ಭಾನುವಾರ, ಅಕ್ಟೋಬರ್ 5, 2014

ಪ್ರಥಮ ಸಂಪಾದಕೀಯ

ಬ್ಲೂ ವೇವ್ಸ್ ಧ್ಯೇಯೋದ್ದೇಶಗಳೊಂದಿಗೆ - ಪ್ರಥಮ ಸಂಪಾದಕೀಯ 

ನಮ್ಮ ದೇಶ ಸರೀ ಇಲ್ಲಾಪ್ಪಾ,ನಮ್ ಸಮಾಜ ಸರೀ ಇಲ್ಲಪ್ಪಾ,ನಮ್ ವ್ಯವಸ್ಥೆ ಹಂಗಪ್ಪಾ ಹಿಂಗಪ್ಪಾ,ಅನ್ಯಾಯ ಭ್ರಷ್ಟಾಚಾರ ಕೋಮುವಾದಗಳಪ್ಪಾ ಅನ್ನುತ್ತಲೇ ನಮ್ಮದೊಂದು ದಿನ ಕಳೆದು ಇರುಳಾಗುತ್ತದೆ...ಅಷ್ಟೆಲ್ಲ ದೇಶದ ಬಗ್ಗೆ ಸಮಾಜದ ಬಗ್ಗೆ ಮಾತನಾಡುವ ವೇಳೆಯಲ್ಲಿ ಕಸವೊಂದನ್ನು ರಸ್ತೆಯಲ್ಲಿ ಬಿಸುಟಿರುತ್ತೇವೆ,ರಾಂಗ್ ಸೈಡ್ನಲ್ಲಿ ಗಾಡಿ ನುಗ್ಗಿಸಿ ಯಾವುದೋ ಬಡಪಾಯಿಗೆ ಹಾನಿ ಮಾಡಿರುತ್ತೇವೆ,ದಂಡ ಕಟ್ಟುವುದು ತಪ್ಪಿಸಲು ಟ್ರಾಫಿಕ್ ಪೋಲೀಸ್ ಒಬ್ಬನಿಗೆ ಲಂಚ ಕೊಟ್ಟಿರ್ತೇವೆ,ಅಂಬ್ಯುಲೆನ್ಸ್ ಒಂದು ಕಿವಿಗಡಚಿಕ್ಕುವಂತೆ ಸೈರನ್ ಹೊಡೆಯುತ್ತಿದ್ದರೂ ದಾರಿ ಮಾಡಿ ಕೊಡುವ ಗೋಜಿರದೆ ಕಿವುಡರಂತೆ ಹಾಯಾಗಿ ಸಾಗುತ್ತಿರುತ್ತೇವೆ, ಅಸಹಾಯಕರನ್ನು ನಿರ್ಗತಿಕ ಮಕ್ಕಳನ್ನು ಬದಿಗೆ ಸರಿಸಿ ಮುಂದೆ ಸಾಗ್ತೇವೆ,ಅಲ್ಪ ಸ್ವಲ್ಪ ದಾನ ಮಾಡಿದ್ದನ್ನು ಪರಸ್ಯವಾಗಿ ಹೇಳಿ ಮಾನವಿಲ್ಲದ ದಾನಿಷ್ಟರಾಗುತ್ತೇವೆ, ಓರಗೆಯ ನಿರ್ಗತಿಕರ ಹಸಿವಿನ ಕೂಗುಗಳನ್ನು ನಮ್ಮ ಬಿರಿದ ಹೊಟ್ಟೆಯ ತೇಗಿನಲ್ಲಿ ಮರೆಮಾಚಿ ಬಿಡುತ್ತೇವೆ,ವರದಕ್ಷಿಣೆಯೆಂಬ ಅಸಹ್ಯದಿಂದ ಬಳಲಿ ಬೆಂಡಾದ ಹೆಣ್ಣು ಹೆತ್ತವರು ಅನಿಷ್ಟದ ತೊಲಗುವಿಕೆಗೆ ಅಂಗಲಾಚುತ್ತಿದ್ದರೆ ಮದುಮಗ ಪರಮ ಸ್ನೇಹಿತ ಮಾರಯಾ ಅನ್ನೋ ಮುಲಾಜಿನಲ್ಲಿ ನಗುನಗುತ್ತಾ ಹರಸಿ ಬಿರಿಯಾನಿ ಮೆದ್ದು ಬರುತ್ತೇವೆ,ಸುಳ್ಳು ಪ್ರಚಾರಗಳು,ಪತ್ರಿಕಾ ಸುದ್ಧಿಗಳು ಯಾರೋ ಅಮಾಯಕರ ಜೀವನವನ್ನು ಕತ್ತಲೆಗೆ ನೂಕುತ್ತಿರುವ ಸತ್ಯದರಿವಿದ್ದರೂ ತಲೆಕೆಡಿಸಿಕೊಳ್ಳದೆ ಬಗಲಿನ ಕ್ರಿಕೆಟ್ ಸಿನಿಮಾ ಸುದ್ಧಿಗಳೊಳಗೆ ಅತೀವ ಆಸಕ್ತಿಯಲ್ಲಿ ಹೂತು ಹೋಗಿಬಿಡುತ್ತೇವೆ,ಕೋಮುವಾದಿಗಳ ಷಡ್ಯಂತ್ರಗಳನ್ನು ಸೂಕ್ತ ರೀತಿಯಲ್ಲಿ ಎದುರಿಸದೆ ಎಲ್ಲೋ ಹರಟೆ ಕಟ್ಟೆಗಳಲ್ಲಿ ರೆಕ್ಕೆ ಪುಕ್ಕ ಕಟ್ಟಿ ಮತ್ತಷ್ಟು ತುಪ್ಪ ಸುರಿಯುತ್ತೇವೆ,ತಪ್ಪುಗಳನ್ನು ನನ್ನ ಧರ್ಮದವ ಎನ್ನೊ ಹುಚ್ಚು ಅನುಕಂಪದಲ್ಲಿ ಪ್ರತಿಭಟಿಸದೆ ಇನ್ನಷ್ಟು ಬೆಳೆಯಲು ಅರಿಯದೇ ಪ್ರೋತ್ಸಾಹಿಸುತ್ತೇವೆ, ಕಳ್ಳ ಡಕಾಯಿತ ಅತ್ಯಾಚಾರಿಗಳ ವಿರುದ್ಧ ನುಡಿಯಲು ಸಾಕ್ಷ್ಯಗಳಿದ್ದರೂ ಮುಚ್ಚಿಟ್ಟು ಜಾರಿಕೊಳ್ಳುತ್ತೇವೆ... ಅಸಹಾಯಕರೆಂಬಂತೆ ಕೈಚೆಲ್ಲಿ ಮರುದಿನ ಮುಂದುವರಿಯುತ್ತದೆ ನನ್ನ ದೇಶ ಹಂಗೆ ನನ್ನ ಸಮಾಜ ಹಿಂಗೆ..

ಹೌದಪ್ಪಾ ಹೀಗಾದರೆ ಅನ್ಯಗ್ರಹದ ಜೀವಿಗಳು ಅಥವಾ ವಿದೇಶದವರು ಬಂದು ನಮ್ಮ ದೇಶ ಸಮಾಜವನ್ನು ಸರಿಪಡಿಸುತ್ತಾರೆಯೇ..?? ಎಂಬ ಪ್ರಶ್ನೆಗಳು ನಿಮ್ಮೆಲ್ಲರೊಳಗೆ ಪ್ರತಿಧ್ವನಿಸಿರಬಹುದು... ಬನ್ನಿ... ಒಂದು ವೇಳೆ ಹೃದಯದೊಳಗಿದ್ದರೂ ಬೆಂಬಲವಿಲ್ಲದೆ ಅಕ್ಷರವಾಗದ,ಮಾತಾಗದ,ಕಾರ್ಯರೂಪವಾಗದ ನಿಮ್ಮೊಳಗಿನ ಜಾಗೃತಿಗಳೇ ಸಮಾಜದ ಬದಲಾವಣೆಯ ಬೃಹತ್ ಅಸ್ತ್ರಗಳಾಗಿರಬಹುದು.ಹಂಚಿಕೊಳ್ಳಿ, ಪ್ರಶ್ನಿಸಿ, ವಿಮರ್ಶಿಸಿ ಕಾರ್ಯರೂಪವಾಗುವ ನಿಜವಾಗಿಸಿ. ಪ್ರತಿಯೊಬ್ಬನೊಳಗೂ ಆತ್ಮಸಾಕ್ಷಿಯೆಂಬ ಲೇಖಕನಿದ್ದಾನೆ,ವಿವೇಚನೆಯ ಕಾವಲಿಟ್ಟು ಬಳಸಿ ಅವುಗಳನ್ನ ,ಒಳಿತನ್ನು ಧರ್ಮಾತೀತವಾಗಿ ಪ್ರೋತ್ಸಾಹಿಸಿ,ಕೆಡುಕನ್ನು ಧರ್ಮಾತೀತವಾಗಿ ಉಗ್ರ ಸ್ವರಗಳಲ್ಲಿ ಖಂಡಿಸಿ.ಸತ್ಯ ಅಸತ್ಯದೊಂದಿಗಿನ ಸಂಘರ್ಷಗಳನ್ನು ನಿರಂತರವಾಗಿ ಚಾಲ್ತಿಯಲ್ಲಿಡದಿದ್ದರೆ ಸಮಾಜವು ಕೆಡುಕಿನ ಕೊಂಪೆಯಾಗಿ ವಾಸಯೋಗ್ಯವಲ್ಲವೆನ್ನುವಷ್ಟು ಗಬ್ಬೆದ್ದು ಹೋಗಬಹುದು.ಯುವ ರಕ್ತಗಳಿದರ ನೇತೃತ್ವವನ್ನು ವಹಿಸಿಕೊಂಡಾಗಲೇ ಪರಿಣಾಮಕಾರಿಯಾಗುವುದು ಕೆಡುಕಿನ ವಿರುದ್ಧದ ಹೋರಾಟ. ಪ್ರತಿಯೊಬ್ಬ ಭಾರತೀಯ ಯುವಕ ಯುವತಿಯರು ಅದರಲ್ಲೂ ಮುಸ್ಲಿಂ ಯುವಕ ಯುವತಿಯರು ಸ್ವಲ್ಪ ಜಾಸ್ತಿಯೇ ಅನ್ಯಾಯ ಅಸತ್ಯಗಳ ವಿರುದ್ಧ ಧ್ಚನಿಯೆತ್ತದಿದ್ದರೆ ಅನಕ್ಷರಸ್ಥರಾಗಿಯೂ ದೇಶ ಸಮಾಜಕ್ಕಾಗಿ ರಕ್ತ ಚೆಲ್ಲಿದ ನಮ್ಮ ಹಿರಿಯರ ನಿಸ್ವಾರ್ಥ ತ್ಯಾಗಗಳನ್ನು ವಿದ್ಯಾವಂತರಾಗಿದ್ದೂ ನಾವು ಅವಮಾನಿಸಿದಂತೆ..



ಜ್ಙಾನವನ್ನು ಒಳಿತಿಗೆ ಉಪಯೋಗಿಸದೆ ಪೆಟ್ಟಿಗೆಯಲ್ಲಿಡುವವನು ಜೀ

ವಂತ ಶವದಂತೆ ಎಂಬ ಪ್ರಜ್ಙೆಯು ನಮ್ಮೊಳಗನ್ನು ಚುಚ್ಚಲಿ.. ಬನ್ನಿ ಒಳಿತಿಗಾಗಿ ಅಕ್ಷರಗಳು ಸಭ್ಯತನದ ಅತ್ಯುನ್ನತ ಮಟ್ಟದಲ್ಲಿ ಹರಿಯಲಿ. ಆ ಮೂಲಕ ಒಂದಷ್ಟು ದಮನಿತರಿಗೆ,ನಿರ್ಗತಿಕರಿಕೆ,ಅಸಹಾಯಕರಿಗೆ,ಅನಾಥರಿಗೆ,ತಾರತಮ್ಯಕ್ಕೊಳಪಟ್ಟುಹಿಂಸೆ ಅನುಭವಿಸುತ್ತಿರುವ ಮನಸ್ಸುಗಳಿಗೆ ಹೆಗಲಾಗೋಣ. ಸಮಾಜದ ದೇಶದ ಮೇಲಿರುವ ಜವಾಬ್ದಾರಿಗಳನ್ನು ಸಾದ್ಯವಾದಷ್ಟು ಪ್ರಾಮಾಣಿಕವಾಗಿ ತೀರಿಸಿದ್ದೇವೆ ಎನ್ನುವ ಆತ್ಮತೃಪ್ತಿಯನ್ನು ನಿಮ್ಮದಾಗಿಸುವ ಮುಖ್ಯವಾಹಿನಿಯೆಡೆಗಿರುವ ಪುಟ್ಟದಾದರೂ ದಿಟ್ಟವಾಗಿರುವ ಹೆಜ್ಜೆಯೊಂದು ಪ್ರಾರಂಭವಾಗಿದೆ, ನಿಮ್ಮ ಬರಹಗಳನ್ನು ಸ್ಪರ್ಧಾತ್ಮಕವಾಗಿ ಒರೆಗೆ ಹಚ್ಚಿ ನಗದು ಪುರಸ್ಕಾರಗಳ ಸಹಿತ ಬೆಂಬಲಿಸುವಂತಹ ಹಲವಾರು ಕೌತುಕಗಳಿದೆ ಮುಂದಿನ ದಿನಗಳಲ್ಲಿ ,ಕನಸುಗಳು ನಮ್ಮದು ನೀವುಗಳೇ ಅದರ ಬೆನ್ನೆಲುಬುಗಳು.ಲೇಖನಿಯ ಶಾಯಿಯ "ನೀಲಿ ಅಲೆ (ಬ್ಲೂವೇವ್ಸ್)" ಗಳು ಅಸತ್ಯದ ಮೇಲಪ್ಪಳಿಸಿ ಗುಡಿಸಿ ಹಾಕಲಿ ಎಂದು ಹಾರೈಸುತ್ತಾ ಸರ್ವ ಸಹೋದರ ಸಹೋದರಿಯರ ಹಾರೈಕೆ ಪ್ರೋತ್ಸಾಹಗಳ ಬೇಡುತ್ತಾ,
-

-Team Blue Waves.
www.facebook.com/BlueWavesPage

ಶನಿವಾರ, ಅಕ್ಟೋಬರ್ 4, 2014

ಇದುವೇ "ಬ್ಲೂ ವೇವ್ಸ್" ನ ಲಕ್ಷ್ಯ.

೧೦೦ ಇಸಂಗಳು, ೧೦೦ ಸಂಘಟನೆಗಳು, ೧೦೦ ಧರ್ಮಗಳು, ೧೦೦ ಜಾತಿಗಳು, ೧೦೦ ರಾಜಕೀಯ ಪಕ್ಷಗಳು, ಇದರೆಲ್ಲದರ ಸಮನ್ವತೆಯಿಂದ ಶಾಂತ ಸುಂದರ, ಐಕ್ಯತೆಯ ಸಮಾಜ. ಇದುವೇ "ಬ್ಲೂ ವೇವ್ಸ್" ನ ಲಕ್ಷ್ಯ. ಕೆಲವರು ಕೇಳಿದ್ದುಂಟು.. "ಅದು ಯಾಕೆ ಹಾಗೆ ಹೆಸರಿಟ್ಟಿದ್ದೀರಿ..?" ಬ್ಲೂ(ನೀಲಿ) ಎಂಬುದು ಲೇಖನಿಯ ಶಾಯಿ, ವೇವ್ಸ್ ಅಂದರೆ ಅಲೆಗಳು. ಇದು ಅಕ್ಷರದ ಮೌನ ಗರ್ಜನೆ (the silent roar).




ಪ್ರತಿಯೊಬ್ಬನೊಳಗೂ ಒಬ್ಬ ಲೇಖಕನಿದ್ದಾನೆ, ಅವನ ಮೌನ ಪ್ರತಿಭಟನೆಗಳು, ನೋವುಗಳು, ಪ್ರಶ್ನೆಗಳು, ಉತ್ತರಗಳು, ವಿಮರ್ಶೆಗಳು ಅಕ್ಷರವಾಗ ಬಯಸುತ್ತದೆ. ಸತ್ಯದ ಮತ್ತು ಅಸತ್ಯದ ನಡುವೆ ಒಂದು ತೆಳು ಪರದೆ ಕಳಚಿಕೊಳ್ಳಬೇಕಿದೆ. ಸಮಾಜದೊಳಿತಿಗೆ ಹರಿಯದ ಜ್ಞಾನ, ಲೇಖನಿ ಹೆಪ್ಪುಗಟ್ಟಿದ ರಕ್ತ ದ ಹಾಗೆ. ಬನ್ನಿ ಇದು ನಿಮ್ಮ ನೋವಿನ, ಮೌನದ ಪ್ರತಿಭಟನೆಯ ಶಬ್ದ. ಸಮಾಜದ ಶಾಂತಿ ಕದಡುವ ಪ್ರತಿಯೊಂದು ಶಕ್ತಿಯ ವಿರುದ್ದದ್ದ ದನಿ.
ಬ್ಲೂ ವೇವ್ಸ್ ನಾಳೆ ಅಧಿಕೃತವಾಗಿ ಉದ್ಘಾಟನೆಗೊಳ್ಳಲಿದೆ. ಆ ಮೂಲಕ ಕನ್ನಡ ಸಾಹಿತ್ಯಕ್ಕೆ ಮತ್ತೊಂದು ಮೆರುಗು ತುಂಬಲಿದೆ. ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ. ಲೇಖನಿ ಶಾಯಿಯಿಂದ ಮೂಡಿದ ನೀಲಿ ಅಲೆಗಳು ಮನಸಿಂದ ಮನಸಿಗೆ ಬಾಂಧವ್ಯದ ಸೇತುವೊಂದನ್ನು ನಿರ್ಮಿಸಲಿ, ಹೊಸದೊಂದು ಅಕ್ಷರ ಕ್ರಾಂತಿಗೆ ಹೇತುವಾಗಲಿ. ಯಾವುದೇ ಜಾತಿ, ಮತ, ಸಂಘಟನೆ, ರಾಜಕೀಯ ಸಿದ್ಧಾಂಥಗಳ ಪ್ರಲೋಭೆಯಿಂದಾಚೆಗಿನ ನೆಮ್ಮದಿಯ ಸೌಹಾರ್ದಯುತ ಸಮಾಜದ ನಿರ್ಮಾಣದಲ್ಲಿ ಪಾಲುದಾರರಾಗಿರಿ.

ಬುಧವಾರ, ಅಕ್ಟೋಬರ್ 1, 2014

ಶುಭಾರಂಭವಾಗಲಿರುವ "ಬ್ಲೂ ವೇವ್ಸ್ (ನೀಲಿ ತೆರೆಗಳು)" ಫೇಸ್ಬುಕ್ ಪೇಜ್

ಭಾನುವಾರ ಶುಭಾರಂಭವಾಗಲಿರುವ "ಬ್ಲೂ ವೇವ್ಸ್ (ನೀಲಿ ತೆರೆಗಳು)" ಫೇಸ್ಬುಕ್ ಪೇಜ್




ಸಾಮಾಜಿಕ ಜಾಲತಾಣಗಳ ಅವಕಾಶಗಳನ್ನು ಸದುಪಯೋಗಪಡಿಸಿ ಯುವ ಬರಹಗಾರರನ್ನು ಒಂದೇ ವೇದಿಕೆಯಡಿ ಸಜ್ಜುಗೊಳಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ "ಬ್ಲೂ ವೇವ್ಸ್" ಫೇಸ್ಬುಕ್ ಪೇಜ್ ಇದೇ ಬರುವ ಭಾನುವಾರ, 2014 ಅಕ್ಟೋಬರ್ 5ರಂದು ಲೋಕಾರ್ಪಣೆಗೊಳ್ಳಲಿದೆ. ಫೇಸ್ಬುಕ್ ನಂಥಹ ಸಾಮಾಜಿಕ ತಾಣದಲ್ಲಿ ತಮ್ಮ ವಿಶಿಷ್ಟ ಬರವಣಿಗೆಯ ಮೂಲಕ ಅಕ್ಷರಲೋಕದಲ್ಲಿ ಮಿಂಚುತ್ತಿರುವ ಹಲವಾರು ಎಲೆಮರೆಕಾಯಿಗಳಿಗೆ ಈ ವೇದಿಕೆ ಹೊಸ ಅವಕಾಶಗಳನ್ನು ಒದಗಿಸಲಿದೆ. 

ಫೇಸ್ಬುಕ್ನಲ್ಲಿ ಮತ್ತು ಬ್ಲಾಗ್ ಲೋಕದಲ್ಲಿ ಸಕ್ರಿಯರಾಗಿರುವ ಯುವಕರ ಗುಂಪು "ಬ್ಲೂ ವೇವ್ಸ್" ನ ರುವಾರಿಗಳಾಗಿದ್ದು, ಸಾಹಿತ್ಯ ಲೋಕದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಹೊಸ ತಲೆಮಾರಿನ ಯುವ ಬರಹಗಾರರನ್ನು ಒಟ್ಟುಗೂಡಿಸುವುದು ಅವರ ಸಾಹಿತ್ಯವನ್ನು ಆಸ್ವಾದಿಸುವುದು ಮತ್ತು ಅವರಿಗೆ ಪ್ರೋತ್ಸಾಹ ನೀಡುವುದೇ "ಬ್ಲೂ ವೇವ್ಸ್"ನ ಧ್ಯೇಯೋದ್ದೇಶ ಎಂದು ನಿರ್ವಾಹಕ ತಂಡ ತಿಳಿಸಿದೆ. ಜೊತೆಗೆ ಫೇಸ್ಬುಕ್ನಂಥಹ ಸಾಮಾಜಿಕ ತಾಣಗಳಲ್ಲಿ ಹಲವು ಕಪೋಲ ಕಲ್ಪಿತ ವಿಷಯಗಳನ್ನು ತೂರಿ ಬಿಡುವ ಆ ಮೂಲಕ ಮನಸ್ಸು ಮನಸ್ಸುಗಳ ನಡುವಿನ ಸಾಮರಸ್ಯಗಳನ್ನು ಒಡೆಯುವ,ಸಮಾಜದ ಆರೋಗ್ಯವನ್ನು ಹಾನಿಗೆಡವುವ ವ್ಯವಸ್ತಿತ ಸಂಚುಗಳು ತಲೆಯೆತ್ತಿ ನಿಂತಿರುವ ಇಂದಿನ ಸನ್ನಿವೇಶದಲ್ಲಿ ಅದರ ವಿರುದ್ದವೂ "ಬ್ಲೂ ವೇವ್ಸ್" ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಶಾಂತಿಯುತ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸಲಿದೆ ಎಂದೂ ನಿರ್ವಾಹಕ ತಂಡವು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಲವಾರ ಸಾಮಾಜಿಕ ಮುಖಂಡರು ಮತ್ತು ಬರಹಗಾರರು ಬ್ಲೂ ವೇವ್ಸ್ ಜೊತೆ ಕೈ ಜೋಡಿಸಿದ್ದು, ಭಾನುವಾರ "ಬ್ಲೂ ವೇವ್ಸ್(ನೀಲಿ ತೆರೆಗಳು)" ಫೇಸ್ಬುಕ್ ಪೇಜ್ ಸಾರ್ವಜನಿಕರಿಗೆ ತೆರವಾಗಲಿದ್ದು ಯುವ ಬರಹಗಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ