ಸೋಮವಾರ, ಮಾರ್ಚ್ 30, 2015

ಭಾರತದಲ್ಲಿ ಭಯೋತ್ಪಾದನೆ ಮೂಲಗಳು ಹಾಗೂ ನಿಗ್ರಹ ಮಾರ್ಗಗಳು



ಕ್ರತಿಕಾ.ಕೆ. ಮಂಗಳೂರು
“ನಿಕ್ಷೇಪ 2014-15” ಸ್ಪರ್ಧೆಯಲ್ಲಿ ತ್ರತೀಯ ಬಹುಮಾನ ಪಡೆದ ಲೇಖನ

“ಭಯೋತ್ಪಾದನೆ” ಎಂಬ ಶಬ್ದವೇ ನಮ್ಮ ಕಣ್ಣೆದುರಿಗೆ ತಂದು ನಿಲ್ಲಿಸುವ ಚಿತ್ರಣವೆಂದರೆ ಅರಾಜಕತೆ, ಭೀತಿ, ಹಿಂಸೆ ಮತ್ತು ಸಾವುನೋವಿನದ್ದಾಗಿದೆ. ಅದು ಜನ ಸಾಮಾನ್ಯರ ಒಪ್ಪಿಗೆ ಇದ್ದು ಅಥವಾ ಇಲ್ಲದೆಯೋ ನಡೆಯುವ ಒಂದು ಅನಧಿಕೃತವಾದ ಹಿಂಸಾ ಪ್ರವೃತ್ತಿ. ಇಂದು ಜಗತ್ತಿನ ಎದುರು ತಲೆ ಎತ್ತಿ ನಿಂತಿರುವ ಅತೀ ದೊಡ್ಡ ಸಮಸ್ಯೆಯೇ ಭಯೋತ್ಪಾದನೆ. ಆದರೆ ದುರಂತವೇನೆಂದರೆ ಇದರ ನಿಗ್ರಹಕ್ಕೆ ಎಷ್ಟೇ ಪ್ರಯತ್ನ ಪಟ್ಟರೂ ಅದು ಇನ್ನೂ ಮತ್ತೂ ಕಳೆ ಬೆಳೆದಂತೆ ದೈತ್ಯಾಕಾರವಾಗಿ ಬೆಳೆಯುತ್ತಿದೆ. ಎಷ್ಟೇ ಬೇಡವೆಂದು ದೂರವಿಟ್ಟರೂ ಅದು ಮತ್ತೆ ಮತ್ತೆ ಅಪ್ಪಳಿಸುತ್ತಿದೆ. ಭಯೋತ್ಪಾದನೆಯ ಇರುವಿಕೆ ಇಲ್ಲದ ಯಾವುದೊಂದು ದೇಶವೂ ಇಲ್ಲವೆನ್ನಬಹುದೇನೋ! ಇದೆಲ್ಲದರ ಕಾರಣ ಏನೇ ಇರಬಹುದು ಆದರೆ ಇದರ ನೇರ ಪರಿಣಾಮವಾಗುವುದು ಮಾತ್ರಾ ಅಮಾಯಕ ಜನಸಾಮಾನ್ಯರ ಮೇಲೆ.

ಭಯೋತ್ಪಾದನೆಯಲ್ಲಿ ವಿಮಾನ ಅಪಹರಣ, ಜೈವಿಕ ಭಯೋತ್ಪಾದನೆ, ಒತ್ತೆಸೆರೆ, ಸೈಬರ್ ಭಯೋತ್ಪಾದನೆ, ಕಾರ್ ಬಾಂಬಿಂಗ್, ಪರಮಾಣು ಭಯೋತ್ಪಾದನೆ, ಕಡಲ್ಗಳ್ಳತನ, ಆತ್ಮಾಹುತಿ ದಾಳಿ, ಮಾನವ ಬಾಂಬ್ ಇವೆಲ್ಲವೂ ಸೇರಿವೆ. ರಾಷ್ಟ್ರೀಯತವಾದ, ಅರಾಜಕತವಾದ, ಎಡಪಂಥೀಯ, ಬಲಪಂಥೀಯ, ಕೇಸರಿ ಭಯೋತ್ಪಾದನೆ ಮತ್ತು ಡ್ರಗ್ಸ್ ದಂಧೆ ಎಲ್ಲವೂ ಭಯೋತ್ಪಾದನೆಯ ವಿವಿಧ ರೂಪಗಳಾಗಿವೆ. ಭಯೋತ್ಪಾದನೆ ಎಂದರೆ ಅದು ಕೇವಲ ಧರ್ಮದ ವಿಚಾರಕ್ಕಷ್ಟೇ ಸಿಮಿತವಾಗಿಲ್ಲ, ಅದಕ್ಕೆ ಹಲವಾರು ಕಾರಣಗಳಿವೆ. ಭಾರತದಲ್ಲಿ ಪ್ರಸ್ತುತ ಇರುವ ಭಯೋತ್ಪಾದನೆಗೆ ಕೆಲವು ಧಾರ್ಮಿಕ ಪಂಗಡಗಳು ಮತ್ತು ನಕ್ಸಲ್ ಸಂಘಟನೆಗಳು ಇಂಬು ನೀಡುತ್ತಿವೆ.

ಉತ್ತರದ ಜಮ್ಮು – ಕಾಶ್ಮೀರ ಹಾಗೂ ಪೂರ್ವದಲ್ಲಿರುವ ರಾಜ್ಯಗಳು ಅತಿಯಾದ ಭಯೋತ್ಪಾದನೆಯ ವಿಷವ್ಯೂಹಕ್ಕೆ ಒಳಗಾದ ಭಾಗಗಳಾಗಿವೆ. ಜಮ್ಮು – ಕಾಶ್ಮೀರದಲ್ಲಿ ಇರುವ ದಂಗೆಗಳ ಕಾರಣಗಳು ಹಲವು ಹಾಗೂ ಮೀರಲಾಗದಂಥವು ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಅದಕ್ಕೆ ಅತಿ ಮುಖ್ಯವಾದ ಕಾರಣ ಪಾಕಿಸ್ತಾನದ ಐ.ಎಸ್.ಐ ಅದು ಭಾರತೀಯ ಯುವಕರನ್ನು ತನ್ನ ಮುಜಾಹಿದ್ದೀನ್ ಸಂಘಟನೆಗೆ ಸೇರಿಸಲು ತರಬೇತಿ ನೀಡುತ್ತಿದೆ. ಇದರ ಫಲವಾಗಿ ಭಾರತದಲ್ಲಿ ಮಾತ್ರವಲ್ಲ ಜಗತ್ತಿನಾದ್ಯಂತ ಅಪಾರ ಸಾವು ನೋವು ಸಂಭವಿಸುತ್ತಿದೆ. ಇದಲ್ಲದೆ ಮಿಲಿಟರಿಯವರಿಂದ ಮುಗ್ಧ ಜನರು ಅನುಭವಿಸಿದ ಶೋಷಣೆಯು ಜಮ್ಮು – ಕಾಶ್ಮೀರದಲ್ಲಿನ ಅರಾಜಕತೆಯ ಕಾರಣಗಳಾಗಿವೆ. ಇದರ ಪಾತ್ರದಿಂದಾಗಿ ಕಾಶ್ಮೀರದ ಸ್ವಾತಂತ್ರ್ಯದ ಬಗೆಗಿನ ಬೆಂಬಲ ಮತ್ತು ಅದನ್ನು ಪಾಕಿಸ್ತಾನದ ಭಾಗವಾಗಿ ಮಾಡುವ ರಾಜಕೀಯ ಹುನ್ನಾರ, ಮುಜಾಹಿದ್ದೀನ್ ಪ್ರಭಾವದಿಂದಾಗಿ ಸಂಭವಿಸುವ ಧಾರ್ಮಿಕ ಸಂಘರ್ಷಗಳು ಇವೆಲ್ಲಾ ಕಾಶ್ಮೀರಿ ಜನರ ನಿದ್ದೆ ಕೆಡಿಸಿವೆ. 

ಭಾರತದ ಪಶ್ಚಿಮ ಭಾಗದ 7 ಸೋದರ ರಾಜ್ಯಗಳಾದ ಅಸ್ಸಾಂ, ಮೇಘಾಲಯ, ತ್ರಿಪುರ, ಅರುಣಾಚಲ ಪ್ರದೇಶ, ಮಿಜೋರಂ, ಮತ್ತು ನಾಗಾಲ್ಯಾಂಡ್ ಎಷ್ಟೋ ವರ್ಷಗಳಿಂದ ಇಲ್ಲಿನ ಬುಡಕಟ್ಟು ಹಾಗೂ ಸರಕಾರದ ನಡುವಿನ ಸಂಘರ್ಷದಿಂದ ಬಸವಳಿದು ಹೋಗಿವೆ. ಇಲ್ಲಿ ನಡೆಯುವ ಘೋರ ಹಿಂಸಿಗಳಿಂದಾಗಿ ಅವುಗಳಿಗೆ ಅತಿ ಸೂಕ್ಷ್ಮ ಪ್ರದೇಶಗಳೆಂಬ ಹಣೆಪಟ್ಟಿಯನ್ನು ಹೊಂದಬೇಕಾದ ಪರಿಸ್ಥಿತಿ ಬಂದೊದಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ನಡೆದಿರುವ ಸಾವಿರಾರು ಹತ್ಯೆಗಳನ್ನು ನಾವು ಪತ್ರಿಕೆ ಹಗೂ ದೂರದರ್ಶನದಲ್ಲಿ ನೋಡಿದ್ದೇವಷ್ಟೆ, ಇದಕ್ಕೆ ಮುಖ್ಯ ಕಾರಣ ಹಿಂದಿನಿಂದಲೂ ಅನುಭವಿಸಿಕೊಂಡು ಬಂದಿರುವ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ, ನೆರೆ ರಾಷ್ಟ್ರಗಳ ಹಾವಳಿ ಅಥವ ಸಾರ್ವತ್ರಿಕ ಚುನಾವಣೆಯ ಸಂದರ್ಭ ಹೊರತುಪಡಿಸಿ ಈ ರಾಜ್ಯಗಳು ನಮ್ಮ ದೇಶದ ಭಾಗವೇ ಅಲ್ಲವೇನೋ ಎಂಬಂತೆ ವರ್ತಿಸುವುದು. ಅಷ್ಟು ಸಾಲದೆಂಬಂತೆ ಬಾಂಗ್ಲಾ ದೇಶದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಯಾದ ಉಲ್ಫದ ಸಹಕಾರದಿಂದ ಈ ರಾಜ್ಯಗಳಲ್ಲಿ ದಂಗೆ ಎಬ್ಬಿಸುತ್ತಿರುವ ಅಕ್ರಮ ವಲಸಿಗ ಬಾಂಗ್ಲಾದೇಶಿಯರೂ ಕಾರಣ.

ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಭಯೋತ್ಪಾದನೆಯ ಪ್ರಭಾವ ಅಷ್ಟಾಗಿ ಕಾಣಬರುವುದಿಲ್ಲ. ಕರ್ನಾಟಕದಲ್ಲಿ ನಕ್ಸಲರ ಹೆಜ್ಜೆಯ ಗುರುತು ಕಂಡುಬಂದರೂ ಸಹ ರಾಜ್ಯ ಸರಕಾರವು ಅದನ್ನು ನಿಗ್ರಹಿಸುವಲ್ಲಿ ಬಹುಪಾಲು ಯಶಸ್ವಿಯಾಗಿದೆ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಹೊರತಾಗಿ ಬೇರೆ ಯಾವುದೇ ಅಂತಹ ಅಹಿತಕರ ಘಟನೆ ನಡೆದಿರುವ ಪ್ರಸಂಗ ಬೇರೆ ಇಲ್ಲ. ಶ್ರೀಲಂಕದ ಎಲ್.ಟಿ.ಟಿ.ಇ ಉಗ್ರರು ಪ್ರಮುಖವಾಗಿ ದಾಳಿಮಾಡಿದ ಪ್ರದೇಶ ತಮಿಳುನಾಡು ಆದರೆ ಅದರ ನಾಯಕರ ಹತ್ಯೆಯ ನಂತರ ಅದರ ಪ್ರಭಾವ ಗಣನೀಯವಾಗಿ ಕಡಿಮೆಯಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಉಗ್ರರ ದಾಳಿಗೆ ಪದೇ ಪದೇ ಬಲಿಯಾಗುವ ಪ್ರದೇಶವೆಂದರೆ ಅದು ನಮ್ಮ ದೇಶದ ಪ್ರಮುಖ ವಾಣಿಜ್ಯ ನಗರಿಯಾದ ಮುಂಬಯಿ. 1993 ರ ಸರಣಿ ಬಾಂಬ್ ಸ್ಪೋಟದಿಂದ ಹಿಡಿದು ಇತ್ತೀಚಿನ ತಾಜ್ ಮಹಲ್ ಹೋಟೇಲಿನ ತನಕ ಪ್ರಮುಖ ದಾಳಿಗಳಿಗೆ ಪ್ರಮುಖ ಗುರಿ ಮುಂಬಯಿ ನಗರಿಯೇ.

ಭಯೋತ್ಪಾದನೆಗೆ ಎಷ್ಟೇ ಕಾರಣಗಳನ್ನು ಹುಡುಕುತ್ತಾ ಹೋದರೂ ಮುಖ್ಯವಾಗಿ ಮುಖ್ಯವಾಗಿ ಕಂಡು ಬರುವುದೇ ಧಾರ್ಮಿಕ ಭಯೋತ್ಪಾದನೆ. ಇದು ಇಡೀ ಪ್ರಪಂಚವನ್ನೇ ಆವರಿಸಿದರೂ ಇದರ ಪ್ರಭಾವ ಮತ್ತು ಪರಿಣಾಮ ಭಾರತದಲ್ಲಿ ಇತರೆಡೆಗಳಿಗಿಂತ ತುಸು ಜಾಸ್ತಿಯೇ ಎನ್ನಬಹುದು. ಕೆಲವು ಧರ್ಮಾಂಧರ ಧರ್ಮದ ಬಗೆಗಿನ ಕುರುಡು ವ್ಯಾಮೋಹವೇ ಕಾರಣವಾಗಿ ಇಡೀ ದೇಶಕ್ಕೆ ದೇಶವೇ ಭಯೋತ್ಪಾದನೆಗೆ ಸಿಕ್ಕಿ ನರಳುತ್ತಿದೆ. ಇತರೆ ದೇಶಗಳ ಬಗೆಗಿನ, ಅನ್ಯ ಧರ್ಮಗಳ ಬಗೆಗಿನ, ಅಸಹನೆ, ತಿರಸ್ಕಾರ ಮನೋಭಾವವೇ “ಜಿಹಾದ್” ಎಂಬ ಧರ್ಮವಲ್ಲದ ಧರ್ಮಯುದ್ಧದ ಹಾದಿ ಹಿಡಿದು ಅಮಾಯಕರನ್ನು ಕೊಲ್ಲುವುದರ ಜೊತೆಗೆ ಇತರೆ ಅಮಾಯಕರನ್ನು ಹಾದಿ ತಪ್ಪಿಸಿ ತಮಗೆ ಬೇಕಾದ ಹಾಗೆ ಸಿದ್ಧಗೊಳಿಸಿ ಇನ್ನಷ್ಟು ಮಂದಿಯನ್ನು ಕೊಲ್ಲುವಂತೆ ಪ್ರೇರೇಪಿಸುತ್ತದೆ. ತಮ್ಮ ಧರ್ಮವನ್ನೇ ಇತರರ ಮೇಲೂ ಹೇರಬೇಕೆಂಬ ಹುಚ್ಚು ಅಭಿಮಾನದಿಂದ ಅವರ ಧರ್ಮವನ್ನು ಉಳಿಸುವುದರ ಬದಲು ಅದರ ಮೂಲ ಮೌಲ್ಯಗಳಿಗೆ ಚ್ಯುತಿ ತರುತ್ತಿದ್ದಾರೆ. ಪ್ರತಿಯೊಂದು ಧರ್ಮದ ಮೂಲವೂ ಶಾಂತಿಯ ಪ್ರತಿಪಾದನೆ ಎಂಬುದನ್ನು ಮರೆತು ಹಿಂಸಾ ಮಾರ್ಗ ಹಿಡಿದು ವಿಕೃತ ಮನಸ್ಕರಾಗಿ ಮಿಥ್ಯ ಸಮರದ ಮೂಲಕ ಕಿರುಕುಳ ನೀಡುವ ಇದು ಹೇಡಿತನವಲ್ಲದೆ ಮತ್ತೇನೂ ಅಲ್ಲ. ಧಾರ್ಮಿಕ ಭಯೋತ್ಪಾದನೆ ಎಂದರೆ ಕೇವಲ ಇಸ್ಲಾಂ ಧರ್ಮಾಂಧರಿಂದಾದ ಭಯೋತ್ಪಾದನೆ ಮಾತ್ರವಲ್ಲ, ಅದರಲ್ಲಿ ಕೇಸರಿ ಭಯೋತ್ಪಾದನೆಯೂ ಸೇರಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುತ್ತೇವೆ ಎಂಬ ಮನೋಸ್ಥಿತಿಯೇ ಇದಕ್ಕೆ ಮುಖ್ಯ ಕಾರಣ. ಅನ್ಯ ಧರ್ಮದ ಮೇಲಿರುವ ಅಸಹಿಷ್ಣುತೆ, ಭಾರತೀಯ ಸಂಸ್ಕೃತಿಯ ಕುರಿತ ಅಜ್ಞಾನ ಎಲ್ಲಾವೂ ಸೇರಿ ಒಂದು ಧರ್ಮವು ಇನ್ನೊಂದು ಧರ್ಮವನ್ನು ಕಂಡರಾಗದೆಂಬಂತ ಪತಿಸ್ಥಿತಿಯನ್ನು ನಾವಿಂದು ತಲುಪಿದ್ದೇವೆ.

ನಮ್ಮ ದೇಶದ ಮಣ್ಣಿನಲ್ಲಿಯೇ ಹುಟ್ಟಿದ ಇನ್ನೊಂದು ರೀತಿಯ ಭಯೋತ್ಪಾದನೆ ಎಂದರೆ ಅದು ನಕ್ಸಲಿಸಂ ಸಮಾನತೆಗಾಗಿ ಹೋರಾಟ ಮಾಡುವ ಸಮಾಜವು ವಿಕೃತಗೊಂಡು ಹಿಂಸಾ ವಾದಕ್ಕೆ ಇಳಿದ ರೀತಿ ನಿಜವಾಗಿಯೂ ನಿರಾಶಾದಾಯಕ. ಜನರ ಒಳಿತಿಗಾಗಿ ಹುಟ್ಟಿದ ಗುಂಪೆÇಂದು ಅಂತಹ ಸಮಾನ ಮನಸ್ಕರ ಸೇರುವಿಕೆಯಿಂದ ಬಲಿಷ್ಠಗೊಂಡು ಕ್ರಮೇಣ ಹಾದಿ ತಪ್ಪಿ ಹಿಂಸಾ ಪ್ರವೃತ್ತಿ ಹಿಡಿದಿರುವುದು ನಿಜಕ್ಕೂ ದುರಾದೃಷ್ಟಕರ. ಇತ್ತ ಜನಪರವೂ ಅಲ್ಲದೆ ಅತ್ತ ಸಿದ್ಧಾಂತಪರವೂ ಅಲ್ಲದೆ ಸಿಕ್ಕ ಸಿಕ್ಕವರನ್ನು ಹಿಂಸಿಸುತ್ತಾ ತಮ್ಮ ನೈಜ ಧ್ಯೇಯವನ್ನೇ ಕಳೆದುಕೊಂಡು ಭಯೋತ್ಪಾದಕರು ಎಂಬ ಹಣೆಪಟ್ಟಿಯೊಂದಿಗೆ ಆರಕ್ಷಕರ ಕಣ್ಣು ತಪ್ಪಿಸಿ ದಟ್ಟ ಅರಣ್ಯಗಳಲ್ಲಿ ಓಡಾಡುತ್ತಾ ಜನಪರ ಎಂಬ ಭ್ರಮೆಯೊಂದಿಗೆ ಜನರಿಗೆ ಇನ್ನಿಲ್ಲದ ಹಿಂಸೆ ನೀಡುವುದೇ ನಕ್ಸಲ್ ಭಯೋತ್ಪಾದನೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದ ಮೇಲೆಯೂ ನಾವು ಅರ್ಥಮಾಡಿಕೊಳ್ಳಬೇಕಾದ ಇನ್ನೊಂದು ಬಹು ಮುಖ್ಯ ಸಂಗತಿ ಎಂದರೆ ಧಾರ್ಮಿಕ, ಸಾಮಾಜಿಕ ಕಾರಣ ಏನೇ ಇರಲಿ, ಮುಖ್ಯವಾದ ಮತ್ತು ಅತಿ ಸೂಕ್ಷ್ಮವಾದ ಕಾರಣವೇನೆಂದರೆ ಅದು ಬಡತನ ಹಾಗೂ ಅನಕ್ಷರತೆ. ಬಡವನು ಹಣದ ಆಸೆಗಾಗಿ ಇಂತಹ ತಪ್ಪು ಹೆಜ್ಜೆ ಇಟ್ಟರೆ ಅನಕ್ಷರಸ್ತನು ತನಗೆ ಅರಿವಿಲ್ಲದೆ ಇಂತಹ ಜಾಲದಲ್ಲಿ ಸಿಲುಕುತ್ತಾನೆ. ಹಣದ ಆಸೆ ತೋರಿಸುವವನು ಬಡವನ ಇಡೀ ಸಂಸಾರವನ್ನು ಕಷ್ಟ ಬಾರದ ಹಾಗೆ ನೋಡಿಕೊಳ್ಳುವೆ ಎಂದಾಗ ಸಹಜವಾಗಿಯೇ ನಿಷ್ಠೆಯಿಂದ ಅವನು ಒಪ್ಪಿಸಿದ ಕೆಲಸ ಸರಿಯೋ ತಪೆÇ್ಪೀ ಎಂಬ ವಿವೇಚನೆ ಇಲ್ಲದೆ ಅದನ್ನು ಮಾಡಲು ಸಿದ್ಧನಾಗುತ್ತಾನೆ. ಒಬ್ಬ ವಿದ್ಯೆ ಇಲ್ಲದವನನ್ನು ಪಳಗಿಸುವುದು ಇನ್ನೂ ಸುಲಭ. ಪ್ರಪಂಚದ ಜ್ಞಾನವಿಲ್ಲದ ಒಬ್ಬ ವ್ಯಕ್ತಿಯನ್ನು ತನ್ನೆಡೆಗೆ ಸೆಳೆಯುವುದು ಒಬ್ಬ ಬುದ್ಧಿವಂತನಿಗೆ ಕಣ್ಣು ಮಿಟುಕಿಸಿದಷ್ಟೇ ಸಲೀಸು. ಅನಕ್ಷರತೆ, ಬಡತನ, ಹಾಗೂ ನಿರುದ್ಯೋಗಗಳು ಯಾವ ರೀತಿ ದೇಶದ ಸುರಕ್ಷತೆಗೆ ಇಂದಿನ ಕಾಲದಲ್ಲಿ ಮಾರಕ ಎಂದರೆ ಈ ಎಲ್ಲಾ ಅನಿಷ್ಟಗಳು ನಿದ್ರಿಸುತ್ತಿರುವ ಟೈಂ ಬಾಂಬ್‍ಗಳಂತಹವು. ನಿರುದ್ಯೋಗಿ, ಅನಕ್ಷರಸ್ತ, ಹಾಗೂ ಬಡವನಿಗೆ ಒಂದು ಹೊತ್ತಿನ ಊಟ, ಅವನ ಕುಟುಂಬಕ್ಕೊಂದಿಷ್ಟು ಆರ್ಥಿಕ ಭದ್ರತೆ ದೊರೆಯುವುದೆಂದರೆ ಆತ ಎಂತಹ ಅಪಾಯವನ್ನೂ ಮೈಮೇಲೆ ಎಳೆದುಕೊಳ್ಳುವುದಕ್ಕೆ ಸಿದ್ಧನಿರುತ್ತಾನೆ. ಪ್ರಪಂಚದಾದ್ಯಂತ ಅಕ್ಟೋಪಸ್‍ಗಳಂತೆ ತಮ್ಮ ಕಬಂಧಬಾಹುಗಳನ್ನು ಚಾಚಿಕೊಂಡಿರುವ ಭಯೋತ್ಪಾದಕ ಸಂಘಟನೆಗಳು ಈ ರೀತಿಯ ವ್ಯಕ್ತಿಗಳನ್ನು ಕ್ಷಣಾರ್ಧದಲ್ಲಿ ಪತ್ತೆ ಮಾಡುತ್ತವೆ. ಇಂತಹ ಅತೃಪ್ತ ಸಮುದಾಯಕ್ಕೆ ಕೈಗೊಂದಿಷ್ಟು ಕಾಸು ಕೊಟ್ಟು ಅವರ ಪಾಲಿಗೆ ದೇವರಂತೆ ಕಂಡು ಅವರನ್ನು ತಮ್ಮ ವಿಕೃತ ಕೃತ್ಯಗಳಿಗೆ ಬಳಸುವ ಕೈಗೊಂಬೆಗಳನ್ನಗಿಸುತ್ತವೆ.

ವಿಪರ್ಯಾಸವೆಂದರೆ ಕೇವಲ ಈ ರೀತಿಯ ಅನಕ್ಷರಸ್ತ ನಿರುದ್ಯೋಗಿ ಬಡ ಸಮುದಾಯ ಮಾತ್ರವಲ್ಲ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ ಉನ್ನತ ವಿದ್ಯಾಭ್ಯಾಸವನ್ನು ಪಡೆದು ಲಕ್ಷಾಂತರ ಸಂಬಳತರುವ ಉದ್ಯೋಗದಲ್ಲಿರುವವರೂ ಕೂಡಾ ಈ ವಿಷಜಾಲಕ್ಕೆ ಬಲಿ ಬೀಳುತ್ತಾರೆ. ಇಲ್ಲಿ ಈ ರೀತಿಯ ಗುಂಪನ್ನು ಆಕರ್ಷಿಸಲು ಬಳಸುವ ಏಕಮೇವ ಆಮಿಷವೆಂದರೆ ಅದು ಧರ್ಮದ ಅಫೀಮು. ಇತ್ತೀಚಿನ ಒಂದು ಸಮೀಕ್ಷೆಯ ಪ್ರಕಾರ ಇರಾಕ್ ದೇಶದ ನಂತರ ಸಾಮೂಹಿಕ ಹತ್ಯೆಗಳಿಂದಾಗಿ ಎರಡನೇ ಸ್ಥಾನದಲ್ಲಿರುವ ದೇಶ ಭಾರತ! ಈ ರೀತಿಯ ಭಯೋತ್ಪಾದನೆಯ ನೇರ ಪರಿಣಾಮವಾಗುವುದು ದೇಶದ ಎಲ್ಲಾ ವರ್ಗದ ನಾಗರಿಕರ ಮೇಲೆ. ಇದರಿಂದಾಗಿ ಅವರು ಯಾವಾಗಲೂ ತಮ್ಮ ಜೀವಕ್ಕೆ ಎಂದು ಏನಾಗುವುದೋ ಎಂಬ ಆತಂಕದಿಂದಲೇ ಜೀವಿಸಬೇಕಾಗುತ್ತದೆ. ಇದರ ದೀರ್ಘಾವದಿ ಪರಿಣಾಮವು ದೇಶದ ಆರ್ಥಿಕತೆ. ವಾಣಿಜ್ಯ – ವ್ಯವಹಾರ ಹಾಗೂ ಮುಖ್ಯವಾಗಿ ಪ್ರವಾಸೋದ್ಯಮದ ಮೇಲಾಗುತ್ತದೆ. ನಾವು ಹಲವಾರು ಸಂದರ್ಭಗಳಲ್ಲಿ ಕೇಳಿರಬಹುದು ಅಥವಾ ಓದಿರಬಹುದು ಅಮೇರಿಕ ಇಂಗ್ಲೆಂಡ್‍ಗಳಂತಹ ದೇಶಗಳು ತಮ್ಮ ಪ್ರಜೆಗಳಿಗೆ ಕೆಲವು ದೇಶಕ್ಕೆ ಭೇಟಿ ನೀಡುವುದರ ಬಗ್ಗೆ ಎಚ್ಚರಿಸುತ್ತಿರುತ್ತದೆ. ಇದಕ್ಕೆ ಕಾರಣ ಅವರಿಗೆ ಅವರ ಪ್ರಜೆಗಳ ರಕ್ಷಣೆಯ ಬಗ್ಗೆ ಇರುವ ಚಿಂತೆ ಇವೆಲ್ಲದರ ಪರಿಣಾಮವಾಗಿ ಆ ದೇಶದ ಪ್ರವಾಸೋದ್ಯಮದಿಂದ ಹಿಡಿದು ಆರ್ಥಿಕ, ವ್ಯಾಪಾರ ವಹಿವಾಟು ಸೇರಿ ನೆರೆ ದೇಶಗಳೊಂದಿಗಿನ ಸಂಭಂದಕ್ಕೂ ಹಾನಿಯುಂಟಾಗುತ್ತದೆ.

ಈಗ ಎಲ್ಲರಲ್ಲಿ ಮೂಡುವ ಪ್ರಶ್ನೆಯೆಂದರೆ ಭಯೋತ್ಪಾದನೆಯ ಗುರಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಹೇಗೆ? ಅಥವಾ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ಭಯೋತ್ಪಾದನೆಯನ್ನೇ ನಿಗ್ರಹಿಸುವುದು ಹೇಗೆ? ಭಯೋತ್ಪಾದನೆಯನ್ನು ಎಂದೂ ಭಯೋತ್ಪಾದನೆಯಿಂದ ನಾಶ ಮಾಡಲು ಸಾಧ್ಯವಿಲ್ಲ. ಕಣ್ಣಿಗೆ ಪ್ರತಿಯಾಗಿ ಕಣ್ಣು ಎಂಬ ಹಮುರಾಬ್ಬಿಯ ತತ್ವವನ್ನು ಪಾಲಿಸಿದರೆ ಇಡೀ ಲೋಕವೇ ಬೆಂಕಿಗೆ ಆಹುತಿಯಾಗುತ್ತದೆ. ಏಕೆಂದರೆ ಭಯೋತ್ಪಾದನೆ ಬಡವರ ಯುದ್ಧವಾದರೆ, ಯುದ್ಧವು ಉಳ್ಳವರ ಭಯೋತ್ಪಾದನೆಯಾಗಿದೆ. ಇದರಿಂದ ನಾಶವಾಗುವುದು ಮುಗ್ಧರು ಮಾತ್ರ. ಇಂತಹ ಉಗ್ರರನ್ನು ಕೊಲ್ಲುವುದರಿಂದ ಇದಕ್ಕೆ ಪರಿಹಾರ ಸಿಗುವುದಿಲ್ಲ. ಏಕೆಂದರೆ ಅವರು ವಿವಿಧ ಕಾರಣಗಳಿಂದ ಸಾವಿಗೆ ಸಿದ್ಧರಾಗಿಯೇ ಬಂದಿರುತ್ತಾರೆ. ಯಾವ ಕಡೆಯೇ ಸಾವು ನೋವಾದರೂ ಅದು ಸಾಮಾನ್ಯನ ಧೃತಿಗೆಡಿಸುತ್ತದೆಯೇ ವಿನಃ ಭಯೋತ್ಪಾದಕರದಲ್ಲ. ಒಬ್ಬ ಉಗ್ರ ಸತ್ತರೆ ಅಂತಹ ಹತ್ತು ಮಂದಿ ಕ್ಷಣಾರ್ಧದಲ್ಲಿ ಹುಟ್ಟಿ ಬರುತ್ತಾರೆ. ಇವೆಲ್ಲವನ್ನು ಗಮನಿಸಿದರೆ ನಮ್ಮ ಮೊದಲ ಆದ್ಯತೆಯು ಅಪರಾಧಿಯನ್ನು ಕೊಲ್ಲುವುದಕ್ಕಿಂತ ಅಪರಾಧವನ್ನು ಕೊಲ್ಲುವುದಾಗಬೇಕು. ನೊಯಮ್ ಚೋಮ್ಸ್ ಹೇಳುವ ಪ್ರಕಾರ ಇದನ್ನು ತಡೆಯುವ ಸುಲಭ ವಿಧಾನವೆಂದರೆ ಇದರಲ್ಲಿ ಭಾಗವಹಿಸದಿರುವುದು ನಿಜವಾಗಿಯೂ ಮಾಡಬೇಕಾದದ್ದು ಒಂದು ಶಾಂತಿಯುತ ಪ್ರತಿಭಟನೆ. ಭಯೋತ್ಪಾದನೆಯ ಕಡೆಗೆ ಸೆಳೆಯಲ್ಪಟ್ಟ ಯುವಕರನ್ನು ಇದರ ಕಡೆಗೆ ವಿಮುಖರನ್ನಾಗಿಸುವ ಪ್ರಯತ್ನಗಳು ಸರಕಾರದ ಕಡೆಯಿಂದ ಆಗಬೇಕು. ತಮ್ಮ ಇಡೀ ಸಮಯ ಹಾಗೂ ಹಣವನ್ನು ಇಂತಹ ಉಗ್ರ ಸಂಘಟನೆಗಳ ನಾಶಕ್ಕಾಗಿಯೇ ವ್ಯಯಿಸುವುದರ ಬದಲು ಇದರ ಮೂಲವನ್ನೇ ನಿಗ್ರಹಿಸುವಂತಹ ಪ್ರಚಾರ ಕಾರ್ಯಗಳನ್ನು ಹೆಚ್ಚುಗೊಳಿಸಬೇಕು ಏಕೆಂದರೆ “ಉಪಶಮನಕ್ಕಿಂತ ಪ್ರತಿಬಂಧವೇ ಲೇಸು” ಸರಕಾರಕ್ಕೆ ಈ ನಿಟ್ಟಿನಲ್ಲಿ ಸಹಕರಿಸುವವರಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಬೇಕು. ಇದು ಇನ್ನಷ್ಟು ಮಂದಿಯನ್ನು ಪ್ರೇರೇಪಿಸುತ್ತದೆ. ಕಡೆಯದಾಗಿ ಹಗೂ ಮುಖ್ಯವಾದ ಸಂಗತಿ ಎಂದರೆ ಪ್ರತಿಯೊಬ್ಬನ ಆದ್ಯ ಕರ್ತವ್ಯವೂ ಆಗಿರುವುದು ತನ್ನ ಆತ್ಮ ಸಾಕ್ಷಿ ಹೇಳಿದಂತೆ ನಡೆದುಕೊಂಡು ಸರಿ ತಪ್ಪುಗಳ ವಿಮರ್ಶೆ ಮಾಡುವುದು ಇದರಿಂದಾಗಿ ಇಡೀ ಸಮಾಜವು ಒಟ್ಟಾಗಿ ಈ ಭಯೋತ್ಪಾದನಾ ದೈತ್ಯವನ್ನು ದಮನಿಸಬಹುದು.

ಧಾರ್ಮಿಕ ಭಯೋತ್ಪಾದನಾ ಸಂಘಟನೆಗಳು ಪರಲೋಕದ ಬಗೆಗಿನ ಇಲ್ಲ ಸಲ್ಲದ ವೈಭೋಗಗಳನ್ನು ವೈಭವೀಕರಿಸಿ ಮನಸ್ಸನ್ನೇ ವಶೀಕರಿಸಿ ಸುಶಿಕ್ಷಿತ ಯುವ ಜನಾಂಗವನ್ನು ಅಡ್ಡದಾರಿಗೆಳೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಹೊಟ್ಟೆ ಪಾಡಿಗೆ ಭಯೋತ್ಪಾದಕರೆನಿಸಿಕೊಳ್ಳುವ ಅಶಿಕ್ಷಿತ ಭಯೋತ್ಪಾದಕರಿಗಿಂತ ಈ ರೀತಿಯ ಸುಶಿಕ್ಷಿತ ಭಯೋತ್ಪಾದಕರು ಹೆಚ್ಚು ಅಪಾಯಕಾರಿಗಳು. ಆಧುನಿಕ ಜಗತ್ತಿಗೆ ಅನಿವಾರ್ಯವೆನಿಸಿದ ಮುಂದುವರೆದ ತಂತ್ರಜ್ಞಾನವು ಈ ವರ್ಗದ ಕೈಯಲ್ಲಿರುವ ಮಾರಕ ಅಸ್ತ್ರವಾಗಿದೆ. ಇವುಗಳ ನೆರವಿನಿಂದಲೇ ಈ ಮಂದಿ ನಾಗರಿಕ ರಕ್ಷಣಾ ವ್ಯವಸ್ತೆಗೆ ಸಡ್ಡುಹೊಡೆಯುತ್ತಾರೆ. ತಮ್ಮದೇ ದೇಶದ ಸವಲತ್ತುಗಳನ್ನು ಪಡೆದುಕೊಂಡು ಶಿಕ್ಷಿತರಾಗಿ ಆ ಶಿಕ್ಷಣವನ್ನು ಅದೇ ದೇಶದ ವಿನಾಶಕ್ಕಾಗಿ ಬಳಸುವುದು ಅತ್ಯಂತ ಹೇಯ ದುರಂತ ಮಾತ್ರವಲ್ಲ, ಎದೆಹಾಲುಣಿಸಿ ಬೆಳೆಸಿದ ತಾಯಿಯ ಎದೆಗೇ ಚಾಕು ಹಾಕುವ ನೀಚ ಕೃತ್ಯ.

ಆದರೆ ಭಯೋತ್ಪಾದನೆಯ ಕಪ್ಪು ಮೋಡದ ನಡುವೆಯೂ ನಮ್ಮ ಭಾರತದಂತಹ ದೇಶಗಳಿಗೆ ಬೆಳ್ಳಿ ರೇಖೆಗಳಂತೆ ಗೋಚರಿಸುತ್ತಿರುವುದು ಸಾವಿರಾರು ವರ್ಷಗಳಿಂದ ನಾವು ಪಾಲಿಸಿಕೊಂಡು ಬರುತ್ತಿರುವ “ವಿವಿಧತೆಯಲ್ಲಿ ಏಕತೆ” ಎಂಬ ತಾರಕ ಮಂತ್ರ. ಭಾರತದಂತಹ ದೇಶದಲ್ಲಿ ವಾಸಿಸುತ್ತಿರುವ ವಿವಿಧ ಜಾತಿ, ಮತ, ಪಂಥಗಳ ಕೋಟ್ಯಾಂತರ ಮಂದಿಯ ಹೃದಯದಲ್ಲಿ ಅಂತರ ಗಂಗೆಯಂತೆ ಪೀಳಿಗೆಯಿಂದ ಪೀಳಿಗೆಗೆ ಹರಿಯುತ್ತಿರುವ ಭಾರತೀಯ ಸಂಸ್ಕೃತಿ, ಸಾಮರಸ್ಯಗಳ ಜೀವನದಿ. ಇಂದು ಕೂಡಾ ಭಾರತದಲ್ಲಿ ಮಹಮ್ಮದನ ಮನೆಯ ಮಗು ಅನಾರೋಗ್ಯಕ್ಕೀಡಾದರೆ ಪಕ್ಕದ ಮನೆಯ ರಾಮಣ್ಣ ತನ್ನ ಕಾರಿನಲ್ಲಿ ಆಸ್ಪತ್ರೆಗೊಯ್ಯುತ್ತಾನೆ. ಯಾರೂ ಇಲ್ಲದ ರಾಮಣ್ಣನ ಮನೆಯ ದನ ಕರುಗಳಿಗೆ ಲೂಯಿಸ್ ಡಿ`ಸೋಜಾ ಹುಲ್ಲು ನೀರಿತ್ತು ಸಾಕುತ್ತಾನೆ. ವೆಂಕಪ್ಪನ ಹೆಂಡತಿ ಕಮಲಳಿಗೆ ಹೆರಿಗೆ ಕಷ್ಟವಾದರೆ ಊರಿನ ಹಿರಿಯಜ್ಜಿ ಬೀಪಾತುಮ್ಮ ಸುಸೂತ್ರ ಹೆರಿಗೆ ಮಾಡಿಸುತ್ತಾರೆ. ಇದು ನಮ್ಮ ಸಂಸ್ಕೃತಿ, ಇದು ನಮ್ಮ ಭಾರತೀಯ ಸಮಾಜದ ರೀತಿ ನೀತಿ. ಇಂತಹ ಸುಭದ್ರ ಸಾಮರಸ್ಯವನ್ನು ಹೊಂದಿದ ನಮ್ಮ ದೇಶದಲ್ಲಿ ಎಂದೆಂದಿಗೂ ದ್ರೋಹಿಗಳ, ಪಿತೂರಿಗಾರರ ಬೇಳೆ ಬೇಯದು. ಯಾವುದೇ ರೀತಿಯ ಆಟ ನಡೆಯದು ಪ್ರಕರ ಸೂರ್ಯನಿಗೂ ಕೂಡಾ ಒಮ್ಮೊಮ್ಮೆ ಕರಿಮೋಡ ಮುಸುಕಿರಬಹುದು ಆದರೆ ಎಷ್ಟಿದ್ದರೂ ಅದು ತಾತ್ಕಾಲಿಕ, ಮೋಡ ಸರಿಯಲೇಬೇಕು, ಬೆಳಕು ಬರಲೇಬೇಕು, ಸೂರ್ಯ ಪ್ರಕಾಶಿಸಲೇಬೇಕು. ಇದು ಜಗದ ನಿಯಮ, ಭಾರತೀಯ ಸಂಸ್ಕೃತಿಯ ವಿಕ್ರಮ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ