುದು. ಅದೇ ರೀತಿ ಇತ್ತೀಚಿನ ಕಾಲದಲ್ಲಿ ಮಾಯವಾಗುತ್ತಿರುವ ಲಿಂಕ್ಡ್ ಇನ್, ಗೂಗಲ್ ಪ್ಲಸ್, ಯಾಹೂ ಮುಂತಾದುವುಗಳು ಇಂತಹದೇ ಕಾರ್ಯಗಳನ್ನು ಮಾಡುತ್ತಿದೆ. ಅದೇ ರೀತಿ ನಮ್ಮೆಲ್ಲರ ಆಪ್ತ ಮಿತ್ರ ಫೇಸ್ಬುಕ್ ಕೂಡಾ ಒಂದು ದಿನ ಮರೆಯಾಗಲಿಕ್ಕಿದೆ. ದಿನದಿಂದ ದಿನಕ್ಕೆ ಆಧುನಿಕ ಆವಿಶ್ಕಾರವಾಗುತ್ತಿರುವಾಗ ಹೊಸತೊಂದು ತಾಣಕ್ಕೆ ಜಿಗಿಯಲಿದ್ದಾರೆ. ಇದು ಪ್ರಕ್ರತಿ ನಿಯಮ. ಪತ್ರ ಬರೆಯುತ್ತಿದ್ದ ಕೈಗಳು ಇಂದು ಟೈಪ್ ಮಾಡುತ್ತಿವೆ. ಇಂದು ನಮ್ಮ ಜೀವನದ ಒಂದು ಭಾಗವಾಗಿರುವ ಫೇಸ್ಬುಕ್ ಗಿಂತಲೂ ಮುಂಚೆ ಒಂದು ಕಾಲವಿತ್ತು. ಆರ್ಕುಟ್ ಎನ್ನುವ ಜನಪ್ರೀಯ ತಾಣ. ಅದರಲ್ಲೂ ಇದೇ ರೀತಿ ಪ್ರತಿದಿನ ಸಂದೇಶ ಕಳುಹಿಸುತಿದ್ದರು. ಆದರೆ ಫೇಸ್ಬುಕ್ ಬಂದ ಕೂಡಲೇ ಆರ್ಕುಟ್ ಕಣ್ಮರೆಯಾಯಿತು. ಮತ್ತೊಂದು ಜನಪ್ರಿಯ ತಾಣವೆಂದರೆ "ಯೂಟ್ಯೂಬ್". ಅದರಲ್ಲಿ ಜನರಿಗೆ ಬೇಕಾದಂತಹ ವಿಡಿಯೋಗಳನ್ನು ವೀಕ್ಷಿಸ ಬಹುದು. ಅಪ್ಲೋಡ್ ಮಾಡ ಬಹುದು. ಲೈಕ್ ಕಾಮೆಂಟ್ಸ್ ಮಾಡುತ್ತಲೂ ಸಬ್ ಸ್ಕ್ರೈಬ್ ಮಾಡ ಬಹುದಾಗಿದೆ. ಆದರೇ ವಾಟ್ಸಪ್ ಫೇಸ್ಬುಕ್ ಗಳಂತಹಾ ತಾಣಗಳು ಬಂದ ನಂತರ ಅದರ ವ್ಯಾಲ್ಯು ಕಡಿಮೆಯಾಗುತ್ತಲಿದೆ. ಅದೇ ರೀತಿ ವಿಡಿಯೊಗಳನ್ನು ಡೌನ್ ಲೋಡ್ ಮಾಡಲು ವಿಯು ಕ್ಲಿಪ್, ಟುಬಿಡಿ ಮುಂತಾದುವುಗಳನ್ನು ಬಳಸುವವರೂ ಇದ್ದಾರೆ.
ಇನ್ನೂ ತ್ವರಿತ ಸಂದೇಶಗಳನ್ನು ಕಳಿಸಬಲ್ಲ ಅಪ್ಲಿಕೇಶನ್ಗಳು ಆಕರ್ಷಣೀಯವಾಗಿದೆ. ವಾಟ್ಸಪ್ ...ಅದೊಂದು ಜನಪ್ರೀಯ ತಾಣ. ಇದರ ಹೆಸರು ಕೇಳದವರು ಯಾರೂ ಇಲ್ಲ.ಇದರಲ್ಲಿ 500 ಮಿಲಿಯನ್ ಗಿಂತಲೂ ಅಧಿಕ ಬಳಕೆದಾರರಿದ್ದಾರೆ. ಇದರಲ್ಲಿ 400 ಮಿಲಿಯನ್ ಭಾರತೀಯರಿದ್ದಾರೆ. ಇದು ಸಂದೇಶಗಳನ್ನು ಬರೆಯಲು, ಕಳುಹಿಸಲು ಸರಳ ಮತ್ತು ಸುಲಭವಾಗಿದ್ದರಿಂದ ಹೆಚ್ಚು ಜನ ಮುಗಿ ಬೀಳುತ್ತಾರೆ. ಇದನ್ನು ಬಳಸಲು ಹೆಚ್ಚು ಜ್ನಾನದ ಅವಶ್ಯಕತೆ ಇಲ್ಲದಿದ್ದರಿಂದ ಫೇಸ್ಬುಕ್ ಬಳಸದವರೂ ಕೂಡ ವಾಟ್ಸಪ್ ಬಳಸುತ್ತಾರೆ. ಹೆಚ್ಚು ಜನಪ್ರಿಯವಾಗದ ಭಾರತೀಯವಾದ "ಹೈಕ್" "ಇನ್ಸಾಂಟ್" ಇದೇ ರೀತಿ ಕರೆಗಳೂ, ವಿಡಿಯೋ ಕರೆಗಳನ್ನು ಮಾಡಬಲ್ಲ "ಸ್ಕೈಪ್" "ವಿಚಾಟ್" "ಲೈನ್" "ಇಮೊ" "ನಿಂಬಝ್" ಮುಂತಾದುವುಗಳು ಇಂತಹದೇ ಕಾರ್ಯಗಳನ್ನು ಮಾಡುತ್ತಲಿವೆ.

ಇದೇ ಸಮಾಜಿಕ ತಾಣಗಳ ನೈಜ ಮುಖಗಳು. ಇದಕ್ಕೆ ಮಸಿ ಬಳಿಯುತ್ತಿರುವವರೂ ನಾವೇ. ಪೌಡರ್ ಹಚ್ಚ ಬೇಕಾದವರೂ ನಾವೇ. ಅದೊಂದು ಚಕ್ರವಿದ್ದಂತೆ. ನಾವು ಕಳುಹಿಸಿದ ಸಂದೇಶಗಳು ಕೆಲವೊಮ್ಮೆ ಫಾರ್ವರ್ಡ್ ಮುಖಾಂತರ, ಶೇರ್ ಮೂಲಕ ನಮಗೇ ರಿಪೀಟ್ ಹೊಡೆಯಬಹುದು. ಇದರಲ್ಲಿ ಮುಳ್ಳಿನ ಹಾದಿಗಳೇ ಹೆಚ್ಚು. ಸಂಚರಿಸುವಾಗ ತುಂಬಾ ಜಾಗರೂಕರಾಗಿರಬೆಕು. ಗಲ್ಲಕ್ಕೆ ಕೈ ಇಟ್ಟು ಚಿಂತಿಸ ಬೇಕಾದ ವಾರ್ತೆಗಳು ಸಾಧಾರಣವೆಂಬಂತೆ ಒಳ ಪುಟದ ಮೂಲೆ ಸೇರಿರುತ್ತದೆ. ದಿನ ನಿತ್ಯ ಒಂದಲ್ಲಾ ಒಂದು ವಾರ್ತೆ ಇದ್ದೇ ಇರುತ್ತದೆ. ಮೊನ್ನೆ ತಾನೆ ಪೇಪರಲ್ಲಿ ಬಂದ ವಾರ್ತೆ ನೋಡಿ ನನ್ನ ಮೈ ಜುಮ್ ಎಂದಿತು. ವೆಲ್ಡಿಂಗ್ ಮಾಡುತಿದ್ದ ಜೆರ್ರಿ ಫ್ರಾನ್ಸಿಸ್ ಎಂಬ 18 ವಯಸ್ಸಿನ ಕೇರಳದ ಬಾಲಕ ಮಂಗಳೂರಿನ 15 ವಯಸ್ಸಿನ ಅಪ್ರಾಪ್ತ ಬಾಲಕಿಯನ್ನು ಚಾಟಿಂಗ್ ಮೂಲಕ ಪ್ರೀತಿಸಿ, ಮೋಸ ಮಾಡಿ ಕಿಡ್ನ್ಯಾಪ್ ಮಾಡಿದ್ದ. ಫೇಸ್ಬುಕ್ ನಲ್ಲಿ ಪರಿಚಯವಾದ ಹುಡುಗ ಮದುವೆಯಾಗುವುದಾಗಿ ನಂಬಿಸಿ ಹುಡುಗಿಯ ಮಾನವನ್ನೂ ದೋಚಿದ. ಚಿನ್ನವನ್ನೂ ದೋಚಿದ. ಇಂತಹ ವಾರ್ತೆಗಳು ಮಾಮೂಲಾಗಿ ಬಿಟ್ಟಿದೆ. ಫೇಸ್ಬುಕ್ ... ಇದರಲ್ಲಿ ಮುಖ ಪರಿಚಯವೂ ಇಲ್ಲದ ಯಾರ್ಯಾರೋ ಜೊತೆ ಸಂಪರ್ಕ ಮಾಡುವುದರಿಂದ ಸ್ವತಹಾ ಅಪಾಯವನ್ನು ಆಹ್ವಾನಿಸುತ್ತಾರೆ. ಶಾಲಾ ಕಾಲೇಜು ಕಲಿಯುವ ಹೆಣ್ಣು ಮಕ್ಕಳು ಸ್ವತಹ ಮೊಬೈಲ್ ಇಲ್ಲದಿದ್ದರೆ ಮನೆಯಲ್ಲಿ ಇನ್ಟರ್ನೆಟ್ ಸೌಲಭ್ಯವಿಲ್ಲದಿದ್ದರೆ, ಸೈಬರ್ ಕೆಫೆಗಳಲ್ಲಿ ಯಾರ್ಯಾರೊಂದಿಗೆ ಚಾಟಿಂಗ್ ಮಾಡಿ ಸಮಯ್ ದುರುಪಯೋಗ ಪಡಿಸಿ ಕೊಳ್ಳುತ್ತಾಳೆ. ಯಾರಾದರೂ ಕೇಳಿದರೆ ಸ್ಪೆಶಲ್ ಕ್ಲಾಸ್ ಎಂಬ ನೆಪ ಕಟ್ಟುತ್ತಾಳೆ.

ನನಗೆ ಅಂತರ್ಜಾಲವೆಂದರೆ ಎಲ್ಲಿಲ್ಲದ ಪ್ರೀತಿ. ಅದರಲ್ಲಿ ಸಾಮಾಜಿಕ ತಾಣವೆಂದರೆ ಅಚ್ಚು ಮೆಚ್ಚು. ಮೊದಲು "ಆರ್ಕುಟ್" ನಲ್ಲಿ ಸ್ಕ್ರಾಪ್ ಬುಕ್ ವೀಕ್ಷಿಸುವುದರಲ್ಲೂ ನನ್ನ ಕೈವಾಡವಿತ್ತು. ಕ್ರಮೇಣ ಫೇಸ್ಬುಕ್ ನಲ್ಲೂ ಯಾರದೋ ಸಹಾಯದಿಂದ ಹೊಸತೊಂದು ಪ್ರೊಫೈಲನ್ನು ಪ್ರಾರಂಭಿಸಿದೆ. ಅವತ್ತು ನನ್ನಲಿದ್ದದ್ದು ಫ್ಯಾಮಿಲಿ ಫ್ರೆಂಡ್ ಕೊಟ್ಟ ಮೆಮೊರಿ ಕೂಡ ವರ್ಕ್ ಆಗದ ಕ್ಲಾಸಿಕ್ ಕ್ಯಾಮೆರ ಸೆಟ್ ಕ್ಲ್ಯಾರಿಟಿ ಕೂಡ ಇಲ್ಲದ ಫೊಟೊಗಳು ಡಿಲೀಟ್ ಮಾಡಲು ಮನಸ್ಸು ಬಾರದೆ ಇಂದೂ ಕೂಡ ನನ್ನ ಪ್ರೊಫೈಲ್ನಲ್ಲಿದೆ. ಅವತ್ತು ಆದಿತ್ಯವಾರವಾಗಿರಬೇಕು ಅಥವಾ ಯಾವುದೋ ರಜಾದಿನವಾಗಿರ ಬೇಕು. ಫ್ರೀ ಟೈಮಲ್ಲಿ ಫ್ರೆಂಡ್ಸ್ ಜೊತೆ ಸುತ್ತುವುದು, ಆಟವಾಡಲು ಗ್ರೌಂಡ್ ಗೆ ಹೋಗುವುದೂ ಇವೆಲ್ಲದರಲ್ಲೂ ನನಗೆ ಆಸಕ್ತಿ ಇರಲಿಲ್ಲ. ಅಂತೂ ಒಂದು ನೆಟ್ ಕಾರ್ಡ್ ತಂದು ನೆಟ್ ರಿಚಾರ್ಜ್ ಮಾಡಿ ಫೇಸ್ ಬುಕ್ ತೆರೆದಾಗ ಎರಡು ಮೂರು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಅದರಲ್ಲೂ ಫಾತಿಮಾಳ ರಿಕ್ವೆಸ್ಟ್ ನನ್ನಲ್ಲಿ ಇನ್ನಷ್ಟೂ ಅಚ್ಚರಿ ಮೂಡಿಸಿತ್ತು. ಎಕ್ಸೆಪ್ಟ್ ಮಾಡಿ ಚಾಟಿಂಗ್ ಆರಂಭಿಸಿದೆ, ಹಾಯಿ ಎನ್ನುವುದಕ್ಕೆ ತಕ್ಷಣವಲ್ಲದಿದ್ದರೂ ಕ್ರಮೇಣ ರಿಪ್ಲೈ ಕೂಡಾ ಬಂದು ಬಿಟ್ಟಿತ್ತು. ಪಂಜರದಿಂದ ತಪ್ಪಿಸಿಕೊಂಡ ಗಿಳಿಯಂತೆ ನನ್ನ ಕಾಲು ನೆಲದ ಮೇಲೆ ನಿಲ್ಲಲಿಲ್ಲ. ಹೀಗೆ ದಿನಗಳುರುಳಿದವು. ಒಂದು ತಿಂಗಳ ನಂತರ ಅವಳೇ ಹೇಳಿಬಿಟ್ಟಳು ಅವಳು ಅವಳಲ್ಲ. ಅವಳು ಅವನು ನನ್ನ ಫ್ರೆಂಡ್ ಎಂದು. ಅಂದಿನಿಂದ ಯಾವ ಹುಡುಗಿಯರಿಗೂ ಮೆಸೇಜ್ ಮಾಡಲು ಮನಸ್ಸೇ ಇರುತ್ತಿರಲಿಲ್ಲ, ಮಾತ್ರವಲ್ಲ ಸಾಮಾಜಿಕ ತಾಣಗಳ ಮೇಲಿರುವ ವಿಶ್ವಾಸವು ಕಡಿಮೆಯಾಗಿತ್ತು. 

ಸರಿಯಾಗಿ ಫೇಸ್‍ಬುಕ್ ಬಳಸಲು ತಿಳಿಯುವ ಪ್ರತಿಯೊಬ್ಬರಿಗೂ ಹೆಚ್ಚಾಗಿ ಎರಡು ಮೂರು ಅಕೌಂಟ್‍ಗಳು ಇರುತ್ತದೆ. ಅಂತೂ ಇತ್ತೀಚಿನ ದಿನಗಳಲ್ಲಿ ಫೇಕ್ ಅಕೌಂಟ್‍ಗಳು ಹೆಚ್ಚು ಸದ್ದು ಮಾಡುತ್ತಿದೆ. ಅಲ್ಲ ಇತ್ತೀಚೆಗಷ್ಟೇ ಅಲ್ಲ ಫೇಸ್‍ಬುಕ್ ಪ್ರಾರಂಭಿಸಿದ್ದಲ್ಲಿಂದಲೂ ಫೇಕ್ ಅಕೌಂಟ್‍ಗಳಿತ್ತು. ಆದರೆ ಹಿಂದೆ ಹೆಣ್ಣಿನ ಹೆಸರಿನಲ್ಲಿ ವ್ಯಕ್ತಿಪರ ಸಂದೇಶಗಳು ಪ್ರೀತಿಯ ನೆಪದಲ್ಲಿ ಮೋಸ ಮಾಡುತ್ತಿದ್ದಾರೆ ಇತ್ತೀಚೆಗೆ ಯಾರದೋ ಹೆಸರಿನಲ್ಲಿ ಬಂದು ಕೋಮುವಾದದ ಬೆಂಕಿಗೆ ಪೆಟ್ರೋಲ್ ಹಾಕುತ್ತಾರೆ. ಧರ್ಮ ಸಂಘಟನೆಯ ಹೆಸರಿನಲ್ಲಿ ಅಪಪ್ರಚಾರ ಮಾಡುತ್ತಾರೆ. ಅವರಿಗೊಂದು ನಂಬಿಕೆ ಇರುತ್ತದೆ, ಇದು ನಮ್ಮದೇ ಲೋಕ, ಇಲ್ಲಿ ನಾವೇ ರಾಜಕುಮಾರರು ಇಚ್ಚಿದ್ದನ್ನೆಲ್ಲಾ ಗೀಚಬಹುದು ನಾವು ಗೀಚಿದ್ದೇ ಇಲ್ಲಿಯ ನಿಯಮ ಹೇಳುವವರೂ ಇಲ್ಲ ಕೇಳುವವರೂ ಇಲ್ಲ ಯಾರಾದರೂ ಕೇಳಿದರೆ ಒಂದು ಬ್ಲೋಕ್ ಮೂಲಕ ಅವರ ತಂಟೆ ಮುಗಿಯುತ್ತದೆ. ಈ ವಿಶ್ವಾಸವು ಬರೀ ಭ್ರಮೆಯಾಗಿದೆ. 

ನಾವು ಉಪಯೋಗಿಸುತ್ತಿರುವ ಮೊಬೈಲ್‍ನ ಐ.ಪಿ ಎಡ್ರಸ್ ಸೈಬರ್ ಸೆಲ್‍ನಿಂದ ನೋಡಿ ಅದರಲ್ಲಿರುವ ಸಿಮ್ ಯಾವುದು? ಯಾರ ಹೆಸರಿನಲ್ಲಿದೆ? ಯಾವ ಮೊಬೈಲ್ ಬಳಸುತ್ತಿದ್ದಾನೆ? ಇವನು ಈಗ ಎಲ್ಲಿದ್ದಾನೆ ಎಂದು ಸುಲಭವಾಗಿ ಪತ್ತೆ ಹಚ್ಚುವ ತಂತ್ರಜ್ಞಾನವಿದೆ. ಸರಕಾರದ ಆದೇಶದಂತೆ ಅತೀ ಹೆಚ್ಚು ಫೇಸ್‍ಬುಕ್ ಖಾತೆಗಳನ್ನು ತಡೆಯಲ್ಪಟ್ಟಿದ್ದು ಜ್ಯಾತ್ಯಾತೀತ ರಾಷ್ಟ್ರವಾದ ಭಾರತದಲ್ಲಾಗಿದೆ ಸರಕಾರದ ಆದೇಶದಂತೆ ಭಾರತದಲ್ಲಿ 5,000 ಖಾತೆಗಳು ತಡೆಯಲ್ಪಟ್ಟಿದೆ. ಅದರಲ್ಲಿ ಹೆಚ್ಚಾಗಿ ಕೋಮುವಾದ, ವ್ಯಕ್ತಿಯ ಕುರಿತು ಅಪಪ್ರಚಾರ ಮತ್ತು ಕಾಮ ಸಂದೇಶಗಳನ್ನು ಕಳುಹಿಸುವ ಖಾತೆಗಳಾಗಿದೆ. ಇಂತಹಾ ಸಂದೇಶಗಳು ಇತ್ತೀಚಿನ ದಿನಗಳಲ್ಲಿ ವಾಟ್ಸಪ್ ಗ್ರೂಪ್ ಮುಖಾಂತರವೂ ಹರಿದಾಡುತ್ತಿದೆ. ಇಂತಹಾ ಸಂದೇಶಗಳಿಗೆ ಮುಗಿ ಬೀಳದೇ ನಾವೆಲ್ಲಾ ಭಾರತೀಯರು, ನಮ್ಮೆಲ್ಲರಲ್ಲಿ ಹರಿದಾಡುತ್ತಿರುವ ರಕ್ತದ ಬಣ್ಣವೂ ಒಂದೇ, ಉಸಿರಾಡುವ ಗಾಳಿಯೂ ಒಂದೇ, ಕುಡಿಯುವ ನೀರೂ ಒಂದೇ, ಆಡುತ್ತಿರುವ ಭಾಷೆ ಬೇರೆಯಾದರೂ ಅದರಲ್ಲಿರುವ ವಿಷಯವು ಒಂದೇ ಹೀಗಿರುವ ನಾವುಗಳ ಮಧ್ಯೆ ಏಕೆ ವೇಶ ದೋಷ ರೋಶಗಳ ಕೋಶ? ಭಿನ್ನತೆಯನ್ನು ಆಶಿಸುವ ಮನಸ್ಸುಗಳು ಪ್ರೀತಿಯನ್ನು ಬೆಳೆಸಲಿ ಕೋಮು ಬರೆಯುತ್ತಿರುವ ಕೈಗಳು ಶಾಂತಿಯನ್ನು ಬರೆಯಲಿ. ಪ್ರಗತಿಯನ್ನು ಕಾಯಲಿ. ಸ್ನೇಹದ ಸಂದೇಶವನ್ನು ಸಾರಲಿ.

ಫೇಸ್‍ಬುಕ್‍ನಿಂದ ಕಾರ್ಯಕರ್ತರು ಸಮಯ ವ್ಯರ್ಥ ಮಾಡುತ್ತಿದ್ದಾರೆಂದು ಮನಗಂಡು ಹಲವು ಕಾರ್ಯಾಲಯಗಳಲ್ಲಿ ಫೇಸ್‍ಬುಕ್‍ನ್ನು ನಿಷೇಧಿಸಲಾಗಿತ್ತು. ಹೊಸತೊಂದು Profile ಚಿತ್ರ ಹಾಕಿ ಇನ್ನೊಬ್ಬರಿಗೆ ಟ್ಯಾಗ್ ಮಾಡಿ ಮತ್ತೊಬ್ಬರಲ್ಲಿ ಲೈಕ್ ಕೇಳಿ ಕಮೆಂಟ್‍ಗೆ ಪ್ರತಿ ಕಮೆಂಟ್ ಹಾಕುತ್ತಿರುವುದು ಸಮಯ ವ್ಯರ್ಥವಲ್ಲದೆ ಮತ್ತಿನ್ನೇನು? ಪೇಜ್ ಅಥವಾ ಗ್ರೂಪ್ ನಿರ್ಮಿಸಿ ಒಬ್ಬೊಬ್ಬರನ್ನೇ ಅವಹೇಳಿಸಿ ಕಾಮಿಡಿ ಸ್ಟೇಟಸ್ ಅಪ್‍ಡೇಟ್ ಮಾಡುವುದು ವ್ಯರ್ಥವಲ್ಲವೇ? ಆದರೆ ಬ್ಲೂವೇವ್ಸ್‍ನಂಥಹಾ ಹೊಸ ಪುಟಗಳು ತೆರೆದು ಪ್ರಗತಿಯ ಬೀಜವನ್ನು ಬಿತ್ತುತ್ತಿರಲು ಅದರ ಸಂದೇಶವನ್ನು ಆಲಿಸುತ್ತಿದ್ದರೆ ಹೇಗೆ ತಾನೇ ಸಮಯ ವ್ಯರ್ಥವಾದೀತು? ಇಂತಹಾ ಒಳ್ಳೆಯ ಸಂದೇಶಗಳನ್ನು ಕಳುಹಿಸಲು ಜನರನ್ನು ಒಳಿತಿನೆಡೆಗೆ ಕರೆಯಲು ಅವಕಾಶವಿರುವಾಗ ಸಾಮಾಜಿಕ ತಾಣ ಬಳಕೆದಾರರು ಇದಕ್ಕೆ ವಿರುದ್ದ ರೀತಿಯಲ್ಲಿ ಚಲಿಸುತ್ತಿದ್ದಾರೆನ್ನುವುದೇ ನಗ್ನ ಸತ್ಯ!

Photoshop ಮೂಲಕ ದಿನಕ್ಕೊಬ್ಬರ ಅಸಲಿ ಮೂಗನ್ನು ತೆಗೆದು ಕೃತಕ ಬಾಯಿಗಳನ್ನಿಟ್ಟು ಪರರ ಕೊರತೆಗಳನ್ನು ರೌಂಡಪ್ ಮಾಡಿ ತೋರಿಸುವವರು ಒಂದೆಡೆಯಾದರೆ ಕಪ್ಪು ಮುಖದವನು ಸೆಲ್ಫಿ ತೆಗೆದು ಪಿಕ್‍ಸಾರ್ಟ್ ಮೂಲಕ ಬಣ್ಣ ಬದಲಿಸಿದರೆ ವಾವ್! ವಾಟ್ ಎ ಬ್ಯೂಟಿ ನೈಸ್ ಮಚ್ಚಾ ಸೂಪರ್ ಡಾರ್ಲಿಂಗ್ ಎನ್ನುವ ಕಮೆಂಟ್ ಹಾಕುವವರು ಇನ್ನೊಂದೆಡೆ. ಆದರೆ ಕೆಲವು photo ಗಳನ್ನು ಎಡಿಟ್ ಮಾಡಿ ಹೊಸ ಶೋರ್ಟ್ ಫಾರ್ಮ್ ಹಾಕಿ ವಾಟ್ಸಪ್ ಮೂಲಕ ಫೇಮಸ್ ಆಗಲು ಇಚ್ಚಿಸುವವರೂ ಇದ್ದಾರೆ. ಇನ್ನು ಕೆಲವರು ಕಂಡದ್ದನ್ನು ಕೇಳಿದ್ದನ್ನು ಎಲ್ಲವನ್ನೂ ಕೇಳದೇ ನೋಡದೇ ಶೇರ್ ಮಾಡುವವರೂ ಇದ್ದಾರೆ ಆದುದರಿಂದಲೇ ವಾಟ್ಸಪ್ ಮೂಲಕ ಹೆಚ್ಚು ಗಾಳಿ ಸುದ್ದಿಗಳು ಹರಡುತ್ತಿದೆ. ನಾವು ಮಾಡುತ್ತಿರುವ ಪ್ರತಿಯೊಂದು ಟೆಚ್ ಕೂಡಾ ಅಮೂಲ್ಯವಾದುದು. ನಾವು ಶೇರ್ ಮಾಡುತ್ತಿರುವ ಪ್ರತಿಯೊಂದನ್ನೂ ಶೇರ್ ಮಾಡುವುದಕ್ಕಿಂತ ಮುಂಚೆ ಎರಡು ಮೂರು ಬಾರಿ ನೋಡಿರಬೇಕು? ಇದರ ಮೂಲ ಎಲ್ಲಿಂದ? ಇದರಿಂದ ಏನಾದರೂ ಉಪಯೋಗಗಳಿವೆಯಾ? ಇದು ಸತ್ಯ ಸಂಗತಿಯೇ? ಎಂದು ಸರಿಯಾಗಿ ತಿಳಿದ ನಂತರ ಅದನ್ನು ಶೇರ್ ಮಾಡಬೇಕು. ಇಲ್ಲದಿದ್ದರೆ ಅದರಿಂದ ಬಹಳ ಅಪಾಯಗಳು ಸಂಭವಿಸುವ ಸಾಧ್ಯತೆಗಳಿವೆ. ಒಂದು ಮೆಸೇಜನ್ನು ಬರೆದು ಕೊನೆಗೆ ಇದನ್ನು 10 ಜನರಿಗೆ ಕಳುಹಿಸಿದರೆ ನಿಮ್ಮ ಸ್ಟೇಟಸ್ ಬದಲಾಗುತ್ತದೆ, ಅಥವಾ ಕಳುಹಿಸದಿದ್ದರೆ ನಿಮ್ಮ ವಾಟ್ಸಪ್ ಬ್ಲೋಕ್ ಆಗಲಿದೆ ಎನ್ನುವಂಥಹಾ ಗಾಳಿಸುದ್ದಿಗಳಿಗೆ ಕಿವಿ ಕೊಡಬಾರದು. ಅಪ್ಪಿ ತಪ್ಪಿ ನಾವು 10 ಜನರಿಗೆ ಕಳುಹಿಸಿದರೆ ಆ 10 ಜನರು ಹತ್ತು ಹತ್ತು ಜನರಿಗೆ ಕಳುಹಿಸಿದರೆ ಈ ಗಾಳಿಸುದ್ದಿಯೂ ಸರಪಳಿಯೋಪಾದಿಯಲ್ಲಿ ಸಂಚರಿಸುತ್ತಾ ಇರುತ್ತದೆ. ಹೀಗೆ ಸ್ಪಷ್ಟವಲ್ಲದ ಸಂದೇಶಗಳನ್ನು ಅಪಘಾತ ಚಿತ್ರಗಳನ್ನು ಅಶ್ಲೀಲ ಚಿತ್ರಣಗಳನ್ನು ಕಳುಹಿಸಿದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅಂಥಹಾ ಸಂದೇಶಗಳು ಬಂದು ಬಿಟ್ಟರೆ ಅದನ್ನು ತಕ್ಷಣವೇ ಡಿಲೀಟ್ ಮಾಡಿ ಬಿಡಬೇಕು .

ಸಾಮಾಜಿಕ ತಾಣ ಅದರಲ್ಲಿ ದಿನನಿತ್ಯ ಹಾಳಾಗುವ ಜನರು ಹೆಚ್ಚುತ್ತಲೇ ಇದೆ. ಮಾನವನ ನಿತ್ಯ ಜೀವನದಲ್ಲಿ ಅತ್ಯಾವಶ್ಯಕವಾದರೂ ಇದನ್ನು ದುರುಪಯೋಗ ಪಡಿಸುವಲ್ಲಿ ಹೆಚ್ಚು ಜನರು ಯಶಸ್ವಿಯಾಗಿರುತ್ತಾರೆ. ಎಲ್ಲಿ ನೋಡಿದರೂ ತಪ್ಪುಗಳೇ ರಾರಾಜಿಸುತ್ತಿದೆ. ಹೌದು ಹಿಂದೆ ತಪ್ಪು ಮಾಡಲು ನಾವು ಪಾಪಗಳತ್ತ ಹೋಗ ಬೇಕಾಗಿತ್ತು ಆದರೆ ಇಂದು ಪಾಪಗಳೇ ನಮ್ಮ ಬೆನ್ನು ಹತ್ತುತ್ತಿದೆ. “ವೆಕ್ ಅಫಿ” ಎಂಬ ಯ್ಯಾಂಟಿ ವೈರಸ್ ಕಂಪೆನಿ ನಡೇಸಿದ ಅಂಕಿ ಅಂಶದ ಪ್ರಕಾರ ಕೌಮಾರ್ಯ ಪ್ರಾಯದ ಮಕ್ಕಳಿಂದ ಮತ್ತು ಯುವಕರಿಂದ ಅತ್ಯಂತ ಹೆಚ್ಚಾಗಿ ಅಂತರ್ಜಾಲವು ದುರುಪಯೋಗವಾಗುತ್ತಿದೆ. ಇಂತಹಾ ತಾಣಗಳಿಂದ ದಿನೇ ದಿನೇ ಹಾಳಾಗುತ್ತಿರುವುದು ಬರೀ ಹುಡುಗರು ಮಾತ್ರವಲ್ಲ ಹೆಚ್ಚಾಗಿ ಹುಡುಗಿಯರೂ ದಾರಿ ತಪ್ಪುತ್ತಿದ್ದಾರೆ. Porn ಸೈಟ್‍ಗಳನ್ನು ವೀಕ್ಷಿಸುತ್ತಿರುವ ಭಾರತೀಯರಲ್ಲಿ ಶೇಖಡಾ 25 ಜನರು ಮಹಿಳೆಯರು ಎಂದು ಇತ್ತೀಚೆಗೆ “ಕ್ವಾರ್ಟ್” ಎನ್ನುವಂಥಹಾ ಓನ್‍ಲೈನ್ ಮ್ಯಾಗಝೀನ್ ನಡೆಸಿದ ಅಂಕಿ ಅಂಶದ ಪ್ರಕಾರ ತಿಳಿದುಬಂದಿದೆ ಇದು Porn hub ಎಂಬ ಪ್ರಮುಖ Porn site ನೀಡಿದ ವರದಿಯಾಗಿದೆ. ಈ ಸೈಟಿನಲ್ಲಿ ಮಿಲಿಯನ್ ಸಂದರ್ಶಕರಿದ್ದಾರೆ. ಈ ಸೈಟಿನಲ್ಲಿ ಮಿಲಿಯನ್ ಸಂದರ್ಶಕರಿದ್ದಾರೆ. ಅದರಲ್ಲಿ ಅತೀ ಹೆಚ್ಚು ಮೊಬೈಲ್ ಬಳಸುವವರಲ್ಲಿ ನಮ್ಮ ದೇಶವು ಎರಡನೇ ಸ್ಥಾನದಲ್ಲಿದೆ. 49.9 ಶೇ ಜನರು ಮೊಬೈಲ್ ಮೂಲಕ ಬಳಸುತಿದ್ದರೆ, 47.5 ಶೇ ಜನರು ಡೆಸ್ಕ್ ಟಾಪ್ ಮೂಲಕ ಮತ್ತು ಶೇ 2.6 ಟ್ಯಾಬ್ ಮೂಲಕ ಉಪಯೋಗಿಸುತ್ತಾರೆ. 

ನಾಚಿಕೆಗೇಡಿನ ವಿಷಯವೇನೆಂದರೆ ಹದಿಹರೆಯದ ಮಕ್ಕಳೂ ಕೂಡ ಇಂತಹ ತಂತ್ರಗಳಿಗೆ ಮುಗಿಬೀಳುತಿದ್ದಾರೆ. ಕೌಮಾರ್ಯದಲ್ಲಿ ದೈಹಿಕ ಹಾಗೂ ಭಾವನಾತ್ಮಕ ವಿಕಸನಗಳು ನಡೆಯುತಿದ್ದು ದೇಹದಲ್ಲಿ ಉತ್ಪಾದನೆಯಾಗುವ ಹಾರ್ಮೋನುಗಳು ಲೈಂಗಿಕ ಭಾವನೆಗಳನ್ನು ಕೆರಳಿಸುತ್ತವೆ. ಗಂಡು ಮತ್ತು ಹೆಣ್ಣು ಮಕ್ಕಳಲ್ಲಿ ಪರಸ್ಪರ ಲೈಂಗಿಕಾಸಕ್ತಿ ಮೂಡುವ ಪ್ರಾಯವದು. ಲೈಂಗಿಕ ವಿಕ್ರತಿ ಮತ್ತು ರತಿ ಕ್ರೀಡೆಗಳನ್ನು ತೋರಿಸುವ ಪೋರ್ನ್ ಸೈಟ್ ಗಳು ಇಂದಿನ ಮಕ್ಕಳ, ಯುವಕರ, ಅಂತರ್ಜಾಲ ಬಳಕೆದಾರರ ದಾರಿಗೆಡಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ಇದು ಮಾನವನನ್ನು ದಾರಿ ತಪ್ಪಿಸಬಲ್ಲ ಅವನ ಜೀವನವನ್ನು ಪರಾಜಿತಗೊಳಿಸಬಲ್ಲ ಅತಿದೊಡ್ಡ ವಿಪತ್ತಾಗಿದೆ. ಮಾತ್ರವಲ್ಲ ಇತ್ತೀಚಿಗೆ ಸಮಾಜಿಕ ತಾಣದಲ್ಲಿ ಹೆಚ್ಚಾಗಿ ವಾಟ್ಸಪ್ ನಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆ ಕಲ್ಪಿಸದೆ ಹಿಡನ್ ಕ್ಯಾಮೆರಾಗಳಿಂದ ತೆಗೆದ ಪ್ರಸವ ವಿಡಿಯೋ ಮುಂತಾದ ಅಶ್ಲೀಲ ವಿಡಿಯೊ ಹಾಗೂ ಚಿತ್ರಗಳು ಹರಿದಾಡುತಿತ್ತು ಅನ್ನುವುದೇ ತಲೆ ತಗ್ಗಿಸ ಬೇಕಾದ ವಿಷಯ. ಕೆಲವೊಮ್ಮೆ ತಿಳಿಯದೆ ಯಾವುದೋ ಕ್ಲಿಪ್ಪನ್ನು ಕ್ಲಿಕ್ಕಿಸಿ ಅದರ ಬಲೆಗೆ ಬಿದ್ದು, ಕೊನೆಗೆ ಅಂತಹ ತಾಣಗಳ ಸಕ್ರೀಯ ಬಳಕೆದಾರನಾಗುತ್ತಾನೆ. ಹೆಚ್ಚಾಗಿ ಮೊಬೈಲ್ ಬಳಕೆದಾರರು ಮಾಡಿದ ತಪ್ಪಗಳನ್ನು ಪುನಾರಾವರ್ತಿಸುತ್ತಿದ್ದಾರೆ ಎಂದು ಮ್ಯಾಂಚೆಸ್ಟರ್ ವಿಶ್ವ ವಿದ್ಯಾಲಯ ತಜ್ನರು ನಡೆಸಿದ ಅದ್ಯಾಯದಿಂದ ವರದಿಯಾಗಿದೆ. ಇಂದಿನ ಅತ್ಯಾಚಾರ ಕ್ರತ್ಯಗಳಿಗೆ ಇಂತಹಾ ತಾಣಗಳು ಕಾರಣವಾಗುವುದನ್ನೂ ಮನಗೊಂಡ ಕೇರಳ ಸರಕಾರ ೬೫೨ ಅಶ್ಲೀಲ ವೆಬ್ ಸೈಟ್ ಗಳನ್ನು ನಿಶೇದಿಸುವಂತೆ ಕೇಂದ್ರದ “CERTIN” ( Computer Emergency Response Team India) ಗೆ ಮನವಿ ಸಲ್ಲಿಸಿದೆ. ಭಾರತದ ಅಶ್ಲೀಲ ತಾಣಗಳಿಗೆ ವಿರೋಧ ಹೇರುವುದಾಗಿ ಕೇಂದ್ರ ಸರಕಾರ ಅದರ ಪ್ರಥಮ ಘಟ್ಟದಂತೆ ಭಾರತದ ಇಂಟರ್ನೆಟ್ ಆಂಡ್ ಮೊಬೈಲ್ ಅಸೋಶಿಯೇಶನ್ ಆಫ್ ಇಂಡಿಯಾದಿಂದ ಅಶ್ಲೀಲ ತಾಣಗಳ ಪಟ್ಟಿ ಆವಶ್ಯ ಪಟ್ಟಿದ್ದಾರೆ. ವಿದೇಶ ರಾಷ್ಟ್ರಗಳಲ್ಲಿ ಪೋರ್ನ್ ಸೈಟ್ ಗಳು ವಿಧೇಯವಾದರೂ ಇವು ಭಾರತೀಯ ಸಂಸ್ಕ್ರತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಮಾತ್ರವಲ್ಲ ಸಾಮಾಜಿಕ ತಾಣಗಳಿಂದ ಒಬ್ಬರಿಂದ ಇನ್ನೊಬ್ಬರಿಗೆ ಅಶ್ಲೀಲ ದ್ರಶ್ಯಗಳನ್ನು ಹರಿದಾಡುವುದೂ ಅಪರಾಧವೆಂದು ಪರಿಗಣಿಸಿ, ದ್ರಶ್ಯಗಳನ್ನು ರವಾನಿಸುವವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಲು ತಿದ್ದುಪಡಿ ಕಾಯಿದೆಯಡಿ ಅವಕಾಶ ಕಲ್ಪಿಸಲಾಗುತ್ತದೆ. ಅಶ್ಲೀಲ ಚಿತ್ರಗಳ ರವಾನೆಗೆ ತಡೆ ಹಾಕಲು ರಾಜ್ಯ ಸರಕಾರವು ಮನವಿ ಮಾಡಿದ್ದು, ಈ ಕುರಿತು ಕೇಂದ್ರ ಸರಕಾರವು ಚಿಂತನೆ ನಡೆಸಿದೆ. ಇಂತಹಾ ಕೆಟ್ಟ ಸಂದೇಶಗಳನ್ನು ಶೇರ್ ಮಾಡದೆ, ಕೆಟ್ಟ ತಾಣಗಳಿಗೆ ಮುಗಿಬೀಳದೆ ಇನ್ನೆಂದೂ ಇಂತಹ ತಾಣಗಳಿಗೆ ಹೋಗಲಾರೆನು, ಇಂತಹಾ ಸಂದೇಶಗಳನ್ನು ಕಳುಹಿಸಲಾರೆನು, ಅಶ್ಲೀಲ ಸಂದೇಶಗಳನ್ನು ಕಳುಹಿಸುವವರನ್ನು ಬ್ಲಾಕ್ ಮಾಡುವೆನು ಎಂದೊ ಪ್ರತಿಜ್ನೆ ಮಾಡ ಬೇಕು. ಅಶ್ಲೀಲ ಚಿತ್ರಗಳನ್ನು ಕಳುಹಿಸ ಬಾರದೆಂದು, ಅದನ್ನು ನೋಡ ಬಾರದೆಂದೂ ಸ್ನೇಹಿತರಿಗೆ ಸದುಪದೇಶ ನೀಡ ಬೇಕು. ನಮ್ಮ ಮಕ್ಕಳಿಗೆ ಅದನ್ನು ನೋಡಲು ಅವಕಾಶ ಕೊಡಬಾರದು. ಚಿಕ್ಕ ಮಕ್ಕಳಿಗೆ ಸ್ವಂತವಾದ ಮೊಬೈಲನ್ನು ಕೊಡ ಬಾರದು. ಕೊಡುವುದಾದರೂ ಇನ್ಟರ್ನೆಟ್ ಸೌಲಭ್ಯವಿರುವ ಮೊಬೈಲ್ ನೀಡ ಬಾರದು. ಇಂದು ಶಾಲಾ ಚಟುವಟಿಕೆಗಳಿಗೆ ಕಂಪ್ಯೂಟರ್ ಅತ್ಯಾವಶ್ಯಕವಾಗಿರುವುದರಿಂದ ಅದರಲ್ಲಿ ಇಂಟರ್ನೆಟ್ ಬಳಕಗೆ ಅವಕಾಶವಿದ್ದರೆ ಮಾತ ಪಿತರು ಅದರ ಕುರಿತು ಸಂಪೂರ್ಣವಾಗಿ ತಿಳಿದಿರಬೇಕು.

ಪ್ರತಿಯೊಂದು ಮನೆಯವರೂ ತಮ್ಮಲ್ಲಿ ಬೆಳೆಯುತ್ತಿರುವ ನವ ಪೀಳಿಗೆಯನ್ನು ಉತ್ತಮ ದಾರಿಯಲ್ಲಿ ಮುನ್ನಡೆಯುವಂತೆ ನೋಡಿಕೊಳ್ಳಬೇಕು. ಇಂದಿನ ಯುವಕರಾದ ನಾವು ನಾಳೆಯ ಯುವಕರಿಗೆ ಅಂದರೆ ಇಂದಿನ ಮಕ್ಕಳಿಗೆ ಮಾದರಿಯಾಗಬೇಕು. ಶಾಂತಿ, ಸ್ನೇಹ, ಸಹೋದರತೆ ಕೌಟುಂಬಿಕ ಸಂಬಂಧಗಳು ಮಾಯವಾಗುತ್ತಿರುವ ಇಂದಿನ ಕಾಲದಲ್ಲಿ ಅವುಗಳನ್ನು ಬೆಳೆಸಲು ಪ್ರಯತ್ನಿಸಬೇಕು. “ A Society never destroyed by the inactivities of Rascals, but it destroyed by the inactivities of Good people” "ಕೆಟ್ಟ ಕೆಲಸಗಳಿಂದ ಸಮಾಜ ಕೆಡುವುದಿಲ್ಲ ಆದರೆ ಸಜ್ಜನರು ಕೆಲಸ ಮಾಡದಿರುವುದರಿಂದ ಸಮಾಜ ಕೆಡುತ್ತದೆ" ಎಂಬ ಚಿಂತಕನೊಬ್ಬನ ಮಾತು ಚಿಂತನಾರ್ಹ. ಕೆಟ್ಟವರಿಗೆ ಒಳ್ಳೆಯ ದಾರಿಯನ್ನು ನಾವು ತೋರಿಸಬೇಕು. ಪ್ರತಿಯೊಬ್ಬನ ಮುಂದೆ ಎರಡು ದಾರಿಗಳಿರುತ್ತವೆ. ಕೆಟ್ಟದಾರಿಯು ಒಳ್ಳೆಯ ದಾರಿಗಿಂತ ಎಷ್ಟೇ ಸುಲಭವಾಗಿದ್ದರೂ, ಸಂತಸವನ್ನು ನೀಡುತಿದ್ದರೂ ನಾವು ಸತ್ಪಥದ ದಾರಿಯಲ್ಲೇ ಹೋಗಬೇಕು. 

ಸಮಾಜಿಕ ತಾಣಗಳಲ್ಲಿ, ಗ್ರೂಪ್ ಗಳಲ್ಲಿ ಬರೇ ಹಾಯ್, ಹೆಲೋ ಎನ್ನುವಂತಹ ಸಂದೇಶಗಳನ್ನು ಕಳುಹಿಸುವುದನ್ನು ಬಿಟ್ಟು ಸಮಾಜಿಕ ತಾಣಗಳನ್ನು ಸಮಾಜಕ್ಕೆ ಉಪಯೋಗವಾಗುವಂತಹ ಮಾಹಿತಿಯನ್ನು ಕಳುಹಿಸ ಬೇಕು. ಅದಕ್ಕೂ ಸಾಧ್ಯವಾಗುತಿಲ್ಲದಿದ್ದರೆ ನಾಡಿನ ಪ್ರಗತಿಯನ್ನು, ಸಮಾಜಿಕ ಕ್ರಾಂತಿಯನ್ನು ಬಯಸುವ ಬ್ಲೂ ವೇವ್ಸ್ ನಂತಹ ಪುಟಗಳಿಗೆ ಬೆಂಬಲ ನೀಡಬೇಕು. ಆಧುನಿಕ ತಂತ್ರಜ್ನಾನಗಳನ್ನು ಅತಿಯಾಗಿ ಬಳಸದೆ, ಮಿತವಾಗಿ ಬಳಸಬೇಕು. ಅತಿಯಾಗಿ ಬಳಸುವುದರಿಂದ ಜ್ನಾಪಕ ಶಕ್ತಿಯ ಮೇಲೆ ಪರಿಣಾಮ ಬೀಳುತ್ತದೆ ಎಂದು ಮಲೇಶ್ಯಾದ ಸಂಶೊಧಕರು ತಿಳಿಸಿದ್ದಾರೆ. ಕೆಟ್ಟ ಸಂದೇಶಗಳನ್ನು ಆಲಿಸದೆ, ಪರರ ಕೊರತೆಗಳನ್ನು ಎತ್ತಿ ಹೇಳದೇ, ಸಮಯ ವ್ಯರ್ಥವಾಗದಂತೆ ಸತ್ಯದೆಡೆಗೆ ಜನರನ್ನು ಆಹ್ವಾನಿಸುತ್ತಾ ಬಳಸ ಬೇಕಾದ ರೀತಿ ನೀತಿಗಳನ್ನು ತಿಳಿದು ಸಮಾಜಿಕ ತಾಣಗಳನ್ನು ಉಪಯೋಗಿಸ ಬೇಕು

ಇದು ನನ್ನ ಮೊದಲ ಲೇಖನವಾದರೆ ಇಂತಹ ಹಲವು ಲೇಖನಗಳು ಮೊದಲಾಗಿ ನಂತರದ್ದಾಗಿ ಕೊನೆಗೊಮ್ಮೆ ಯಶಸ್ವಿ ಲೇಖಕನಾದರೆ ಬರೆಯಲು ಅರಿಯದವರಿಗೆ ಲೇಖನಿ ಕೊಟ್ಟು ಅವಕಾಶ ಕಲ್ಪಿಸಿದ ಬ್ಲೂ ವೇವ್ಸ್ ಗೆ ನನ್ನ ಮನದಾಳದ ಧನ್ಯವಾದಗಳು. ಈ ವರುಷದ ಅಂತ್ಯ ನವ ವರುಷದ ಪ್ರಾರಂಭ ನವ ಚಂತನೆಗಳನ್ನು ತರುತ್ತಾ ಕರ್ನಾಟಕದ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ಸ್ರಷ್ಟಿಸುತ್ತಾ ಸಮಾಜಿಕ ತಾಣಗಳಿಗೆ ಮಾದರಿಯಾಗಲಿರುವ ಬ್ಲೂ ವೇವ್ಸ್ ಪ್ರತಿ ವರುಷವೂ ಹರುಷವನ್ನು ತರುತ್ತಾ ಚಿರಕಾಲ ಬಾಳಲಿ. ನೀಲಿ ಅಲೆಗಳ ಹಿಂದಿರುವ ಬಿಳಿಯ ಮುಖಗಳಿಗೆ ದೇವನು ಕರುಣಿಸಲಿ.

ಮಂಗಳವಾರ, ಫೆಬ್ರವರಿ 10, 2015

ಶಿಕ್ಷಣ ವ್ಯವಸ್ಥೆ- ಲೋಪದೋಷಗಳು ಹಾಗೂ ಸುಧಾರಣೆಯ ಮಾರ್ಗಗಳು






ತುಳಸಿದಾಸ್, ಬಂಟ್ವಾಳ

ನಿಕ್ಷೇಪ 2014-15. ಸಮಾಧಾನಕರ ಬಹುಮಾನ ಪಡೆದ  ಲೇಖನ #1#

ಒಂದು ದೇಶವು ಆರ್ಥಿಕವಾಗಿ, ಸಮಾಜಿಕವಾಗಿ, ರಾಜಕೀಯವಾಗಿ ಪ್ರಗತಿ ಹೊಂದಬೇಕಾದರೆ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ.ಪ್ರತಿಯೊಬ್ಬರಿಗೂ ಶಿಕ್ಷಣ ಸಿಗಬೇಕು ಎನ್ನುವ ಕೂಗು ನಮ್ಮ ಸಾತಂತ್ರ್ಯ ಚಳುವಳಿಯ ಜೊತೆ ಜೊತೆಗೆ ಬೆಳೆದು ಬಂದಿದೆ. ಹಲವಾರು ಹೋರಾಟಗಳು ನಡೆಯುತ್ತಿದೆ. ಆದರೆ ನಮ್ಮನ್ನಾಳುವ ಸರಕಾರಗಳ ತಪ್ಪು ನೀತಿಗಳಿಂದಾಗಿ ಇಂದಿಗೂ ಶಿಕ್ಷಣ ಪ್ರತಿಯೊಬ್ಬರಿಗೂ ಸಿಗಲು ಸಾಧ್ಯವಾಗಿಲ್ಲ. ನಮ್ಮ ಇಡೀ ಶಿಕ್ಷಣ ವ್ಯವಸ್ಥೆ ಹಲವಾರು ಲೋಪ ದೊಷಗಲಿಂದ ಕೂಡಿದೆ. ಶಿಕ್ಷಣ ವ್ಯವಸ್ಥೆಯ ಲೋಪ ದೋಷಗಳನ್ನು ಸರಿಪಡಿಸುವುದು ಸಪಕಾರದ ಕರ್ತವ್ಯ ಕೂಡ ಆಗಿದೆ.


ಇಂದು ನಮ್ಮ ಶಿಕ್ಷಣದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಹಲವಾರು ಲೋಪ ದೋಷಗಳಿವೆ.

ಶಾಲಾ ಪೂರ್ವ ಶಿಕ್ಷಣ:
ಮಕ್ಕಳಲ್ಲಿ ಉತ್ತಮ ಜ್ನಾನ ಬೆಳೆದು ಬರುವಲ್ಲಿ ಶಾಲಾ ಪೂರ್ವ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಂದು ನಮ್ಮಲ್ಲಿ ಶಾಲಾ ಪೂರ್ವ ಶಿಕ್ಷಣ ನೀಡುವ ಅಂಗನವಾಡಿ ಕೇಂದ್ರಗಳು, ಸೂಕ್ತ ಸೌಲಭ್ಯಗಳಿಂದ ವಂಚಿತರಾಗಿರುವುದನ್ನು ಕಾಣಬಹುದು. ಇಲ್ಲಿ ಪಾಠ ಮಾಡುವ ಶಿಕ್ಷಕಿಯರಿಗೆ ಸರಿಯಾಗಿ ವೇತನ ಸಿಗದೆ ಅವರು ಪರದಾಡುವ ಸ್ಥಿತಿ ಇದೆ. ಅಲ್ಲದೆ ಪೌಷ್ಟಿಕ ಆಹಾರಗಳು ಕೂಡ ಸರಿಯಾದ ಸಮಯಕ್ಕೆ ಸರಬರಾಜು ಆಗುತ್ತಿಲ್ಲ. ಕೆಲವು ಸಂದರ್ಭದಲ್ಲಿ ಕಳಪೆ ಆಹಾರಗಳು ಪೂರೈಕೆಯಾಗುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ಶಾಲಾ ಪೂರ್ವ ಶಿಕ್ಷಣವೇ ಸರಿಯಾಗಿಲ್ಲ.
ಇದರ ಪರಿಣಾಮವಾಗಿ ಹಾಗೂ ಜಾಗತಿಕ ಕಾರಣದಿಂದಾಗಿ ನಮ್ಮ ಜನತೆಯಲ್ಲಿ ಇಂಗ್ಲಿಷ್ ವ್ಯಾಮೋಹ ಹೆಚ್ಚಾಗುತ್ತಿರುವ ಕಾರಣದಿಂದಾಗಿ LKG,UKG, BABY SITTING ಮುಂತಾದುವುಗಳು ಪ್ರಾರಂಭವಾಗಿದೆ. ಇಲ್ಲಿ ಲಕ್ಷಾಂತರ ರುಪಾಯಿಗಳನ್ನು ಪ್ರವೇಶ ಶುಲ್ಕವಾಗಿ ಪಡೆಯಲಾಗುತ್ತಿದೆ. ಇಲ್ಲಿ ಮಕ್ಕಳಿಗೆ ಒಂದು ಮೌಲ್ಯಯುತ ಶಿಕ್ಷಣ ಸಿಗಲು ಸಾಧ್ಯವಿಲ್ಲ. ಇದು ಕೇವಲ ಹಣ ಮಾಡುವ ಕೇಂದ್ರಗಳಾಗಿವೆ.

ಶಾಲಾ ಶಿಕ್ಷಣ: 
ಶಾಲಾ ಶಿಕ್ಷಣದಲ್ಲಿ ಸರಕಾರಿ ಶಾಲೆಗಳು ಮುಖ್ಯವಾಗಿದೆ. ಆದರೆ ಇಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ನಮ್ಮ ದೇಶದ ಸರಕಾರಿ ಶಾಲೆಗಳು ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ನಮ್ಮ ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ ಹೆಚ್ಚಿನ ಸರಕಾರಿ ಶಾಲೆಗಳು ವಿಧ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತದಲ್ಲಿದೆ. ಈ ಶಾಲೆಗಳಲ್ಲಿ ಸರಿಯಾದ ಸೌಕರ್ಯಗಳಿಲ್ಲದ ಕಾರಣ ವಿಧ್ಯಾರ್ಥಿಗಳು ಖಾಸಗೀ ಶಾಲೆಗಳನ್ನು ಅವಲಂಭಿಸುವ ಪರಿಸ್ಥಿತಿ ಇದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗಳಿವೆ. ಸರಿಯಾದ ಸಮಯಕ್ಕೆ ಪಠ್ಯ ಪುಸ್ತಕಗಳು, ಸಮವಸ್ತ್ರಗಳು ಪೂರೈಕೆಯಾಗುತ್ತಿಲ್ಲ. ಸರಕಾರಗಳ ನೀತಿ ಕೂಡ ಖಾಸಗಿಗಳ ಪರ ಇರುವುದರಿಂದ, ಸರಕಾರಿ ಶಾಲೆಗಳು ಈ ರೀತಿ ರೋಗಗ್ರಸ್ತವಾಗಲು ಕಾರಣವಾಗಿದೆ.

ಇನ್ನೊಂದೆಡೆ ಆಂಗ್ಲ ಮಾಧ್ಯಮ ಶಾಲೆಗಳು ನಾಯಿ ಕೊಡೆಗಳಂತೆ ತಲೆಯೆತ್ತಿದೆ. ಇಲ್ಲಿ ಲಕ್ಷಗಟ್ಟಲೆ ಡೊನೇಶನ್ ವಸೂಲಿ ಮಾಡಲಾಗುತ್ತದೆ. ಇವುಗಳು ಶಿಕ್ಷಣ ನೀಡುವುದರ ಬದಲು ಕೇವಲ ಹಣ ಮಾಡುವ ವ್ಯಾಪಾರಿ ಕೇಂದ್ರಗಳಾಗಿದೆ. ಹೆಚ್ಚಿನ ಆಂಗ್ಲ ಮಾಧ್ಯಮ ಶಾಲೆಗಳ ಶಿಕ್ಷಕರು ಸರಿಯಾದ ವಿದ್ಯಾರ್ಹತೆ ಪಡೆದಿರುವುದಿಲ್ಲ. ಕನಿಷ್ಟ ದ್ವಿತೀಯ ಪಿ.ಯು.ಸಿ ಓದಿದವರನ್ನು ಇಲ್ಲಿ ಶಿಕ್ಷಕರಾಗಿ ನೇಮಿಸಿರುವುದನ್ನು ಕಾಣ ಬಹುದು. ಇಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗುವುದರ ಬದಲು ಕೇವಲ ಸರ್ಟಿಫಿಕೇಟ್ ಗಾಗಿ ಮಾತ್ರ ಶಿಕ್ಷಣ ಎನ್ನುವಂತ್ತಾಗಿದೆ. ಸರಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ: ಕಳೆದೆರಡು ವರ್ಷಗಳ ಹಿಂದೆ ನಮ್ಮ ಸರಕಾರವು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದಾಗ ಒಂದು ರೀತಿಯಲ್ಲಿ ಬಡವರ ಮಕ್ಕಳು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯಬಹುದು ಎಂಬ ಸಂಭ್ರಮ ಉಂಟಾಗಿತ್ತು. ಆದರೆ ಎರಡು ವರ್ಷಗಳಲ್ಲಿ, ಮುಖ್ಯವಾಗಿ ಕರ್ನಾಟಕ ರಾಜ್ಯದ ಬೆಳವಣಿಗೆಯನ್ನು ಗಮನಿಸಿದರೆ ಈ ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಸರಕಾರವೆ ಹಿಂದೇಟು ಹಾಕುತ್ತದೆ. ಖಾಸಗಿ ಶಾಲೆಗಳಲ್ಲಿ ೨೫% ಬಡ ಮಕ್ಕಳಿಗೆ ಪ್ರವೇಶ ನೀಡಬೇಕಾಗಿದ್ದರೂ ಖಾಸಗಿ ಶಾಲೆಗಳು ಪ್ರವೇಶ ನೀಡಲು ಹಿಂದೇಟು ಹಾಕುತ್ತಿದೆ. ಇಲ್ಲಿ ಖಾಸಗಿ ಶಿಕ್ಶಣ ಸಂಸ್ಥೆಗಳಿಗೆ ನಿಯಂತ್ರಣ ಹಾಕಲು ಜಿಲ್ಲಧಿಕಾರಿಗಳ ಅಧ್ಯಕ್ಷತೆಯಲ್ಲಿ ಪ್ರತೀ ಜಿಲ್ಲೆಗೂ ಇರಬೇಕಾದ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ ನಿಷ್ಕ್ರೀಯವಾಗಿದೆ. ಈ ಕಾರಣದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಎಗ್ಗಿಲ್ಲದೆ ಹಣ ಮಾಡುವಲ್ಲಿ ಯಶಸ್ವಿಯಾಗಿದೆ.

ಬಿಸಿಯೂಟ ಯೋಜನೆಯಲ್ಲೂ ಹಲವಾರು ಲೋಪ ದೋಷಗಳು :
ಕರ್ನಾಟಕದಲ್ಲಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಎಸ್.ಎಮ್.ಕ್ರಷ್ಣ ಸರಕಾರ ಇದ್ದಾಗ ಜಾರಿಗೊಳಿಸಿದ್ದು, ಇದರಿಂದಾಗಿ ಬಡ ವಿಧ್ಯಾರ್ಥಿಗಳು ಶಾಲೆಗಳತ್ತ ಮುಖ ಮಾಡಲು ಸಾಧ್ಯ್ವಾವಾಗಿದೆ. ಆದರೆ ಸರಕಾರದ ತಪ್ಪು ನೀತಿಗಳಿಂದಾಗಿ ಬಿಸಿಯೂಟದ ಯೋಜನೆಯು ಖಾಸಗಿ ಸ್ವಯಂ ಸಂಸ್ಥೆಗಳ ಪಾಲಾಗುವ ಸಂದರ್ಭ ಬಂದಿದೆ. ಈಗಾಗಲೇ ಪಟ್ಟಣ ಪ್ರದೇಶಗಳಲ್ಲಿ ಸ್ವಯಂಸೇವಾ ಸಂಸ್ಥೆಗಳಿಗೆ ಬಿಸಿಯೂಟದ ನಿರ್ವಹಣೆ ನೀಡಲಾಗಿದೆ. ಬಿಸಿಯೂಟವನ್ನು ಖಾಸಗಿಯವರಿಗೆ ವಹಿಸಿದರೆ ಪೌಷ್ಟಿಕಾಂಶವುಳ್ಳ ಆಹಾರವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಳಪೆ ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಿ ಹಣ ಮಾಡುವ ಉದ್ದೇಶ ಕೂಡ ಸ್ವಯಂ ಸಂಸ್ಥೆಗಳಿಗಿರುತ್ತದೆ. ಇದರಿಂದಾಗಿ ಬಡ ಮಕ್ಕಳ ಪಾಲಿಗಂತೂ ತೊಂದರೆಯಾಗಿದೆ.

ಪದವಿ ಪೂರ್ವ ಶಿಕ್ಷಣ 
ಪದವಿ ಪೂರ್ವ ಶಿಕ್ಷಣ ಕೂಡ ಹಲವಾರು ದೋಶಗಳಿಂದ ಕೂಡಿದ್ದು ಗುಣಮಟ್ಟದ ಮೌಲ್ಯಯುತ ಶಿಕ್ಷಣ ಮರಿಚೀಕೆಯಾಗಿದೆ. ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನೇ ಗಮನಿಸಿದರೆ ಸರಕಾರಿ ಪದವಿ ಪೂರ್ವ ಕಾಲೇಜುಗಳು ಬೆರಳೆಣಿಕೆಯಷ್ಟಿದೆ. ಇರುವ ಕಾಲೇಜುಗಳು ಕೂಡ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಎಲ್ಲಾ ವಿಷಯಗಳಿಗೆ ಬೇಕಾದ ಉಪನ್ಯಾಸಕರ ಕೊರತೆ ಇದೆ. ವಿಜ್ನಾನ ವಿಭಾಗವಂತು ಹೆಚ್ಚಿನ ಕಡೆ ಇಲ್ಲ. ಇದ್ದರೂ ಅದಕ್ಕೆ ಬೇಕಾದ ಪ್ರಯೋಗಲಯದ ವ್ಯವಸ್ಥೆ ಇರುವುದಿಲ್ಲ. ಈ ಎಲ್ಲಾ ಕಾರುಗಳಿಂದ ಬಡ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಮರಿಚೀಕೆಯಾಗಿದೆ. ಇದಲ್ಲದೆ ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಪಿ ಯು ಕಾಲೇಜುಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿದ್ದು ಇಲ್ಲಿ ಲಕ್ಷಗಟ್ಟಲೆ ಡೊನೇಶನ್ ವಸೂಲು ಮಾಡುವ ಮೂಲಕ ಶಿಕ್ಷಣವನ್ನು ಮರಾಟದ ವಸ್ತುವನ್ನಾಗಿ ಮಾಡಲಾಗಿದೆ
ಇದಲ್ಲದೆ ಕಳೆದ ವರ್ಷದಿಂದ ವಿಜ್ನಾನ ವಿಭಾಗಕ್ಕೆ CBSC ಪಠ್ಯಕ್ರಮವನ್ನು ಹೇರಿರುವುದರಿಂದ ವಿದ್ಯಾರ್ಥಿಗಳ ಮೇಲೆ ಮತ್ತು ಉಪನ್ಯಾಸಕರ ಮೇಲೆ ಹೆಚ್ಚಿನ ಹೊರೆ ಉಂಟಾಗಿದೆ. ಸರಕಾರಗಳಉ ಶಿಕ್ಷಣ ಇಲಾಖೆಗಳ ತಪ್ಪುಗಳಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ
ಪದವಿ ಶಿಕ್ಷಣ:
ಪದವಿ ಶಿಕ್ಷಣದಲ್ಲಿ ಪದವಿ ಕಾಲೇಜುಗಳು ಹೆಚ್ಚಿನ ಕಡೆ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳನ್ನು ಅವಲಂಬಿಸ ಬೇಕಾಗಿದೆ. ಬಡ ವಿದ್ಯಾರ್ಥಿಗಳು ಖಾಸಗಿ ಕಾಲೇಜುಗಳಲ್ಲಿ ಡೊನೇಶನ್ ನಿಡಲಾಗದೆ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಇದೆ. ಉಪನ್ಯಾಸಕರು ಕೂಡ ಎಲ್ಲಾ ವಿಷಯಕ್ಕೆ ಇರುವುದಿಲ್ಲ. ಅತಿಥಿ ಉಪನ್ಯಾಸಕರ ನೇಮಕದಿಂದಾಗಿ ಅವರಿಗೆ ಸರಿಯಾದ ವೇತನ ಸಿಗದ ಕಾರಣ ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಲಭ್ಯರಾಗುತ್ತಿಲ್ಲ.
ಪದವಿ ಕಾಲೇಜುಗಳು ಹೆಚ್ಚಿನವು ವಿಶ್ವ ವಿದ್ಯಾಲಯಗಳ ವ್ಯಾಪ್ತಿಯೊಳಗೆ ಇರುತ್ತದೆ. ಇದರ ಮದ್ಯೆ ಕೆಲವು ಸ್ವಯತ್ತ ಕಾಲೇಜುಗಳಿವೆ. ಇದರ ಜೊತೆಗೆ ವಿಶ್ವ ವಿದ್ಯಾಲಯಗಳ ವೇಳಾ ಪಟ್ಟಿಗಳು ಬೇರೆ ಬೇರೆ ರೀತಿ ಇರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ವಿಧ್ಯಾಬ್ಯಾಸಕ್ಕೆ ತೊಂದರೆ ಆಗುತ್ತದೆ. ಉದಾಹರಣೆಗೆ: ಕರ್ನಾಟಕದಲ್ಲಿ ಹಲವಾರು ವಿಶ್ವ ವಿದ್ಯಾಲಯಗಳಿದ್ದು, ಇವುಗಳಲ್ಲಿ ಪರೀಕ್ಷೆಗಳ ವೇಳಾ ಪಟ್ಟಿ ಬೇರೆ ಬೇರೆ ಇದೆ. ಇದರಿಂದಾಗಿ ವಿದ್ಯಾರ್ಥಿಗಳು ಪದವಿ ಮುಗಿಸಿ ಮುಂದಿನ ಕೋರ್ಸ್ ಗೆ ಪ್ರವೇಶ ಪಡೆಯಬೇಕಾರೆ ಕೆಲವೊಂದು ದಾಖಲಾತಿ ಮುಗಿದಿರುತ್ತದೆ. ಸೂಕ್ತ ಸಮಯಕ್ಕೆ ಪರೀಕ್ಷಾ ಫಲಿತಾಂಶಗಳು ಬಾರದೆ, ಅಂಕಪಟ್ಟಿಗಳು ಕೂಡಾ ಸಿಗದೆ ಇರುವ ಪರಿಸ್ಥಿತಿ ಕೂಡಾ ಇದೆ.
ಸೆಮಿಸ್ಟರ್ ಪದ್ದತಿ:
ಇತ್ತೀಚಿನ ಕೆಲವು ವರ್ಷಗಳಿಂದ ಪದವಿಯಿಂದ ಸೆಮಿಸ್ಟರ್ ಪದ್ದತಿ ಜಾರಿ ಗೊಳಿಸಿದ ಕಾರಣ ವಿದ್ಯಾರ್ಥಿಗಳು ಹೆಚ್ಚಿನ ಹೊರೆಯನ್ನು ಹೊರುವಂತಾಗಿದೆ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ವಿಪರೀತ ಪರೀಕ್ಷಾ ಶುಲ್ಕಗಳು, ಮರುಮೌಲ್ಯ ಮಾಪನಾ ಶುಲ್ಕಗಳ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ನೀಡಲಾಗುತ್ತದೆ. ಒಮ್ಮೆ ಒಂದು ವಿಷಯದಲ್ಲಿ ಅನುತ್ತೀರ್ಣನಾದರೆ ಮುಂದಿನ ಪರೀಕ್ಷೆಗೆ ಒಂದು ವರ್ಷ ಕಾಯಬೇಕಾದ ಪರಿಸ್ಥಿತಿ ಇದೆ. ಇದು ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ವಿಶ್ವ ವಿದ್ಯಾಲಯಗಳಲ್ಲಿನ ಲೋಪ ದೋಷಗಳು:
ಇಂದು ವಿಶ್ವ ವಿದ್ಯಾಲಯಗಳಲ್ಲಿ ಕೂಡ ಸರಿಯಾದ ಶಿಕ್ಷಣ ಸಿಗುವುದು ಕನಸಿನ ಮಾತಾಗಿದೆ. ಹಣವುಲ್ಲವರಿಗೆ ಮಾತ್ರ ವಿಶ್ವ ವಿದ್ಯಾಲಯ ಪ್ರವೇಶ ಎನ್ನುವಂತಾಗಿದೆ. ಇಂದು ವಿಶ್ವ ವಿದ್ಯಾಲಯಗಳಲ್ಲಿ ವ್ಯಾಪಕ ಭ್ರಷ್ತಾಚಾರ, ಜಾತಿವಾದಗಳು ತಾಂಡವವಾಡುತ್ತಿದೆ. ಸೂಕ್ತ ಅಧ್ಯಯನ ಸಮಾಗ್ರಿಗಳಿಲ್ಲದೆ ಕೇವಲ ಅಂಕ ಪಟ್ಟಿಗೋಸ್ಕರ ವಿಶ್ವ ವಿದ್ಯಾಲಯಗಳು ಇದೆ ಎನ್ನುವಂತಾಗಿದೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನವಿಲ್ಲದೆ ಸೊರಗುತ್ತಿದೆ.
ಖಾಸಗಿ ವಿವಿಗಳ ಸ್ಥಾಪನೆ:
ನಮ್ಮ ದೇಶಕ್ಕೆ ಖಾಸಗಿ ವಿವಿಗಳು ಮತ್ತು ವಿದೇಶಿ ವಿವಿಗಳಿಗೆ ಅವಕಾಶ ನೀಡಲಾಗಿದೆ. ಈ ಖಾಸಗಿ ಮತ್ತು ವಿದೇಶಿ ವಿವಿಗಳ ಪ್ರವೆಶದಿಂದಾಗಿ ಉನ್ನತ ಶಿಕ್ಷಣವು ಮಹತ್ವವನ್ನೇ ಕಳೆದು ಕೊಳ್ಳುವಂತಾಗಿದೆ. ಹಣವುಳ್ಳವರಿಗೆ ಪದವಿಯನ್ನು ಖರೀದಿ ಮಾಡುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ವಿವಿಗಳಿಗೆ ಸರಕಾರ ಯಾವುದೇ ಹಸ್ತಕ್ಷೇಪ ಮಾಡುವಂತಿಲ್ಲ.ಇದರ ಕುಲಪತಿಗಳು ಕೂಡ ಖಾಸಗಿ ವ್ಯಕ್ತಿಗಳಾಗಿರುತ್ತಾರೆ. ಇಲ್ಲಿ ವಿದ್ಯಾರ್ಥಿಗಳಿಗೂ ಕೂಡ ಪೆರ್ಶ್ನಿಸುವ ಹಕ್ಕು ಇರುವುದಿಲ್ಲ. ಈ ಎಲ್ಲ ಕಾರಣಗಳಿಂದ ಈ ಖಾಸಗೀ ಮತ್ಥು ವಿದೇಶಿ ವಿವಿಗಳು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಬಹಳ ಅಪಾಯಕಾರಿಯಾಗಿದೆ.
ವ್ರತ್ತಿ ಶಿಕ್ಷಣದಲ್ಲಿನ ಲೋಪಗಳು:
ವ್ರತ್ತಿ ಶಿಕ್ಷಣಕ್ಕೆ ಸಂಬಂಧಿಸಿ ಇಂದು ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಗಮನಿಸುವುದಾದರೆ, ಬೆರಳೆಣಿಕೆಯ ಸರಕಾರಿ ಕಾಲೇಜುಗಳಿವೆ. ಇದರಿಂದಾಗಿ ಸಾಕಷ್ಟು ಖಾಸಗಿ ಕಾಲೇಜುಗಳು ತಲೆಯೆತ್ತಿವೆ. ಇಲ್ಲಿನ ಡೊನೇಶನ್ ಗಳಿಂದಾಗಿ ಇಂದು ಬಡ ವಿದ್ಯಾರ್ಥಿಗಳಿಗೆ ವ್ರತ್ತಿ ಶಿಕ್ಷಣವೆನ್ನುವುದು ಕನಸಿನ ಮಾತಾಗಿದೆ. ITI ಮತ್ತು DIPLOMA ಗಳಿಗೆ ಸರಿಯಾದ ಸರ್ಕಾರದ ಸಹಾಯವಿಲ್ಲದೆ ಅತಂತ್ರ ಸ್ಥಿತಿಯಲ್ಲಿದೆ. ಇಂಜಿನಿಯರಿಂಗ್ ಸಂಪೂರ್ಣ ಖಾಸಗಿಯವರ ಹಿಡಿತದಲ್ಲಿದ್ದು ಮರಾಟದ ಸರಕಾಗಿದೆ. ವೈದಕೀಯ ಶಿಕ್ಷಣ ಕೂಡಾ ಸಂಪೂರ್ಣವಾಗಿ ಸರಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಖಾಸಗಿ ವೈದಕೀಯ ಕಾಲೇಜುಗಳಲ್ಲಿ ಹಣವಿಲ್ಲದವರು ಮುಖ ಮಾಡುವ ಪರಿಸ್ಥಿತಿಯೇ ಇಲ್ಲ. ಬೇಕಾ ಬಿಟ್ಟಿ ಡೊನೇಶನ್ ವಸೂಲಿ ಮಾಡಿದರೂ ಸರಕಾರಗಳು ಈ ಬಗ್ಗೆ ಯಾವುದೇ ಕ್ರಮ ಕೈಗೋಳ್ಳುತ್ತಿಲ್ಲ. ಸರಕಾರಗಳ ಖಾಸಗಿಯವರ ಪರವಾದ ನೀತಿಗಳಿಂದ ಈ ವ್ರತ್ತಿ ಶಿಕ್ಷಣವೆನ್ನುವುದು ಬಡವರಿಗೆ ಕನಸಿನ ಮಾತಾಗಿದೆ.
ಸಕಾಲಕ್ಕೆ ಸಿಗದ ವಿದ್ಯಾರ್ಥಿ ವೇತನಗಳು:
ಆರ್ಥಿಕವಾಗಿ ಹಾಗೂ ಸಮಾಜಿಕವಾಗಿ ಹಿಂದುಳಿದವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಸಿಗುವ ವಿವಿಧ ವಿದ್ಯಾರ್ಥಿ ವೇತನಗಳು ಇಂದು ಸಮರ್ಪಕವಾಗಿ ಸಿಗುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇನ್ನೂರು, ಮುನ್ನೂರು ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಇದೆ. ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ವಿದ್ಯಾರ್ಥಿ ವೇತನ ಸಿಗುವುದಿಲ್ಲ. ಕೆಲವೊಂದು ವಿದ್ಯಾರ್ಥಿ ವೇತನಗಳನ್ನು ನಿಲ್ಲಿಸಲಾಗಿದೆ. ಈ ಹಿಂದೆ ವಿದ್ಯಾರ್ಥಿಗಳಿಗೆ ಬೋದನಾ ಶುಲ್ಕವನ್ನು ಸರಕಾರವೆ ಭರಿಸುತಿತ್ತು. ಆದರೆ ಕಳೆದ ಅವದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಆಳ್ವಿಕೆಯಲ್ಲಿದ್ದ ಬಿ.ಜೆ.ಪಿ ಸರಕಾರ ಇದನ್ನು ನಿಲ್ಲಿಸಿದೆ. ಕಾಂಗ್ರೆಸ್ ಸರಕಾರ ಕೂಡ ಇದನ್ನು ಪ್ರಾರಂಭಿಸಿಲ್ಲ. ಇದರಿಂದಾಗಿ ಹಲವಾರು ಬಡ ವಿದ್ಯಾರ್ಥಿಗಳು ಶಿಕ್ಷಣವನ್ನು ಮೊಟಕುಗೊಳಿಸುವಂತಾಗಿದೆ.
ಹಾಸ್ಟೆಲ್ ಗಳಲ್ಲಿನ ಸಮಸ್ಯೆಗಳು:
ಇಂದು ಕರ್ನಾಟಕ ಹಾಸ್ಟೆಲ್ ಗಳಲ್ಲಿನ ಪರಿಸ್ಥಿತಿಯನ್ನೇ ಗಮನಿಸಿದರೆ ಮುಖ್ಯವಾಗಿ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಗಳು ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲ್ಲಖೆಯ ಹಾಸ್ಟೆಲ್ ಗಳಿವೆ. ಎಲ್ಲಾ ಹಾಸ್ಟೆಲ್ ಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಹಾಸ್ಟೆಲ್ ಗಳಲ್ಲಿ ಪೌಷ್ಟಿಕ ಅಹಾರಗಳು ಕೂಡ ಸಿಗುತ್ತಿಲ್ಲ. ಆಹಾರಕ್ಕೆ ಬೇಕಾದ ಹಣವನ್ನು ಒದಗಿಸುವಲ್ಲಿ ಸರಕಾರಗಳು ವಿಫಲವಾಗಿದೆ. ಇದಲ್ಲದೆ ಅಧ್ಯಯನ ಸಮಾಗ್ರಿಗಳು, ದಿನ ಪತ್ರಿಕೆ, ಕಂಪ್ಯೂಟರ್ ಇದ್ಯಾವ ಸೌಲಭ್ಯವೂ ಹಾಸ್ಟೆಲ್ ಗಳಿಗೆ ಇಲ್ಲದ ಕಾರಣ ಹಾಸ್ಟೆಲ್ ವಿದ್ಯಾರ್ಥಿಗಳ ಬದುಕು ಅತಂತ್ರವಾಗಿದೆ.
ಶಿಕ್ಷಣಕೆ ಹಣಕಾಸು ಕಡಿತ:
ನಿರಂತರವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಹಣಕಾಸು ಒದಗಿಸುವಲ್ಲಿ ವಿಫಲವಾಗುತ್ತಿದೆ. 1964 ರಲ್ಲಿ ಕೊಠಾರಿ ಅಯೋಗವು ಕೇಂದ್ರ ಬಜ್ಜೆಟ್ ನಲ್ಲಿ ಶೇ 10% ಹಾಗೂ ರಾಜ್ಯ ಬಜ್ಜೆಟ್ ನಲ್ಲಿ 30% ಹಣವನ್ನು ಮೀಸಲಿಡ ಬೇಕು ಎಂದು ಶಿಫಾರಸ್ಸು ನೀಡಿತ್ತು. ಆದರೆ ಸರಕಾರಗಳು ಇದನ್ನು ನಿರ್ಲಕ್ಷಿಸುತ್ತಿವೆ. ಸರಕಾರಗಳು ಬಜ್ಜೆಟ್ ನಲ್ಲಿ ಶಿಕ್ಶಣಕ್ಕೆ ಬೇಕಾದಷ್ಟು ಹಣವನ್ನು ಮೀಸಲಿಡದ ಕಾರಣ ಸರಕಾರಿ ಶಿಕ್ಷಣ ಸಂಸ್ಥೆಗಳು ಸೌಲಭ್ಯಗಳಿಂದ ವಂಚಿತವಾಗಲು ಕಾರಣವಾಗಿದೆ.
ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳಿಗೆ ತಡೆ:
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಮಗೆ ಬೇಕಾದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಗುಲಾಮರಂತೆ ಮಾಡಿ ರಾಜಕೀಯ, ಸಮಾಜಿಕ ಚಂತನೆಗಳನ್ನು ಬೆಳೆಸೆದಂತೆ ಮಾಡಲಾಗಿದೆ. ತಮಗೆ ಎಂತಹಾ ಶಿಕ್ಷಣ ಬೇಕು ಎನ್ನುವುದನ್ನು ತಿಳಿದು ಕೊಳ್ಳುವಂತಹ ಸಾಮಾನ್ಯ ಜ್ನಾನ ಕೂಡ ವಿದ್ಯಾರ್ಥಿಗಳಲ್ಲಿ ಇಲ್ಲವಾಗಿದೆ. ತಮ್ಮ ಹಕ್ಕುಗಳಿಗೋಸ್ಕರ ಪ್ರತಿಭಟಿಸುವ ಹಕ್ಕುಗಳನ್ನೇ ನಿರಾಕರಿಸಲಾಗಿದೆ. ಇದರ್ ಜೊತೆಗೆ ಕರ್ನಾಟಕದಲ್ಲಿ ವಿದ್ಯಾರ್ಥಿ ಸಂಘಗಳಿಗೆ ನಡೆಯುವ ಚುನಾವಣೆಗಳನ್ನೇ ನಿರಾಕರಿಸಲಾಗಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆದರೆ ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ನೆ, ಪ್ರಶ್ನಿಸುವ ಮನೋಭಾವ ಉಂಟಾಗಿ ಕಾಲೇಜುಗಳಲ್ಲಿ, ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಪ್ರತಿಭಟಿಸಲು ಸಾಧ್ಯವಿತ್ತು. ಆದರೆ ಸರಕಾರಗಳು ಖಾಸಗಿ ಶಿಕ್ಶಣ ಸಂಸ್ಥೆಗಳ ಮತ್ತು ಬಂಡವಾಳ ಶಾಹಿಗಳ ಹಿಡಿತದಲ್ಲಿ ಇರುವ ಕಾರಣ ವಿದ್ಯಾರ್ಥಿಗಳ ದ್ವನಿಯನ್ನು ಅಡಗಿಸಿ ತನ್ನ ಬೇಳೆ ಬೇಯಿಸುವಲ್ಲಿ ನಿರತವಾಗಿದೆ.

ಈ ರೀತಿಯಲ್ಲಿ ಇಂದು ಎಲ್ಲಾ ವಿಧದಲ್ಲೂ ಶಿಕ್ಷಣವು ಹಲವಾರು ಲೋಪ ದೋಶಗಳಿಂದ ಕೂಡಿದೆ. ವಿದ್ಯಾರ್ಥಿಗಳು ಬೌದ್ಧಿಕವಾಗಿ ಬೆಳವಣಿಗೆ ಹೊಂದಿ ಈ ದೇಶಕ್ಕೆ ಕೊಡುಗೆ ನೀಡ ಬೇಕಾದರೆ ಅವರಿಗೆ ಸರಿಯಾದ ಶಿಕ್ಷಣ ಸಿಗಬೇಕು. ಆದರೆ ಇಂದಿನ ನಮ್ಮ ಈ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಲ್ಲಿ ಯಾವುದೇ ಬೆಳವಣಿಗೆಗಳು ಆಲೋಚನೆಗಳು, ಪ್ರಶ್ನಿಸುವ ಮನೋಭಾವ ಬೆಳೆಯುತ್ತಿಲ್ಲ. ಈ ಪರಿಸ್ಥಿತಿಯ ಲಾಭ ಪಡೆದು ಕೊಂಡು ಕೋಮುವಾದಿಗಳು, ವಿಛ್ಹಿದ್ದಕಾರಿ ಶಕ್ತಿಗಳು ವಿದ್ಯಾರ್ಥಿಗಳ ತಲೆಗೆ ಧರ್ಮದ ವಿಷ ಬೀಜ ಬಿತ್ತುವ ಮೂಲಕ ದ್ವೇಶದ ಮನೋಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಹೆಚ್ಚಿನ ಶಿಕ್ಷಣ ಪಡೆದವರೇ ಹಲವಾರು ಕ್ರಿಮಿನಲ್ ಗಳಾಗಿರುವುದನ್ನು ಕಾಣಬಹುದು. ಇದಕ್ಕೆಲ್ಲಾ ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣವಾಗಿದೆ.
ನಮ್ಮ ಶಿಕ್ಷಣವು ಸಂಪೂರ್ಣವಾಗಿ ಬದಲಾಗ ಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರವು ಹಲವಾರು ಕ್ರಮ ಕೈಗೊಳ್ಳ ಬೇಕಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಸರಿಯಾದ ಗುಣಮಟ್ಟದ ಶಿಕ್ಷಣ ನೀಡಬೇಕು. ಆಗ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆಗಳಾಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಭಯದ ವಾತಾವರಣ ನಿರ್ಮಾಣ ಮಾಡದೆ ಆತ್ಮಿಯವಾಗಿ ನಡೆಸಿಕೊಂಡು ತಿಳುವಳಿಕೆ ನೀಡಬೇಕಾಗಿದೆ. ಇದಲ್ಲದೆ ಎಲ್ಲಾರೂ ಸರಕಾರಿ ಶಾಲೆಗಳಲ್ಲಿಯೆ ಶಿಕ್ಷಣ ಪಡೆಯುವಂತಾಗ ಬೇಕು. ಇದಕ್ಕಾಗಿ ಸರಕಾರವು ಸರಕಾರಿ ಶಾಲೆಗಳಿಗೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.

ಇಂದು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಖಾಸಗಿ ಆಂಗ್ಲ ಮಾದ್ಯಮ ಶಾಲೆಗಳನ್ನು ನಿಯಂತ್ರಿಸ ಬೇಕು.ಶಿಕ್ಷಣವು ಹಣ ಕೊಟ್ಟು ಖರೀದಿಸುವ ಸಾಧನವಾಗ ಬಾರದು. ಉತ್ತಮವಾದ ಮೌಲ್ಯಯುತ ಜೀವನ ನಡೆಸಲು ಹಾಗೂ ದೇಶಕ್ಕೆ ಕೊಡುಗೆ ನೀಡಲು ಸಹಕಾರಿಯಾಗಬೇಕು. ಪಕ್ಷೇತರ ಚಟುವಟಿಕೆಗಲಿಗೆ ಕೂಡ ಪ್ರೊತ್ಸಾಹ ಕೊಡಬೇಕು. ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಡ್ಡಾಯವಾಗಿ ಸರಕರ ಒದಗಿಸಬೇಕು. ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಬೆಳೆಸಲು ಗ್ರಂಥಾಲಯ ವ್ಯವಸ್ಥೆ ಇರಬೇಕು. ಇಲ್ಲಿ ದಿನ ಪತ್ರಿಕೆಗಳು, ಇತರ ಎಲ್ಲಾ ಪುಸ್ತಕಗಳು ಸಿಗಬೇಕು. ವಿದ್ಯಾರ್ಥಿಗಳಲ್ಲಿ ದಿನ ನಿತ್ಯಾ ನಡೆಯುವ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳುವಳಿಕೆ ಬರಬೇಕು.
# ಪ್ರಾಥಮಿಕ ಹಂತದಿಂದ ಪಿ.ಯು.ಸಿ ತನಕವಾದರೂ ಶಿಕ್ಷಣ ಉಚಿತವಾಗಿ ಸಿಗಬೇಕು. ಇದರಿಂದ ಬಡ ಹಾಗೂ ಹಿಂದುಳಿದ ಮಕ್ಕಳು ಪಿಯುಸಿ ತನಕವಾದರೂ ಶಿಕ್ಷಣ ಪಡೆಯಬಹುದು. ಸರಕಾರಿ ಕಾಲೇಜುಗಳಿಗೆ ಡೊನೇಶನ್ ವಸೂಲಿ ಸಂಪೂರ್ಣ ನಿಷೇದಿಸಬೇಕು.
# ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿಯಂತ್ರಣ ಹೇರಬೇಕು. ಇಂದು ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿಕೊಡೆಗಳಂತೆ ತಲೆಯೆತ್ತಿದೆ. ಬೇಬಿ ಸಿಟ್ಟಿಂಗ್ ನಿಂದ ಹಿಡಿದು ಉನ್ನತ ಶಿಕ್ಷಣ್ದವರೆಗೆ ಬೇಕಾಬಿಟ್ಟಿ ಡೊನೇಶನ್ ಮಾಡಲಾಗುತ್ತಿದೆ. ಇದಕ್ಕೆ ಸರಕಾರ ನಿಯಂತ್ರಣ ಹೇರಬೇಕು.
# R.T.I ಕಾಯಿದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಸರಕಾರ ಮುಂದಾಗಬೇಕು.
# ಕಾಯಿದೆಯ ಪ್ರಕಾರ ಖಾಸಗಿ ಶಿಕ್ಷಣ ಸಂಥೆಗಳು 100 ರಲ್ಲಿ 25% ಸೀಟನ್ನು ಬಡ ವಿದ್ಯಾರ್ಥಿಗಳಿಗೆ ನೀಡಬೇಕು. ಆದರೆ ಇದು ಯಶಸ್ವಿಯಾಗಿಲ್ಲ. ಈ ಬಗ್ಗೆ ಸರಕಾರ ಗಮನ ಹರಿಸಿ R.T.I ಕಾಯ್ದೆ ಅನುಷ್ಟಾನವಾಗುವಂತೆ ಕ್ರಮ ಕೈಗೊಳ್ಳಬೇಕುಶಾಲಾ ಕಾಲೇಜುಗಳಿಗೆ ಖಾಯಂ ಶಿಕ್ಷಕರ, ಉಪನ್ಯಾಸಕರ ನೇಮಕವಾಗಬೇಕು. ಶಾಲಾ ಕಾಲೇಜುಗಳ್ಳಲ್ಲಿ ಇಂದು ಹೊರಗುತ್ತಿಗೆ ನೇಮಕಾತಿ ನಡೆಯುತ್ತಿದೆ. ಶಿಕ್ಷಕರು, ಕಂಪ್ಯೂಟರ್ ಶಿಕ್ಷಕರು, ಮೊರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರು, ಉಪನ್ಯಾಸಕರು, ಹಾಸ್ಟೆಲ್ ವಾರ್ಡನ್, ಇತರ ಸಿಬಂದಿಗಳನ್ನು ಗುತ್ತಿಗೆ ಮತ್ತು ಅರೆ ಗುತ್ತಿಗೆ ಅದಾರದಲ್ಲಿ ನೇಮಕ ಮಾಡಲಾಗುತ್ತಿದೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗುತ್ತಿದೆ. ಅತಿಥಿ ಶಿಕ್ಷಕರನ್ನು, ಉಪನ್ಯಾಸಕರನ್ನು ಒಂದು ವರ್ಷಕ್ಕೆ ಕೆಲವು ಸ್ವಯಂ ಸೇವ ಸಂಥೆಗಳ ಮೂಲಕ ನೇಮಕ ಮಾಡಲಾಗುತ್ತದೆ. ಈ ಸಂಸ್ಥೆಗಳು ಅವರಿಗೆ ಸರಿಯಾದ ವೇತನ ನೀಡದೆ ವಂಚಿಸಿದ ಸಾಕಷ್ಟು ಉದಾಹರಣೆಗಳಿವೆ. ಸಾಕಷ್ಟು ಖರ್ಚು ಮಾಡಿ ಉನ್ನತ ಶಿಕ್ಷಣ ಪಡೆದವರು ಬೀದಿ ಪಾಲಾಗುತ್ತಿದ್ದಾರೆ. ಈ ಎಲ್ಲದರ ಪರಿಣಾಮವನ್ನು ವಿದ್ಯಾರ್ಥಿಗಳು ಎದುರಿಸುವಂತಾಗಿದೆ.
# ಅವೈಜ್ನಾನಿಕ ಸೆಮಿಸ್ಟರ್ ಪದ್ದತಿ ಕೈ ಬಿಡಬೇಕು. ಮತ್ತು ವಿಶ್ವ ವಿದ್ಯಾಲಯಗಳಲ್ಲಿ ನಡೆಯುವ ಭ್ರಷ್ಟಾಚಾರವನ್ನು ಮಟ್ಟ ಹಾಕಬೇಕು.ಇಮ್ದಿನ ಅವೈಜ್ನಾನಿಕ ಸೆಮಿಸ್ಟರ್ ಪದ್ದತಿಯಿಂದ ವಿದ್ಯಾರ್ಥಿಗಳು ಯಾವುದೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಹೊರೆಯನ್ನು ಅನುಭವಿಸುಂತಾಗಿದೆ. ಈ ಬಗ್ಗೆ ಸರಕಾರವು ಶಿಕ್ಷಣ ತಜ್ನರೊಂದಿಗೆ ಚರ್ಚಿಸಿ, ಅಭಿಪ್ರಾಯ ಸಂಗ್ರಹಿಸಿ ಸರಿಯಾದ ಕ್ರಮ ಕೈಗೊಳ್ಳಬೇಕು.
# ವಿಶ್ವ ವಿದ್ಯಾಲಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಕ್ರಮಗಳನ್ನು ತಡೆಗಟ್ಟಿ ಪ್ರಾಮಾಣಿಕ ವ್ಯಕ್ತಿಗಳನ್ನು ಉನ್ನತ ಹುದ್ದೆಗೇರುವಂತೆ ಮಾಡಲು ಸರಕಾರ ಕ್ರಮ ಕೈಗೊಳ್ಳಬೇಕು.
ವಿದ್ಯಾರ್ಥಿ ಸಂಘದ ಚುಣಾವಣೆ ನಡೆಯಬೇಕು:
ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಟನೆಗಳಿಗೆ ಚುನಾವಣೆ ನಡೆದರೆ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ರಾಜಕೀಯ, ಸಮಾಜಿಕ ತಿಳುವಳಿಕೆ ಬರುತ್ತದೆ. ಹಾಗೂ ಸಮಸ್ಯೆಗಳ ಬಗ್ಗೆ ದ್ವನಿಯೆತ್ತಲು ಸಾಧ್ಯವಾಗುತ್ತದೆ. ಇದರ ಜೊತೆಗೆ ಶಾಲಾ ಕಾಲೇಜು ವಿ.ವಿ ಗಳಲ್ಲಿ ನಡೆಯುವ ಎಲ್ಲ ಚರ್ಚೆಗಳು ತೀರ್ಮಾನಗಳಲ್ಲಿ ವಿದ್ಯಾರ್ಥಿ ಪ್ರತಿನಿದಿಗಳು ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಬೆಕು. ಈ ಬಗ್ಗೆ ಸರಕಾರ ಕ್ರಮ ಕೈಗೊಂಡರೆ ಶಿಕ್ಷಣದಲ್ಲಿನ ಲೋಪದೋಷಗಳನ್ನು ಕೆಲವು ಮಟ್ಟೀಗಾದರೂ ಸರಿಪಡಿಸಲು ಸಾಧ್ಯವಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಹಣ ಮೀಸಲಿಡಬೇಕು. ಈಗ ಸರಕಾರಗಳು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ, ಮಠಗಳಿಗೆ ಹಣದ ಹೊಳೆಯನ್ನೇ ಹರಿಸುತ್ತಿದೆ. ಇದನ್ನು ನಿಲ್ಲಿಸಬೆಕು.
ಪಠ್ಯ ಪುಸ್ತಕದಲ್ಲಿ ಜನಪರ ಮತ್ತು ವೈಜ್ನಾನಿಕ ಚಿಂತನೆಗಳಿರಬೇಕು. 
ನಮ್ಮನ್ನಾಳುವ ಸರಕಾರಗಳು ಪಠ್ಯ ಪುಸ್ತಕಗಳಲ್ಲಿ ಜಾತ್ಯಾತೀತ ವಿರೋಧಿ, ಸಂವಿಧಾನ ವಿರೋಧಿಯಾಗಿರುವ ಕೆಲವು ವಿಷಯಗಳನ್ನು ಪ್ರಕಟಿಸಲು ಮುಂದಾಗಿದೆ. ಈ ದೇಶದ ನಿಜವಾದ ಇತಿಹಾಸವನ್ನು ತಿರುಚಿ ತಮಗೆ ಬೇಕಾದಂತೆ ಪ್ರಕಟಿಸುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ.ಪಠ್ಯದಲ್ಲಿ ಭಗದ್ಗೀತೆ ಕಡ್ಡಾಯ, ಜ್ಯೋತಿಷ್ಯ, ಯೋಗ ಸಮಾಜಕ್ಕೆ ಯಾವುದೇ ಕೊಡುಗೆ ನೀಡದ ಪಠ್ಯಗಳನ್ನು ಕೈ ಬಿಟ್ಟು ಈ ದೇಶದ ನಿಜವಾದ ಇತಿಹಾಸ, ಜಾತ್ಯಾತೀತತೆಗೆ, ವೈಚಾರಿಕತೆಗೆ ಕೊಡುಗೆ ನೀಡುವಂತಹ ಪಠ್ಯಕ್ರಮ ರೂಪಿಸಿದರೆ ವಿದ್ಯಾರ್ಥಿಗಳಿಗೆ ಬೌದ್ಧಿಕವಾಗಿ ಬೆಳವಣಿಗೆಗೆ ಸಾಧ್ಯವಾಗುತ್ತದೆ. ಹಾಗೂ ಶಿಕ್ಶಣದಲ್ಲಿ ಸ್ವಲ್ಪವಾದರೂ ಸುಧಾರಣೆಗಳು ಬೆಳೆದು ಬರಲು ಸಾಧ್ಯವಾಗುತ್ತದೆ.
ಹಾಸ್ಟೆಲ್ ವ್ಯವಸ್ಥೆಯನ್ನು ಬಲ ಪಡಿಸಬೇಕು ಮತ್ತು ವಿದ್ಯಾರ್ಥಿ ವೇತನವನ್ನು ಸೂಕ್ತ ಸಮಯಕ್ಕೆ ನೀಡಬೇಕು:
ಹೆಚ್ಚಿನ ಬಡ ವಿದ್ಯಾರ್ಥಿಗಳು, ಹಳ್ಳಿ ಪ್ರದೇಶದ ವಿದ್ಯಾರ್ಥಿಗಳು ಹಾಸ್ಟೆಲ್ ಗಳನ್ನು ಅವಲಂಬಿಸಿದ್ದಾರೆ. ಆದರೆ ಸರಕಾರಗಳು ಹಾಸ್ಟೆಲ್ ಗಳಿಗೆ ಸರಿಯಾದ ಪ್ರೊತ್ಸಾಹ ನೀಡದ ಕಾರಣ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ.
ಸರಕಾರವು ಹಾಸ್ಟೆಲ್ ಗಳಿಗೆ ಬೇಕಾದ ಸಮಾಗ್ರಿಗಳನ್ನು, ಮೂಲಭೂತ ಸೌಕರ್ಯಗಳನ್ನು ಹಾಗೂ ಪೌಷ್ಟಿಕಾಂಶವುಲ್ಲ ಆಹಾರವನ್ನು ಒದಗಿಸಬೇಕು. ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಸೂಕ್ತ ಸಮಯಕ್ಕೆ ವಿದ್ಯಾರ್ಥಿ ವೇತನ ಸಿಗುವಂತಾಗಬೇಕು.
ಖಾಸಗಿ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳನ್ನು ಬಲಪಡಿಸ ಬೆಕು:
ಸರಕಾರಿ ವಿಶ್ವ ವಿದ್ಯಾಲಯಗಳು ಸೂಕ್ತ ಸೌಲಭ್ಯಗಳಿಲ್ಲದೆ ಸೊರಗುತ್ತಿವೆ. ಪ್ರವೇಶ ಶುಲ್ಕ ಏರಿಕೆ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಈ ಮಧ್ಯೆ ಸರಕಾರಗಳು ಖಾಸಗಿ ವಿಶ್ವ ವಿದ್ಯಾಲಯಗಳಿಗೆ ಮತ್ತು ವಿದೇಶಿ ವಿಶ್ವ ವಿದ್ಯಾಲಯಗಳಿಗೆ ಅನುಮತಿ ನೀಡಿದೆ. ಖಾಸಗಿ ವಿಶ್ವ ವಿದ್ಯಾಲಗಳಿಗೆ ಅನುಮತಿ ನೀಡಿದ ನಂತರ ಸರಕಾರಕ್ಕೆ ಅದರ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡಲು ಅವಕಾಶವಿಲ್ಲದ ಕಾರಣ ವಿದ್ಯಾರ್ಥಿಗಳಿಂದ ಬೇಕಾಬಿಟ್ಟಿ ಡೋನೇಶನ್ ವಸೂಲಿ ಮಾಡುವ ಅಪಾಯವಿದೆ.
ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು:
ಇಂದಿನ ಈ ಅವೈಜ್ನಾನಿಕವಾದ ಶಿಕ್ಷಣ ನೀತಿಗಳಿಂದಗಿ ವಿದ್ಯಾರ್ಥಿಗಳಿಗೆ ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಜಾಗತೀಕರಣದ ದಾಳಿಯಿಂದ ಗ್ರಾಮೀಣ ಕ್ರೀಡೆ, ಸಾಂಸ್ಕ್ರತಿಕ ಚಟುವಟಿಕೆಗಳು ಮರೆಯಾಗುತ್ತಿವೆ. ವಿದ್ಯಾರ್ಥಿಗಳ ಪ್ರತಿಬೆಗಳು ನಶಿಸುತ್ತಿದೆ. ಇದಕ್ಕಾಗಿ ಸರಕಾರಗಳು ಕ್ರೀಡೆ ಹಾಗು ಸಾಂಸ್ಕ್ರತಿಕ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವಂತಹಾ ಕಾರ್ಯಕ್ರಮಗಳನ್ನು ಜಾರಿಗೋಳಿಸಬೇಕು. ಶಾಲಾ ಕಾಲೇಜುಗಳಲ್ಲಿ ಕ್ರೀಡೆಗೆ ಬೇಕಾದ ಸಮಾಗ್ರಿಗಳನ್ನು, ಸೂಕ್ತ ತರಬೇತುದಾರರನ್ನು ಕೂಡಾ ನೇಮಿಸಬೇಕು. ಒಟ್ಟಿನಲ್ಲಿ ನಮ್ಮ ದೇಶ ಜಾಗತೀಕರಣ, ಉದಾರಿಕರಣ, ಖಾಸಗೀಕರಣದ ಪ್ರಭಾವದಿಂದಾಗಿ ನಮ್ಮ ಶಿಕ್ಷಣ ವ್ಯವಸ್ಥೆಯ ಮೌಲ್ಯವನ್ನು ಕಳೆದುಕೋಂಡು ಕೇವಲ ಉದ್ಯೋಗ ಪಡೆಯಲು ಶಿಕ್ಷಣ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದು ಕಡೆ ಶಿಕ್ಷಣ ಪಡೆದವರು ಉದ್ಯೋಗವಿಲ್ಲದೆ ನಿರುದ್ಯೋಗಿಗಳಾಗಿ ಪರದಾಡುವಂತಾಗಿದೆ.ನಮ್ಮನ್ನಾಳುವ ಸರಕಾರಗಳನ್ನು ಬಂಡವಾಳಶಾಹಿಗಳು ನಿಯಂತ್ರಿಸುವ ಕಾರಣದಿಂದಾಗಿ ಸರಕಾರಗಳಿಗೆ ಸರಿಯಾದ ಶಿಕ್ಷಣ ನೀಡುವಂತಹ ಯೊಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಸರಕಾರಗಳು ಈಗ ಇರುವ ಶಿಕ್ಷಣ ನೀತಿಗಳನ್ನು ಬದಲಾಯಿಸಿ, ಶಿಕ್ಷಣಕ್ಕೆ ಸರಿಯಾದ ಪ್ರೊತ್ಸಾಹ್, ಯೋಜನೆಗಳ್ಳನ್ನು ಕೈಗೊಂಡರೆ ಖಂಡಿತವಾಗಿಯೂ ನಮ್ಮ ಶಿಕ್ಷಣ ವ್ಯವಸ್ತೆಯಲ್ಲಿ ಸುಧಾರಣೆ ಕಾಣಬಹುದು.

ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ಮುಂದೆ ಅವರು ಈ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ಯಶಸ್ವಿಯಾಗಿ ಪಾಲ್ಗೊಳ್ಳಬೇಕಾದರೆ ಜನರಿಗೆ ಉತ್ತಮ ಶಿಕ್ಷಣ ಸಿಗಬೇಕು. ಜನರು ವಿದ್ಯಾವಂತರಾದರೆ ಮಾತ್ರ ಈ ದೇಶಕ್ಕೆ ಒಂದು ಉತ್ತಮ ಆಡಳಿತ ಸಿಗಲು ಸಾಧ್ಯ. ಇದಕ್ಕಾಗಿ ಸರಕಾರಗಳು ಶಿಕ್ಷಣದಲ್ಲಿನ ಸುಧಾರಣೆಗೆ ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ಪ್ರತಿಯೊಬ್ಬರೂ ಆಲೋಚಿಸುವುದು ಇಂದಿನ ಅಗತ್ಯವಾಗಿದೆ


***** ನನ್ನ ಧ್ವಜ *****


ಗೆಳೆಯರೇ..
.
ನಾವು ದಿನನಿತ್ಯ ನೋಡುತ್ತಿರುವ ಹಾಗೂ ಅದರ ಬಗ್ಗೆ ಗಮನ ಹರಿಸದ ಒಂದು ವಿಚಾರದತ್ತ ಬೆಳಕು ಚೆಲ್ಲಲು ಬಯಸುತ್ತಿದ್ದೇನೆ.
ನಮ್ಮಲ್ಲಿ ಹೆಚ್ಚಿನ ಜನರು ಯಾವುದಾದರೂ ಒಂದು ಧ್ವಜದ ಹಿಂಬಾಲಕರಾಗಿದ್ದಾರೆ. ಕೆಲವರು ಕೇಸರಿ ಧ್ವಜದ ಹಿಂದೆ ಇದ್ದರೆ, ಇನ್ನೂ ಕೆಲವರು ಹಸಿರು ಧ್ವಜದ ಹಿಂದೆ ಇರುವರು. ಇನ್ನು ಕೆಲವರು ನೀಲಿ ಬಿಳಿ, ಕೆಂಪು ಹೀಗೆ ಬಣ್ಣದ ಬಣ್ಣದ ಧ್ವಜಗಳ ಹಿಂದಿದ್ದಾರೆ. ನಿಜವಾಗಿಯೂ ಅವರವರ ಧ್ವಜಜಗಳ ಮೇಲೆ ಅವರಿಗೆ ಅಭಿಮಾನವಿದೆಯೇ....? ಅಥವಾ ತಮ್ಮ ಗುಂಪಿನ ಧ್ವಜ ಕಟ್ಟಿ ಅಹಂನಿಂದ ಬೀಗುವ ದರ್ಪವೇ...?

ನಮ್ಮಲ್ಲಿ ಅದರಲ್ಲಿ ವಿಷೇಶವಾಗಿ ಕರಾವಳಿ ಭಾಗದಲ್ಲಂತೂ ಧ್ವಜ ಹಾಗೂ ಪತಾಕೆಗಳದ್ದೇ ಕಾರುಬಾರು. ಯಾವುದಾದರೂ ಸಂಘಟನೆ ಯಾ ಸಂಸ್ಥೆಗಳ ಕಾರ್ಯಕ್ರಮವಿದ್ದರೆ ಧ್ವಜಗಳು, ಪತಾಕೆಗಳು ಆ ಕಾರ್ಯಕ್ರಮದ ಅವಿಭಾಜ್ಯ ವಸ್ತುವಾಗಿದೆ. ಪೇಟೆ, ಬೀದಿ, ಗಲ್ಲಿ, ಕೇರಿಗಳಲ್ಲಿ ದ್ವಜ,ಪತಾಕೆ, ಬ್ಯಾನರ್ ಹಾಕದಿದ್ದರೆ ಆ ಕಾರ್ಯಕ್ರಮ ಏನೊ ಕಡಿಮೆಯಾದಂತೆ ಭಾವಿಸುತ್ತಾರೆ. ಊಟಕ್ಕೆ ಉಪ್ಪು ಹಾಕದ ಹಾಗೆ ಸಪ್ಪೆ ಸಪ್ಪೆ ಎಂದು ಭಾವಿಸುಷ್ಟು ಮಟ್ಟಿಗೆ ಬೆಳೆದಿದೆ. ಈ ಮದ್ಯೆ ಯಾರಾದರೂ ಆ ಬ್ಯಾನರ್, ದ್ವಜಗಳಿಗೆ ಹಾನಿಯುಂಟು ಮಾಡಿದರಂತೂ ಕೇಳುವುದೇ ಬೇಡ. ಹಾನಿ ಮಾಡಿದವರನ್ನು ಹೊಡೆದು ಸಾಯಿಸುವಷ್ಟು ಅಂಧಾಭಿಮಾನ ಹೊಂದಿರುತ್ತಾರೆ. ಇವುಗಳಿಂದಾಗಿ ಎಷ್ಟೋ ಕೋಮು ಗಲಭೆಗಳು ಕೂಡ ಸಂಭವಿಸಿದೆ.
ನಿಜವಾಗಿಯೂ ಅವರವರ ಧ್ವಜಗಳ ಮೇಲೆ ಅವರವರಿಗೆ ಅಭಿಮಾನವಿದೆಯೇ...? 


ಏಕೆಂದರೆ... ಇಂತಹಾ ಧ್ವಜ, ಪತಾಕೆಗಳನ್ನು ಕಟ್ಟುವಾಗ ಇರುವಂತಹ ಅಭಿಮಾನ, ಹುಮ್ಮಸ್ಸು ಆಯಾ ಕಾರ್ಯಕ್ರಮ ಮುಗಿದ ನಂತರ ಎಲ್ಲಿ ಹೋಗುತ್ತೊ ತಿಳಿಯುತ್ತಿಲ್ಲ. ಅಂತಹಾ ಅಭಿಮಾನ ಧ್ವಜ ಪತಾಕೆಗಳು ಅಲ್ಲೆ ಹಲವು ದಿನಗಳವರೆಗೆ ಹಾರಾಡುತ್ತಾ, ದೂಳು ಮೆತ್ತಿಕೊಂಡು, ಯಾರ್ಯಾರ ಕಾಲಿನಡಿಗೆ ಬಿದ್ದು ಹರಿ ಹಂಚಿ ಹೋಗುವಾಗ ಯಾರ ಕಣ್ಣಿಗೂ ಕಾಣುವುದೇ ಇಲ್ಲ. ಮೊದಲಿನ ಅಭಿಮಾನ ಎಲ್ಲಿ ಸತ್ತು ಹೋಗುತ್ತೋ...? ಒಂದು ಬ್ಯಾನರ್ ಅಥವಾ ಧ್ವಜಕ್ಕಾಗಿ ಯಾರನ್ನೂ ಕೊಲೆ ಮಾಡಲು ಹಿಂಜರಿಯದ ಅಭಿಮಾನ ಕಾರ್ಯಕ್ರಮದ ನಂತರ ಟಾರ್ಚ್ ಹಿಡಿದು ಹುಡುಕಿದರೂ ಸಿಗಾಕಿಲ್ಲಾ... ಅಂತಹಾ ಅಭಿಮಾನ ಇದ್ದರೆಷ್ಟು, ಬಿಟ್ಟರೆಷ್ಟು...?

ಯಾವುದಾದರೂ ಗ್ರೂಪಿನ ಕಾರ್ಯಕ್ರಮದ ಬ್ಯಾನರ್ ಅಥವಾ ಧ್ವಜಕ್ಕೆ ಹಾನಿಯಾದರೆ ಅದೆಷ್ಟು ಪ್ರತಿಭಟನೆಗಳಾಗುತ್ತವೆ, ಪ್ರೆಸ್ ಕಾನ್ಫರೆನ್ಸ್ ಗಳಾಗುತ್ತವೆ. ಧಾಂದಲೆಗಳಗುತ್ತವೆ. ಊರಿಗೆ ಊರೇ ಹೊತ್ತಿ ಉರಿಯುವ ವಿಷಯಗಳು ದಿನನಿತ್ಯ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಆದರೇ ಅಂತಹಾ ದ್ವಜ ಪತಾಕೆಗಳು ಮಣ್ಣು ಮೆತ್ತಿ ಹರಿ ಹಂಚಿ ಮೂರಾ ಬಟ್ಟೆಯಾದರೂ ಕೇಳುವವರಿಲ್ಲಾ. ಅವುಗಳನ್ನು ಮೂಕ ಪ್ರಾಣಿಗಳು ತಿಂದು ಆರೋಗ್ಯ ಕೆಡಿಸಿ ಕೊಳ್ಳುತ್ತವೆ. ಆದರೆ ನಾವುಗಳು ಅದರ ಬಗ್ಗೆ ತಲೆ ಕೆಡಿಸಿ ಕೊಳ್ಳೋದೆ ಇಲ್ಲ. ಹರಿದು ಹೋದ ಧ್ವಜಗಳಿಂದ ನಮ್ಮ ಪೇಟೆ, ಪರಿಸರದ ಅಂದವೂ ಕೆಡುತ್ತದೆ. ಇಂತಹ ತೋರ್ಪಡಿಕೆಯ ಕಾರ್ಯಗಳ ಅಗತ್ಯವಿದೆಯೆ ?



ಇಂತಹಾ ಧ್ವಜದ ಹಿಂದೆ ಓಡುವುದರ ಬದಲು ನಮ್ಮ ಆತ್ಮ ಸಮ್ಮಾನವಾದ ತ್ರಿವರ್ಣ ಧ್ವಜವೊಂದನ್ನೇ ಎತ್ತಿ ಹಿಡಿಯುವ ಬಗ್ಗೆ ಯಾತಕ್ಕಗಿ ಚಿಂತಿಸುವುದಿಲ್ಲಾ??? ಕೇವಲ ಆಗಷ್ಟ್ 15 ರಂದು ಮಾತ್ರ ತ್ರಿವರ್ಣ ಧ್ವಜದ ನೆನಪಾಗುವುದೇ ?
ಎಲ್ಲಾ ಧ್ವಜಗಳನ್ನು ಬದಿಗೊತ್ತಿ, ಆ ಧ್ವಜ ಈ ಧ್ವಜವೆಂದು ಬಡಿದಾಡಿ ಕೊಳ್ಳುವ ಬದಲು ಕೇವಲ ತ್ರಿವರ್ಣ ಧ್ವಜವೊಂದನ್ನೆ ನಮ್ಮ ಹ್ರದಯದಲ್ಲಿ ಅಚ್ಚಿಳಿಸಲು ಸಾಧ್ಯವಿಲ್ಲವೆ?


ಅಂತಹಾ ದಿನಕ್ಕಾಗಿ ಹಾತೊರೆಯುತ್ತಿರುವ
ನಿಮ್ಮವನೇ ಆದ
ಮುಖ್ತಾರ್ ಉಚ್ಚಿಲ