ಶನಿವಾರ, ಏಪ್ರಿಲ್ 4, 2015

ಮಾಧ್ಯಮ- ಪೂರ್ವಾಗ್ರಹ ಮತ್ತು ನೈತಿಕತೆ





     ಮಂಜುಳಾ ಮಾಸ್ತಿಕಟ್ಟೆ, ನ್ಯೂಸ್ ಆ್ಯಂಕರ್, ರಾಜ್‍ ನ್ಯೂಸ್ ಕನ್ನಡ, ಬೆಂಗಳೂರು
“ನಿಕ್ಷೇಪ 2014-15” ಸ್ಪರ್ಧೆಯಲ್ಲಿ ಪ್ರಥಮ  ಬಹುಮಾನ ಪಡೆದ ಲೇಖನ

ಮಾಧ್ಯಮ ಎಂಬುದು ಪೂರ್ವಾಗ್ರಹ ಮತ್ತು ನೈತಿಕತೆ ಎಂಬ ಎರಡು ಅಂಚಿನ ಕತ್ತಿಯನ್ನು ತನ್ನಲ್ಲಿ ಹುಡುಗಿಸಿಟ್ಟುಕೊಂಡಿರುವ ಅಪೂರ್ವವಾದ ಕ್ಷೇತ್ರ. ಇಲ್ಲಿದ್ದಷ್ಟು ಪೂರ್ವಾಗ್ರಹಗಳು ಹಾಗೂ ನೈತಿಕ ಪ್ರಜ್ಞೆಯ ಕನವರಿಕೆಗಳು ಜಗತ್ತಿನ ಇನ್ಯಾವುದೇ ಉದ್ಯಮದಲ್ಲಿ, ಸಮುದಾಯದಲ್ಲಿ ಕಂಡುಬರುವುದಿಲ್ಲ. ವೈಯುಕ್ತಿಕ ನೆಲೆಯಿಂದ ಆರಂಭವಾಗಿ, ವೃತ್ತಿಪರ ನೀತಿಗಳವರೆಗೆ ಪೂರ್ವಾಗ್ರಹಗಳು ಇಲ್ಲಿ ಕೆಲಸ ಮಾಡುತ್ತವೆ. ಅಷ್ಟೆ ತೀವ್ರವಾಗಿ ನೈತಿಕ ಪ್ರಜ್ಞೆ ಎಲ್ಲವಕ್ಕೂ ಒಂದು ತಾತ್ವಿಕ ಸಮಜಾಯಿಷಿಯನ್ನು ಕಟ್ಟಿಕೊಡುವ ಕೆಲಸ ಮಾಡುತ್ತದೆ.

ಇದೊಂದು ಅತ್ಯಂತ ಸಂಕೀರ್ಣವಾದ, ಕಳೆದ ಕೆಲವು ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಅತ್ಯಂತ ಚರ್ಚೆಯಲ್ಲಿರುವ ವಿಚಾರ. ಕಾಲ ಬದಲಾಗುತ್ತಿದ್ದಂತೆ, ತಂತ್ರಜ್ಞಾನ ಬೆಳೆಯುತ್ತ ಬರುತ್ತಿದ್ದಂತೆ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಮಾಧ್ಯಮ ಕ್ಷೇತ್ರದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ಕಾಣಿಸಿಕೊಂಡವು. ಅವುಗಳು ಸುದ್ದಿಯ ಸ್ವರೂಪ, ತಲುಪುವ ರೀತಿ, ಸಂವಹನ ಕ್ರಮ ಹೀಗೆ ನಾನಾ ಆಯಾಮಗಳಲ್ಲಿ ಆದಂತಹ ಬದಲಾವಣೆಗಳು. ಇಂತಹ ಬದಲಾವಣೆಗಳು ಆದಂತೆಲ್ಲ, ಅವುಗಳು ಹೊರಡಿಸುವ ಧ್ವನಿಯಲ್ಲೂ ಕೆಲವೊಂದು ಮಾರ್ಪಾಟುಗಳನ್ನು ಮಾಡಿಕೊಳ್ಳಬೇಕಾದ ಅನಿರ್ಯಾತೆ ಎದುರಾಯಿತು. ಇಂತಹ ಸಮಯದಲ್ಲಿ, ಅಂದರೆ, 90ರ ದಶಕದಲ್ಲಿ ಮಾಧ್ಯಮಗಳ ನೈತಿಕತೆ ಕುರಿತು ಜಾಗತಿಕ ಸಂಸ್ಥೆಗಳು ನೈತಿಕತೆಯ ವಿಚಾರದಲ್ಲಿ ನಿಯಮಾವಳಿಗಳನ್ನು ರೂಪಿಸಲು ಮುಂದಾದವು. ಆದರೆ, ಅದರಲ್ಲಿ ಕೆಲವು ಪೂರ್ವಾಗ್ರಹಗಳು ಕೆಲಸ ಮಾಡಿವೆ ಎಂಬ ಕಾರಣಕ್ಕೆ, ಈ ಕರಡು ಮಾಧ್ಯಮ ನೈತಿಕತೆಯ ಪರ ಮತ್ತು ವಿರೋಧದ ದನಿಗಳು ಕೇಳಿಬಂದವು. ಅಲ್ಲಿಂದ ಆಚೆಗೆ ನಿರ್ದಿಷ್ಟವಾಗಿ ಮಾಧ್ಯಮಗಳ ನೈತಿಕತೆ ಎಂಬುದು ಲಿಖಿತ ರೂಪ ಇಲ್ಲ. ಆದರೆ, ಪರಿಭಾವಿಸುವಿಕೆಯಲ್ಲಿ ಪ್ರತಿಯೊಂದು ಮಾಧ್ಯಮವೂ ತನ್ನದೇ ಆದ ನೈತಿಕ ಮಿತಿಗಳನ್ನು ದಾಟಬಾರದು ಎಂಬುದನ್ನು ಜನಸಾಮಾನ್ಯರೂ ಒಪ್ಪುತ್ತಾರೆ. ಹೀಗಾಗಿ, ಮಾಧ್ಯಮ ಸಂಸ್ಥೆಗಳು ತಮ್ಮನ್ನು ತಾವು ನಿರ್ಭಂಧಿಸಿಕೊಳ್ಳುವ ಅಗತ್ಯ ಇತ್ತು ಮತ್ತು ಇದೆ.

ಈ ಕುರಿತು ಇನ್ನಷ್ಟು ಆಳಕ್ಕಿಳಿಯುವ ಮುನ್ನ ಕೆಲವೊಂದು ವಾಸ್ತವದ ವಿಚಾರಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ನ್ಯೂಸ್‍ ರೂಂ ಗಜಿಬಿಜಿಯ ನಡುವೆ ಪುಟ್ಟ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವಾದ ಸುದ್ದಿ ಬರುತ್ತದೆ. ಬ್ರೇಕಿಂಗ್‍ ನ್ಯೂಸ್ ಧಾವಂತ ಹೇಗಿರುತ್ತದೆ ಎಂದರೆ, ಬಾಲಕಿಯ ಅತ್ಯಾಚಾರದ ಸುದ್ದಿ ನಮ್ಮಲ್ಲಿಯೇ ಮೊದಲು ‘ಆನ್ ಏರ್’ ಆಗಬೇಕು ಎಂದು ಎಲ್ಲರೂ ಬಯಸುತ್ತಾರೆ. ಹೀಗಾಗಿ, ಸುದ್ದಿ ಬಂದ ಕೆಲವೇ ಕ್ಷಣಗಳಲ್ಲಿ ಅದು ಟಿವಿ ಪರದೆಯ ಮೇಲೆ ಮೊದಲು ಅಕ್ಷರ ರೂಪದಲ್ಲಿ, ನಂತರ ಆಕೆ ಭಾವಚಿತ್ರ ಸಮೇತ ಭಿತ್ತರಗೊಳ್ಳುತ್ತದೆ. ನಂತರ ಸ್ಥಳದಲ್ಲಿರುವ ವರದಿಗಾರನಿಗೆ ಕರೆ ಮಾಡಿ, ಇನ್ನಷ್ಟು ಮಾಹಿತಿ ನೀಡುಲು ಕೋರಲಾಗುತ್ತದೆ. ಆತ ಅತ್ಯಾಚಾರ ನಡೆದ ಸ್ಥಳ, ದಿನಾಂಕ ಮತ್ತಿತರ ಮಾಹಿತಿ ಜತೆಗೆ ಆಕೆಯ ಹೆಸರು, ವಿಳಾಸ ಎಲ್ಲವನ್ನೂ ತಿಳಿಸಿಬಿಡುತ್ತಾನೆ. ಕೊನೆಗೆ, ಅದು ಚಾನಲ್‍ನ ಉನ್ನತ ಹುದ್ದೆಯಲ್ಲಿ ಇದ್ದವರ ಕಣ್ಣಿಗೆ ಬಿದ್ದು, ಅವರಿಗೆ ಆ ಕ್ಷಣದಲ್ಲಿ ಅರ್ಥವಾದರೆ, ಸದರಿ ಸುದ್ದಿಗೆ ಬ್ರೇಕ್‍ ನೀಡಿ ಮುಂದಿನ ಸುದ್ದಿಗೆ ಹೋಗುತ್ತಾರೆ. ಅಷ್ಟೊತ್ತಿಗೆ ಮಾಧ್ಯಮವಾಗಿ ಪಾಲಿಸಬೇಕಾದ ನೈತಿಕ ವಿಚಾರವೊಂದು ಗಾಳಿಗೆ ತೂರಿ ಹೋಗಿರುತ್ತದೆ. ಇದು ಸದ್ಯದ ಕನ್ನದ ನ್ಯೂಸ್‍ ಚಾನಲ್‍ಗಳಲ್ಲಿ ಕಂಡು ಬರುತ್ತಿರುವ ನಿತ್ಯದ ಪರಿಪಾಟಲುಗಳು. ಹಾಗಂತ ಸುದ್ದಿ ನೀಡಿದ ವರದಿಗಾರನಿಗೆ ಕಾಳಜಿ ಇಲ್ಲ ಅಂತ ಅನ್ನಲೂ ಸಾಧ್ಯವಿಲ್ಲ. ಆದರೆ, ನಾವೇ ಮೊದಲು ನೀಡಿದರೆ, ಸುದ್ದಿ ರೇಟಿಂಗ್‍ನಲ್ಲಿ ನಾವೇ ಮುಂದೆ ಇರುತ್ತೇವೆ ಎಂಬ ಧಾವಂತದ ಪೂರ್ವಾಗ್ರಹವೊಂದು ಆತನ ವೃತ್ತಿನಿಷ್ಟ ವರದಿಗಾರಿಕೆಯಿಂದ ಹೆಜ್ಜೆ ಹಿಂದಿಡುವಂತೆ ಮಾಡಿರುತ್ತದೆ.

ನೈತಿಕತೆ ಹಾಗೂ ಪೂರ್ವಾಗ್ರಹಳು ಪ್ರತಿ ದಿನ ಮಾಧ್ಯಮಗಳ ಕೆಲಸದಲ್ಲಿ ಅಭಿವ್ಯಕ್ತಗೊಳ್ಳುತ್ತವೆ ಎಂಬುದಕ್ಕೆ ಇದೊಂದು ಚಿಕ್ಕ ಉದಾಹರಣೆ. ಇದನ್ನು ಇನ್ನಷ್ಟು ಆಳದಲ್ಲಿ ಅರ್ಥಮಾಡಿಕೊಳ್ಳುವ ಮುನ್ನ ಇಂದಿನ ಮಾಧ್ಯಮಗಳು ಸಾಗುತ್ತಿರುವ ಹಾದಿಯ ಕುರಿತು ಮೊದಲು ಗಮನ ಹರಿಸಬೇಕಿದೆ. ಸಾಮಾನ್ಯವಾಗಿ ಜಾಗತಿಕ ಮಾಧ್ಯಮಗಳು ಹಾಗೂ ರಾಷ್ಟ್ರೀಯ ನ್ಯೂಸ್‍ ಮೀಡಿಯಾಗಳಿಗೆ ಹೋಲಿಸಿದರೆ ಸ್ಥಳೀಯ ಸುದ್ದಿ ವಾಹಿನಿಗಳ ಪ್ರಭಾವ ಜನಸಾಮಾನ್ಯರ ಮಟ್ಟದಲ್ಲಿ ಹೆಚ್ಚಿರುತ್ತದೆ. ಇವುಗಳನ್ನು ನೀತಿ ನಿರೂಪಕರು, ಜನ ಪ್ರತಿನಿಧಿಗಳು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಇರುವವರು ನೋಡುತ್ತಾರೆ, ಆದರೆ ಜನರು ಇದರ ಗ್ರಾಹಕರಾಗಿರುತ್ತಾರೆ. ಹೀಗಾಗಿಯೇ, ಸ್ಥಳೀಯ ಸುದ್ದಿ ವಾಹಿನಿಗಳು ಅಥವಾ ಪ್ರಾದೇಶಿಕ ಭಾಷೆಯ ಪತ್ರಿಕೆಗಳು ಸಾಮಾನ್ಯ ಜನರ ಅಭಿರುಚಿಯನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ತಮ್ಮನ್ನು ತಾವು ಸ್ಫರ್ದೆಯಲ್ಲಿ ಉಳಿಯಲು  ಪ್ರಯತ್ನಿಸುತ್ತವೆ. ಎಲ್ಲವೂ ಮಾರುಕಟ್ಟೆ ಕೇಂದ್ರಿತವಾಗಿರುವ ಇವತ್ತು ಮಾಧ್ಯಮ ಕೂಡ ಅದರಿಂದ ಹೊರತಾಗಿ ಇರಲು ಸಾಧ್ಯವಿಲ್ಲ; ಬಯಸುವುದೂ ಕಷ್ಟ. ಶಿಕ್ಷಣ, ಆರೋಗ್ಯದಂತಹ ಸೇವಾ ಕ್ಷೇತ್ರಗಳೇ ಇವತ್ತು ಮಾರುಕಟ್ಟೆಯಲ್ಲಿ ಸರಕಾಗಿ ಗ್ರಾಹಕರಿಗಾಗಿ ಕಾಯುತ್ತಿರುವ ದಿನಗಳಿವು. ಹೀಗಿರುವಾಗ ಮಾಧ್ಯಮವನ್ನು ಮಾತ್ರ ಸೇವೆಯ ರೀತಿಯಲ್ಲಿ ನೋಡಲು ಹೇಗೆ ಸಾಧ್ಯವಾಗುತ್ತದೆ? ಅದು ಸದ್ಯದ ಪ್ರಶ್ನೆ. ಇಂತಹ ಔದ್ಯಮಿಕ ಒತ್ತಡಗಳಿರುವ ಕ್ಷೇತ್ರವೊಂದರಲ್ಲಿ ಸಹಜವಾಗಿಯೇ ಹಲವು ರೀತಿಯ ಹಿತಾಸಕ್ತಿಗಳು ಕೆಲಸ ಮಾಡುತ್ತವೆ. ಅವುಗಳದ್ದೇ ಆದಂತಹ ರಾಜಕೀಯ, ಆರ್ಥಿಕ ಪೂವ್ರಾಗ್ರಹಗಳು ಸುದ್ದಿಯ ರೂಪದಲ್ಲಿ ಜನ ಸಾಮಾನ್ಯರಿಗೆ ತಲುಪುವ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ಇದನ್ನು ನೈತಿಕತೆ ಎಂಬ ಚರ್ಚೆಯಿಂದ ಹೊರಗಿಟ್ಟರೆ ಮಾತ್ರವೇ ಇಂತಹ ಕ್ಷೇತ್ರದ ಗೌರವಾನ್ವಿತ ಮಾನವ ಸಂಪನ್ಮೂಲ ಎನ್ನಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ನಮ್ಮ ದೇಶದ ಮಾಧ್ಯಮಗಳಿಗೆ ವಿಶೇಷ ಹಿನ್ನೆಲೆಯಿದೆ. ಇದು ವಸಹಾತುಶಾಹಿ ವಿರುದ್ಧ ಹೋರಾಟ ಮಾಡಿದ ಆಫ್ರಿಕನ್‍ ಹಾಗೂ ಲ್ಯಾಟಿನ್‍ ಅಮೆರಿಕಾ ದೇಶಗಳ ಮಾಧ್ಯಮಗಳಿಗೆ ಇರುವಂತಹ ಹಿನ್ನೆಲೆ. ಒಂದು ಕಡೆ ರಾಷ್ಟ್ರೀಯ ಚಳವಳಿ ಮತ್ತೊಂದು ಕಡೆ ಪ್ರಬಲ ಆರ್ಥಿಕ ಹಿತಾಸಕ್ತಿಯನ್ನು ಹೊಂದಿದ್ದ ಬ್ರಿಟಿಷ್‍ ಈಸ್ಟ್‍ ಇಂಡಿಯಾ ಕಂಪನಿ. ಇವುಗಳ ನಡುವೆ ಮಾಧ್ಯಮ ಎಂಬುದು ಯಾವತ್ತಿಗೂ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿಯೇ ಇತ್ತು. ಹಾಗಂತ ಹೇಳುತ್ತದೆ ಭಾರತದ ಪತ್ರಿಕೋದ್ಯಮದ ಇತಿಹಾಸ. ಸ್ವಾತಂತ್ರ್ಯ ನಂತರವಂತೂ ಹೊಸ ದೇಶವನ್ನು ಕಟ್ಟುವ ನಿಟ್ಟಿನಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ಹೆಸರಿನಲ್ಲಿ ಮಾಧ್ಯಮಗಳ ಒಂದು ಅಂಚಿನವರೆಗೂ ನಿರ್ವಹಿಸಿದ ಪಾತ್ರ ದೊಡ್ಡದಿತ್ತು. ಆದರೆ, 90ರ  ದಶಕದ ನಂತರ ಆದ ಮಹತ್ವದ ಬದಲಾವಣೆಯಲ್ಲಿ ಮಾಧ್ಯಮಗಳು ಅನಿವಾರ್ಯವಾಗಿ ತಮ್ಮನ್ನು ತಾವು ಮುಕ್ತ ಆರ್ಥಿಕ ನೀತಿಗಳಿಗೆ ಒಗ್ಗಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಯಿತು. 

ಇಲ್ಲಿನ ಮಾಧ್ಯಮ ಕ್ಷೇತ್ರ ಸಹಜವಾಗಿಯೇ ಜಾಗತಿಕ ಮಾರುಕಟ್ಟೆಗೆ ತೆರೆದುಕೊಂಡಿತು. ಅದು ಮೊದಲು ಮನೋರಂಜನೆಯ ರೂಪದಲ್ಲಿ, ನಂತರ ಸುದ್ದಿಯ ರೂಪದಲ್ಲಿ ವಿದೇಶಿ ಮಾಧ್ಯಗಳ ವಿಶೇಷವಾಗಿ ಅಮೆರಿಕನ್ ಮಾಧ್ಯಮಗಳ ಯಥಾವತ್ ನಕಲು ಮೂಡಿಬರಲು ಶುರುವಾಯಿತು. ಮನೋರಂಜನೆ ಹೆಸರಿನಲ್ಲಿ ಅಮದು ಮಾಡಿಕೊಂಡ ಪರಿಕರಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ ಎಂಬ ಪೂರ್ವಾಗ್ರಹ ಇಲ್ಲಿ ಕೆಲಸ ಮಾಡಿರುವ ಸಾಧ್ಯತೆಯೂ ಇದೆ. ಆದರೆ, ಅದಕ್ಕಿಂತಹಲೂ ಮುಖ್ಯವಾಗಿ ಇಂತಹ ಕಾರ್ಯಕ್ರಮಗಳನ್ನು ಜನ ನೋಡುತ್ತಿದ್ದಾರೆ ಎಂಬುದಕ್ಕೆ ‘ರೇಟಿಂಗ್’ ಎಂಬ ಪಟ್ಟ ಕಟ್ಟುವ ಕೆಲಸ ನಡೆಯಿತು. ಯಾವುದು ಹೆಚ್ಚು ರೇಟಿಂಗ್ ಪಡೆಯುತ್ತದೆಯೋ, ಅದೇ ಸರ್ವಶ್ರೇಷ್ಠ ಎಂಬ ಭಾವನೆ ಬರುವಂತೆ ನೋಡಿಕೊಳ್ಳಲಾಯಿತು. ಅಂತಹ ಸರ್ವಶ್ರೇಷ್ಠತೆಗಳಿಗೆ ಜಾಹೀರಾತು ರೂಪದಲ್ಲಿ ಹಣ ಹರಿದುಬರುವಂತೆ ಮಾಡಲಾಯಿತು. ಈ ಶ್ರೇಷ್ಠತೆ, ರೇಟಿಂಗ್, ಜಾಹೀರಾತು ಎಂಬ ವಿಷಚಕ್ರವನ್ನು ಅತ್ಯಂತ ಸಮರ್ಪಕವಾಗಿ ಸ್ಥಾಪಿಸಲಾಯಿತು. ಇದರ ಹಿಂದೆ ಕೆಲಸ ಮಾಡಿದ್ದ ಪೂವ್ರಾಗ್ರಹಗಳು ಎಂಥದ್ದು ಎಂಬುದನ್ನು ಊಹಿಸಿಕೊಳ್ಳುವುದು ಕಷ್ಟವಾಗಲಾರದು. ಯಾಕೆಂದರೆ, ಇವತ್ತು ಜಾಗತಿಕ ಮುಕ್ತ ಮಾರುಕಟ್ಟೆಯ ಪರಿಭಾಷೆಯೂ ಇದೇ ಆಗಿರುವುದರಿಂದ ಹಿಂದಿನಂತೆ ಅಪರಿಚಿತ ಪದಗಳು ಇವಾಗಿಲ್ಲ ಎಂಬುದನ್ನೂ ಗಮನಿಸಬೇಕಿದೆ.

ಮುಕ್ತ ಮಾರುಕಟ್ಟೆ ಎಂಬುದನ್ನು ಹೀಗೀಗೆ ಎಂದು ನಿರೂಪಿಸಲು ಸಾಧ್ಯವಾಗದೇ ಹೋಗಬಹುದು. ಸುಮಾರು ಮುನ್ನೂರು ವರ್ಷಗಳಷ್ಟು ಇತಿಹಾಸ ಇರುವ ‘ವಾಲ್‍ಸ್ಟ್ರೀಟ್‍’ನಂತಹ ಶೇರು ಮಾರುಕಟ್ಟೆಯ ಹೃದಯದ ಬಡಿತವನ್ನು ಅಳೆಯುವುದು ಕಷ್ಟವಾಗಬಹುದು. ಆದರೆ, ಅದು ಸಾಮಾಜಿಕವಾಗಿ ಮಾಡಿರುವ ಪರಿಣಾಮ ಎಂಥದ್ದು ಎಂಬುದು ಕಣ್ಮುಂದೆ ಇದೆ. ಇಲ್ಲಿ ಸಂಸ್ಥೆ, ದೇಶ ಅಥವಾ ಸಮುದಾಯಗಳಲ್ಲಿ ನೈತಿಕ ಅಧಃಪತನ ಕಾಣುತ್ತಿದ್ದೇವೆ. ನಿತ್ಯ ಜೀವನದ ಕುರಿತೇ ಪೂರ್ವಾಗ್ರಹಗಳು ಬೆಸೆದುಕೊಂಡಿವೆ. ಇದು ಮಾಧ್ಯಮಗಳಲ್ಲೂ ಇದೆ ಎನ್ನಬಹುದಿತ್ತು. ಆದರೆ, ವಿಸ್ತಾರವಾಗಿ ಆಲೋಚಿಸಿದರೆ, ಹೀಗೊಂದು ನೈತಿಕ ಅದಃಪತನಕ್ಕೆ ಮಾಧ್ಯಮಗಳ ಕೊಡುಗೆಯೂ ಎದ್ದು ಕಾಣುತ್ತದೆ. ಅದು ವೈಯುಕ್ತಿಕ ನೆಲೆಯ ನೈತಿಕ ವಿಚಾರಗಳಿಂದ ಶುರುವಾಗಿ, ಸಾಂಸ್ಕೃತಿಕ ವಿಚಾರಗಳವರೆಗೂ ಮಾಧ್ಯಮಗಳ ಪ್ರೇರಣೆಯಿಂದ ಆಗಿರುವ ಬದಲಾವಣೆ ಕುರಿತು ಇವತ್ತು ಆಳವಾದ ಅಧ್ಯಯನಗಳ ಅಗತ್ಯವಿದೆ. ಸಾಮಾನ್ಯವಾಗಿ ಅನುಭವದ ಆಧಾರದ ಮೇಲೆ ಕೆಲವು ವಿಚಾರಗಳನ್ನು ಗುರುತು ಮಾಡಬಹುದಾದರೂ, ಅಂತಿಮವಾಗಿ ಸ್ಪಷ್ಟರೂಪದಲ್ಲಿ ಬದಲಾಗಿರುವ ಚಿತ್ರಣವನ್ನು ಕಟ್ಟಿಕೊಳ್ಳುವುದು ಇಂದಿನ ಅಗತ್ಯವಾಗಿದೆ.  
ಸುದ್ದಿ ವಿಚಾರದಲ್ಲಿ ನೈತಿಕತೆ
ಇನ್ನು, ಮಾಧ್ಯಮದ ಹೃದಯಭಾಗ ಸುದ್ದಿಗಳ ವಿಚಾರಕ್ಕೆ ಬರುವುದಾರೆ ನಿಖರತೆ, ಸ್ಪಷ್ಟತೆ ಹಾಗೂ ನಿಷ್ಪಕ್ಷಪಾತವಾಗಿರುವುದು ‘ಮಾಧ್ಯಮ ನೈತಿಕತೆ’ ಎಂದು ಕರೆಸಿಕೊಳ್ಳುತ್ತದೆ. ಅದು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಗುರುತನ್ನು ಗೌಪ್ಯವಾಗಿಡುವ, ಎಚ್‍ಐವಿ ಪೀಡಿತರ ಕುರಿತು ಸುದ್ದಿ ಮಾಡುವಾದ ಸೂಕ್ಷ್ಮತೆಗಳನ್ನು ಹೊಂದಿರುವ ಹಾಗೂ ಅಶ್ಲೀಲ ದೃಶ್ಯ ಅಥವಾ ಚಿತ್ರಗಳನ್ನು ಬಳಸದಿರುವ ಸಾಮಾನ್ಯ ವಿಚಾರಗಳಿಂದ ಆರಂಭವಾಗಿ ಯಾವುದೇ ಸುದ್ದಿಯನ್ನು ಸುದ್ದಿಯಾಗಿ ಮಾತ್ರವೇ ಜನರಿಗೆ ತಲುಪಿಸುವವರೆಗೂ ನೈತಿಕತೆಯ ನೆರಳು ಕಾಯುತ್ತದೆ. 1970ರಲ್ಲಿಯೇ ‘ನ್ಯೂ ವರ್ಡ್‍ ಇನ್ಫೊಮೇಷನ್‍ ಅಂಡ್‍ ಕಮ್ಯುನಿಕೇಷನ್‍ ಆರ್ಡರ್’ ಎಂಬ ಸಂಸ್ಥೆ ಇಂತಹ ಕೆಲವು ನಿಯಮಾವಳಿಗಳನ್ನು ಪಟ್ಟಿ ಮಾಡಿತ್ತು. ಮುಂದೆ, ಅದಕ್ಕೆ ವಿರುದ್ಧವಾಗಿ ಮತ್ತೊಂದಿಷ್ಟು ಜಾಗತಿಕ ಸಂಸ್ಥೆಗಳು ಮಾಧ್ಯಮಗಳ ನೈತಿಕತೆ ಎಂದರೇನು ಎಂದು ತಿಳಿಸಲು ಮುಂದಾದವು. ಹೀಗೆ ಎರಡು ದಶಕಗಳವರೆಗೂ ಈ ವಿಚಾರ ಚರ್ಚೆಯಲ್ಲಿ ಇತ್ತಾದರೂ, ಕೊನೆಗೆ ‘ಮಾಧ್ಯಮ ನೈತಿಕತೆ’ ಎಂಬುದು ಹಳಸಲು ಪದದ ರೀತಿ ಧ್ವನಿಸಲು ಶುರುವಾಯಿತು. ಸದ್ಯ ಮೆಕ್ಸಿಕೋದಂತಹ ದೇಶಗಳಲ್ಲಿ ಪತ್ರಕರ್ತರು ಕೊಲೆಯಾಗುವುದು ಸಾಮಾನ್ಯ ಎಂಬಂತೆ ಆಗಿದೆ. ಅಲ್ಲಿನ ಡ್ರಗ್‍ ಲಾಭಿಯ ವಿರುದ್ಧ ಬರೆಯುವ ಅಥವಾ ಚಿತ್ರೀಕರಿಸುವ ಪ್ರತಿ ಪತ್ರಕರ್ತನೂ ಸಾವಿನ ಅಂಚಿನಲ್ಲಿದ್ದುಕೊಂಡೇ ಕೆಲಸ ಮಾಡುತ್ತಾನೆ. ಇಂತಹ ಸ್ಥಿತಿ ಇರಾಕ್‍, ಈಜಿಪ್ಟ್‍, ಚೆಚೆನ್ಯಾ, ಮಂಗೋಲಿಯಾ, ಶ್ರೀಲಂಕಾ ಮತ್ತಿತರ ದೇಶಗಳಲ್ಲಿ ಇದೆ. ಇದಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಾಧ್ಯಮ ಸ್ವಾತಂತ್ರ್ಯ ಮತ್ತು ವೃತ್ತಪರ ಪತ್ರಿಕೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ನಿರ್ಭೀತವಾಗಿರುವ ಪತ್ರಿಕೋದ್ಯಮದ ಸಾಧ್ಯತೆಗಳಿವೆ. ಆದರೆ ಇಲ್ಲಿರುವ ಸಮಸ್ಯೆ ವೈಯುಕ್ತಿಕ ಮಿತಿಗಳದ್ದು. ಒಂದು ಕ್ಷೇತ್ರವಾಗಿ ಭಾರತದ ಪತ್ರಿಕೋದ್ಯಮಕ್ಕೆ ಒಂದಷ್ಟು ಚೌಕಟ್ಟುಗಳು ಇದ್ದಿರಬಹುದು. ಒಂದು ಸಮುದಾಯವಾಗಿ ಇಲ್ಲಿನ ಪತ್ರಕರ್ತರಿಗೆ ಕೆಲವು ಸಮಸ್ಯೆಗಳು ಇದ್ದಿರಬಹುದು. ಆದರೆ ವೈಯುಕ್ತಿಕ ಆಲೋಚನೆಯಲ್ಲಿ ಅಂತಹ ಎಲ್ಲಾ ಚೌಕಟ್ಟುಗಳನ್ನು ಮೀರುವ, ಮಿತಿಗಳನ್ನು ದಾಟುವ ಸಾಧ್ಯತೆಯಂತೂ ಎಲ್ಲಾ ಕಾಲಕ್ಕೂ ಜೀವಂತವಾಗಿರುತ್ತದೆ. ಆದರೆ, ಇಲ್ಲಿ ಸ್ವಯಂ ಮಿತಿಗಳನ್ನು ಹಾಕಿಕೊಳ್ಳುವ ಸ್ಥಿತಿ ಇದೆ. ಇದರಿಂದಾಗಿ ನೈತಿಕತೆ ಎಂಬುದು ಹೆಚ್ಚು ಕಾಡುವ ಅಂಶವಾಗಿ ಉಳಿಯುವುದಿಲ್ಲ. ‘ಭ್ರಷ್ಟಾಚಾರ ಎಲ್ಲಾ ಕಡೆಗೂ ಇದೆ. ಇವತ್ತು ದುಡ್ಡಿದ್ದರೆ ಮಾತ್ರ ಬದುಕು,’’ ಎಂಬ ಜನಪ್ರಿಯ ಮಾತುಗಳು ಇಲ್ಲೂ ಧ್ವನಿಸುತ್ತಿವೆ. ಹೀಗಿರುವಾಗ ನೈತುಕತೆ ಎಂಬುದು ಸುದ್ದಿಯ ವಿಚಾರಕ್ಕೆ ಅನ್ವಯಿಸಿಕೊಳ್ಳಬೇಕಾ? ಪತ್ರಿಕೋದ್ಯಮದ ಪಠ್ಯಗಳಲ್ಲಿ ಇರುವಂತೆ ಯಾಂತ್ರಿಕ ಪಟ್ಟಿಯನ್ನು ಮಾಡಬೇಕಾ ಅಥವಾ ಬದಲಾದ ಕಾಲದಲ್ಲಿ ಹೊಸ ಪರಿಭಾಷೆಯ ಮೂಲಕ ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕಾ? ಹೀಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.

ಆದರೆ, ಇಂತಹ ಪ್ರಶ್ನೆಗಳಿಗೆ ಇಲ್ಲಿ ಹೆಚ್ಚಿನ ಅವಕಾಶ ಇಲ್ಲ. ಅಥವಾ ಇಂತಹ ಪ್ರಶ್ನೆಗಳು ಅಪ್ರಸ್ತುತ ಎಂಬ ಭಾವನೆ ಇದೆ. ಒಂದು ವೇಳೆ ಹೀಗೆ ಪ್ರಶ್ನೆಗಳು ಹುಟ್ಟುವ ಅವಕಾಶ ಸೃಷ್ಠಿಯಾದರೆ ನಿತ್ಯದ ಬದುಕಿಗೆ ಸಮಸ್ಯೆಯಾಗುತ್ತದೆ ಎಂಬ ಪೂರ್ವಾಗ್ರಹವೂ ಇದೆ.  ಇದರಿಂದಾಗಿಯೇ ಒಂದು ರೀತಿಯ ಕಂಫರ್ಟ್‍ ಆಗಿರುವ ಭಾವನೆ ಇಲ್ಲಿನ ಪತ್ರಿಕೋದ್ಯಮದಲ್ಲಿ ಕಾಪಾಡಿಕೊಂಡು ಬರುತ್ತಿರುವುದು ಗೋಚರಿಸುತ್ತದೆ. ನೈತಿಕ ವಿಚಾರಗಳ ಕುರಿತು ಹೆಚ್ಚಿನ ಗಮನ ಹರಿಸದಿದ್ದರೆ, ಸುಲಭವಾಗಿ ಬದುಕು ಬದಲಾಗಿ ಬಿಡುವ ಅವಕಾಶಗಳು ಇಲ್ಲಿ ಸಿಗುತ್ತಿದೆ. ಇದರಿಂದಾಗಿಯೇ ಮಾಧ್ಯಮ ನೈತಿಕತೆ ತನ್ನ ನಿಜ ಅರ್ಥವನ್ನು ಕಳೆದುಕೊಂಡಿದೆ. ಜತೆಗೆ ಇವತ್ತಿಗೆ ಮಾಧ್ಯಮ ನೈತಿಕತೆ ಎಂಬುದನ್ನು ವ್ಯಾಖ್ಯಾನಿಸುವ ಪರಿಭಾಷೆಯೂ ಬದಲಾಗಬೇಕಾದ ಅಗತ್ಯವಿದೆ.

ಪೂರ್ವಾಗ್ರಹದ ಸುತ್ತ
ನೈತುಕ ಪ್ರಜ್ಞೆ ಕಳೆದುಕೊಂಡ ಸಮಾಜ ಹೆಚ್ಚು ಪೂರ್ವಾಗ್ರಹಕ್ಕೆ ಒಳಗಾಗುತ್ತದೆ. ಅದಕ್ಕೆ ಇತಿಹಾಸಕ್ಕೆ ಹೇರಳ ಉದಾಹರಣೆಗಳು ಸಿಗುತ್ತದೆ. ಆದರ್ಶಗಳು ಶಾಂತಿಯುತವಾಗಿರುತ್ತವೆ, ಆದರೆ ಇತಿಹಾಸ ಎಂಬುದು ಹೆಚ್ಚು ಭೀಕರ. ಶಾಂತಿ ಮತ್ತು ಭೀಕರತೆಗಳ ನಡುವೆ ಒಂದು ನಿರ್ಲಿಪ್ತ ಕಾಲಘಟ್ಟ ಇರುತ್ತದೆ. ಅದರೊಳಗೆ ಎಲ್ಲವೂ ಸಂತುಷ್ಟಗೊಂಡಂತೆ ಲೇಪನ ಹಚ್ಚಿ ಇಡಲಾಗುತ್ತದೆ. ಅಂತಹದೊಂದು ಕಾಲದಲ್ಲಿ ನಾವೀಗ ಬದುಕುತ್ತಿದ್ದೇವೆ. ಅಂತಹದೊಂದು ವಾತಾವರಣೆ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಅದರ ಪ್ರತಿಫಲವನ್ನು ಕೆಲವು ಪಡೆಯುವ ಪತ್ರಕರ್ತ ಸಹಜವಾಗಿಯೇ ಹೆಚ್ಚು ಸಂತುಷ್ಟನಾಗಿ ಬದುಕುವ ಹಾದಿ ಕೊಂಡುಕೊಳ್ಳುತ್ತಾನೆ. ಇದು ಈತನನ್ನು ಇನ್ನಷ್ಟು ಪೂರ್ವಾಗ್ರಹ ಪೀಡಿತನನ್ನಾಗಿ, ಯಾವುದೋ ಒಂದು ವಿಚಾರದ ಪರ ಅಥವಾ ವಿರೋಧಿಯನ್ನಾಗಿ ಬದಲಾಯಿಸಿಬಿಟ್ಟಿರುವ ಸಾಧ್ಯತೆಯೂ ಇದೆ. ಒಬ್ಬ ನಿರ್ಧಿಷ್ಟ ಶತ್ರು ಇಲ್ಲ ಅಂತಾದರೆ, ಒಂದು ಸಾಮಾನ್ಯವಾಗಿರುವ ಗುರಿ ಇಲ್ಲ ಅಂತಾದರೆ ಎದುರಾಗುವ ಸಮಸ್ಯೆ ಸಮಷ್ಠಿಯದ್ದು. ಸಾಮುದಾಯಿಕ ಹಿತಾಸಕ್ತಿ ಕಳೆದು ಹೋಗಿರುವುದು ಇವತ್ತಿನ ಮಾಧ್ಯಮ ಜಗತ್ತಿನ ಸಮಸ್ಯೆ ಕೂಡ. ಇಲ್ಲಿ ಯಾರೂ ಶತ್ರುಗಳೂ ಅಲ್ಲ, ಯಾರು ಮಿತ್ರರೂ ಅಲ್ಲ. ಕೇಳುವುದಕ್ಕೆ ಇದು ವಸ್ತುನಿಷ್ಟತೆಯ ಧ್ವನಿಯಂತೆ ಕಂಡರೂ, ಇದರ ಹಿಂದೆ ಅಡಗಿರುವುದು ಪೂರ್ವಾಗ್ರಹ ಪೀಡಿತ, ಸ್ವ ಹಿತಾಸಕ್ತಿ ಇವತ್ತಿನ ಪತ್ರಿಕೋದ್ಯಮವನ್ನು ಬಲಿ ತೆಗೆದುಕೊಳ್ಳುತ್ತಿದೆ.
ಸಾಮಾನ್ಯವಾಗಿ ಪತ್ರಿಕೋದ್ಯಮ ಅಥವಾ ಮಾಧ್ಯಮ ಧಾರ್ಮಿಕ ವಿಚಾರಗಳಲ್ಲಿ ಹೆಚ್ಚು ಸೂಕ್ಷ್ಮತೆಯಿಂದ ಕೆಲಸ ಮಾಡಬೇಕು. ಅದರಲ್ಲೂ ಭಾರತದಂತಹ ದೇಶಗಳಲ್ಲಿ ಧಾರ್ಮಿಕತೆ ಎಂಬುದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯದಂತಹ ಆಯಾಮಗಳನ್ನು ಪಡೆದುಕೊಳ್ಳುವ ಸಮಯದಲ್ಲಿ ಮಾಧ್ಯಮ ಹೆಚ್ಚು ಸಂಯಮದಿಂದ ಹಾಗೂ ವೃತ್ತಿಪರತೆಯಿಂದ ಕೆಲಸ ಮಾಡಬೇಕು. ಆದರೆ, ಸದ್ಯ ಧರ್ಮದ ಪರ ಮತ್ತು ಕಡು ವಿರೋಧ ಎಂಬ ಎರಡು ವಿರುದ್ಧಾರ್ಥಕ ಪದಗಳ ನಡುವೆ ಮಾಧ್ಯಮಗಳು ಕಾರ್ಯನಿರ್ವಹಿಸುತ್ತಿವೆ. ಇದರಿಂದ ತಮ್ಮ ಗ್ರಾಹಕರು ಖುಷಿಯಾಗುತ್ತಾರೆ ಎಂದು ಅವರು ಭಾವಿಸಿಕೊಂಡಂತೆ ಇದೆ. ಇದರ ನಡುವೆ ಇರಬಹುದಾದ ಸೂಕ್ಷ್ಮ ಎಳೆ ಕಳೆದುಹೋಗುತ್ತಿದೆ. ಇದು ರಾಜಕೀಯ ಪಕ್ಷಗಳ ವಿಚಾರದಲ್ಲೇ ಆಗಿರಬಹುದು ಅಥವಾ ಒಬ್ಬ ನಾಯಕನ ಪರ ಮತ್ತು ವಿರೋಧದ ವಿಚಾರದಲ್ಲೇ ಆಗಿರಬಹುದು. ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುವಂತಹ, ಮುಕ್ತ ಚರ್ಚೆಗೆ ಅವಕಾಶ ಇಲ್ಲದಂತಹ ವಾತಾವರಣ ಸೃಷ್ಟಿಯಾಗುತ್ತಿದೆ. ಇದು ಮಾಧ್ಯಮದಲ್ಲಿ ಕೆಲಸ ಮಾಡುವವರ ಪೂರ್ವಾಗ್ರಹಕ್ಕೆ ಸಂಬಂಧಿಸಿದ ಅಂಶಗಳು.

ಮುಂದಿರುವ ಸವಾಲು ಮತ್ತು ಸಾಧ್ಯತೆಗಳು
ಇವತ್ತು ಮಾಹಿತಿ ಎಂಬುದು ಬೆರಳ ತುದಿಯಲ್ಲಿದೆ. ವಿಕಿಪೀಡಿಯಾದಂತಹ ವೆಬ್‍ಸೈಟ್‍ಗೆ ಹೋಗಿ ‘ಮೀಡಿಯಾ ಎಥಿಕ್ಸ್‍’ ಎಂಬ ಎರಡು ಪದಗಳನ್ನು ನೀಡಿದರೆ ಸಾಕು, ಮಾಹಿತಿ ಪುಟಗಳು ಹೇರಳವಾಗಿ ತೆರೆದುಕೊಳ್ಳುತ್ತವೆ. ಒಬ್ಬ ಪತ್ರಕರ್ತನಿಗೆ ಇರುವು ಚೌಕಟ್ಟುಗಳೇನು? ಅವನು ವೃತ್ತಿಯಲ್ಲಿ ಪಾಲಿಸಬೇಕಾದ ನೀತಿಗಳೇನು ಎಂಬ ವಿಚಾರಗಳು ಸಿಗುತ್ತವೆ. ಆದರೆ, ಈ ಮಾಹಿತಿ, ಕೇವಲ ಮಾಹಿತಿಯಾಗಿ ಅಷ್ಟೆ ಉಳಿದುಬಿಡುತ್ತಿವೆ. ಅದು ಜ್ಞಾನವಾಗಿ ಬದಲಾಗುತ್ತಿಲ್ಲ. ನಿತ್ಯ ಜೀವನ ಸರಕಾಗಿಯೂ ಅದು ಬಳಕೆಗೆ ಯೋಗ್ಯವಾಗಿಲ್ಲ. ಇದಕ್ಕೆ ಇರುವ ಸಮಸ್ಯೆ, ಬದಲಾದ ಕಾಲದಲ್ಲಿ ನೈತಿಕತೆ ಎಂಬುದೂ ಬದಲಾಗಿರುತ್ತದೆ. ಪೂರ್ವಾಗ್ರಹಗಳೂ ಕೂಡ ತಮ್ಮ ಸ್ವರೂಪದಲ್ಲಿ ಬದಲಾವಣೆ ಮಾಡಿಕೊಂಡಿರುತ್ತವೆ. ಹೀಗಾಗಿ ಇವುಗಳನ್ನು ಅರ್ಥೈಸುವ ರೀತಿಯೂ ಬದಲಾಗಬೇಕಿರುತ್ತದೆ. ಅದು ಮುಂದಿನ ತಲೆಮಾರಿಕೆ ಪಠ್ಯವಾಗಿ ಬಂದರೆ ಮಾತ್ರವೇ, ಶಿಕ್ಷಣದ ಕಲಿಕೆಗೂ ನಿತ್ಯ ಜೀವನಕ್ಕೂ ಬಂಧವೊಂದು ಬೆಳೆಯುತ್ತದೆ. ಮಾಹಿತಿ ಜ್ಞಾನವಾಗಿ, ಜ್ಞಾನ ಬಳಕೆಯ ವಸ್ತುವಾಗಿ ಕಾಣಿಸುತ್ತದೆ. ಅದರಲ್ಲೂ ಪತ್ರಿಕೋದ್ಯಮವನ್ನು ಕನಸಾಗಿ ಇಟ್ಟುಕೊಂಡು ಬಂದವರು ಇನ್ನೂ ಹೆಚ್ಚು ಮುತುವರ್ಜಿಯಿಂದ ಈ ಕೆಲಸವನ್ನು ಮಾಡಬೇಕಿದೆ. ತಮಗೆ ಲಭ್ಯ ಮಾಹಿತಿ ಇಟ್ಟುಕೊಂಡು, ಮಾಧ್ಯಮಗಳು ಸಾಗುತ್ತಿರುವ ಹಾದಿ ಮತ್ತು ಅದಕ್ಕೆ ಕಾರಣವಾಗಿರುವ ಅಂಶಗಳನ್ನು ಹುಡುಕಬೇಕಿದೆ. ಜತೆಗೆ ತಮ್ಮ ಇತಿಮಿತಿಗಳ ನಡುವೆಯೇ ಪರಿಹಾರದ ಹಾದಿಗಳನ್ನೂ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ.

ಇಲ್ಲವಾದರೆ, ‘ಮೀಡಿಯಾ ಎಥಿಕ್ಸ್’ ಎಂಬುದು ವಿಕಿಪೀಡಿಯಾ ಪೇಜ್‍ ರೀತಿಯಲ್ಲಿ ಕೇವಲ ಒಣ ಸಿದ್ಧಾಂತದಂತೆ ಮುಂದಿನ ತಲೆಮಾರಿಗೆ ಭಾಸವಾಗುವ ಅಪಾಯವೂ ಇದೆ. ಇವತ್ತು ಅಮೆರಿಕಾದಂತಹ ದೇಶಗಳ ಆರ್ಥಿಕತೆಯ ನೆರಳಿನಲ್ಲಿಯೇ ‘ಪ್ರೊ ಪಬ್ಲಿಕಾ’ದಂತಹ ವೆಬ್‍ಸೈಟ್‍ಗಳು ತಮ್ಮ ವಸ್ತುನಿಷ್ಟ ಪತ್ರಿಕೋದ್ಯಮವನ್ನು ನಡೆಸಿಕೊಂಡು ಬರುತ್ತಿವೆ. ಸುದ್ದಿಯ ವಿಚಾರದಲ್ಲಿ ನೈತಿಕತೆಯ ಮಹತ್ವವನ್ನು ಇಂತಹ ಕೆಲವು ಪರ್ಯಾಯ ಮಾಧ್ಯಮಗಳು ಮಾದರಿ ರೀತಿಯಲ್ಲಿ ಮುಂದಿಟ್ಟಿವೆ. ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಇವುಗಳು ಮುಂದಿಡುತ್ತಿರುವ ಸುದ್ದಿಗಳು ಹಾಗೂ ವಿಚಾರಗಳು ಪ್ರಭಾವ ಬೀರುತ್ತಿವೆ. ಇದಕ್ಕೆ ಬೆನ್ನುಲುಬಾಗಿ ನಿಂತಿರುವರ ಮತ್ತದೇ ಜನಸಾಮಾನ್ಯರು ಎಂಬುದು ಅಲ್ಲಿನ ಸಾಮಾಜಿಕ ಮನಸ್ಥಿತಿಯನ್ನು ಬಿಂಬಿಸುತ್ತದೆ. ಆದರೆ, ನಮ್ಮಲ್ಲಿ ಇಂತಹದೊಂದು ವಾತಾವರಣ ಸೃಷ್ಟಿಯಾಗುವ ಸಾಧ್ಯತೆಗಳು ಸಧ್ಯಕ್ಕಂತೂ ಕಾಣಿಸುತ್ತಿಲ್ಲ. ಸಾಮಾಜಿಕ ಎಚ್ಚರಿಕೆ ಮೂಡದ ಹೊರತು ಮಾಧ್ಯಮಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ, ತಮಗೆ ತಾವೇ ಹಾಕಿಕೊಂಡುವ ನಿರ್ಭಂಧಗಳಿಂದ ಹೊರಬರುವುದು ಕಷ್ಟ. ಜತೆಗೆ, ಪೂರ್ವಾಗ್ರಹ ಪೀಡಿತ ಸಮಾಜ ಮನಸ್ಥಿತಿ, ಮೀಡಿಯಾದ ಮನಸ್ಥಿತಿಯಾಗಿಯೂ ಕಾಣುತ್ತಿರುವಾಗ, ಬರೀ ಮಾಧ್ಯಮ ಮಾತ್ರ ಬದಲಾವಣೆ ಆಗಬೇಕು ಎಂದು ಬಯಸುವುದು ವಾಸ್ತವ ಅಲ್ಲ. ಹೀಗಾಗಿ, ಎದುರಿಗೆ ಇರುವ ಸವಾಲುಗಳು ಮತ್ತು ಸಾಧ್ಯತೆಗಳ ಕುರಿತು ಒಂದು ಸಮಗ್ರವಾದ ಚಿಂತನೆಯ ಅಗತ್ಯವಂತೂ ಇವತ್ತಿಗೆ ಇದೆ.  


ಕೊನೆಯದಾಗಿ, ಸಮಾಜದ ಪಾಲಿಗೆ ಮಾಧ್ಯಮ ಎಂಬುದು ಅತ್ಯಂತ ಅಗತ್ಯವಾದ ಕ್ಷೇತ್ರ. ಸಾಕಷ್ಟು ಮಿತಿಗಳು ಮತ್ತು ಸಮಸ್ಯೆಗಳ ಹೊರತಾಗಿಯೂ ಇಲ್ಲಿರುವ ಸಾಧ್ಯತೆಗಳು ಅಪಾರವಾಗಿವೆ. ಸದ್ಯಕ್ಕೆ ಮಾಧ್ಯಮಗಳನ್ನು ಕಾಡುತ್ತಿರುವ ಪೂರ್ವಾಗ್ರಹಗಳು ಮತ್ತು ನೈತಿಕ ವಿಚಾರಗಳನ್ನು ವೈಯುಕ್ತಿಕ ನೆಲೆಯಿಂದ ಸಾಮುದಾಯಿಕ ನೆಲೆಗೆ ವಿಸ್ತರಿಸಕೊಂಡು ನೋಡುವ ಮತ್ತು ಅದಕ್ಕೆ ಕಡಿವಾಣ ಹಾಕಲು ಮತ್ತೆ ಸಮುದಾಯ ನೆಲೆಯಿಂದ ವೈಯುಕ್ತಿಕ ನೆಲೆಯವರೆಗೆ ಪರಿಹಾರಗಳನ್ನೂ ಕಂಡುಕೊಳ್ಳುವುದು ಇವತ್ತಿನ ಅಗತ್ಯವಾಗಿದೆ. ಈ ಮೂಲಕ ಜಗತ್ತಿನ ಅತ್ಯುತ್ತಮ ವೃತ್ತಿಗಳಲ್ಲಿ ಒಂದಾದ ಪ್ರತಿಕೋದ್ಯಮವನ್ನು ಅಥವಾ ಇವತ್ತಿನ ಮಾಧ್ಯಮ ಎಂಬ ವಿಸ್ತಾರ ರೂಪವನ್ನು ವಿಶಾಲ ನೆಲೆಗೆ ಕೊಂಡೊಯ್ಯುವ ಸಾಧ್ಯವಾಗುತ್ತದೆ. ಮಾಧ್ಯಮ ಜಗತ್ತಿನಲ್ಲಿ ಕಡಿಮೆ ಪೂರ್ವಾಗ್ರಹಗಳು ಹಾಗೂ ಹೆಚ್ಚು ನೈತಿಕತೆ ಅಂಶಗಳು ಬೆಳೆದಷ್ಟು ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ. ಅಷ್ಟರ ಮಟ್ಟಿಗೆ ಮಾಧ್ಯಮಗಳ ಪ್ರಭಾವ ಇದೆ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ.