ಭಾನುವಾರ, ನವೆಂಬರ್ 9, 2014

ಭಾರತ



ಕಸ ಮುಕ್ತ ಭಾರತ ನನ್ನ ಕನಸು
ಅದು ಯಶಸ್ವಿಯಾಗುವುದೋ ಗೊತ್ತಿಲ್ಲ
ಆದರೂ ಹೊಸ ನಿರೀಕ್ಷೆ ಬಿಟ್ಟಿಲ್ಲ...


ದ್ವೇಷ ಮುಕ್ತ ಭಾರತ ಕೂಡ ನನ್ನ ಕನಸು
ಅದು ನನಸಾಗುವುದೋ ಗೊತ್ತಿಲ್ಲ
ಆದರೂ ಪ್ರೀತಿ ಹಂಚೋದ ಬಿಟ್ಟಿಲ್ಲ...

- ದೇಶಪ್ರೇಮಿ.


https://www.facebook.com/BlueWavesPage

***** ಬದುಕು *****



ಹೊಟ್ಟೆ ತುಂಬ 
ತಿನ್ನುವಾಗ 
ತಿನ್ನದವರ ಬಗ್ಗೆ 

ಚಿಂತೆಯಿರಲಿಲ್ಲ.


ಹೊಟ್ಟೆ
ಖಾಲಿಯಾದಾಗ
ತಿನ್ನುವವರ್ಯಾರು
ನನ್ನತ್ತ
ಮುಖ
ಮಾಡಲೇ ಇಲ್ಲ



https://www.facebook.com/BlueWavesPage

ಅಜ್ಞಾತ ಸಂತಸ



ಗೆಳೆಯರೇ.. ಕೆಲವೊಂದು ವಿಷಯಗಳು ನಮ್ಮ ಕಣ್ಣೆದುರು ಇದ್ದರೂ ನಮ್ಮ ಗಮನಕ್ಕೆ ಬಾರದಿರುತ್ತದೆ. ಅಂತಹದೇ ಘಟನೆ ಇವತ್ತು ನಡೆಯಿತು.

ನನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಶಾಲಾ ರಜಾ ದಿನಗಳನ್ನು ಕಳೆಯಲು ಮುರ್ಡೆಶ್ವರಕ್ಕೆ ಹೋಗಿದ್ದೆ. ಸಾಯಂಕಾಲ ಅಲ್ಲಿ ತಲುಪಿದ ನಾವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಹೋಟೆಲ್ನಲ್ಲಿ ತಂಗಿದ್ದೆವು. ಮುಂಜಾನೆ ಹೊತ್ತು ಬಾಲ್ಕನಿಯಲ್ಲಿ ಬೆಳಗ್ಗಿನ ಚಹಾ ಸವಿಯುತ್ತಿರುವಾಗ ಹೋಟೆಲಿನ ಗೇಟಿನ ಬಳಿ ಒಬ್ಳು ಹಣ್ಣು ಹಣ್ಣು ಮುದುಕಿ ಹೋಟೆಲಿನ ಗೇಟಿನ ಕಾಂಕ್ರೀಟ್ ಹಜಾರವನ್ನು ಗುಡಿಸುತ್ತಿದ್ದಳು. ಗುಡಿಸಿ ಮುಗಿದ ಕೂಡಲೇ, ಮತ್ತೊಂದು ವಾಹನ ತನ್ನ ಚಕ್ರದಲ್ಲಿ ತುಂಬಿಕೊಂಡಿದ್ದ ಮಣ್ಣನ್ನು ರಾಚಿ ಹೋಯ್ತು. ಆ ಮುದುಕಿ ತನ್ನ ಎಂದಿನ ಶ್ರದ್ದೆಯಿಂದ ಮತ್ತೆ ಮತ್ತೆ ಗುಡಿಸಿ ಮುಗುವಷ್ಟರಲ್ಲಿ ಮತ್ತೊಂದು ಕಾರು.. ಹೀಗೆ ಹಲವು ಬಾರಿ ಪುನರಾವರ್ತನೆ ಆದಾಗ ನನ್ನ ಮನಸ್ಸು ಮುಮ್ಮಲ ಮರುಗಿತು, ಅಸಹಾಯಕತೆಗಳು ದುರ್ಬಲರನ್ನೇ ಹೀಯಾಳಿಸುತ್ತವೆ ನೋಡಿ.. ಬಾಲ್ಕನಿಯಿಂದ ಇಳಿದು ಹೋಗಿ ಆ ಮುದುಕಿಯ ಕೈಗೆ 500 ರುಪಾಯಿ ನೋಟನ್ನು ಇಟ್ಟೆ. ಮುದುಕಿ ಸ್ಥಬ್ದವಾಗಿ ನಿಂತಳು. ಕ್ಷಣಾರ್ಧದಲ್ಲಿ ಕಣ್ಣಿಂದ ಜಾರಿ ಬಿದ್ದ ಹನಿಯೊಂದು ಅವಳ ಸುಕ್ಕು ಗಲ್ಲವನ್ನು ತೇವಗೊಳಿಸಿತು. ಅವಳ ಕಣ್ಣ ಹನಿಗಳು ಹೇಳಿದ ಕಥೆಗಳನ್ನು ನನ್ನಕ್ಷರಗಳು ಕಟ್ಟಿಕೊಡಲು ಸೋಲುತ್ತವೆ ಬಿಡಿ.

ಅಲ್ಲಿಂದು ಮತ್ತೆ ಹೋಟೆಲಿಗೆ ಪ್ರವೇಶಿಸುವಾಗ ದ್ವಾರದಲ್ಲೇ ಇದ್ದ ಹೋಟೆಲಿನ ಉಪಾಹಾರ ಗೃಹಕ್ಕೆ ಇನ್ನೊಂದು ಸ್ಟ್ರಾಂಗ್ ಚಾ ಕುಡಿಯಲು ಹೋದೆ, ಅಲ್ಲೊಬ್ಬ ಮುದುಕ ಉಪಹಾರ ಮಾಡಿ ಹೋದವರ ಎಂಜಲು ಪಾತ್ರವನ್ನು ಎತ್ತುತ್ತಾ, ಟೇಬಲನ್ನು ಸ್ವಚಗೊಳಿಸುತ್ತಾ ಮೌನವಾಗಿ ತನ್ನ ಕೆಲಸದಲ್ಲಿ ತಲ್ಲೀನನಾಗಿದ್ದ. ತುಂಬಾ ಯಾಂತ್ರಿಕವಾಗಿದ್ದಂತಿದ್ದ ಅವನ ಕೆಲಸದ ನಡುವೆ ಲೋಕದ ಪರಿವೆಯೇ ಅವನಿಗಿಲ್ಲದಂತಿತ್ತು ಅವನ ಮುಖ ಭಾವ. ನನಗೆ ಅವನ ಮುಖದ ತೀವ್ರ ಮೌನ ಸಹಿಸಲಾಗಲಿಲ್ಲ. ಅವನ ಕೈಗೆ 500 ರುಪಾಯಿ ನೋಟು ಇಡುವಾಗ ನನಗೂ ಮಾತು ಹೊರಡಲಿಲ್ಲ, ಅವನಿಗೂ ಮಾತು ಹೊರಡಲಿಲ್ಲ. ಮತ್ತೊಂದು ಕೈಯಲ್ಲಿ ಎತ್ತಿದ್ದ ಎಂಜಲು ಪ್ಲೇಟನ್ನು ಅಲ್ಲೇ ಬಿಟ್ಟು ದರದರನೆ ವಾಶ್ ರೂಂ ಕಡೆಗೆ ಓಡಿಹೋದ. ಸ್ವಲ್ಪ ಸಮಯದಲ್ಲಿ ಹೊರ ಬಂದ ಅವನ ಕಣ್ಣುಗಳು ಕೆಂಪಾಗಿದ್ದವು. ಅತ್ತು ಮುಖ ತೊಳೆದು ಬಂದಿದ್ದಾನೆ ಅಂತ ಸ್ಪಷ್ಟವಾಗಿ ಗೋಚರವಾಗುತ್ತಿತ್ತು. "ದೇವರಿದ್ದಾನೆ ಎಂಬುದು ಸುಳ್ಳಲ್ಲ, ನನ್ನ ಮಗನಿಗೆ ಮೈ ಹುಷಾರಿಲ್ಲ, ಆಸ್ಪತ್ರೆಗೆ ಹೋಗಲು ಹಣ ಇಲ್ಲದೆ ಅದೇ ಚಿಂತೆಯಲ್ಲಿದ್ದೆ, ಆ ದೇವರೇ ನಿಮ್ಮನ್ನು ಕಳುಹಿಸಿದ್ದು...." ಎನ್ನುತ್ತಿದ್ದವನ ಕಣ್ಣುಗಳು ಮತ್ತೂ ಹನಿಗೂಡಿದ್ದು ನನ್ನೆದೆ ನಡುಗಿಸಿತು. ಅವನ ಸ್ವರದಲ್ಲಿದ್ದ ಕಂಪನಗಳು ನನ್ನೊಳಗೂ ಹುಟ್ಟಿ ದುಃಖ ಮಿಡಿಯುತ್ತಿವೆ. ಸುಮ್ಮನೆ ಹೇಳುತ್ತಾರೆಯೇ, 'ದುಃಖವೆಂಬುದು ಸಾಮೂಹಿಕ ಸಮ್ಮೋಹಿನಿ' ಎಂದು.

ಅಲ್ಲಿಂದ ಭಾರವಾದ ಹೆಜ್ಜೆಗಳೊಂದಿಗೆ ರೂಮಿಗೆ ನಡೆದೆ. ನನ್ನ ರೂಮಿನ ಕಾರಿಡಾರನ್ನು ಸ್ವಚ್ಚಗೊಳಿಸುತ್ತಿದ್ದ 3 ಮಹಿಳೆಯರು ಎದುರಾದರು. ಅವರಿಗೂ ಏನಾದರು ಕೊಡುವ ಮನಸ್ಸಾಯಿತು. ಸಾವಿರ ರುಪಾಯಿ ನೋಟನ್ನು ಒಬ್ಬಳ ಕೈಗಿತ್ತು ನೀವು ಹಂಚಿಕೊಳ್ಳಿ ಎಂದು ಹೇಳಿ ನನ್ನ ರೂಮಿನೊಳ ಹೊಕ್ಕೆ.

ಹತ್ತು ನಿಮಿಷದ ನಂತರ ಏನೋ ಕೆಲಸದ ತರುವಾಯ ರೂಮಿಂದ ಹೊರಬಂದಾಗ ಬಾಗಿಲ ಬಳಿ ಆ ಮೂವರು ಮಹಿಳೆಯರು ಕಾಯುತ್ತಾ ನಿಂತಿದ್ದರು. ಏನಾಯ್ತು ಅಂತ ವಿಚಾರಿಸಿದಾಗ ಒಬ್ಬಳು ಮೆಲುದನಿಯಲ್ಲಿ ನಯವಾಗಿ ಹೇಳಿದಳು "ಸಾರ್ ನಾವು ಒಟ್ಟು ಹತ್ತು ಮಂದಿ ಇದ್ದೇವೆ, ಎಲ್ಲರಿಗೂ ಕೊಡಬೇಕಾ?". ನಾನು ಇನ್ನೊಂದು ಸಾವಿರವನ್ನು ಅವರ ಕೈಗಿಟ್ಟು ಎಲ್ಲರೂ ಹಂಚಿಕೊಳ್ಳಿ ಎಂದು ಹೇಳಿ ನನ್ನ ಕಾರಿನತ್ತ ಹೊರಟೆ.

ನನ್ನ ಕೆಲಸವನ್ನೆಲ್ಲಾ ಮುಗಿಸಿ ಮತ್ತೆ ಹೋಟೆಲಿಗೆ ಹಿಂದಿರುಗುವಾಗ ಆ ಮಹಿಳೆಯರ ಪೈಕಿ ಮಧ್ಯವಯಸ್ಸಿನ ಒಬ್ಬಳು ನಾನು ಬರುವುದನ್ನೇ ಕಾಯುತ್ತಾ ರೂಮಿನ ಪಕ್ಕ ನಿಂತಿದ್ದಳು.
ನನ್ನನ್ನು ಕಂಡದ್ದೇ ತಡ, ಓಡಿಬಂದು "ಸಾರ್ ನಿಮ್ಮಲ್ಲಿ ಸ್ವಲ್ಪ ಮಾತಾಡ್ಬೇಕು" ಅಂತ ಕಾರಿಡಾರಿನ ಮೂಲೆಗೆ ಕರೆದಳು. "ಹೇಳಿ ಅಕ್ಕಾ .... " ಅಂದೆ. "ಸಾರ್ ನಾನು ಬಹಳ ಕಷ್ಟದಲ್ಲಿದ್ದೇನೆ.. ನನಗೆ 6 ಮತ್ತು 8 ವರ್ಷದ ಇಬ್ರು ಮಕ್ಕಳಿದ್ದಾರೆ, ನನ್ನ ಗಂಡ ಪಾರ್ಶ್ವ ವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದಾರೆ, ಅದಕ್ಕೆ ಇಲ್ಲಿ ರೂಂ ಕ್ಲೀನಿಂಗ್ ಕೆಲಸಕ್ಕೆ ಸೇರಿಕೊಂಡಿದ್ದೇನೆ.. ಏನಾದರೂ ಸಹಾಯ ಮಾಡಿ." ಅಂತ ಒಂದೇ ಉಸಿರಿಗೆ ಹೇಳಿ ಮೌನವಾದಳು. ಮತ್ತೆ ಒಂದು ಸಾವಿರವನ್ನು ಅವರ ಕೈಗಿಟ್ಟೆ., ಥಟ್ಟನೆ ಅವರು ನನ್ನ ಕಾಲಿಗೆ ಬಿದ್ದರು. ನಾನು ಹೌಹಾರಿ ಹಿಂದೆ ಸರಿದು ಹೇಳಿದೆ"... ಅಕ್ಕಾ ನಾನೋರ್ವ ಮುಸ್ಲಿಂ.. ಯಾರ ಕಾಲಿಗೂ ಬೀಳುವುದಿಲ್ಲ , ಯಾರನ್ನೂ ನನ್ನ ಕಾಲಿಗೆ ಬೀಳಲು ಬಿಡುವುದಿಲ್ಲ.. ಏನಾದ್ರೂ ಮಾಡಬೇಕೆಂದಿದ್ದರೆ ನನಗೆ ಆಶೀರ್ವಾದ ಮಾಡಿ.." ಆ ಹೆಂಗಸಿನ ಕಣ್ಣು ತುಂಬಿ ಬಂದಿತ್ತು. "ಇಲ್ಲಿ ಎಷ್ಟೋ ಜನ ಬರುತ್ತಾರೆ, ಹೋಗುತ್ತಾರೆ, ರೂಂ ಬಾಯ್ಸ್ ಮತ್ತು ವೈಟರ್ಸಿಗೆ ಟಿಪ್ಸ್ ಕೊಡುತ್ತಾರೆ, ನಮ್ಮಂತ ಕ್ಲೀನರ್ಸ್ಗೆ ಏನಾದರು ಕೊಟ್ಟದ್ದು ನೀವೇ ಮೊದಲು, ನಿಮಗೆ ದೇವರು ಒಳ್ಳೆಯದು ಮಾಡಲಿ" ಅಂತ ಕಣ್ಣೀರಿಟ್ಟಳು. ಅವರನ್ನು ಸಮಾಧಾನಪಡಿಸಿ ರೂಮಿಗೆ ತೆರಳಿದೆ.

ರೂಮಿಗೆ ಬಂದು ಹೆಂಡತಿ ಹತ್ರ ನಡೆದ ಘಟನೆಗಳನ್ನೆಲ್ಲಾ ವಿವರಿಸಿದೆ. "ಆ ಹೆಂಗಸಿನ ವಿಳಾಸ ಪಡೆಯಿರಿ, ನಾವು ಒಂದು ದಿನ ಹೋಗಿ ಬರೋಣ, ಸಾದ್ಯವಾದರೆ ಒಂದು ತಿಂಗಳ ದಿನಸಿಯನ್ನಾದರೂ ಅವರ ಮನೆಗೆ ತಲುಪಿಸೋಣ..." ಅವಳು ಮರುಕಪಟ್ಟು ಹೇಳಿದಳು.

ಈ ಘಟನೆಯನ್ನು ನಿಮ್ಮ ಮುಂದೆ ತೆರೆದಿಟ್ಟಿದ್ದು ನಾನು ಮಾಡಿದ್ದು ಮಹಾ ಪುಣ್ಯ ಅಂತಲೋ, ನಾನು ಕೊಡುಗೈ ದಾನಿ ಅಂತ ತಿಳಿಸಲೋ ಖಂಡಿತಾ ಅಲ್ಲ ಗೆಳೆಯರೇ.. ನಾನ್ಯಾರೆಂದು ತಿಳಿಸುವ ಗೋಜಿಗೂ ನಾನು ಹೋಗುವುದಿಲ್ಲ. ಆದರೆ ನನ್ನ ಈ ಬರಹ, ಈ ಘಟನೆ ನಿಮ್ಮಲ್ಲೊಂದು ಸೂಕ್ಷ ಸಂವೇದನೆಯನ್ನು ಮೂಡಿಸಿದರೆ, ತಮ್ಮೊಳಗೊಂದು ಸ್ಪೂರ್ತಿಯ ಕಿಡಿಯನ್ನು ತುಂಬಿದರೆ ಈ ಬರಹ ಸಾರ್ಥಕ.

ನಾವು ಕುಟುಂಬ ಸಮೇತರಾಗಿ ದೂರದೂರಿಗೆ ತಿರುಗಾಡಲು ಹೋದಾಗ ನಮ್ಮವರ ಪ್ರತಿಯೊಂದು ಬೇಡಿಕೆಗಳನ್ನು ಪೂರೈಸುತ್ತೇವೆ. ಆರಾಮದಾಯಕ ಹೋಟೆಲ್ಗಳು, ಬಗೆ ಬಗೆಯ ದುಬಾರಿ ತಿನಿಸುಗಳು, ಮನರಂಜನಾ ಆಟಗಳು ಹೇಗೆ ಎಲ್ಲವನ್ನೂ... ನಮ್ಮ ಗ್ರೇಡನ್ನು ತೋರಿಸಲು ರೂಂ ಬೋಯ್ಸ್ಗೆ, ವೈಟರ್ಸ್ಗೆ ಟಿಪ್ಸ್ ಕೊಡುತ್ತೇವೆ.. ಆದರೆ ಇಂಥಹ ಕಸ ಗುಡಿಸುವವರನ್ನು, ಟೇಬಲ್ ಒರೆಸುವವರನ್ನೂ, ಹೌಸ್ ಕೀಪಿಂಗ್ ಕೆಲಸದವರನ್ನೂ ಕಂಡೂ ಕಾಣದಂತೆ ಮಾಡುತ್ತೇವೆ. ಒಪ್ಪತ್ತಿನ ಊಟಕ್ಕೆ, ಸಂಸಾರ ನಿರ್ವಹಣೆಗೆ ಕಷ್ಟಪಡುವ ಅವರನ್ನು ನಾವು ಗಮನಿಸುವುದೇ ಇಲ್ಲ. ಅವರ ಕಷ್ಟ ಕಾರ್ಪಣ್ಯಗಳನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ನಮ್ಮ ಐಶಾರಾಮಿ ಜೀವನದ ದಿನದ ಖರ್ಚಿನ ಒಂದಂಶ ಅವರಿಗೆ ಕೊಟ್ರೆ ಮರುಭೂಮಿಯಲ್ಲಿ ಒಂದು ಹನಿ ನೀರು ಸಿಕ್ಕಷ್ಟು ಸಂತಸಪಡುತ್ತಾರೆ.

ನಾವು ತಿಳಿದೂ ತಿಳಿಯದೆಯೂ ಅದೆಷ್ಟೋ ಹಣವನ್ನು ಪೋಲು ಮಾಡುತ್ತೇವೆ. ಅದರಲ್ಲಿ ಒಂದಂಶವನ್ನು ಇಂತಹವರಿಗೆ ನೀಡಿ ಅವರ ಕಷ್ಟದಲ್ಲಿ ಭಾಗಿಯಾದರೆ ನಮ್ಮ ಆ ದಿನ ಸಾರ್ಥಕ. ನಮ್ಮೊಳಗೇ ಅನೂಹ್ಯ ಸಂತಸಕ್ಕೆ ಅದು ಕಾರಣವಾಗುತ್ತದೆ. ಬನ್ನಿ ಗೆಳೆಯರೇ ಇಂಥಹ ಸಣ್ಣ ಪುಟ್ಟ ಬದಲಾವಣೆಯನ್ನು ನಮ್ಮ ಜೀವನದಲ್ಲಿ ತರೋಣ. ಮನುಷ್ಯ ಮನಸ್ಸು ಮನಸ್ಸುಗಳ ಸ್ನೇಹ ಸೇತುಗೆ ಅದು ಕಾರಣವಾಗಬಹುದು. ಕಷ್ಟದಲ್ಲಿರುವವನ ಮುಖದಲ್ಲಿ ಸಣ್ಣದೊಂದು ಸಂತಸದ ಮುಗುಳ್ನಗು ತರುವುದು ನಮ್ಮಿಂದ ಸಾಧ್ಯವಾದರೆ ಅದನ್ನು ಮೀರಿಸುವ ವಸ್ತು ಈ ಲೋಕದಲ್ಲಿ ಇರುವುದಾದರೂ ಏನು...?

ಏನಂತೀರಿ ಗೆಳೆಯರೇ...?

ಇತೀ ನಿಮ್ಮವನೇ,
ಅನಾಮಿಕ

www.facebook.com/BlueWavesPag


ಭ್ರಷ್ಟಾಚಾರಿ ಜನ ನಾಯಕರು



ನಾವು ಭ್ರಷ್ಟಾಚಾರಕ್ಕೆ ಹೊಂದಿಕೊಂಡ ರೀತಿ ನೋಡಿದ್ರೆ ಈ ದೇಶ ಉದ್ದಾರ ಆಗೋ ಲಕ್ಷಣ ಕಾಣ್ತಾ ಇಲ್ಲ . ತಮ್ಮ ಇಷ್ಟದ ನಾಯಕರು ಯಾ ಪಕ್ಷ ಮಾಡಿದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ಹಿಂಬಾಲಕರನ್ನು ನೋಡಿ ಈ ತರ ಯಾರಿಗಾದರೂ ಅನಿಸಿದರೆ ಅದು ಅವರ ತಪ್ಪಲ್ಲ .

ದೇಶದ ಉದ್ದಾರದ ಬಗ್ಗೆ ನೂರಾರು ಚರ್ಚೆಗಳನ್ನು ಮಾಡುವ ನಾವು, ಭ್ರಷ್ಟಾಚಾರಿ ಜನ ನಾಯಕರು ಮಾಡಿದ ತಪ್ಪಿಗೆ ಈ ದೇಶದ ಕಾನೂನು ಪ್ರಕಾರ ಶಿಕ್ಷೆಗೆ ಒಳಪಡಿಸುವಾಗ ವಿವೇಚನಾರಹಿತರಂತೆ ವರ್ತಿಸೋದು ಯಾಕೆ ?

ಕೆಲವರು "ಏನೋ ಆಗಬಾರದ್ದು ಆಗಿಹೋಯಿತು" ಎಂದು ಲಬೋ ಲಬೋ ಎಂದು ಬಾಯ್ಬಡಿಯೋದು ನೋಡಿದ್ರೆ ಭ್ರಷ್ಟಾಚಾರವನ್ನು ಕೂಡ ಕಾನುಬದ್ದ ಮಾಡಲು ಶ್ರಮಿಸುವ 'ಬುದ್ದಿಗೇಡಿಗಳ' ಲದ್ದಿ ಹೋರಾಟ ಅಂತ ಅನಿಸಿದರೆ ಅದು ನಮ್ಮ ತಪ್ಪಲ್ಲ .
ಗ್ರಾಮ ಪಂಚಾಯತ್ ನಿಂದ ಆರಂಬಿಸಿ ಸಂಸತ್ ನವರೆಗೆ ಹಬ್ಬಿರುವ ಈ ಭ್ರಷ್ಟ ರೋಗವನ್ನು ನಿರ್ಮೂಲನ ಮಾಡದ ಹೊರತು ದೇಶದ ಅಭಿವ್ರದ್ದಿ ಹೊಂದಲು ಸಾದ್ಯವೇ ಇಲ್ಲ ಎನ್ನುವುದು ಸೂರ್ಯ ಬೆಳಕಿನಷ್ಟೇ ಸತ್ಯ . ಸರಕಾರೀ ಇಲಾಖೆಗಳಲ್ಲಿರುವ ನೌಕರರ ಕಾರ್ಯ ಪ್ರವತ್ತಿಯಲ್ಲಿನ ವಿಳಂಬ ನೋಡಿದ್ರೆ ಯಾವುದೋ ಕಾಟಾಚಾರಕ್ಕೆ ಕೆಲಸ ಮಾಡುತ್ತಿರುವಂತೆ ಕಂಡು ಬಂದರೆ ಅಚ್ಚರಿ ಪಡಬೇಕಾಗಿಲ್ಲ .ಪ್ರಪಂಚದ ಯಾವುದೋ ಮೂಲೆಯಲ್ಲಿನ ದೇಶಗಳು ಮಾಡಿದ ಮಹತ್ ಸಾಧನೆಗಳನ್ನು ಬಣ್ಣಿಸುವ ನಾವು,ನಮ್ಮ ದೇಶದೊಳಗೆ ಅಂತಹ ಸಾಧನೆಯನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ಇಲ್ಲ .ಯಾಕೆ ಹೀಗೆ ? ಅಂತ ಗಂಭೀರವಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಯಾರೋ ಬಂದು ಉದ್ದಾರ ಮಾಡುತ್ತಾರೆ ಅನ್ನುವ ಆಲಸ್ಯ ತೊಲಗುವುದಾರೂ ಯಾವಾಗ ?


ಇನ್ನಾದರೂ ನಿದ್ದೆಯಲ್ಲಿರುವ ವಿವೇಚಿತರು ಎಚ್ಚರವಾಗಿ ಶಬ್ದ ಹೊರಡಿಸದ ಹೊರತು ಭ್ರಷ್ಟಾಚಾರದ ಸಾವು ಕನಸು ಮಾತ್ರ. ಎದ್ದೇಳಿ ಯುವಕರೇ .....ನಮ್ಮೊಳಗಿನ ಭೇದಗಳನ್ನು ಮರೆತು ಭ್ರಷ್ಟಾಚಾರವನ್ನು ಒದ್ದೋಡಿಸಿ ಸಮೃದ್ದ ದೇಶವನ್ನು ಕಟ್ಟೋಣ ಬನ್ನಿ.


https://www.facebook.com/BlueWavesPage


ಅಶ್ಲೀಲ ಸಿನಿಮಾಗಳನ್ನು ಬಹಿಷ್ಕರಿಸೋಣ

ಮಹಿಳೆಯ ಬರ್ಬರ ಅತ್ಯಾಚಾರ, ಕೊಲೆ. ಪುಟ್ಟ ಬಾಲಕಿಗೆ ಲೈಂಗಿಕ ಕಿರುಕುಳ. ತಂದೆಯಿಂದಲೇ ಮಗಳ ಅತ್ಯಾಚಾರ ಹೀಗೆ ದಿನ ಬೆಳಗ್ಗೆ ಎದ್ದು, ದಿನ ಪತ್ರಿಕೆ ತೆಗೆದು ಒದಲು ಕುಳಿತರೆ ಸಿಗುವ ಸುದ್ದಿಗಳು. ಸ್ತ್ರೀಯರಿಗೆ ಅತ್ಯಂತ ಗೌರವ ಭಾವದಿಂದ ನೋಡುವ ಭಾರತ ದೇಶದ ಇತ್ತೀಚಿನ ಚಿತ್ರಣ ನೋಡಿದರೆ ನಿಜವಾಗಲೂ ನಡುಕ ಹುಟ್ಟುತ್ತೆ. ಇವತ್ತು ನಮ್ಮ ಸಹೋದರಿಯರು, ರಾತ್ರಿ ಹೊತ್ತು ಬಿಡಿ, ಬೆಳಗ್ಗಿನ ಜಾವ ಒಂಟಿಯಾಗಿ ಹೋಗುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ತಲುಪಿದೆ. ಅದೆಷ್ಟೋ ಜೀವಗಳು ಕಾಮುಕರ ಕೈವಶವಾಗಿ ನರಕಯಾತನೆ ಅನುಭವಿಸಿದೆ. ಕೆಲವು ಘಟನೆಗಳು ಮಾಧ್ಯಮದಲ್ಲಿ ಸುದ್ದಿಯಾಗುತ್ತದೆ, ಇನ್ನು ಕೆಲವು ಸುದ್ದಿಯಿಲ್ಲದೆ ಸಮಾಧಿಯಾಗುತ್ತದೆ. ಹೇಗೆ ನಮ್ಮ ಸಮಾಜದಲ್ಲಿ ಇಂತಹ ದುಷ್ಟ ವರ್ಗ ಜನ್ಮ ತಾಳುತ್ತದೆಂದು ಅವಲೋಕನ ನಡೆಸಿದರೂ ಉತ್ತರ ಮಾತ್ರ ಶೂನ್ಯ! ಕೆಲವರಿಗೆ ಹೆಣ್ಣಿನ ಬಟ್ಟೆ, ಕಾರಣವಾದರೆ, ಇನ್ನು ಕೆಲವರಿಗೆ ಗಂಡಿನ ದೃಷ್ಟಿಕೋನ. ತಂದೆಯೇ ಮಗಳ ಅತ್ಯಾಚಾರ ನಡೆಸುವ ಕಾಲದಲ್ಲಿ ಕಾರಣಗಳ ಬೆನ್ನು ಹತ್ತುವುದು ಕಷ್ಟವೇ ಸರಿ.
ಯಾವಾಗ ಮನುಷ್ಯ ವಿವೇಕ ರಹಿತವಾಗಿ, ಮೃಗೀಯ ಸ್ವಭಾವವನ್ನು ಹೊರ ಹಾಕುತ್ತಾನೆ, ಅಂದೆ ಅವನಿಂದ ಅತ್ಯಾಚಾರದಂತಹ ದುಷ್ಕೃತ್ಯ ನಡೆಯಲು ಸಾಧ್ಯ! ಮೃಗೀಯ ವರ್ತನೆ ಪ್ರೇರಣೆಯಿಲ್ಲದೆ, ನಡೆಯುವಂತಹದಲ್ಲ ಇದರ ಹಿಂದೆ ಒಂದು ದೊಡ್ಡ ಜಾಲವಿದೆ, ಆದರೆ ನಾವು ನಮಗೆ ತಿಳಿದೋ, ತಿಳಿಯದೆಯೋ ಅದನ್ನು 'ಸೀಟಿ' ಹೊಡೆದು ಬೆಂಬಲಿಸುತ್ತ ಬಂದಿದ್ದೇವೆ. ಅತ್ಯಾಚಾರವಾದಾಗ ಬೊಬ್ಬಿಡುವ ನಾವು ಸಿನಿಮಾಗಳಲ್ಲಿ ಹೆಣ್ಣನ್ನು 'ಅಶ್ಲೀಲವಾಗಿ', ಮಾರಟದ ಸರಕಾಗಿ ತೋರಿಸುವಾಗ ಆನಂದ ಪಟ್ಟು ಸೀಟಿ ಹೊಡೆದು ಬರುವ ಮುಂಚೆ ನನ್ನ ಸಹೋದರಿಯ ಮೇಲೆ, ಆ ಸಿನಿಮಾದ ಪರಿಣಾಮ ಎನಾಗಬಹುದೆಂದು ನಾವು ಯೋಚಿಸಲೇ ಇಲ್ಲ!!
ಬ್ಲೂ ಫೀಲಂ ನಿರಂತರವಾಗಿ ಟಾಕೀಸುಗಳಲ್ಲಿ ಪ್ರದರ್ಶನಗೊಳ್ಳುತ್ತಿದ್ದರು, ಅದನ್ನು ತಡೆಯುವ ಬದಲು, ಅನ್ಯ ಗ್ರಹ ಜೀವಿಗಳಂತೆ ನಮಗೆ ಸಂಬಂಧವಿಲ್ಲದಂತೆ ವರ್ತಿಸಿ ಅತ್ಯಾಚಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದೇವೆ. ಹೆಣ್ಣು ಎಂದ ತಕ್ಷಣ ಭೋಗದ ವಸ್ತು ಎಂಬ ಮನಸ್ಥತಿಯನ್ನು ಬದಲಾಯಿಸಬೇಕಾಗಿದೆ. ಕೇವಲ ಸರಕಿನ ವ್ಯಾಪರಕ್ಕಾಗಿ ಮಹಿಳೆಯ ದೇಹವನ್ನು ಮಾರುಕಟ್ಟೆಯಾಗಿ ಬಳಸುವ ಎಲ್ಲ ಬಂಡವಾಳಶಾಹಿ ಧೋರಣೆ ವಿರುದ್ದ ಸಿಡಿದೆದ್ದು ನಿಲ್ಲಬೇಕಾಗಿದೆ.
ಆಗ ಮಾತ್ರ ಈ ಅತ್ಯಾಚಾರಕ್ಕೊಂದು ಕಡಿವಾಳ ಹಾಕಲು ಸಾಧ್ಯ, ಆದರೆ ಅದಕ್ಕಾಗಿ ನಮ್ಮೆಲ್ಲರ ಸಂಕಲ್ಪ ಮುಖ್ಯ!!
ಇನ್ನಾದರೂ, ಸಹೋದರಿ ಸೌಜನ್ಯಳಿಗಾದ ಅನ್ಯಾಯ ಯಾರೊಂದಿಗೂ ಆಗದಂತೆ ನೋಡಿಕೊಳ್ಳೋಣ..ಅಶ್ಲೀಲ ಸಿನಿಮಾಗಳ ವಿರುದ್ಧ ಧ್ವನಿ ಎತ್ತೋಣ!!
ಕಾಮುಕರ ಕಾರ್ಖಾನೆಗಳಾದ ಎಲ್ಲ ಅಶ್ಲೀಲ ಸಿನಿಮಾಗಳನ್ನು ಬಹಿಷ್ಕರಿಸೋಣ!

#voiceagainstrape www.facebook.com/bluewavespage

ಬ್ಲೂ ವೇವ್ಸ್ - ಇದು ಲೇಖನಿಯ ಶಾಯಿಯ ಸಮರದಲೆಗಳು



ಬ್ಲೂ ವೇವ್ಸ್ ಸಮಾಜದ ಎಲ್ಲಾ ಸ್ಥರದ ದನಿಗೆ ಓಗೊಟ್ಟಿದ್ದು, ನೊಂದವರ,ಮರ್ದಿತರ, ಅಸಹಾಯಕರ ಕೂಗುಗಳನ್ನು ಮುಖ್ಯಧಾರೆಗೆ ತಲುಪಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ.. ಜಾತಿ, ಮತ, ಸಂಘಟನೆ, ರಾಜಕೀಯ ಸಿದ್ಧಾಂಥಗಳ ಪ್ರಲೋಭೆಯಿಂದಾಚೆಗಿನ ನೆಮ್ಮದಿಯ ಸೌಹಾರ್ದಯುತ ಸಮಾಜದ ನಿರ್ಮಾಣ ಇದುವೇ ಬ್ಲೂ ವೇವ್ಸ್ ನ ಪ್ರಮುಖ ಧ್ಯೇಯ. ಪ್ರತಿಯೊಬ್ಬನೊಳಗೂ ಒಬ್ಬ ಲೇಖಕನಿದ್ದಾನೆ, ಅವನ ಮೌನ ಪ್ರತಿಭಟನೆಗಳು,ನೋವುಗಳು, ಪ್ರಶ್ನೆಗಳು, ಉತ್ತರಗಳು, ವಿಮರ್ಶೆಗಳು ಅಕ್ಷರವಾಗ ಬಯಸುತ್ತದೆ. ಆ ಅಕ್ಷರಗಳಿಗೆ ಇಂದಿನ ಗಾಢ ಅಂಧಕಾರವನ್ನು ನೀಗಿಸಬಲ್ಲ ಪ್ರಖರತೆ ಇರಬಹುದು. ಆ ದನಿ ನೊಂದವರಿಗೆ ಸಾಂತ್ವನವಾಗಬಲ್ಲದು. ಅನ್ಯಾಯಕ್ಕೊಳಪಟ್ಟವನಿಗೆ ನ್ಯಾಯ ತೋರಿಸಬಲ್ಲ ದಾರಿಯ ದೀವಿಗೆಯಾಗಬಹುದು. ಸಮಾಜದೊಳಿತಿಗೆ ಹರಿಯದ ಜ್ಞಾನ, ಲೇಖನಿ ಹೆಪ್ಪುಗಟ್ಟಿದ ರಕ್ತ ದ ಹಾಗೆ. "ಬ್ಲೂ ವೇವ್ಸ್" ಇಂಥಹ ಅಕ್ಷರಗಳಿಗೆ ವೇದಿಕೆಯಾಗುವ, ಅಂಥಹ ದನಿಗೆ ಮತ್ತಷ್ಟು ದನಿಗೂಡಿಸುವ ನಿಟ್ಟಿನಲ್ಲಿ ಕಾರ್ಯಗತವಾಗಿದೆ.

ಅಂದ ಹಾಗೆ ಬ್ಲೂ ವೇವ್ಸ್- ನಿನ್ನೆಯ (ಶುಕ್ರವಾರ) ಸಂಪಾದಕೀಯ ನಿರೀಕ್ಷೆಗೂ ಮೀರಿ ಚರ್ಚಿತವಾಗಿದೆ. ಸೌಜನ್ಯಾ ಸಾವಿನ ನ್ಯಾಯ ನಿರಾಕರಣೆಯ ಎರಡು ವರ್ಷಗಳ ಹಿನ್ನೆಲೆಯಲ್ಲಿ ಬ್ಲೂ ವೇವ್ಸ್ ಪ್ರಕಟಿಸಿದ ಸಾಮಾಜಿಕ ಕಳಕಳಿಯ ಸಂಪಾದಕೀಯ ಯಥಾವತ್ತಾಗಿ ಇಂದಿನ ಕರಾವಳಿ ಅಲೆಯಲ್ಲಿ ಪ್ರಕಟವಾಗಿದೆ. "ಸೌಜನ್ಯಾ" ಎಂಬುದು ಮೊಗ್ಗಿನಲ್ಲೇ ಕಾಮ ಪಿಶಾಚಿಗಳ ತೀಟೆಗೆ ಬಲಿಯಾದ ಅದೆಷ್ಟೋ ಹೆಣ್ಕುಸುಮಗಳ ಕರಾಳ ಕೂಗು. ನ್ಯಾಯ ಎಂಬುದನ್ನು ಮರೇಚಿಕೆಯಾಗಿಸಿದ ದುಷ್ಟ ವ್ಯವಸ್ಥೆಯ ವಿರುದ್ದದ್ದ ಶಕ್ತ ದ್ವನಿ. ಆ ಕೂಗಿಗೆ ಇನ್ನಷ್ಟು ದನಿಗೂಡಿಸುವ ಕೆಲಸವನ್ನು "ಬ್ಲೂ ವೇವ್ಸ್" ತನ್ನ ದೌತ್ಯವಾಗಿ ಸ್ವೀಕರಿಸಿಕೊಂಡಿದೆ. ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯೊಂದನ್ನು ಬ್ಲೂ ವೇವ್ಸ್ ತಂಡ ಮುಂದಿಟ್ಟಿದೆ. ಬನ್ನಿ ಜೊತೆಯಾಗಿ ಒಂದು ಹೋರಾಟದ ಕಹಳೆಯನ್ನು ಮೊಳಗಿಸೋಣ.. ಬರುವ ಕಾಲ ನಮ್ಮ ಈ ಮೌನವನ್ನು ಅಣಿಕಿಸಿ ಕುಹುಕವಾಡುವ ಅವಕಾಶವನ್ನು ಕೊಡದಿರೋಣ...


www.facebook.com/BlueWavesPage

#together #we #can

ನಾನು ಸೌಜನ್ಯ



ನೀವು ಮರೆತಿರಬಹುದು ನನ್ನ. ಧರ್ಮಸ್ಥಳದ ಪಾಂಗಳ ಸಮೀಪ ಇರುವ ಪುಟ್ಟ ಮನೆಯಲ್ಲಿ, ಪೋಷಕರಾದ ಚಂದ್ರಪ್ಪ ಮತ್ತು ಕುಸುಮವತಿಯ ಜೊತೆ ವಾಸವಾಗಿದ್ದೆ. ಬಡವರಾಗಿದ್ದರೂ ಕಷ್ಟಪಟ್ಟು ತುಂಬಾ ಮುದ್ದಿನಿಂದ ಸಾಕಿದ್ದರು ನನ್ನ ತಂದೆ ತಾಯಿ.
ನನ್ನಮ್ಮ ಮನೆಕೆಲಸ ಮುಗಿಸಿ ಸುಸ್ತಾಗಿ ಕೂತಾಗ ಆಕೆಯ ಮಡಿಲಲ್ಲಿ ತಲೆಇಟ್ಟು ಮಲಗಿ "ಅಮ್ಮಾ, ನಾನು ಬೇಗ ದೊಡ್ಡವಳಾಗಿ ಕಲಿತು,ಚೆನ್ನಾಗಿ ಸಂಪಾದಿಸಿ ನಿಮ್ಮನ್ನು ಚೆನ್ನಾಗಿ ನೋಡ್ಕೊಳ್ತ್ಹೇನೆ, ನಂತರ ನಿಮ್ಮಿಬ್ಬರ ಕೆಲಸಕ್ಕೆ ಸಂಪೂರ್ಣ ವಿಶ್ರಾಂತಿ ಸಿಗುತ್ತೆ,ನೆಮ್ಮದಿಯಿಂದ ಬದುಕುವ" ಎನ್ನುವ ಕನಸನ್ನು ತೋರಿಸಿದ್ದೆ.ನನ್ನ ಕನಸಿಗೆ ರೆಕ್ಕೆ ಕಟ್ಟಲು,ಉತ್ತಮ ಭವಿಷ್ಯ ರೂಪಿಸುವ ಹಂಬಲದೊಂದಿಗೆ ಉಜಿರೆಯ ಶ್ರೀ ಮಂಜುನಾಥೇಶ್ವರ ಕಾಲೇಜ್ ನ ಧ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದೆ.
ಅಕ್ಟೋಬರ್ 9, ಸಂಜೆ ನನ್ನ ತರಗತಿ ಮುಗಿಸಿ ಮನೆಯತ್ತ ಹೆಜ್ಜೆ ಇಡುತಿದ್ದೆ, 5 ರ ಸಮಯ, ಜಿನುಗುಟ್ಟುವ ಮಳೆಯಿಂದಾಗಿ ಬೇಗ ಮನೆಮುಟ್ಟುವ ಉದ್ದೇಶದಿಂದ ಸ್ವಲ್ಪ ಆತುರದಿಂದಲೇ ನಡೆಯುತ್ತಿದ್ದೆ. ಆದರೆ ಮನುಷ್ಯ ಜಾತಿಗೆ ಕಳಂಕವಾದ ಕೆಲ ದುಷ್ಟರು ತನ್ನ ನೀಚ ಕಾಮ ತೃಷೆಯನ್ನು ತೀರಿಸಲು ನನ್ನ ದೇಹವನ್ನು ಉಪಯೋಗಿಸಿದರು. ನನ್ನಲ್ಲಿದ್ದ ಅಲ್ಪ ಶಕ್ತಿಯಿಂದ ಉಸಿರಿರುವವರೆಗೂ ಹೊರಾಡಿದೆ,ನೋವಿನಿಂದ ಚೀರಾಡಿದೆ , ಕೈಮುಗಿದು ಬೇಡಿದೆ, ನನ್ನ ಧ್ವನಿ,ನನ್ನ ಕಣ್ಣೀರು,ನನ್ನ ನೋವು ಅವರ ಮನ ಕರಗಿಸಲಿಲ್ಲ, ನನ್ನ ಆತ್ಮ ನನ್ನ ದೇಹವನ್ನು ಬಿಟ್ಟು ಬಹುದೂರ ಬಂತು, ನನ್ನ ದೇಹ ಮಲಿನಗೊಂದು ಕಾಡಿನ ಪೊದೆಯಲ್ಲಿ ಬಿದ್ದಿತ್ತು.


ನನ್ನಮ್ಮಾ....... ನನ್ನಮ್ಮ ನನಗಾಗಿ ಕಾದು ,ಹೊತ್ತು ಮೀರಿ ಮನೆಗೆ ಬಾರದಾಗ ಊರವರ ಸಹಾಯದಿಂದ ಇಡೀ ರಾತ್ರಿ ಸುರಿಯುವ ಧಾರಾಕಾರ ಮಳೆಯ ನಡುವೆ ಹುಡುಕಾಡಿದರು. ಅಮ್ಮಾ ನಿನ್ನ ಕಣ್ಣೀರು ಆ ಮಳೆಯ ನೀರಿನಂತೆ ಹರಿಯುತಿತ್ತು, ಅಮ್ಮಾ..... ನಿನಗೆ ನಾ ಹೇಗೆ ತಿಳಿಸಲಿ... ನಿನ್ನ ಮಡಿಲಲ್ಲಿ ಇನ್ನೊಮ್ಮೆಮಲಗುವ, ನಿನ್ನ ಕೈ ತುತ್ತು ಉಣ್ಣುವ ಅವಕಾಶವಂಚಿತಳಾಗಿ, ಕನಸನ್ನು ನಡುನೀರಲ್ಲಿ ಬಿಟ್ಟು ಬಾರದ ಲೋಕಕ್ಕೆ ತಲುಪಿರುವೆನು .


ಮರುದಿನ ನನ್ನ ನಿರ್ಜೀವವಾದ ದೇಹವನ್ನು ನೋಡಿ, ಮರುಕ ಪಟ್ಟು ಊರು-ಪರವೂರಿನ ಸಾವಿರಾರು ಬಾಂಧವರು ನ್ಯಾಯಕ್ಕಾಗಿ ಹೋರಾಟ ಶುರುವಿಟ್ಟರು. ನಿರಂತರವಾದ ಪ್ರತಿಭಟನೆ,ಜಾಥ, ಸತ್ಯಾಗ್ರಹ, ಉಪವಾಸ,ಎಲ್ಲವೂ ನಡೆಯಿತು. ಎಲ್ಲೋ ನನ್ನ ಕೊಂದ ಪಾಪಿಗಳನ್ನು ಶಿಕ್ಷಿಸಿ ನನ್ನ ಆತ್ಮಕ್ಕೆ ಶಾಂತಿ ದೊರಕಿಸಬಹುದೆಂಬ ವಿಶ್ವಾಸ ಮೂಡಿತ್ತು.


ಆದರೆ ನನ್ನ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಪ್ರಭಾವಿಗಳ ಕೈವಾಡವಿರುವ ಕಾರಣ ನನಗೆ ನ್ಯಾಯ ಗಗನ ಕುಸುಮವಾಯಿತು. ನಮ್ಮ ಊರಿನವರಾದ, ಆಗಿನ ಮುಖ್ಯಮಂತ್ರಿ ಸದಾನಂದ ಗೌಡ,ನಂತರದ ಜಗದೀಶ್ ಶೆಟ್ಟರ್, ಹೊಸ ಮುಖ್ಯಮಂತ್ರಿ ಸಿದ್ದರಾಮಯ್ಯ,ಯಾರಿಗೂ ನನಗೆ ನ್ಯಾಯ ಕೊಡಿಸುವ ಆತುರವಿಲ್ಲ. ಸಿಬಿಐ ತನಿಖೆಯು ನೆನೆಗುದಿಗೆ ಬಿದ್ದಿದೆ.


ಯಾವ ತಪ್ಪು ಮಾಡದೆ ನಾ ಬಲಿಯಾದೆ . ನನ್ನ ತಾಯಿಯ ಕಣ್ಣೀರ ಚಿಂತೆ ಬಿಡಿ, ನಿಮ್ಮ ಲೋಕದಲ್ಲಿ ಬಡವರಿಗೆ ನ್ಯಾಯಸಿಗುವ ಭರವಸೆ ನನ್ನಲ್ಲಿ ಹೊರಟುಹೋಗಿದೆ. ನನ್ನಂತಹ ನೂರಾರು ಸಹೋದರಿಯರು ಕಳೆದ 2 ವರ್ಷದಲ್ಲಿ ವಿಕೃತರ ಕೈಯಿಂದ ನಲುಗಿ ನನ್ನ ಲೋಕ ಸೇರಿದ್ದಾರೆ. ನಮ್ಮೆಲ್ಲರ ತಾಯಂದಿರು ನಿರಂತರ ಕಣ್ಣೀರು ಸುರಿಸುತ್ತ ನೋವಿನಿಂದ ನರಳುತಿದ್ದಾರೆ . ಅವರ ಮುದ್ದಿನ ಕಂದಮ್ಮಗಳು ನಾವು,ನಮ್ಮೆಲ್ಲರ ಒಂದೇ ಒಂದು ಕೋರಿಕೆ ಇನ್ನು ಮುಂದಾದರೂ ಇಂತಹ ಕ್ರೌರ್ಯ ನಿಲ್ಲಲು ನೀವೆಲ್ಲ ಭಾರತೀಯರು ಜಾತಿ , ಮತ ಭೇದವಿಲ್ಲದೆ ರಾಜಕೀಯ ಬಿಟ್ಟು ಒಂದಾಗಿ, ಕಠಿಣವಾದ ಕಾನೂನು ಜಾರಿಗೊಳಿಸಿ.

[ i and i ]

#UNITED #WE #CAN


https://www.facebook.com/BlueWavesPage