ಬುಧವಾರ, ಡಿಸೆಂಬರ್ 31, 2014

ಬಹುಮಾನ ವಿತರಣಾ ಸಮಾರಂಭ

"ಲೇಖನಿಯ ಶಾಯಿಯ ನೀಲಿ ಅಲೆಗಳು "



ಯುವ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್ ಫೇಸ್ಬುಕ್ ಬಳಗದ ಆಯೋಜಿಸಲ್ಪಟ್ಟ ಲೇಖನ ಸ್ಪರ್ಧೆಯಲ್ಲಿ 

ವಿಜೇತರಾದ ಯುವ ಬರಹಗಾರರಿಗೆ ಬಹುಮಾನ ವಿತರಣಾ ಸಮಾರಂಭ

ಸ್ಥಳ : ಹೋಟೆಲ್ ದುರ್ಗಾ ಇಂಟರ್ನ್ಯಾಷನಲ್, ಉಡುಪಿ
ದಿನಾಂಕ : 11-01-2015


ನಮ್ಮೊಂದಿಗಿರುತ್ತಾರೆ :


ಪ್ರೊ। ಮುರಳೀಧರ ಉಪಾಧ್ಯ, ಹಿರಿಯಡ್ಕ , ಕನ್ನಡ ವಿಭಾಗದ ಮುಖ್ಯಸ್ಥರು, ಪಿ.ಪಿ.ಸಿ ಕಾಲೇಜು

ಯೋಗೇಶ್ ಮಾಸ್ಟರ್, ಸಾಹಿತಿ ಮತ್ತು ರಂಗಕರ್ಮಿ

ಡಾ।ಹಸೀನಾ ಖಾದ್ರಿ, ಇತಿಹಾಸ ಪ್ರಾಧ್ಯಾಪಕರು, ಕುವೆಂಪು ವಿಶ್ವವಿಧ್ಯಾನಿಲಯ, ಶಿವಮೊಗ್ಗ,

ಎ.ಕೆ ಕುಕ್ಕಿಲ, ಲೇಖಕರು, ಸಂಪಾದಕರು, ಸನ್ಮಾರ್ಗ ವಾರಪತ್ರಿಕೆ


ಬನ್ನಿ, ಭಾಗವಹಿಸಿ, ಪ್ರಜ್ಞಾವಂತ ಯುವ ಶಕ್ತಿಗಳ ನಿರ್ಮಾಣದ ಆಶಯವನ್ನು ಪ್ರೋತ್ಸಾಹಿಸಿ,


ತಮಗೆಲ್ಲರಿಗೂ ಆದರದ ಸ್ವಾಗತ ಬಯಸುವ,
ಟೀಮ್ ಬ್ಲೂ ವೇವ್ಸ್

ಶುಕ್ರವಾರ, ನವೆಂಬರ್ 28, 2014

ಚಿಂತಿಸಿ , ನಿರ್ಧರಿಸಿ



ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣಗಳಿಂದಾಗಿ ಜನರಿಗೆ ಪರಸ್ಪರ ವೇಗವಾಗಿ ಸಂಪರ್ಕ ಬೆಳೆಸಿಕೊಳ್ಳಲು ಸಾದ್ಯ ವಾಗುತ್ತಿದೆ. ಈ ತಾಣಗಳಿಂದ ಎಷ್ಟು ಒಳಿತೋ ಅಷ್ಟೇ ಕೆಡುಕಿನ ಅಂಶಗಳೂ ಇವೆ.ಫೇಸ್ಬುಕ್, ವಾಟ್ಸ್ಅಫ್ ನಲ್ಲಿ ಅವ್ಯಾಹತವಾಗಿ ಹರಿದು ಬರುತ್ತಿರುವ ಸುಳ್ಳು ಸಂದೇಶಗಳಿಂದ ಯುವ ಜನತೆ ದಾರಿ ತಪ್ಪುತ್ತಿದೆ. ಇಂದಿನ ಯುವ ಜನಾಂಗ ಬಾಗಿದ ತಲೆಯಲ್ಲಿ ಕಣ್ಣು ಅತ್ತಿತ್ತ ಅಲುಗಾಡಿಸದೆ ಸದಾ ಫೇಸ್ಬುಕ್, ವಾಟ್ಸ್ ಅಪ್ಪ್ ಗಳ ಮೆಸೆಜ್ಗಳ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಕೈಯಲ್ಲೊಂದು ಮೊಬೈಲ್, ಕಿವಿಗಳಲ್ಲಿ ಹೆಡ್ ಫೋನ್ ತೂರಿಸಿಕೊಂಡು ಅದರೊಳಗೆ ತೂರಿಕೊಂಡರೆ ಅಕ್ಕಪಕ್ಕದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವೂ ಕೂಡ ಅವರಿಗೆ ಇರುವುದಿಲ್ಲ.


ಈಗೀಗ ಈ ತಾಣಗಳಲ್ಲಿ ಸುಳ್ಳುಗಳನ್ನು ವಿಜೃಂಭಿಸುತ್ತಿದೆ , ಮೂಡನಂಬಿಕೆ ಮಾರಾಟವಾಗುತ್ತಿದೆ. ಪರಸ್ಪರ ಅಪನಂಬಿಕೆ ಹರಡಲಾಗುತ್ತಿದೆ. ಮಾನವ ವಿರೋದಿ ನಿಲುವುಗಳನ್ನು ಪ್ರಚಾರ ಪಡಿಸಲಾಗುತ್ತಿದೆ , ಭಿನ್ನಾಭಿಪ್ರಾಯಗಳನ್ನು ತೇಜೋವಧೆಗಾಗಿ ಬಳಸಲಾಗುತ್ತಿದೆ ,ಅನಗತ್ಯ ಅಸಭ್ಯ ಮತ್ತು ಅಶ್ಲೀಲ ವೀಡಿಯೊ , ಚಿತ್ರ , ಬರಹಗಳನ್ನು ಅವ್ಯಾಹತವಾಗಿ ರವಾನಿಸಿ ವಿಕೃತ ಮಜ ಅನುಭವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದಾಗಿ ಸಾಮಾಜಿಕ ಜಾಲ ಈಗ ತಾಣ ಅಪಾಯಕ್ಕೆ ಈಡಾಗುತ್ತಿದೆ. ಕ್ಷಣಮಾತ್ರದಲ್ಲಿ ಇಡೀ ಲೋಕವನ್ನು ಅಶಾಂತಿಯನ್ನು ಉಂಟು ಮಾಡಬಲ್ಲಂಥ ಮೆಸೇಜ್ ಗಳು ಅನಾಹುತಕ್ಕೆ ಎಡೆ ಮಾಡಿ ಕೊಡುತ್ತಿವೆ. ಇಂಥ ಸಂದೇಶಗಳ ಅಗತ್ಯವಿದೆಯೇ ? ಎಂದು ಆಲೋಚಿಸಬೇಕಾದ ಕಾಲ ಬಂದಿದೆ.



ಸಾಮಾಜಿಕ ತಾಣಗಳ ಬಲೆಗೆ ಬಿದ್ದವರೇ ಒಮ್ಮೆ ಯೋಚಿಸಿ .ನೀವು, ನಿಮ್ಮ ಹೆತ್ತವರು,ಸಂಭಂದಿಕರು,ನಿಮ್ಮ ಸಹೋದರ ಸಹೋದರಿಯರು ಸ್ನೇಹಿತ ಸ್ನೇಹಿತೆಯರು ಈ ಕೆಳಗಿನ ಸಂದರ್ಭಗಳಲ್ಲಿ ಇದ್ದಾಗ ಅವರ ಫೋಟೋ, ವೀಡಿಯೊಗಳನ್ನು ಶೇರ್ ಮಾಡಲು ತಯಾರಿದ್ದೀರಾ ?


೧.ಮರಣ ಸಂಭವಿಸಿದಾಗ
೨.ಅಪಘಾತ ಸಂಭವಿಸಿದಾಗ
೩.ನೀರಲ್ಲಿ ಮುಳುಗುತ್ತಿರುವಾಗ
೩.ರಸ್ತೆ ಅಥವಾ ಇನ್ನಿತರ ಯಾವುದೇ ದುರಂತಕ್ಕೆ ಬಲಿಯಾದಾಗ
೪.ಖಾಸಗಿ ಕ್ಷಣ ಗಳಲ್ಲಿ ಮೈಮರೆತಿರುವಾಗ
೫.ಗುಪ್ತವಾದ ಆತ್ಮೀಯ ಕ್ಷಣ ಹಂಚಿಕೊಂಡಾಗ
೬.ಯಾವುದೇ ಗಲಬೆಗೆ ಈಡಾದಾಗ
೭.ಬೆಂಕಿ ಅನಾಹುತ ಸಂಭವಿಸಿದಾಗ
೮ .ಅನೈತಿಕತೆಗೆ ಬಲಿಯಾದಾಗ
ಇಂಥ ಅನೇಕ ಸನ್ನಿವೇಶಗಳಿಗೆ ನೀವು ಬಲಿಯಾದಾಗ ನಿಮ್ಮ ಫೋಟೋ, ವೀಡಿಯೊ ಮಾಡಿ ಯಾರದ್ರೂ ಶೇರ್ ಮಾಡಿದರೆ ನೀವು ಒಪ್ಪಿಕೊಳ್ಳಲು ತಯಾರಿದ್ದೀರಾ ? ಇಲ್ಲ ಅನ್ನುವುದಾದರೆ ಇತರರ ಫೋಟೋ ,ವೀಡಿಯೊಗಳನ್ನು ಶೇರ್ ಮಾಡುವುದು ಸರಿಯೇ ಯೋಚಿಸಿ .ಸಿಕ್ಕಿ ಸಿಕ್ಕಿದ ಮೆಸೇಜ್ ಗಳನ್ನು ಹಿಂದೆ ಮುಂದೆ ನೋಡದೆ, ಓದದೆ ಮುಂದೆ ಕಳುಹಿಸುವವರು ನೂರು ಸಲ ಯೋಚಿಸಿ.ಅನಗತ್ಯ ಸಂದೇಶಗಳನ್ನು ಕಳುಹಿಸಿ ನಿಮ್ಮ ಡಾಟಾ ಪ್ಯಾಕೇಜ್ ಗೆ ಕೊಟ್ಟ ಹಣವನ್ನು ವ್ಯರ್ಥವಾಗಿಸುವುದರ ಜೊತೆಗೆ ಇನ್ನೊಬ್ಬರ ಜೇಬಿಗೆ ಮತ್ತು ಮನಸ್ಸಿಗೆ ಕತ್ತರಿ ಹಾಕುವ ಮೊದಲು ಯೋಚಿಸಿ .

ಹಣ ಕೊಟ್ಟು ನೆಟ್ ಹಾಕಿಸಿ ಇಂಟರ್ನೆಟ್ ಕಂಪನಿ ಗಳನ್ನು ಉದ್ದಾರ ಮಾಡುವ ಬದಲು ಅಗತ್ಯವಾದ ಸಂದೇಶಗಳನ್ನು ಮಾತ್ರ ಕಳುಹಿಸಿ ನಿಮ್ಮನ್ನು ನೀವೇ ಉದ್ದಾರ ಮಾಡಿಕೊಳ್ಳುವ ವಿಧಾನವನ್ನು ಚಿಂತಿಸಿ . ತನ್ಮೂಲಕ ತಮ್ಮ ಸಮುದಾಯ ,ಸಮಾಜ ದೇಶವನ್ನು ಉದ್ದಾರ ಮಾಡುವ ಬಗೆಯನ್ನು ಕಂಡುಕೊಳ್ಳಿ. ತಮ್ಮ ಮೊಬೈಲ್ ಗೆ ಯಾರೇ ವಾಟ್ಸ್ಯಾಪ್ ಸಂದೇಶ ಕಳುಹಿಸಿದರೆ, ತಾವು ಕಳುಹಿಸಿದ ಸಂದೇಶ ನಿಜವೇ ಎಂದು ತಿರುಗಿ ಕಳುಹಿಸಿದವನಲ್ಲಿ ಪ್ರೆಶ್ನಿಸುವಷ್ಟು ವ್ಯವಧಾನವೂ ಇಲ್ಲದೆ ಇನ್ನೊಬ್ಬರಿಗೆ ಕಳುಹಿಸುತ್ತೇವೆ. ಹಾಗೆ ತಿರುಗಿ ಪ್ರೆಶ್ನಿಸಿ ಕೊಂಚ ಮಟ್ಟಿಗಾದರೂ ಇಂತಹ ತಪ್ಪು ಸಂದೇಶಗಳಿಗೆ ಕಡಿವಾಣ ಹಾಕ ಬಹುದು. ಸುಳ್ಳು ವದಂತಿಗಳನ್ನು ಹಬ್ಬಿ ಬಿಡುವವರೇ, ಅದನ್ನು ಫಾರ್ವರ್ಡ್ ಮಾಡುವವರೇ, ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಈಗಲೇ ನಿರ್ಧಾರ ಮಾಡಿಕೊಳ್ಳಿ. . ನಾಳೆಯ ನೆಮ್ಮದಿಗಾಗಿ ಇಂದಿನ ದಿನದಿಂದ ಸತ್ ಸಮಾಜದ ನಿರ್ಮಾಣಕ್ಕಾಗಿ ಒಳ್ಳೆಯ ಮೆಸೇಜ್ ಮಾತ್ರ ಕಳುಹಿಸುತ್ತೇನೆ ಎಂಬ ಪ್ರತಿಜ್ಞೆ ಮಾಡಿ. ಇಂಥ ಪ್ರತಿಜ್ಞೆ ಈ ನಿಮಿಷದಲ್ಲಿ ,ಈಗಲೇ ಕೈಗೊಳ್ಳಿ.ಎಲ್ಲವೂ ಒಳ್ಳೆಯದಾಗುತ್ತದೆ
ಸತ್ ಸಮಾಜದ ನಿರ್ಮಾಣಕ್ಕಾಗಿ ಈ ಪ್ರತಿಜ್ಞೆ ಸ್ವೀಕರಿಸುವಿರಿ ಎಂಬ ಭರವಸೆಯೊಂದಿಗೆ

- ಟೀಂ ಬ್ಲೂ ವೇವ್ಸ್
www.Facebook.com/BlueWavesPage




                                                           ****** ಬ್ಲೂ ವೇವ್ಸ್ ಪತ್ರಿಕಾಗೋಷ್ಠಿ ******

ಎಲೆಮರೆಯ ಬರಹಗಾರರನ್ನು ಗುರುತಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬ್ಲೂ ವೇವ್ಸ್-ನ ಮೊದಲ ಹೆಜ್ಜೆ 'ನಿಕ್ಷೇಪ -2014' ಈ ಸಾಹಿತ್ಯ ಸ್ಪರ್ಧೆಯನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ದಿಸೆಯಲ್ಲಿ ಟೀಂ ಬ್ಲೂ ವೇವ್ಸ್ ಯಶಸ್ವಿಯಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿತು.

-Team Blue Waves 

ಮದುವೆ

# ಮದುವೆ #

ಗೆಳೆಯರೇ,

ಮದುವೆ ಎಂಬುದು ಎರಡು ಜೀವಗಳ, ಎರಡು ಮನಸ್ಸುಗಳ ಸುಂದರ ಸಮಾಗಮವಾಗಿದೆ. ಸಾವಿರಾರು ಸುಂದರ ಕನಸುಗಳನ್ನು ಕಂಡು, ಸಾಕಾರ ಗೊಳಿಸಲು ಇಡುವ ಮೊದಲ ಹೆಜ್ಜೆಯಾಗಿದೆ. ಮದುವೆಯ ಆರಂಭಿಕ ದಿನಗಳಲ್ಲಿ ತಮ್ಮದೇ ಲೋಕದಲ್ಲಿ ವಿಹರಿಸಿ ಕ್ರಮೇಣ ತಮ್ಮ ಜೀವನಕ್ಕೆ ಮರಳುವಾಗ ಬಹುತೇಕ ಸಂಸಾರಗಳಲ್ಲಿ ಕೆಲವೊಂದು ತಪ್ಪು ಗ್ರಹಿಕೆ ಗಳಿಂದಾಗಿ ಸಂಸಾರದ ನೌಕೆ ಅಲುಗಾಡಲು ಶುರುವಾಗುತ್ತದೆ.

ಹೊಸದಾಗಿ ಮನೆಗೆ ಬಂದ ಸೊಸೆ ನಮ್ಮ ಮಾತು ಕೇಳುತಿಲ್ಲ. ನಮ್ಮ ಸಂಸಾರಕ್ಕೆ ಹೊಂದಿಕೊಂಡು ನಡೆಯುತ್ತಿಲ್ಲ ಇತ್ಯಾದಿ, ಇತ್ಯಾದಿ. ತನ್ನವರನ್ನೆಲ್ಲ ಬಿಟ್ಟು ಹೊಸ ಪರಿಸರಕ್ಕೆ ಬಂದ ಸೊಸೆ ತನ್ನ ಬೇಸರ, ಖುಷಿಗಳನ್ನು ಗಂಡನ ಬಳಿ ಹೇಳಿಕೊಂಡರೆ, ಏಕಾಂತ ಬಯಸಿದರೆ ಅದಕ್ಕೆ ಸಿಟ್ಟೇಳುವ ಅತ್ತೆ . ಮಗನನ್ನು ತನ್ನ ಕೈಮುಷ್ಠಿಯಲ್ಲಿಟ್ಟುಕೊಂಡಿದ್ದಾಳೆ ಎಂಬ ಭಾವನೆ ಸೊಸೆಗೆ ಬಂದರೆ ಸಂಸಾರದಲ್ಲಿ ಒಡಕು ಮೂಡತೊಡಗುತ್ತದೆ .ಈ ರೀತಿಯ ಮನಸ್ಥಿತಿಯಿಂದ ಹೊರಬಂದರೆ ಮಾತ್ರ ಅತ್ತೆ ಸೊಸೆಯರ ನಡುವೆ ಸಾಮರಸ್ಯ ಏರ್ಪಡಬಹುದು.

ಇಂಥ ಸನ್ನಿವೇಶದಲ್ಲಿ ಗಂಡನಾದವನು ಅಸಾಹಾಯಕನಾಗುತ್ತಾನೆ. ಅತ್ತ ತಾಯಿಯತ್ತ ವಾಲುವಂತಿಲ್ಲಾ, ಇತ್ತ ಪತ್ನಿಯ ಮಾತು ಕೇಳುವಂತಿಲ್ಲ. ಮುತ್ತು ಕೊಡುವ ಮಡದಿ ಬಂದಾಗ ತುತ್ತು ಕೊಟ್ಟ ತಾಯಿಯನ್ನು ಮರೆಯಲಾಗದೆ, ಎದುರಿಸಲಾಗದೆ ಗಂಡನಾದವನು ಅಡಕತ್ತರಿಯಲ್ಲಿ ಸಿಕ್ಕ ಅಡಕೆಯಂತಾಗುತ್ತಾನೆ. ಅತ್ತೆ ಸೊಸೆಯರ ಒಳ ಜಗಳ ಬಹುತೇಕ ಸಂಸಾರಗಳಲ್ಲಿ ಕಾಣಬಹುದು. ಅಂತಹ ಸಂಧರ್ಭಗಳಲ್ಲಿ ಅತೀ ಹೆಚ್ಚಿನ ಜಾಗರೂಕತೆಯಿಂದ ಜಾಣ ಮೌನ ವಹಿಸುವುದು ಉತ್ತಮ. ಇಬ್ಬರ ಮಾತನ್ನೂ ಆಲಿಸಿ, ಗಣನೆಗೆ ತೆಗೆದು ಕೊಳ್ಳದೇ ಪರಿಸ್ಥಿತಿ ತಿಳಿಗೊಳಿಸಬೇಕು. ಸಾಧ್ಯವಾದರೆ ಪ್ರತ್ಯೇಕವಾಗಿ ಅವರವರ ಮೂಡ್ ನೋಡಿ ಪ್ರೀತಿಯಿಂದ, ಜಾಣ್ಮೆ ಯಿಂದ ಪರಸ್ಪರ ಹೊಂದಾಣಿಕೆ ಮಾಡಿ ಕೊಳ್ಳಲು ಅರ್ಥವಾಗುವಂತೆ ಹೇಳಬೇಕು.

ಇಲ್ಲಿ ಚಿಂತಿಸಬೇಕಾದ ವಿಷಯ - ಆ ಹೊಸ ಮದುಮಗಳು ತನ್ನ ಹುಟ್ಟಿನಿಂದ ಯೌವ್ವಾನಾವಸ್ಥೆಯ ತನಕ ಅವಳದೇ ಆದ ಜೀವನ ಶೈಲಿ ರೂಪಿಸಿಕೊಂಡು, ನಮಗೆ ವ್ಯತಿರಿಕ್ತವಾದ ವಾತಾವರಣ ದಲ್ಲಿ ಬೆಳೆದು ಬಂದವಳಾಗಿರುತ್ತಾಳೆ. ಅಂತಹಾ ಯುವತಿ ಮದುಮಗಳಾಗಿ ಬಂದ ಕೂಡಲೇ ತಮ್ಮ ಸಂಪ್ರದಾಯಕ್ಕೆ, ತಮ್ಮ ಕುಟುಂಬಾಚರಣೆಗೆ ಒಗ್ಗಿಕೊಳ್ಳ ಬೇಕು ಎಂದು ಅಪೇಕ್ಷಿಸುವುದು ಸರಿಯಲ್ಲ. ಅವಳು ಮಾಡುವ ಮನೆಗೆಲಸಗಳಲ್ಲಿ ಹೆಚ್ಚು ಕಮ್ಮಿಯಾದರೂ,ಸರಿಯಾದ ಸಮಯ ಸಂಧರ್ಭ ನೋಡಿ ಪ್ರೀತಿಯಿಂದ ತಿಳಿ ಹೇಳುವುದು ಜಾಣತನವಾಗಿದೆ. ಅವಳು ಮಾಡುವ ಅಡುಗೆಯ ರುಚಿಯಲ್ಲಿ ಸ್ವಲ್ಪ ಏರು ಪೆರಾದಲ್ಲಿ, ಅದನ್ನು ಸಹಿಸಿಕೊಂಡು "ಅಡುಗೆ ಚೆನ್ನಾಗಿತ್ತು ಆದರೆ ಇನ್ನೂ ಕೂಡ ರುಚಿಯಾಗಿ ಮಾಡುವ ನೈಪುಣ್ಯತೆ ನಿನ್ನಲ್ಲಿದೆ" ಎಂದು ಹುರಿದುಂಬಿಸಬೆಕು. ಈಗಿನ ಕಾಲದಲ್ಲಿ ವೆಬ್ ಸೈಟ್ ಗಳಲ್ಲಿ, ಯೂ ಟ್ಯೂಬ್ ನಲ್ಲಿ ಬೇಕಾದಷ್ಟು ಅಡುಗೆಯ ವಿಧಾನಗಳು ಸುಲಭವಾಗಿ ಲಭ್ಯವಿದೆ. ಸಾಧ್ಯವಾದರೆ ಅಂತಹ ವಿಡಿಯೋಗಳನ್ನೂ, ಲೇಖನ ಗಳನ್ನೂ ತೋರಿಸಿ ಪ್ರೊತ್ಸಾಹಿಸಬೇಕು.

ಗಂಡು ಆದವನು, ಅವಳೂ ಕೂಡ ಒಂದು ಹೆಣ್ಣು ಜೀವ, ಅವಳಿಗೆ ಅವಳದೇ ಆದಂತಹ ಆಸೆ ಆಕಾಂಕ್ಷೆ ಗಳಿವೆ ಎಂಬುದನ್ನು ಅರ್ಥ ಮಾಡಿ ಕೊಂಡು, ತನ್ನ short temper ಅದುಮಿಟ್ಟುಕೊಂಡು ಚಾಕಚಕ್ಯತೆಯಿಂದ, ಎರಡೂ ಕಡೆಯ ಪರಿಸ್ಥಿತಿ ಅರ್ಥ ಮಾಡಿಕೊಂಡು ನಡೆದರೆ ಮುಂದಿನ ದಿನಗಳಲ್ಲಿ ತಮಗೆ ಪೂರಕವಾದ ವಾತಾವರಣ ನಿರ್ಮಿಸಲು ಸಹಕಾರಿಯಾಗ ಬಲ್ಲುದು. ಮನೆಯಲ್ಲಿ ಅತ್ತೆ-ಸೊಸೆ ಜಗಳ ಸಾಮಾನ್ಯ ಬಿಡಿ ಅಂತ ಸುಮ್ಮನಿದ್ದು ಬಿಟ್ಟರೆ ಸಮಸ್ಯೆ ಬೆಂಕಿಗೆ ತುಪ್ಪ ಸುರಿದಂತೆ ಆಗುವ ಸಂಭವವಿದೆ . ತನ್ನ ತಾಯಿಯಿಂದ (ಅತ್ತೆ ) ಸೊಸೆಗಾಗುವ (ತನ್ನ ಹೆಂಡತಿಗೆ ) ಅಥವಾ ತನ್ನ ಹೆಂಡತಿಯಿಂದ ತನ್ನ ತಾಯಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಡನಾದವನು ಗಮನಿಸದೆ ಬೇಜವಾಬ್ದಾರಿಯಿಂದ ವರ್ತಿಸಿದರೆ ಉಂಟಾಗುವ ದಂಪತಿಗಳ ಜಗಳದಿಂದ ಮನೆ ರಣರಂಗ ವಾಗುವುದು ಇದೆ . ಆದ್ದರಿಂದ ಗಂಡನಾದವನು ತನ್ನ ಸಂಸಾರದಲ್ಲಿನ ಆಗು ಹೋಗುಗಳಿಗೆ ಕಿವಿಯಾಗಿ ಎಲ್ಲವನ್ನೂ ಸರಿದೂಗಿಸುತ್ತಾ, ಇಬ್ಬರೂ ಪರಸ್ಪರ ಸಹಕಾರದಿಂದ ಸಾಗುವ ಹಾಗೆ ಮಾಡಬೇಕು.

ಮದುವೆಯ ಹೊಸತರಲ್ಲಿ ಹೆಚ್ಚಿನವರೆಲ್ಲರಿಗೂ ಇಂತಹ ಸನ್ನಿವೇಶಗಳು ಅನುಭವ ಆಗಿಯೇ ಆಗುತ್ತದೆ. ನನಗೂ ಎದುರಾಗಿತ್ತು. ಸಾಧ್ಯವಾದಷ್ಟು ನಿಭಾಯಿಸಿದ್ದೆನೆ. ಹಾಗೂ ಕೆಲವು ಸಂದರ್ಭಗಳಲ್ಲಿ ಎಡವಿದ್ದೆನೆಯೂ ಕೂಡ. ಹೊಸದಾಗಿ ಮದುವೆಯಾದವರಿಗೂ ಹಾಗೂ ಇನ್ನು ಮದುವೆ ಆಗುವವರಿಗೆ ಈ ಕೆಲವು ಟಿಪ್ಸ್ ಗಳು ತಮ್ಮ ವೈವಾಹಿಕ ಜೀವನವನ್ನು ಸಾಧ್ಯವಾದಷ್ಟು ಸುಗಮ ವಾಗಿಸಲಿ ಎಂಬ ಸದುದ್ದೇಶ ನನ್ನದು.

ಇಂತಿ
ಅನಾಮಿಕ

ದ್ವೇಷವ ಬಿಟ್ಟು ಶಾಂತಿಯ ದೇಶವನ್ನು ಕಟ್ಟೋಣ.



ಪ್ರಪಂಚದ ಅತೀ ದೊಡ್ಡ ಜಾತ್ಯತೀತವಾದ ಪ್ರಜಾಪ್ರಭುತ್ವ ದೇಶವಾದಂತಹ ಭಾರತದಲ್ಲಿ ಅತ್ಯಾಚಾರ,ಕೋಮುವಾದ, ಭೀತಿವಾದ ಗಳು ಮೇಲೈಸಿ ಅಶಾಂತಿಗಳು ಉಂಟಾಗುತ್ತಿದೆ.

ಪರಸ್ಪರ ಸಹೋದರರಂತೆ ಅನ್ಯೋನ್ಯತೆಯಿಂದ ಜೀವಿಸಬೇಕಾದವರು ಧರ್ಮ ,ಧರ್ಮಗಳ ಹೆಸರೇಳಿಕೊಂಡು ಪರಸ್ಪರ ಬಡಿದಾಡಿಕೊಳ್ಳುವಂತಹ ಸನ್ನಿವೇಶಗಳಾಗಿವೆ ನಾವು ನೋಡುತ್ತಿರುವುದು.

ಒಂದು ಕಡೆ ಧರ್ಮ ಧರ್ಮಗಳ ನಡುವೆ ಅಪನಂಬಿಕೆಗಳು ಬೆಳೆದು ದೇಶದ ಸೌಹಾರ್ದತೆಗೆ ಮಾರಕವಾಗುತ್ತಿರುವಾಗ ಮತ್ತೊಂದು ಕಡೆಯಿಂದ ದೇಶದ ಉದ್ದಗಲಕ್ಕೂ ಸ್ತ್ರೀ ವರ್ಗವು ನಿರಂತರವಾಗಿ ಲೈಂಗಿಕ ದೌರ್ಜನ್ಯಗಳಿಗೆ ಒಳಪಡುತ್ತಲೇ ಇದ್ದಾರೆ..!!

ದೇಶದಲ್ಲಿ ನಡೆಯುತ್ತಿರುವಂತಹ ಎಲ್ಲಾ ಅನಾಚಾರ,ಅತ್ಯಾಚಾರ,ಅಕ್ರಮಗಳ ರೂವಾರಿಗಳನ್ನು ಧರ್ಮದ ಹೆಸರಿನಲ್ಲಿ ಗುರುತಿಸಿ ಅದಕ್ಕೆ ಮತೀಯ ಬಣ್ಣವನ್ನು ಲೇಪಿಸಿ ಗಲಭೆಗಳನ್ನು ಸೃಷ್ಟಿಸಿ ರಾಜಕೀಯ ಲಾಭ ಪಡೆಯುವಂತಹ ರಾಜಕೀಯ ಪಕ್ಷಗಳಿಗೇನು ಕೊರತೆಯಿಲ್ಲ.

ಸೌಹಾರ್ದಯುತ ಭಾರತವನ್ನು ಕಟ್ಟಲು ಯುವ ಸಮೂಹಕ್ಕೆ ಖಂಡಿತ ಸಾಧ್ಯವಿದೆ.ಪರಸ್ಪರ ಸಂಘಟನೆಗಳನ್ನು ಕಟ್ಟಿಕೊಂಡು ಅನ್ಯ ಧರ್ಮಗಳನ್ನು ನಿಂದಿಸಿ ದೇಶದ ಸೌಹಾರ್ದತೆಗೆ ಧಕ್ಕೆ ತರದೆ ಪರಸ್ಪರ ಸಹೋದರತೆಯಿಂದ, ಏಕತೆಯಿಂದ ಒಂದು ಗೂಡಿ ಬಾಳೋಣ.

ಧರ್ಮ ಧರ್ಮಗಳ ನಡುವಿನ ಅಪನಂಬಿಕೆಗಳನ್ನು ದೂರವಾಗಿಸಿ, ದ್ವೇಷವ ಬಿಟ್ಟು ಸೌಹಾರ್ದಯುತ ದೇಶವ ಕಟ್ಟುವವರು ನಾವುಗಳಾಗೋಣ..

ಸದಾಶಯದೊಂದಿಗೆ
ಟೀಂ ಬ್ಲೂ ವೇವ್ಸ್

ಹಸಿವು' ಇರುವ ದೇಶದಲ್ಲಿ 'ಅನ್ನ'ವು ತೊಟ್ಟಿಯ ಪಾಲಾಗದಿರಲಿ

ಭೂಮಂಡಲದಲ್ಲಿ ಜೀವಿಸುತ್ತಿರುವ ಸಕಲ ಜೀವರಾಶಿಗೂ ಹಸಿವು ಅಂದರೇನು ಅಂತ ತಿಳಿದಿರುತ್ತದೆ, ಪ್ರಕೃತಿಯಲ್ಲಿ ಪ್ರತಿಯೊಂದರ ಹುಟ್ಟಿನೊಂದಿಗೆ ಹಸಿವೂ ಕೂಡ ಜನ್ಮ ತಾಳಿರುತ್ತದೆ. ಹಸಿವು ಸಕಲ ಜೀವರಾಶಿಗಳನ್ನು ಮುಟ್ಟಿಸುವ ದಾರುಣ ಸ್ಥಿತಿ. ಈ 21ನೇ ಶತಮಾನದಲ್ಲಿ 'ಹಸಿವು' ಜಗತ್ತು ಎದುರಿಸುತ್ತಿರುವ ಅತೀ ದೊಡ್ಡ ಸವಾಲು. ಈ ವಿಶ್ವದಲ್ಲಿ ನಾಲ್ಕು ಸೆಕೆಂಡ್‌ಗೆ ಒಂದು ಮಗು ಸಾಯುತ್ತಿದೆ, ಪ್ರತೀ ಎಂಟು ಮಕ್ಕಳಲ್ಲಿ ಒಂದು ಮಗು ಅಪೌಷ್ಟಿಕತೆಯಿಂದ ನರಳುತ್ತಿದೆ, ಅಂದರೆ 870 ಮಿಲಿಯನ್ ಮಕ್ಕಳು ಅಪೌಷ್ಟಿಕತೆ ಅಥವಾ ಅಹಾರದ ಕೊರತೆಯಿಂದ ಒದ್ದಾಡುತ್ತಿವೆ. ಇದಕ್ಕೆಲ್ಲ ಮೂಲ ಕಾರಣವೇ ಹಸಿವು ಎಂದರೆ ಈ ಹಸಿವಿನ ದಾರುಣತೆಯನ್ನು ನಾವು ಊಹಿಸಬಹುದಾಗಿದೆ.

ಭೂಮಿಯ ಮೇಲೆ ಅತೀ ಬುದ್ದಿವಂತನೆನಿಸಿಕೊಂಡಿರುವ ಮನುಷ್ಯನು ನಡೆಸುವ ಬಹತೇಕ ಸಮಾರಂಭಗಳಲ್ಲಿ ತನ್ನ ಒಣ ಪ್ರತಿಷ್ಠೆಗಾಗಿ, ಇತರರಿಂದ ಹೊಗಳಿಕೆ ಗಿಟ್ಟಿಸಿಕೊಳ್ಳುವ ಸಲುವಾಗಿ, ಹಸಿವಿನ ಮೌಲ್ಯ ಗೊತ್ತಿದ್ದರೂ ಕೂಡಾ ಯಾವುದೇ ಹಿಂಜರಿಕೆಯಿಲ್ಲದೆ ತಿನ್ನುವ ಆಹಾರವನ್ನು ತಿಪ್ಪೆಗೆಸೆಯುತ್ತಿರೋದು ದುರಂತವೇ ಸರಿ. ಒಂದು ನಿಮಿಷ ನಾವೆಲ್ಲರೂ ಯೋಚಿಸಬೇಕಾಗಿದೆ, ಒಬ್ಬ ವ್ಯಕ್ತಿ ಹೆಚ್ಚೆಂದರೆ ಎಷ್ಟು ತಿನ್ನಬಹುದು.. ?, ಹೊಟ್ಟೆ ತುಂಬಿಸಿಕೊಂಡ ನಂತರ ಮಿಕ್ಕ ಅನ್ನವನ್ನು ನಿರ್ಭೀತಿಯಿಂದ ಚೆಲ್ಲುತ್ತಾನೆ ಎಂದಾದರೆ ಯಾರನ್ನು ದೂಷಿಸಬೇಕು?. ಆಡಂಬರದ ಸಮಾರಂಭಗಳಲ್ಲಿ ಲೆಕ್ಕಕಿಂತಲೂ ಅಧಿಕ ಪ್ರಮಾಣದಲ್ಲಿ ಅನ್ನಾಹಾರಗಳನ್ನು ತಯಾರಿಸುವಂತಹ ಕೆಟ್ಟ ಸಂಸ್ಕೃತಿ ಬೆಳೆದು ಬಂದಿರೋದೆ ದುರ್ದೈವ. ಕೇವಲ ಒಣ ಪ್ರತಿಷ್ಠೆಗಾಗಿ, ಬಂದವರಿಂದ ಬೆನ್ನು ತಟ್ಟಿಸಿಕೊಳ್ಳೋ ಸಲುವಾಗಿ ಅಧಿಕ ಪ್ರಮಾಣದಲ್ಲಿ ಆಹಾರವನ್ನು ಸಿದ್ದಪಡಿಸಿ ಅದನ್ನು ತೋರ್ಪಡಿಕೆಗೆ ಸಜ್ಜುಗೊಳಿಸುವ ಮಂದಿ ಒಂದೇ ಒಂದು ಸಲ ಸರಿಯಾದ ಆಹಾರವಿಲ್ಲದೆ ಬುದುಕಿತ್ತಿರುವ ಬಡವರ ಬಗ್ಗೆ ಯೊಚಿಸಬೇಕಾಗಿದೆ. ಒಪ್ಪೊತ್ತಿನ ಊಟವನ್ನು ಹಸಿದವನ ಬಟ್ಟಲಿಗೆ ನೀಡಿದ್ದೆ ಆದರೆ ಅದಕ್ಕಿಂತಲೂ ಭಾಗ್ಯದ ಕೆಲಸ ಬೇರಿನ್ನೊಂದಿಲ್ಲ.

ಜಗತ್ತಿನಲ್ಲಿ ಇರುವ 700 ಕೋಟಿ ಜನಸಂಖ್ಯೆ, ಮುಂದಿನ 2050 ರ ವೇಳೆಗೆ900 ಕೋಟಿಗೆ ಏರಲಿದೆ. ಸಧ್ಯದ ಸ್ಥಿತಿಯಲ್ಲಿ ಜಗತ್ತಿನ ಅರವತ್ತು ರಾಷ್ಟ್ರಗಳಲ್ಲಿ ಸುಮಾರು 87 ಕೋಟಿ ಜನ ಹಸಿವಿನಿಂದ ಒಂದೊತ್ತಿನ ಊಟದಲ್ಲಿ ಬದುಕು ದೂಡುತ್ತಿದ್ದಾರೆ. ವಿಶ್ವ ಆಹಾರ ಯೋಜನಾ ಮಂಡಳಿಯ ಸಮೀಕ್ಷೆ ಪ್ರಕಾರ ಜಗತ್ತಿನಲ್ಲಿ ಹಸಿವಿನಿಂದ ಬಳಲುತ್ತಿರುವ ಜನಸಂಖ್ಯೆಯಲ್ಲಿ ಶೇಕಡ, 25 ರಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಜಗತ್ತಿನ86 ಕೋಟಿ 80 ಲಕ್ಷ ಜನತೆಯಲ್ಲಿ, ನಮ್ಮ ದೇಶದ ಪಾಲು 27 ಕೋಟಿ, 70ಲಕ್ಷ . ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ ಸರಿಸುಮಾರು ಆರು ಸಾವಿರದಷ್ಟು ಮಂದಿ ದಿನಂಪ್ರತಿ ಹೊಟ್ಟೆಗೆ ಸರಿಯಾದ ಆಹಾರವಿಲ್ಲದೆ ಸಾವನ್ನಪ್ಪುತ್ತಿದ್ದಾರೆ ಎಂಬುದು ನಮ್ಮ ದೇಶಕ್ಕೊದಗಿದ ಬಹುದೊಡ್ಡ ವಿಪತ್ತು ಮತ್ತು ಸ್ವಾತಂತ್ರ್ಯದ 60 ವರ್ಷಗಳಲ್ಲಿ ದೇಶಕ್ಕೆ ಅತಿ ದೊಡ್ಡ ಕಳಂಕ. ಅತ್ಯಧಿಕ ಪಾಕೃತಿಕ ಸಂಪನ್ಮೂಲ ಮತ್ತು ಅದಾಯಗಳ ಬಹುಮೂಲವನ್ನುಹೊಂದಿರುವ ನಮ್ಮ ದೇಶದಲ್ಲಿ ಇಂತಹ ಅಮಾನವೀಯ ಸಂಸ್ಕೃತಿಯೊಂದು ಇವತ್ತಿಗೂ ಇರೋದು ದುರಂತವೇ ಸರಿ. ದೇಶದಲ್ಲಿ ಅತ್ಯಧಿಕ ಸಾವುಗಳು ಸಂಭವಿಸಿರುವುದು ಹಸಿವಿನಿಂದ ಅನ್ನೋದು ಬೆಳಕಿನಷ್ಟೇ ಸತ್ಯ ಮತ್ತು ಅಂಕಿ ಅಂಶಗಳು ಕೂಡ ಅದನ್ನೇ ಹೇಳುತ್ತದೆ. ಸರಿಸುಮಾರು ಹದಿನೈದು ಕೋಟಿಯಷ್ಟು ಮಕ್ಕಳು ಇಂದಿಗೂ ಅಪೌಷ್ಟಿಕ ಆಹಾರದ ಕೊರತೆಯಿಂದಾಗಿ ಬಳಲುತ್ತಿದ್ದಾರೆ. ಇಪ್ಪತ್ತು ಕೋಟಿಗಿಂತಲೂ ಅಧಿಕ ಮಂದಿ ರಾತ್ರಿಯ ಆಹಾರವಿಲ್ಲದೆ ಬರಿಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಇದು ನಿಜಕ್ಕೂ ದೇಶವನ್ನು ಅಪಮಾನಕ್ಕೆ ಗುರಿ ಮಾಡುವ ಅಂಕಿ-ಅಂಶಗಳು.

ಇತ್ತ ಪ್ರತಿದಿನ ಸುಮಾರು ಆರು ಸಾವಿರದಷ್ಟು ಜನ ಸರಿಯಾದ ಆಹಾರವಿಲ್ಲದೆ ಪ್ರಾಣವನ್ನು ಕಳೆದು ಕೊಳ್ಳುತ್ತಿರಬೇಕಾದರೆ ಮತ್ತೊಂದು ಕಡೆ ಲಕ್ಷಗಟ್ಟಲೆ ಟನ್ ಅಕ್ಕಿ,ಬೇಳೆ,ಗೋದಿ ಮುಂತಾದ ಆಹಾರ ಪದಾರ್ಥಗಳು ಸರಕಾರದ ಮತ್ತು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದೊಂದಿಗೆ ಕೊಳೆತುಹೊಗುತ್ತಿದೆ. ಇದಕ್ಕೆಲ್ಲಾ ಉತ್ತರಿಸಬೇಕಾದವರು ಮಾತ್ರ ಹೊಟ್ಟೆ ತುಂಬಾ ಉಂಡು ಎ.ಸಿ ರೂಮಿನಲ್ಲಿ ಜಗದ ಪರಿವೆ ಇಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಬಡವರ ಪಾಲಾಗ ಬೇಕಾಗಿದ್ದಂತಹ ಆಹಾರ ಪದಾರ್ಥಗಳು ಕಾಳಸಂತೆಯಲ್ಲಿ ಯಾರ ಭಯವೂ ಇಲ್ಲದೆ ಅಧಿಕಾರಿಗಳ ಕಣ್ಣಮುಂದೆಯೇ ಕಳ್ಳರ ಪಾಲಾಗುತ್ತಿರುವುದು ನಮ್ಮ ವ್ಯವಸ್ಥೆಯನ್ನು ಅಣಕಿಸುವಂತೆ ಮಾಡಿದೆ. ಬರೀ ಬೆಂಗಳೂರು ನಗರವನ್ನು ಮಾತ್ರ ತೆಗೆದು ಕೊಂಡರೂ ಸಾಕು ದಿನವೊಂದಕ್ಕೆ ಲಕ್ಷಕ್ಕೂ ಮಿಕ್ಕ ಮೌಲ್ಯದ ಅನ್ನಾಹಾರವನ್ನು ಯಾವುದೇ ಮುಲಾಜಿಲ್ಲದೆ ತಿಪ್ಪೆಗೆ ಎಸೆಯಲಾಗುತ್ತಿದೆ. ಹೊಟ್ಟೆ ತುಂಬಿದ ನಂತರ ಮಿಕ್ಕುವ ಒಂದೇ ಒಂದು ತುತ್ತು ಕೂಡ ನಮ್ಮದಲ್ಲ ಅದು ಹಸಿದವರ ಬಟ್ಟಲಿಗೆ ಸೇರಿದ್ದು ಮತ್ತು ಅದವರ ಹಕ್ಕು, ಅದನ್ನು ಚೆಲ್ಲುವ ಯಾ ಹಾಳು ಮಾಡುವ ಅಧಿಕಾರ ಯಾವೊಬ್ಬನಿಗೂ ಇಲ್ಲವೆಂಬ ಸತ್ಯವನ್ನು ನಾವು ಅರಿಯಬೇಕಾಗಿದೆ.

ಈ ಬಗ್ಗೆ ನಮ್ಮ ನಮ್ಮಲ್ಲಿಯೇ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ,ಸಮಾರಂಭಗಳನ್ನ ನಡೆಸುವವರು ಸ್ವಯಂ ಅನ್ನಾಹಾರ ವ್ಯರ್ಥ ಮಾಡದಿರುವ ಕುರಿತು ಸಂಕಲ್ಪವೊಂದನ್ನು ಕೈಗೊಂಡು, ಹಸಿದು ಸಾಯುತ್ತಿರುವ ಜನಸಂಖ್ಯೆಯನ್ನು ವ್ಯಕ್ತವಾಗಿ ನಮೂದಿಸಿದ ಭಿತ್ತಿಪತ್ರಗಳನ್ನಂಟಿಸಿ, ಅದ್ಧೂರಿ ಸಮಾರಂಭಗಳ ನೆಪದಲ್ಲಿ ಲೆಕ್ಕಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಆಹಾರವನ್ನು ತಯಾರು ಮಾಡಿ, ಮಿಕ್ಕವುಗಳನ್ನು ತೊಟ್ಟಿಗೆಸೆಯೋ ವಿಕೃತ ಮನಸ್ಸಿರುವವರು ನಮ್ಮೊಳಗೆ ನುಸುಳಿ ಬಡವರ ಅನ್ನಾಹಾರ ಕಸಿಯುತ್ತಿರುವ ಅಮಾನುಷ ಅಭ್ಯಾಸ ಬಲಗಳನ್ನು ತೊಡೆದು ಹಾಕಲು, ಮಿತವಾಗಿ ಆಹಾರ ಬಳಸುವ ಪದ್ಧತಿಯನ್ನು ಈ ಸಮಾಜವು ಅಭಿಮಾನದಿಂದ ನೋಡುವಂತೆ ಬದಲಾಯಿಸಿದರೆ, ಅಥವಾ ಬದಲಾಯಿಸುವಲ್ಲಿ ಶಕ್ತವಾದರೆ ಮಾನವೀಯತೆ ಮತ್ತು ಹಸಿದವರ ಬಗೆಗಿರುವ ನಮ್ಮ ಕಾಳಜಿ ಅರ್ಥಪೂರ್ಣವಾದೀತು. ಇಂತಹ ಮಾದರಿ ಸಮಾರಂಭಗಳಿಗೆ ಮುನ್ನುಡಿಯಿಡುವ ಕನಸೊಂದಕ್ಕೆ ನಾವು ನೀವೆಲ್ಲರೂ ಪ್ರಥಮರಾಗೋಣ ಮತ್ತು ಹಸಿವನ್ನು ಹಂಚಿಕೊಂಡು ಮೊದಲು ಮನುಷ್ಯರಾಗೋಣ, ಆ ಮೂಲಕ ಹಸಿವು ಮುಕ್ತ ಭಾರತದ ಕನಸನ್ನು ನನಸಾಗಿಸೋಣ..

- ಟೀಮ್ ಬ್ಲೂ ವೇವ್ಸ್

ಮಾನವೀಯತೆಯಲ್ಲಿ ಬೆಳಗಲಿ ನಮ್ಮ ಭಾರತ

ಇಂದಿನ ಪ್ರಸಕ್ತ ಸನ್ನಿವೇಶಗಳಲ್ಲಿ ಪತ್ರಿಕೆಗಳಲ್ಲಿ ಮತ್ತು ಟಿ.ವಿ ಮಾಧ್ಯಮಗಳಲ್ಲಿ ರಕ್ತದ ಕಲೆಗಳೇ ನಮಗೆ ಅಧಿಕವಾಗಿ ಕಾಣಸಿಗುತ್ತದೆ. ಇದಕ್ಕೆ ಮುಖ್ಯ ಕಾರಣ ಜನರಲ್ಲಿ ಮರೆಯಾಗುತ್ತಿರುವ ಮಾನವೀಯತೆ ಎಂದರೆ ತಪ್ಪಾಗಲಾರದು. ಜಾತಿ ವೈಷಮ್ಯಗಳು, ಗುಂಪುಗಾರಿಕೆ, ಕೊಲೆ, ಸುಳಿಗೆ, ಅತ್ಯಾಚಾರ, ಬಡಿದಾಟ, ಕೋಮುಗಲಭೆ ಹೀಗೆ ಮುಂತಾದ ಸಮಾಜ ಘಾತುಕ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿದೆ ನಮ್ಮ ಇಂದಿನ ಸಮಾಜದಲ್ಲಿ. ಅತೀ ಹೆಚ್ಚು ವಿಧ್ಯಾರ್ಹತೆಯನ್ನು ಹೊಂದಿದಂತಹ ಯುವಕರುಗಳು ಕೂಡಾ ಇಂತಹ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂದಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಇದು ನಮ್ಮ ದೇಶವನ್ನು ಆಂತರಿಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸಿ ದೇಶದ ಸಮಗ್ರ ಅಭಿವ್ರದ್ದಿಯ ಅಗತ್ಯತೆಯೆಡೆಗೆ ಗಮನ ಹರಿಸದಂತೆ ಮಾಡಿದೆ.

ಇಂದು ಮಾನವೀಯತೆಯು ನಶಿಸಿ, ರಾಕ್ಷಸೀ ಪ್ರವೃತ್ತಿ ಹೆಚ್ಚಿ ಒಂದರ ಮೇಲೊಂದರಂತೆ ತಲೆಗಳು ಉರುಳುತ್ತಾ ಬೀಳುತ್ತಿದ್ದರೂ ಅದರ ವಿರುದ್ಧ ಸೂಕ್ಷ್ಮ ಕ್ರಮ ಕೈಗೊಂಡು ನಿಯಂತ್ರಿಸಬೇಕಾಗಿದ್ದಂತಹ ಜವಾಬ್ದಾರಿಯನ್ನು ಹೊತ್ತ ಜನನಾಯಕರು ಅದ್ಯಾವುದರ ಪರಿವೇ ಇಲ್ಲದೆ ತಮ್ಮ ಜೇಬನ್ನು ತುಂಬಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದಾರೆ. ಈ ಲಜ್ಜೆಗೆಟ್ಟ ರಾಜಕಾರಣಿಗಳು ಸಮಾಜದಲ್ಲಿ ಯಾವುದೇ ಒಂದು ಅಹಿತಕರ ಘಟನೆ ನಡೆದರೂ ಅದಕ್ಕೆ ಕೋಮು ಬಣ್ಣವನ್ನು ಲೇಪಿಸಿ ಪರಸ್ಪರ ಜನರ ಮದ್ಯೆ ವಿಷ ಬೀಜವನ್ನು ಬಿತ್ತಿ ದ್ವೇಷ ವೈಷಮ್ಯವನ್ನು ಬೆಳೆಸಿ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇವರ ಈ ಕಾರ್ಯ ಸಾಧನೆಗೆ ಇವರೊಂದಿಗೆ ಪಾಲುದಾರನಾಗಿ ನಿಲ್ಲುವುದು ಕೆಲವು ಪೂರ್ವಾಗ್ರಹ ಪೀಡಿತ ಮಾಧ್ಯಮಗಳಾಗಿವೆ. ಸಮಾಜದಲ್ಲಿ ನಡೆಯುತ್ತಿರುವ ದುಷ್ಕ್ರತ್ಯಗಳನ್ನು ಬೆಳಕಿಗೆ ತಂದು ಅದರಿಂದ ಜನರನ್ನು ರಕ್ಷಿಸಬೇಕಾದಂತಹ ಹೊಣೆಗಾರಿಕೆಯನ್ನು ಹೊತ್ತಂತಹ ಮಾಧ್ಯಮಗಳು ಇಂದು ಹಣಕ್ಕಾಗಿ ಮತ್ತು ಟಿ.ಆರ್.ಪಿ ಗಾಗಿ ಸುಳ್ಳನ್ನು ಹತ್ತು ಬಾರಿ ಹೇಳಿ ಸತ್ಯವನಾಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ಇದರ ಮೂಲಗಳನ್ನು ಕೆದಕಿದರೆ ಇದಕ್ಕೆಲ್ಲ ಮುಖ್ಯ ಕಾರಣ ನಾವುಗಳೇ ಎಂದು ಹೇಳಬಹುದು.

ಭಾರತದ ಸಂವಿಧಾನವು ನಮಗೆ ಕೊಟ್ಟಿರುವ ಮತದಾನದ ಹಕ್ಕನ್ನು ವ್ಯಕ್ತಿ ಮತ್ತು ಅವನ ಪೂರ್ವ ಪರಂಪರೆಯನ್ನು ನೋಡದೆ ಕೇವಲ ಪಕ್ಷ ಮತ್ತು ಜಾತಿಯ ಆಧಾರದಲ್ಲಿ ಮತ ಚಲಾವಣೆ ಮಾಡುವ ಮೂಲಕ ದುಷ್ಟ ರಾಜಕಾರಣಿಗಳ ಹುಟ್ಟಿಗೆ ಕಾರಣರಾಗುತ್ತೇವೆ. ಮುಂದೆ ಇದೇ ರಾಜಕಾರಣಿಗಳು ಬೆಳೆದು ಎಲ್ಲೊಂದರಲ್ಲಿ ನಡೆಯುವ ರಕ್ತ-ಸಿಕ್ತ ಅಧ್ಯಾಯಕ್ಕೆ ಕಾರಣೀಕೃತರಾಗುತ್ತಾರೆ. ಸಮಾಜದ ಉನ್ನತಿಗಾಗಿ ಶ್ರಮಿಸಬೇಕಾಗಿದ್ದಂತಹ ರಾಜಕಾರಣಿಗಳು ತಮ್ಮ ಸ್ವಾರ್ಥಕಾಗಿ ಸಮಾಜವನ್ನು ಅವನತಿಯೆಡೆಗೆ ಕೊಂಡೊಯ್ಯುತ್ತಿರುವುದು ಅತ್ಯಂತ ಬೇಸರದ ಸಂಗತಿ ಎಂದು ಹೇಳಬಹುದು.

ಮತ್ತೊಂದು ಕಡೆ ಇನ್ನೂ ಕೂಡಾ ಪ್ರಾಪ್ತತೆಗೆ ಬರದಿರುವ ಮುಗ್ದ ಕಂದಮ್ಮಗಳನ್ನು ತಮ್ಮ ಕಾಮತೀಟೆ ತೀರಿಸಿಕೊಳ್ಳಲು ಸ್ವಂತ ತಂದೆಯರೇ ಉಪಯೋಗಿಸಿಕೊಳ್ಳುವಂತಹ ಹಲವು ಘಟನೆಗಳನ್ನು ನಾವು ಕಾಣಬಹುದಾಗಿದೆ, ಇವೆಲ್ಲವೂ ಮಾನವೀಯತೆ ನಶಿಸಿ ಹೋಗಿರುವುದರ ಕುರುಹುಗಳು ಎಂದು ಹೇಳಬಹುದು. ತಮಗೂ ಸಹ ಅಕ್ಕ ತಂಗಿ, ತಾಯಿಯಂದಿರಿದ್ದಾರೆಂಬ ಪರಿವೇ ಇಲ್ಲದೆ ಇನ್ನೊಂದು ಮನೆಯ ಹೆಣ್ಣು ಮಕ್ಕಳ ಮೇಲೆ ಕಾಮ ದ್ರಷ್ಟಿಯನ್ನು ಬೀರಿ ಅತ್ಯಾಚಾರವೆಸಗಿ ಅವರ ಬಾಳಿನ ನಂದಾ ದೀಪವನ್ನು ಆರಿಸಿ ಆನಂದ ಪಡೆಯುವ ವಿಕ್ರತ ಮನಸ್ಸಿನವರೇ ತುಂಬಿಹೋಗಿದ್ದಾರೆ ಈ ಕಲುಷಿತ ಸಮಾಜದಲ್ಲಿ.

ಒಂದು ಕಾಲದಲ್ಲಿ ಮಾನವೀಯತೆಗೆ ಹೆಸರು ವಾಸಿಯಾಗಿದ್ದ ಭಾರತ ದೇಶವು ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಳು ನಮ್ಮ ಪಾತ್ರವೂ ಸಹ ಮಹತ್ತರವಾದದ್ದು ಎಂಬ ಕಟು ಸತ್ಯವನ್ನು ಮರೆಯುವ ಹಾಗಿಲ್ಲ. ಬದಲಾಗ ಬೇಕಾಗಿದೆ ಗೆಳೆಯರೆ ನಾವು, ಬದಲಾಯಿಸಬೇಕಾಗಿದೆ ನಮ್ಮ ಭಾರತವನ್ನು. ಪ್ರತಿಯೊಂದು ರಾಷ್ಟ್ರವು ನಮ್ಮ ದೇಶದ ಅಭಿವ್ರದ್ಧಿಯನ್ನು ಕಂಡು ಅಸೂಯೆಪಡುವಂತಹ ದಿನಗಳಿಗಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ನಮ್ಮ ಸಂವಿದಾನವು ನಮಗೆ ಕೊಟ್ಟ ಹಕ್ಕನ್ನು ನಮ್ಮ ದೇಶದ ಅಭಿವ್ರದ್ಧಿಗಾಗಿ ಚಲಾಯಿಸುವುದರ ಮೂಲಕ ಬಲಿಷ್ಠ ಭಾರತವನ್ನು ಕಟ್ಟಬೇಕಾಗಿದೆ. ನಮ್ಮಗಳ ಮನಸ್ಸಿನ ಮೇಲೆ ಹೇರಲ್ಪಟ್ಟ ಕೋಮು ವೈಷಮ್ಯವನ್ನು ತೊಡೆದು ಹಾಕಿ ಸಹೋದರತೆಯ, ಸೌಹಾರ್ದಯುತ ಜಾತ್ಯತೀತ ಭಾರತವನ್ನು ಕಟ್ಟಬೇಕಾಗಿದೆ.

ಕೋಮುವಾದ ಅಳಿಯಲಿ
ಮಾನವೀಯತೆ ಉಳಿಯಲಿ
ಭಾರತೀಯತೆ ಬೆಳೆಯಲಿ
ಭಾರತ ಪ್ರಕಾಶಿಸಲಿ,
ಅನ್ಯ ದೇಶಗಳಿಗೆ ಬೆಳಕನನೀವ
ದೀವಿಗೆಯಾಗಲಿ... ನಮ್ಮ ದೇಶ
ಜೈಹಿಂದ್!


- ಟೀಂ ಬ್ಲೂ ವೇವ್ಸ್